Category: Udupi District

  • ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ: ಜಿಲ್ಲಾಧಿಕಾರಿ ವಿದ್ಯಾಕುಮಾರಿ

    ಉಡುಪಿ: ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ಸದ್ಯ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸದ್ಯ 1000 ಗಂಡು ಮಕ್ಕಳಿಗೆ 978 ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಪ್ರಮಾಣ ಇನ್ನೂ ಹೆಚ್ಚಾಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

    ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

  • ಉಡುಪಿ: ಚಲಿಸುತ್ತಿದ್ದ ಲಾರಿಯಿಂದ ಹೆದ್ದಾರಿಗೆ ಉರುಳಿ ಬಿದ್ದ ಟ್ಯಾಂಕ್: ಕೆಲಹೊತ್ತು ಸಂಚಾರ ಅಸ್ತವ್ಯಸ್ತ

    ಉಡುಪಿ: ಚಲಿಸುತ್ತಿದ್ದ ಲಾರಿಯಿಂದ ಟ್ಯಾಂಕ್ ರಸ್ತೆಗೆ ಉರುಳಿಬಿದ್ದ ಘಟನೆ ಉಡುಪಿ ಕಿನ್ನಿಮುಲ್ಕಿ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.

    ಬೃಹತ್ ಗಾತ್ರದ ಟ್ಯಾಂಕ್ ಹೆದ್ದಾರಿಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೆದ್ದಾರಿ ಪಕ್ಕದಲ್ಲಿ ಹಾಕುವ ಸೂಚನಾ ಫಲಕ ಅಡ್ಡ ಬಂದ ಕಾರಣ ಟ್ಯಾಂಕ್ ಹೊತ್ತ ಲಾರಿಗೆ ಮುಂದೆ ಸಾಗಲು ಸಾಧ್ಯವಾಗಿಲ್ಲ.

    ಎರಡು ದಿನ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಚಾಲಕ, ಲಾರಿಯನ್ನು ರಿವರ್ಸ್ ತೆಗೆದು ಬೇರೆ ರೂಟ್ ನಲ್ಲಿ ಹೋಗಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭ ಬಾರಿ ಗಾತ್ರದ ಟ್ಯಾಂಕ್ ರಸ್ತೆಗೆ ಉರುಳಿದೆ. ಉಡುಪಿ ಟ್ರಾಫಿಕ್ ಪೊಲೀಸರು ಲಾರಿ ಚಾಲಕನಿಗೆ ಕೂಡಲೇ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.

  • ಬೈಂದೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಲಾರಿ ಮತ್ತು ಕಾರು ವಶ

    ಬೈಂದೂರು: ದಿನಾಂಕ 05.06.2025 ರಂದು ಬೈಂದೂರು ಠಾಣೆಯ ಪಿಎಸ್‌ಐ ತಿಮ್ಮೇಶ್‌ ಮತ್ತು ಸಿಬ್ಬಂದಿಗಳು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ, ಬೆಳಗ್ಗೆ 3:30 ಗಂಟೆ ಸುಮಾರಿಗೆ ಕೊಲ್ಲೂರಿನಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡ ಇಚರ್‌ ಲಾರಿಯೊಂದಿಗೆ ಕಾರೊಂದು ಬೈಂದೂರು ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಯಡ್ತರೆ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುವ ವೇಳೆ, ಅತಿವೇಗದಲ್ಲಿ ಬಂದ ಲಾರಿ ಮತ್ತು ಕಾರು ನಿಲ್ಲಿಸಲು ಸೂಚಿಸಿದರೂ ಪರಾರಿಯಾದವು.

