Category: Udupi District

  • ಬೈಂದೂರು: ಶಿರೂರಿನಲ್ಲಿ ನಾಲ್ಕು ಎತ್ತಿನ ಗುಡ್ಡಗಳ ಜಪ್ತಿ, ಆರೋಪಿಯ ವಿರುದ್ಧ ಪ್ರಕರಣ ದಾಖಲು

    ಬೈಂದೂರು, ಜೂನ್ 2, 2025: ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯಾ ಮೊಹಲ್ಲಾದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ, ಮೊಹಮ್ಮದ್ ಸಾಜಿದ್ ಎಂಬ ವ್ಯಕ್ತಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋಮಾಂಸ ಸಾಗಾಟ ಮತ್ತು ಮಾರಾಟಕ್ಕೆ ಸಿದ್ಧತೆ ನಡೆಸುತ್ತಿರುವುದು ಪತ್ತೆಯಾಗಿದೆ.

    ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2025ರಡಿಯಲ್ಲಿ ಕರ್ನಾಟಕ ಗೋವುಗಳ ವಧೆ ನಿಷೇಧ ಮತ್ತು ಸಂರಕ್ಷಣೆ ಕಾಯ್ದೆ-2020 ಕಲಂ 7 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಗುಜ್ಜರಬೆಟ್ಟು: ₹ 1 ಕೋಟಿ ವೆಚ್ಚದ ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ ಚಾಲನೆ

    ಉಡುಪಿ : ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜರಬೆಟ್ಟುವಿನ ಕಡಲ್ಕೊರೆತ ಪೀಡಿತ ಭಾಗಗಳಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಮಂಜೂರಾದ ₹ 1 ಕೋಟಿ ವೆಚ್ಚದ ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ ನೀಡಿದರು.

    ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಕಳೆದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಕಡಲ್ಕೊರೆತ ಉಂಟಾದ ಗುಜ್ಜರಬೆಟ್ಟು ಭಾಗದ ಪ್ರದೇಶಗಳಿಗೆ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಮೂಲಕ 1 ಕೋಟಿ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಒದಗಿಸಲು ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮ ರವೀಂದ್ರ, ಉಪಾಧ್ಯಕ್ಷರಾದ ಅರುಣ್, ಲಕ್ಷ್ಮೀ ನಾರಾಯಣ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ರತ್ನಾಕರ ಸಾಲ್ಯಾನ್, ಗುರು ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷರಾದ ಸುಂದರ ಗುಜ್ಜರಬೆಟ್ಟು, ಕೆಮ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕೆಮ್ಮಣ್ಣು ,ಪುರಂದರ ಕುಂದರ್ ಗುಜ್ಜರಬೆಟ್ಟು, ಸಂಧ್ಯಾ ಕೆಮ್ಮಣ್ಣು, ಧೀರೇಂದ್ರ ನಾಯ್ಕ್ ಬೆಂಗ್ರೆ, ಲೋಕೇಶ್ ಸಾಲ್ಯಾನ್ ಬೆಂಗ್ರೆ,ಪ್ರತಿಭಾ ಭಾಸ್ಕರ್ ಬೆಂಗ್ರೆ, ವತ್ಸಲಾ, ಸ್ಥಳೀಯ ಮುಖಂಡರಾದ ಪ್ರಶಾಂತ್ ಕಾಂಚನ್ ಬೆಂಗ್ರೆ, ಶ್ರೀಮತಿ ಮಾಲತಿ ಶ್ರೀಯಾನ್, ಮುತ್ತಪ್ಪ ಮೇಸ್ತ್ರಿ, ರವೀಂದ್ರ ಶ್ರೀಯಾನ್, ವಿಶು ಕುಮಾರ್ ಗುಜ್ಜರಬೆಟ್ಟು, ರವಿ ಸನಿಲ್ ಹೂಡೆ, ದಿನೇಶ್ ಮೇಸ್ತ್ರಿ, ಗಂಗಾಧರ ಪಾಲನ್, ಶೇಖರ ಶ್ರೀಯಾನ್ ಬೆಂಗ್ರೆ, ರಾಘು ಕುಂದರ್, ಲತೇಶ್ ಗುಜ್ಜರಬೆಟ್ಟು, ಪುರುಷೋತ್ತಮ ಗುಜ್ಜರಬೆಟ್ಟು, ರವಿ ಕುಂದರ್ ಗುಜ್ಜರಬೆಟ್ಟು, ಮೊದಲಾದವರು ಉಪಸ್ಥಿತರಿದ್ದರು.

  • ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

    ಕಾಪು, ಜೂನ್ 2, 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ವತಿಯಿಂದ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಸಂಗ್ರಹ, ಉಡುಪಿ ಇದರ ಸಹಯೋಗದೊಂದಿಗೆ ಮಜೂರು ಪಂಚಾಯತ್ ಸಭಾಂಗಣದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

    ರಕ್ತದಾನಕ್ಕಿಂತ ಮುಂಚೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾಧಿಕ್ ಕೆ ಪಿ ಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾಸ್ಪತ್ರೆ ರಕ್ತ ನಿಧಿ ಸಂಗ್ರಹಣಾ ವೈದ್ಯಾಧಿಕಾರಿ ವೀಣಾ ಕುಮಾರಿ ಆಗಮಿಸಿ ಉಡುಪಿ ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆ ಇದ್ದು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

    ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್, T.I.Y.A ಮಲ್ಲಾರ್ ಇದರ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್, ರವಿ ಕರಂದಾಡಿ,ಮಾಲಕರು ಪೂಜಾ ಶಾಮಿಯಾನ, ಮುನೀರ್ ಕಲ್ಮಾಡಿ, ಸಮಾಜ ಸೇವಕರು ಉಡುಪಿ, ಎಸ್ ಡಿ ಪಿ ಐ ಕಾಪು ಪುರಸಭೆ ಸದಸ್ಯರಾದ ನೂರುದ್ದೀನ್, ಎಸ್ ಡಿ ಪಿ ಐ ಮುಖಂಡರಾದ ಅಬೂಬಕ್ಕರ್ ಪಾದೂರ್ ಮತ್ತು ಎಸ್ ಡಿ ಪಿ ಐ ಮಜೂರ್ ಪಂಚಾಯತ್ ಸಮಿತಿ ಅಧ್ಯಕ್ಷರಾದ ಶಂಶುದ್ದೀನ್ ಕರಂದಾಡಿ ಆಗಮಿಸಿದ್ದರು.

    ಈ ಶಿಬಿರದಲ್ಲಿ ಸುಮಾರು 94 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

  • ಬೈಂದೂರು: ಬಕ್ರೀದ್ ಹಬ್ಬ ಪ್ತಯುಕ್ತ ಶಾಂತಿ ಸಭೆ

    ಬೈಂದೂರು, ಜೂ.02,2025: ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಬೈಂದೂರು ಪೊಲೀಸ್ ಠಾಣೆಯಲ್ಲಿ ದಿನಾಂಕ 02/06/2025ರಂದು ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಬಕ್ರೀದ್ ಹಬ್ಬವನ್ನು ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ದಕ್ಕೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಧಾರ್ಮಿಕ ಮುಖಂಡರಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು.

    ಸ್ಥಳೀಯ ಧಾರ್ಮಿಕ ಮುಖಂಡರು ಈ ಕಾರ್ಯಕ್ರಮವನ್ನು ಸ್ವಾಗತಿಸಿದ್ದು, ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಸಹಕರಿಸುವ ಭರವಸೆ ನೀಡಿದ್ದಾರೆ.

  • ಉಡುಪಿ: ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಗೆ ಅಧಿಕಾರೇತರ ಸದಸ್ಯರ ನಾಮನಿರ್ದೇಶನ

    ಉಡುಪಿ: ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ದಿನಾಂಕ 17-08-2025ರ ಸರ್ಕಾರಿ ಆದೇಶದಂತೆ ತುಮಕೂರು, ದಾವಣಗೆರೆ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಪ್ಪಳ, ರಾಯಚೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಗೆ ನಾಮನಿರ್ದೇಶನ ಮಾಡಲಾದ ಸದಸ್ಯರ ಪಟ್ಟಿಯಲ್ಲಿ, ರಾಯಚೂರು ಜಿಲ್ಲೆಯ ಸದಸ್ಯರನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಜೊತೆಗೆ, ಮೈಸೂರು ಜಿಲ್ಲೆಯ ಒಬ್ಬ ಸದಸ್ಯರನ್ನು ಬದಲಾಯಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆರು ಸದಸ್ಯರನ್ನು ಮತ್ತು ಬೆಂಗಳೂರು ನಗರ ಜಿಲ್ಲೆಗೆ ಎಂಟು ಸದಸ್ಯರನ್ನು ಅಧಿಕಾರೇತರ ಸದಸ್ಯರನ್ನಾಗಿ ಸೀಮಿತಗೊಳಿಸಿ, ಸರ್ಕಾರಿ ಆದೇಶ ಹೊರಡಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಉಡುಪಿ ಜಿಲ್ಲೆಗೆ ನಾಮನಿರ್ದೇಶನಗೊಂಡ ಅಧಿಕಾರೇತರ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ:

