Category: Udupi District

  • ಕುಂದಾಪುರ: ಬಾವಿ ಕೆಲಸದ ವೇಳೆ ದುರಂತ – ವ್ಯಕ್ತಿಯೊಬ್ಬರು ಮುಳುಗಿ ಸಾವು

    ಕುಂದಾಪುರ, ಮೇ 29, 2025: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಸುಭಾಷ್ (50) ಎಂಬ ವ್ಯಕ್ತಿಯು ಬಾವಿ ಕೆಲಸದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ನಡೆದಿದೆ. ದೂರುದಾರರಾದ ಅವರ ಪುತ್ರ ಅಭಿಷೇಕ್ (20) ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಸುಭಾಷ್ ಅವರು ತಮ್ಮ ಅಣ್ಣ ಸುರೇಂದ್ರ ಜೊತೆಗೆ ಕಳೆದ ಮೂರು ತಿಂಗಳಿಂದ ಗೋಪಾಡಿ ಗ್ರಾಮದ ಕರುಣಾಕರ ಎಂಬುವವರ ಜಾಗದಲ್ಲಿ ಬಾವಿ ತೋಡುವ ಕೆಲಸದಲ್ಲಿ ತೊಡಗಿದ್ದರು. ದಿನಾಂಕ 28/05/2025ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಸುಭಾಷ್, ಮಧ್ಯಾಹ್ನ 1:45 ಗಂಟೆ ಸುಮಾರಿಗೆ ಬಾವಿಯ ರಿಂಗ್ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲು ಅಳವಡಿಸಿದ್ದ ಪಿವಿಸಿ ಪೈಪ್ ಬಾವಿಯೊಳಗೆ ಬಿದ್ದಿತ್ತು. ಇದನ್ನು ತೆಗೆಯಲು ಬಾವಿಗೆ ಇಳಿದಿದ್ದ ವೇಳೆ, ಪೈಪ್ ಸಿಗದೇ, ಪುನಃ ಮೇಲೆ ಬರಲು ಹಗ್ಗದ ಸಹಾಯದಿಂದ ಹತ್ತುತ್ತಿರುವಾಗ ಆಕಸ್ಮಿಕವಾಗಿ ಹಗ್ಗವು ಕೈಯಿಂದ ಜಾರಿ ಬಾವಿಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.

    ಈ ಘಟನೆಯ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 30/2025ರಡಿ, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಮಣಿಪಾಲ: ಕೆಎಂಸಿ ಆಸ್ಪತ್ರೆ ವಸತಿಗೃಹದಲ್ಲಿ ಕಳ್ಳತನ – 10 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳವು

    ಮಣಿಪಾಲ, ಮೇ 29, 2025: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ಬಳಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯ ವಸತಿಗೃಹದ ನಂ. ಬಿ 235ರಲ್ಲಿ ವಾಸವಾಗಿರುವ ಸೆಲ್ವಂ ಎಂಬ ವ್ಯಕ್ತಿಯ ಮನೆಯಲ್ಲಿ ಕಳ್ಳತನದ ಘಟನೆ ನಡೆದಿದೆ.

    ಸೆಲ್ವಂ ಅವರು ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದ ವೇಳೆ, ಮನೆಗೆ ಬೀಗ ಹಾಕಿ ಖಾಲಿಯಾಗಿತ್ತು. ದಿನಾಂಕ 26/05/2025ರ ರಾತ್ರಿ, ಅಪರಿಚಿತ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ, ಸುಮಾರು 10,00,000 ರೂಪಾಯಿ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣಗಳು ಹಾಗೂ 15,000 ರೂಪಾಯಿ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

    ಈ ಘಟನೆಯ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2025ರಡಿ, ಕಲಂ 331(3), 33(4), 305 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಬೈಂದೂರು: ವ್ಯಕ್ತಿ ಕಾಣೆ; ಪ್ರಕರಣ ದಾಖಲು

    ಬೈಂದೂರು, ಮೇ 29, 2025: ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ನಿವಾಸಿಯಾದ ಮಹಾಲಿಂಗ (55) ಎಂಬ ವ್ಯಕ್ತಿಯು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಮಹಾಲಿಂಗ ಅವರ ಪುತ್ರ ಮಹೇಶ (20) ದೂರುದಾರರಾಗಿದ್ದಾರೆ.