    ಪೊಲೀಸರು ಲಾರಿಯನ್ನು ಮತ್ತು ಕಾರನ್ನು ಬೆನ್ನಟ್ಟಿ, 9 ಗಂಡು ಎತ್ತುಗಳು ಮತ್ತು 2 ಹೋರಿಗಳನ್ನು ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಲಾರಿಯನ್ನು ಹಾಗೂ ಅದನ್ನು ಹಿಂಬಾಲಿಸುತ್ತಿದ್ದ ಕಾರನ್ನು ವಶಪಡಿಸಿಕೊಂಡರು. ಈ ಸಂಬಂಧ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2025ರಂತೆ ಕರ್ನಾಟಕ ಗೋವು ವಧೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಮತ್ತು IMV ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

  • ಕುಂದಾಪುರದಲ್ಲಿ ಡ್ರಗ್ಸ್ ದಂಧೆ : ಇಬ್ಬರ ಬಂಧನ

    ಕುಂದಾಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೇ ನಡೆಯುತ್ತಿರುವುದು ಬಹಿರಂಗಗೊಂಡಿದೆ. ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಡ್ರಗ್ಸ್ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದಾಸ್ಸಿರ್ (23) ಹಾಗೂ ಉಡುಪಿ ಜಿಲ್ಲೆಯ ಉದ್ಯಾವರ, ಬೋಳಾರಗುಡ್ಡೆಯ ಅಡೆನ್ ಲೋಬೋ (18) ಎಂದು ಗುರುತಿಸಲಾಗಿದೆ.

    ಜೂನ್ 4ರ ಬುಧವಾರ ಸಂಜೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದಾಗ ಆರೋಪಿಗಳಾದ ಮುದಾಸ್ಸಿರ್ ಹಾಗೂ ಆಡೆನ್ ಲೋಬೋ ಇಬ್ಬರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಪೊಲೀಸರನ್ನು ನೋಡೊದ ಆರೋಪಿಗಳನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು. ಬಳಿಕ ವಿಚಾರಿಸಿದಾಗ ಎಂಡಿಎಂಎ ಎಂಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

    ಬಂಧಿತ ಆರೋಪಿಗಳಿಂದ ಅಂದಾಜು ಎರಡು ಲಕ್ಷದ ನಲವತ್ತೊಂಭತ್ತು ಸಾವಿರದ ನಾನೂರ ನಲವತ್ತೊಂಭತ್ತು ರೂಪಾಯಿ ಮೌಲ್ಯದ 124.72 ಗ್ರಾಂ ಎಂಡಿಎಂಎ, ಪಿ. ಒರಾಕಲ್ ಎಂಬ ಹೆಸರಿನ ಪ್ಲಾಸ್ಟೀಕ್ ಬಾಕ್ಸ್, ಒಂಭತ್ತು ಇನ್ಸುಲಿನ್ ಸಿರಿಂಜ್, ENER-MECH ಎಂಬ ಕಪ್ಪು ಬ್ಯಾಗ್, Fresh ಎಂಬ ಪ್ಲಾಸ್ಟೀಕ್ ಬಾಕ್ಸ್, 2 ವೇಯಿಂಗ್ ಮೇಶಿನ್, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಒಂದು ಪ್ಲಾಸ್ಟೀಕ್ ಬಾಕ್ಸ್, 36 ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, ಒಂದು Allen Solly Exclusive ಮೆಟಲ್ ಬಾಕ್ಸ್, 4540/ ರೂ ನಗದು, 1 ಡ್ರಾಗನ್ ಚೂರಿ, 1 OPPO ಮೊಬೈಲ್, 2 ಸ್ಯಾಮ್ಸಂಗ್ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

  • ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಶಾಂತಿ ಸಭೆ

    ಉಡುಪಿ, ಜೂನ್ 05, 2025: ಇಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿಯುತ ವಾತಾವರಣ ಕಾಪಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ರವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ಈ ಸಭೆಯಲ್ಲಿ ಧಾರ್ಮಿಕ ಮುಖಂಡರನ್ನು ಆಹ್ವಾನಿಸಿ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಕುರಿತು ಚರ್ಚೆ ನಡೆಸಲಾಯಿತು.

    ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಎಲ್ಲಾ ಉಪವಿಭಾಗಾಧಿಕಾರಿಗಳು, ವೃತ್ತ ನಿರೀಕ್ಷಕರು ಹಾಗೂ ಠಾಣೆಯ ಉಪನಿರೀಕ್ಷಕರು ಭಾಗವಹಿಸಿದ್ದರು. ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡಲಾಯಿತು.

  • ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ

    ಉಡುಪಿ, ಜೂನ್ 05, 2025: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕಾರ್ಕಳ ತಾಲೂಕು ಮಿಯ್ಯಾರು ಕಾಲೇಜಿನಲ್ಲಿ ಖಾಲಿ ಇರುವ ಕನ್ನಡ, ಆಂಗ್ಲಭಾಷೆ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಹಾಗೂ ಬ್ರಹ್ಮಾವರ ತಾಲೂಕು ಆರೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಕನ್ನಡ, ಗಣಿತ, ಜೀವಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಮಿಯ್ಯಾರು ಕಾಲೇಜು ಪ್ರಾಂಶುಪಾಲರು ಮೊ.ನಂ: 7337795963 ಹಾಗೂ ಆರೂರು ಕಾಲೇಜು ಪ್ರಾಂಶುಪಾಲರು ಮೊ.ನಂ: 7012988065 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

  • ಡಿಪ್ಲೋಮಾ ಪ್ರವೇಶಾತಿ : ಅವಧಿ ವಿಸ್ತರಣೆ

    ಉಡುಪಿ, ಜೂನ್ 05, 2025: ಪ್ರಸಕ್ತ ಸಾಲಿನಲ್ಲಿ ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಐ.ಟಿ.ಐ, ದ್ವಿತೀಯ ಪಿ.ಯು.ಸಿ ವಿಜ್ಞಾನ ಅಥವಾ ದ್ವಿತೀಯ ಪಿ.ಯು.ಸಿ ತಾಂತ್ರಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ಮೂರನೇ ಸೆಮಿಸ್ಟರ್ಗೆ ಪ್ರವೇಶ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನವಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಉಡುಪಿ ದೂ.ಸಂಖ್ಯೆ : 0820-2570244 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.

  • ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

    ಉಡುಪಿ, ಜೂನ್ 05, 2025 : ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ 2024 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.

    ಲೇಖಕರು, ಪ್ರಕಾಶಕರು ಹಾಗೂ ಸಾಹಿತ್ಯಾಸಕ್ತ ಸಾರ್ವಜನಿಕರು ಬಹುಮಾನಕ್ಕಾಗಿ ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ / ಕೊರಿಯರ್ ಮೂಲಕ ಅಥವಾ ಖುದ್ದಾಗಿ ಜುಲೈ 15 ರ ಒಳಗಾಗಿ ತಲುಪಿಸಬಹುದಾಗಿದೆ. 

    ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್ಸೈಟ್ https://www.sahithyaacademy.karnataka.gov.in/ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಉಡುಪಿಯಲ್ಲಿ ದುರಂತ: ಒಂದು ವರ್ಷದ ಮಗುವಿನ ದಾರುಣ ಸಾವು

    ಉಡುಪಿ, ಜೂನ್ 05, 2025: ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ವಾಸಿಸುತ್ತಿದ್ದ ಪಿರ್ಯಾದಿದಾರ ಅಯ್ಯಪ್ಪ (27), ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಗಂಗಾಧರ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದಿನಾಂಕ 04/06/2025 ರಂದು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳಿದ ಅಯ್ಯಪ್ಪ, ತಮ್ಮ ಒಂದು ವರ್ಷದ ಮಗುವನ್ನು ಜೋಲಿಯಲ್ಲಿ ಮಲಗಿಸಿ, ಹೆಂಡತಿಯೊಂದಿಗೆ ಬೆಳಿಗ್ಗೆ 9:30 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು.