    1. ಶ್ರೀ ನಕ್ವಾ ಯಾಹ್ಯಾ ಸಾಹೇಬ್, ಕೊಡವೂರು, ಉಡುಪಿ
    2. ಶ್ರೀ ಮೊಹಮ್ಮದ್ ಮೌಲಾ, ಅಧ್ಯಕ್ಷರು, ಮುಸ್ಲಿಂ ಉಡುಪಿ ಜಿಲ್ಲಾ ಒಕ್ಕೂಟ
    3. ಶ್ರೀ ಯಾಸೀನ್ ಮಲ್ಪೆ, ಉಡುಪಿ
    4. ಶ್ರೀಮತಿ ಪ್ರಮೀಳಾ ಜತ್ತನ್, ಕೊರಂಗರಪಾಡಿ, ಉಡುಪಿ
    5. ಶ್ರೀ ಸೂರಜ್ ಜೈನ್, ಕುಕ್ಕಂದೂರು, ಕಾರ್ಕಳ
    6. ಶ್ರೀ ಶರ್ಫುದ್ದೀನ್ ಶೇಖ್, ಕಾಪು, ಉಡುಪಿ
  • ಕೋಟ: ಸಾಲಿಗ್ರಾಮ ಜಂಕ್ಷನ್‌ನಲ್ಲಿ ಮಟ್ಕಾ ಜುಗಾರಿ ಆಟ; ನಗದು, ಮೊಬೈಲ್ ವಶ

    ಕೋಟ: ದಿನಾಂಕ 01/06/2025ರಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರು (ತನಿಖೆ) ಸುಧಾಪ್ರಭು ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ, ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿತ ವಿಜಯನನ್ನು ಕೃತ್ಯದಲ್ಲಿ ಕೈಗೊಂಡಿದ್ದಾರೆ.

    ಪೊಲೀಸರು ಆರೋಪಿತನಿಂದ ರೂ. 1,400 ನಗದು, ಮಟ್ಕಾ ಸಂಖ್ಯೆ ಬರೆದ ಚೀಟಿ, ಜುಗಾರಿಗೆ ಬಳಸಿದ ಬಾಲ್‌ಪೆನ್ ಹಾಗೂ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2025, ಕಲಂ 78 KP ಆಕ್ಟ್ ಮತ್ತು 112 BNS ರಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

  • ಕರ್ಜೆ ಅರಿವು ಕೇಂದ್ರ ಗ್ರಂಥಾಲಯಕ್ಕೆ ಗೌರವ ಸ್ಮರಣಿಕೆ

    ಉಡುಪಿ, ಜೂನ್ 01, 2025: ಶಿಕ್ಷಣ ಫೌಂಡೇಶನ್ ಮತ್ತು ಜಿಲ್ಲಾಡಳಿತ ಉಡುಪಿಯ ಸಹಯೋಗದೊಂದಿಗೆ ದಿನಾಂಕ 25-05-2025 ರಂದು ಜಿಲ್ಲಾ ಪಂಚಾಯತ್ ಉಡುಪಿಯಲ್ಲಿ ನಡೆದ ಅರಿವು ಕೇಂದ್ರ ಮೇಲ್ವಿಚಾರಕರ ವಾರ್ಷಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಕರ್ಜೆ ಅರಿವು ಕೇಂದ್ರ ಗ್ರಂಥಾಲಯಕ್ಕೆ ವಿಶೇಷ ಗೌರವ ಸಂದಿದೆ.

    ಗ್ರಂಥಾಲಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕರ್ಜೆ ಅರಿವು ಕೇಂದ್ರದ ಕೊಡುಗೆಯನ್ನು ಗುರುತಿಸಿ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರತೀಕ್ ಬಾಯಲ್ ಅವರು ಗೌರವ ಸ್ಮರಣಿಕೆಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕರ್ಜೆ ಅರಿವು ಕೇಂದ್ರದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

  • ಕುಂದಾಪುರ: ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಒಬ್ಬ ಆರೋಪಿ ವಶಕ್ಕೆ

    ಕುಂದಾಪುರ, ಜೂನ್ 01, 2025: ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಿನಾಂಕ 01-06-2025 ರಂದು ಬೆಳಗ್ಗೆ 6:15 ಗಂಟೆಗೆ, ಕುಂದಾಪುರ ಪೊಲೀಸ್ ಠಾಣೆಯ ಠಾಣಾ ಬೀಟ್ ಸಿಬ್ಬಂದಿಯಾದ ಹೆಚ್.ಸಿ ಸೂರ್ಯ ರವರು, ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪದ ಪಂಚಗಂಗಾವಳಿ ಹೊಳೆಯಲ್ಲಿ ಕೆಲವರು ಮರಳನ್ನು ದೋಣಿಯಲ್ಲಿ ತುಂಬಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ ನಂಜಾನಾಯ್ಕ್ ಎನ್. ರವರು ಠಾಣಾ ಸಿಬ್ಬಂದಿಯೊಂದಿಗೆ ಬೆಳಗ್ಗೆ 7:00 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದರು.