    ಮಹಾಲಿಂಗ ಅವರು ಕೋಲಾಪುರದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 17/05/2025 ರಂದು ಬೆಳಿಗ್ಗೆ 10:00 ಗಂಟೆಗೆ ಕೋಲಾಪುರದಿಂದ ಬೈಂದೂರಿಗೆ ಬಂದಿದ್ದಾರೆ. ಆದರೆ, ಅವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2025ರಡಿ, ಕಾಣೆಯಾದ ವ್ಯಕ್ತಿಯ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಉದ್ಘಾಟನೆ

    ಕುಂದಾಪುರ, ಮೇ 28, 2025: ಅವಿಭಜಿತ ದ,ಕ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಪ್ರಾಮಾಣಿಕ ಸೇವೆ ನೀಡುತ್ತಾ ವ್ಯವಸಾಯಗಾರರ ಶ್ರೇಯೋಭಿವೃದ್ಧಿಯಲ್ಲಿ ಶ್ರಮಿಸುತ್ತಿವೆ. ಕೃಷಿಪತ್ತಿನ ಸಹಕಾರ ಸಂಘಗಳಿಗೆ ರೈತರಿಗೆ ಪೂರಕವಾಗಿ ಸ್ಪಂದಿಸಲು ಸಾಕಷ್ಟು ಅವಕಾಶಗಳಿದ್ದು, ಆ ಬಗ್ಗೆಯೂ ಚಿಂತನೆಯನ್ನು ಮಾಡಬೇಕಾಗಿದೆ ಎಂದು ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

    ಅವರು ಮೇ 28ರಂದು ಹಾಲಾಡಿಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಉದ್ಘಾಟಿಸಿ ಮಾತನಾಡಿದರು.

    ಪ್ರಸ್ತುತ ಶುದ್ಧ ತೆಂಗಿನ ಎಣ್ಣೆ ತಯಾರಿಸುವ ಘಟಕಗಳನ್ನು ನಿರ್ಮಿಸಿ ಸೇವೆ ನೀಡಲು ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಅವಕಾಶವಿದೆ. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದವರು ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ಈ ಯೋಜನೆಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಅದೇ ರೀತಿ ಕರಾವಳಿಯಲ್ಲಿ ಭತ್ತದ ಧಾರಣೆಯನ್ನು ಕೂಡಾ ಅಕ್ಕಿಗಿರಣಿಯವರು ನಿರ್ಧರಿಸುತ್ತಾರೆ. ಕಟಾವು ಆದ ತಕ್ಷಣ ಭತ್ತ ಗಿರಣಿಗಳಿಗೆ ಹೋಗುತ್ತದೆ. ಅಲ್ಲಿ ತೇವಾಂಶ, ಇತರ ಕಾರಣ ಹೇಳಿ ಅವರು ನೀಡಿದ ಬೆಲೆಯನ್ನು ರೈತರು ಪಡೆದುಕೊಳ್ಳಬೇಕು. ರೈತರಿಗೆ ಸೂಕ್ತ ಗೋದಾಮು, ಒಣಿಸಲು ಡ್ರೈಯರ್ ವ್ಯವಸ್ಥೆ ಇದ್ದರೆ ಭತ್ತವನ್ನು ಉತ್ತಮ ಧಾರಣೆ ಬರುವ ತನಕ ಶೇಖರಿಸಿಡಬಹುದು. ಅಂಥಹ ವ್ಯವಸ್ಥೆಯನ್ನು ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮಾಡಬೇಕು. ವ್ಯವಸಾಯ ಸೇವಾ ಸಹಕಾರಿ ಸಂಘಗಳು ರೂಪಿತವಾಗಿದ್ದೇ ವ್ಯವಸಾಯಗಾರರ ಅನುಕೂಲಕ್ಕಾಗಿ. ತನ್ನ ಜವಬ್ದಾರಿಯನ್ನು ಯಾವತ್ತೂ ಮರೆಯಬಾರದು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್.ಜಯರಾಮ ಶೆಟ್ಟಿ ಮಾತನಾಡಿ, ಹಾಲಾಡಿ ಶಾಖೆ ಇವತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಮರುಪಾವತಿ, ಠೇವಣಿ, ಸದಸ್ಯತ್ವ ಎಲ್ಲ ವಿಚಾರಗಳಲ್ಲೂ ಗುರುತಿಸಿಕೊಂಡಿದೆ. ಗ್ರಾಹಕರ ವಿಶ್ವಾಸದ ಕಾರಣ ಇವತ್ತು ಇಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಕಟ್ಟಡ ಆರಂಭವಾಗಲು ಕಾರಣವಾಯಿತು. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಸ್ತುತ 4.21 ಕೋಟಿ ಪಾಲು ಬಂಡವಾಳ, 104.20 ಕೋಟಿ ಠೇವಣಾತಿ, 50.07 ಕೋಟಿ ಹೂಡಿಕೆಯನ್ನು ಹೊಂದಿದೆ. ಮಾರ್ಚ್ 31-2025ರ ಅಂತ್ಯಕ್ಕೆ 2.40 ಕೋಟಿ ಲಾಭ ಗಳಿಸಿದೆ. ನಾಲ್ಕು ಶಾಖೆಗಳನ್ನು ಸಂಸ್ಥೆ ಹೊಂದಿದ್ದು ಎಲ್ಲ ಶಾಖೆಗಳು ಸ್ವಂತ ಕಟ್ಟಡ ಹೊಂದಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. 828 ಕೋಟಿ ವ್ಯವಹಾರವನ್ನು ಸಂಸ್ಥೆ ಮಾಡಿದೆ. ಸಂಘದ ವತಿಯಿಂದ ಗೋಳಿಯಂಗಡಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