    ಮಧ್ಯಾಹ್ನ 11:30 ಗಂಟೆಗೆ ಮನೆಗೆ ವಾಪಸ್ ಬಂದಾಗ, ಮಗುವಿನ ಕುತ್ತಿಗೆಗೆ ಜೋಲಿಗೆ ಕಟ್ಟಿದ್ದ ಸೀರೆ ಸುತ್ತಿಕೊಂಡು ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿದೆ. ತಕ್ಷಣ ಮಗುವನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯಾಧಿಕಾರಿಗಳು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಗು ಜೋಲಿಯಿಂದ ಇಳಿಯಲು ಯತ್ನಿಸುವಾಗ ಅಥವಾ ನಿದ್ರೆಯ ಸ್ಥಿತಿಯಲ್ಲಿ ಜೋಲಿಯಿಂದ ಬಿದ್ದು, ಸೀರೆ ಕುತ್ತಿಗೆಗೆ ಸುತ್ತಿಕೊಂಡು ಉಸಿರುಕಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 53/2025, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

  • ಉಡುಪಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಭೇದ: ಇಬ್ಬರು ಆರೋಪಿಗಳ ಮೊಬೈಲ್‌ಗಳ ಸ್ವಾಧೀನ

    ಉಡುಪಿ, ಜೂನ್ 05, 2025: ಶಿವಳ್ಳಿ ಗ್ರಾಮದ ಪಿ.ಪಿ.ಸಿ ಕಾಲೇಜು ಸಮೀಪದ ಶಕ್ತಿಶೀ ಎಂಬಲ್ಲಿ ಎಂ. ರಾವ್‌ ಎಂಬವರ ಬಾಡಿಗೆ ಮನೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಸೆನ್‌ ಅಪರಾಧ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌, ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

    ತನಿಖೆಯಲ್ಲಿ, ಅನಂತ ಪಿ. ಎಂಬಾತ ತನ್ನ Oppo F27 Pro Plus 5G ಫೋನ್‌ ಮೂಲಕ LORD***** ಎಂಬ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುವ ಪಂಜಾಬ್‌ ಕಿಂಗ್ಸ್‌ (PBKS) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಗಳ ನಡುವಿನ IPL T20 ಕ್ರಿಕೆಟ್‌ ಪಂದ್ಯಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್‌ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

    ಅನಂತ ಪಿ., ಸಿದ್ದಾರ್ಥ ಎಂಟರ್‌ಪ್ರೈಸಸ್‌ನಿಂದ LORD***** ವೆಬ್‌ಸೈಟ್‌ಗೆ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಪಡೆದು, ನಂತರ ಪಾಸ್‌ವರ್ಡ್‌ ಅನ್ನು ಬದಲಾಯಿಸಿಕೊಂಡು, ವಾಟ್ಸ್‌ಆಪ್‌ ಚಾಟ್‌ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ. ಈ ಹಣವನ್ನು ಸಿದ್ದಾರ್ಥ ಎಂಟರ್‌ಪ್ರೈಸಸ್‌ನ ಬ್ಯಾಂಕ್‌ ಖಾತೆ ಮತ್ತು ಫೋನ್‌ಪೇ ಮೂಲಕ ಪಣವಾಗಿಟ್ಟುಕೊಂಡಿದ್ದ. ಇದಕ್ಕಾಗಿ ತನ್ನ ಉಡುಪಿ ಮೈತ್ರಿ ಕಾಂಪ್ಲೇಕ್ಸ್‌ ಬ್ರಾಂಚ್‌ನ ಎಸ್‌ಬಿಐ ಬ್ಯಾಂಕ್‌ ಖಾತೆಯನ್ನು ಬಳಸಿದ್ದಾನೆ. ಜೊತೆಗೆ, ಬೆಟ್ಟಿಂಗ್‌ನಿಂದ ಬರಬೇಕಾದ ಲಾಭಾಂಶವನ್ನು ಆತನ ಪತ್ನಿ ವಾಣಿಶ್ರೀ ಅವರ ಎಸ್‌ಬಿಐ ಖಾತೆಗೆ ಜಮಾ ಮಾಡಲಾಗುತ್ತಿತ್ತು.

    ಪೊಲೀಸರು ಅನಂತ ಮತ್ತು ವಾಣಿಶ್ರೀ ಅವರ ಒಟ್ಟು ಎರಡು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆನ್‌ ಅಪರಾಧ ಠಾಣೆಯಲ್ಲಿ ಕ್ರಮಾಂಕ 24/2025, ಕಲಂ 78 KP ACT ಮತ್ತು 112 BNS ರಂತೆ ಪ್ರಕರಣ ದಾಖಲಾಗಿದೆ.