    ದಾಳಿಯ ವೇಳೆ ಆರೋಪಿತ ಉದಯ ಮೆಂಡನ್ ವಶಕ್ಕೆ ಸಿಕ್ಕಿದ್ದು, ಇನ್ನೊಬ್ಬ ವ್ಯಕ್ತಿ ಸುನಿಲ್ ಎಂಬಾತ ಓಡಿಹೋಗಿದ್ದಾನೆ. ಸ್ಥಳದಲ್ಲಿ ಒಂದು ಫೈಬರ್ ದೋಣಿಯಲ್ಲಿ ಸುಮಾರು 1 ½ ಯುನಿಟ್ ಮರಳು (ಅಂದಾಜು ಮೌಲ್ಯ ₹5,000/-) ತುಂಬಿಸಿಟ್ಟಿರುವುದು ಹಾಗೂ KA20 C 6070 ಸಂಖ್ಯೆಯ 407 ಟಿಪ್ಪರ್ ವಾಹನ (ಅಂದಾಜು ಮೌಲ್ಯ ₹5,00,000/-) ನಿಂತಿರುವುದು ಕಂಡುಬಂದಿತು. ಆರೋಪಿತ ಉದಯ ಮೆಂಡನ್, ಪಂಚಗಂಗಾವಳಿ ಹೊಳೆಯಿಂದ ಮರಳನ್ನು ತೆಗೆದು ಟಿಪ್ಪರ್ ವಾಹನದಲ್ಲಿ ಸಾಗಾಟಕ್ಕೆ ತಂದಿರಿಸಿರುವುದಾಗಿ ತಿಳಿಸಿದ್ದಾನೆ.

    ಆರೋಪಿತರು ಯಾವುದೇ ಪರವಾನಗಿ ಇಲ್ಲದೇ ಸಂಘಟಿತವಾಗಿ ಮರಳು ಕಳವು ಮಾಡಿ ಸಾಗಾಟಕ್ಕೆ ಶೇಖರಿಸಿದ್ದಾರೆ ಎಂದು ಕಂಡುಬಂದಿದೆ. ಪೊಲೀಸರು ಸ್ಥಳದಲ್ಲಿ ದೋಣಿ (ಅಂದಾಜು ಮೌಲ್ಯ ₹15,000/-), 1 ½ ಯುನಿಟ್ ಮರಳು, ಟಿಪ್ಪರ್ ವಾಹನ, ಕಬ್ಬಿಣದ ಹಾರೆ-1, ಮತ್ತು ಫೈಬರ್ ಬುಟ್ಟಿಗಳು-2 ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರ ಅಡಿಯಲ್ಲಿ ಕಲಂ 303(2), 112 BNS ಮತ್ತು ಕಲಂ 4, 4(1)(a), 21 Mines and Minerals (Regulation and Development) Actನಂತೆ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

  • ಬ್ರಹ್ಮಾವರ: ಆಂಬ್ಯುಲೆನ್ಸ್ ಕೊಠಡಿ, 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ

    ಬ್ರಹ್ಮಾವರ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಜನೌಷಧಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿರುವ ಅಂಬುಲೆನ್ಸ್‌ ಕೊಠಡಿ ಮತ್ತು 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ ಸಮಾರಂಭ ಮೇ 31 ರಂದು ಶನಿವಾರ ಸಿಟಿ ಸೆಂಟರ್ ಬ್ರಹ್ಮಾವರದಲ್ಲಿ ನಡೆಯಿತು.

    ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ನಮ್ಮೊಳಗಿನ ನಮ್ಮತನ ಕಳೆದುಕೊಳ್ಳದೆ ಸದಾ ಕಾಲ ಜನಪಯೋಗಿಯಾಗಿ ಬದುಕು ಸಾಗಿಸಿದರೆ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯ. ಶಾಲೆಯಲ್ಲಿ ಶಿಕ್ಷಣ ನೀಡಿದರೆ, ಮನೆಯಲ್ಲಿ ಸಂಸ್ಕಾರ ನೀಡುವ ಕಾಯ೯ ನಡೆಯಬೇಕು ನಮ್ಮ ವಾತಾವರಣ ತಿಳಿಮಾಡುವ ಕೆಲಸ ನಿತ್ಯ ನಿರಂತವಾಗಿರಬೇಕು ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಜಯಂಟ್ಸ್ ಸಂಸ್ಥೆಯು ಪರಿಸರದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.

    ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಸ್ವಚ್ಚ ಭಾರತ ಮತ್ತು ವನಮಹೋತ್ಸವ ಕಾರ್ಯಕ್ರಮಗಳು ರಾಷ್ಟ್ರಮಟ್ಟದ ಕಾರ್ಯಕ್ರಮ ಗಳಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು.

    ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜೇಶ್ವರ್ ರಾವ್, ತಾ.ಪಂ ಇಒ ಹೆಚ್.ವಿ ಇಬ್ರಾಹಿಂಪುರ ಶುಭ ಹಾರೈಸಿದರು.

    ಈ ಸಂದಭ೯ದಲ್ಲಿ ಅಮೇರಿಕ ಅನಿವಾಸಿ ಭಾರತೀಯ ಹಲವಾರು ಸಂಸ್ಥೆಗಳಿಗೆ ದಾನ ನೀಡಿದ ಡಾ.ಜೀವನ್ ಪ್ರಕಾಶಿನಿ ಮೂತಿ೯ ಮತ್ತು ಎನ್.ಸಿ ಮೂತಿ೯ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಅವರು ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಬಿ. ಆರ್ ರವರನ್ನು ಗೌರವಿಸಲಾಯಿತು. ನಾಯ್ಕನಕಟ್ಟೆ ಶಾಲೆಗೆ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

    ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಮಹೇಶ್ ಐತಾಳ, ವಿವೇಕಾನಂದ ಕಾಮತ್, ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮುಂತಾದವರಿದ್ದರು. ಕಾರ್ಯದರ್ಶಿ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದು, ಅತಿಥಿಗಳಿಗೆ ಸಿಂದೂರ ವಿಶೇಷ ಗಿಡವನ್ನು ನೀಡಿ ಗೌರವಿಸಿದರು. ದಿವ್ಯ ಪೂಜಾರಿ, ಶ್ರೀನಾಥ ಕೋಟ, ಪ್ರಸನ್ನ ಕಾರಂತ, ರೊನಾಲ್ಡ್ ಡಯಾಸ್ ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಜನೌಷಧಿ ಸಿಬ್ಬಂದಿಗಳು ಮತ್ತು ಜಯಂಟ್ಸ್ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.

    ಜಯಂಟ್ಸ್ ನಿರ್ದೇಶಕ ಪ್ರದೀಪ್ ಶೆಟ್ಟಿ ಪ್ರತಿಮಾ ಡೋರಿಸ್ ಸಹಕರಿಸಿದರು.

  • ಉಡುಪಿ ಮತ್ತು ಕಾರವಾರದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ

    ಉಡುಪಿ, ಜೂನ್ 01, 2025: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ “ವಿಶ್ವ ಬೈಸಿಕಲ್ ದಿನಾಚರಣೆ”ಯನ್ನು ಆಚರಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೋಡುಕಟ್ಟೆಯಿಂದ ಬ್ರಹ್ಮಗಿರಿ, ಕರಾವಳಿ ಮಾರ್ಗವಾಗಿ ಕೋಟೆವರೆಗೆ ಸೈಕಲ್ ಜಾಥವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವು ಆರೋಗ್ಯ, ಫಿಟ್‌ನೆಸ್ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

    ಕಾರವಾರ, ಜೂನ್ 01, 2025: ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಖೇಲೋ ಇಂಡಿಯಾ ಯೋಜನೆಯ “ಫಿಟ್ ಇಂಡಿಯಾ” ಉಪಕ್ರಮದ ಅಡಿಯಲ್ಲಿ, ಸಿಟಿ ಬೈಸಿಕಲ್ ಕ್ಲಬ್ ಕಾರವಾರದ ಸಹಕಾರದೊಂದಿಗೆ “ವಿಶ್ವ ಬೈಸಿಕಲ್ ದಿನ”ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಿನಾಂಕ 01-06-2025 ರಂದು ಬೈಸಿಕಲ್ ಅಭಿಯಾನವನ್ನು ಆಯೋಜಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಗುರುತಿಸಲಾಯಿತು. ಈ ಕಾರ್ಯಕ್ರಮವು ದೈಹಿಕ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಸೈಕಲ್ ಬಳಕೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿತ್ತು.