    ಗ್ರಾಹಕರಿಗೆ ಲಾಕರ್ ಕೀ ಹಸ್ತಾಂತರ ಮಾಡಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು, ಸಹಕಾರಿ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಕೃಷಿಪತ್ತಿನ ಸಹಕಾರ ಸಂಘಗಳು ಇವತ್ತು ರೈತರಿಗೆ ಪ್ರಾಮಾಣಿಕ ಸೇವೆ ನೀಡುತ್ತಾ, ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿವೆ. ರೈತರಿಗೆ ಯಂತ್ರೋಪಕರಣಗಳು, ಔಷಧ, ಶಿಕ್ಷಣಕ್ಕೆ ನೆರವು, ಸಾಮಾಜಿಕ ಉದ್ದೇಶಗಳಿಗೆ ಉತ್ತೇಜನ ನೀಡುವಲ್ಲಿ ಸಹಕಾರ ಕ್ಷೇತ್ರ ತೊಡಗಿಸಿಕೊಂಡಿದೆ. ಗಳಿಸಿದ ಲಾಭದಲ್ಲಿ ಸದಸ್ಯರಿಗೆ, ಸಮಾಜಕ್ಕೆ ನೀಡುವುದು ಕೂಡಾ ಮುಖ್ಯ. ಇವತ್ತು ಹಾಲಾಡಿಯಲ್ಲಿ ಅಂದು ಮಹಾಬಲ ಶೆಟ್ಟಿಯವರು ಸಹಕಾರದ ಉದ್ದೇಶಕ್ಕೆ ನಿವೇಶನ ಕಾದಿರಿಸಿದ್ದನ್ನು ಇಂದೂ ಜನ ನೆನಪಿಸಿಕೊಳ್ಳುತ್ತಾರೆ. ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಬೇಕು ಎಂದರು.

    ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಮ್.ಮಹೇಶ ಹೆಗ್ಡೆ ಹೊಸ ನವೋದಯ ಸ್ವ-ಸಹಾಯ ಸಂಘಗಳನ್ನು ಉದ್ಘಾಟಿಸಿದರು. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯ, ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಚೋರಾಡಿ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಸುಬ್ರಾಯ, ಸಯ್ಯಾದ್ ಸಾಹೇಬ್ ಹೆಚ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡದ ಒಳಾಂಗಣ ವಿನ್ಯಾಸ ಮಾಡಿದ ಸೂರ್ಯಪ್ರಕಾಶ ಭಟ್, ಸಹಕಾರ ನೀಡಿದ ನರಸಿಂಹ ಶೆಟ್ಟಿ ಚೋರಾಡಿ, ಅಣ್ಣಪ್ಪ ಕುಲಾಲ್ ಅವರಿಗೆ ಗೌರವಾರ್ಪಣೆ ನೀಡಲಾಯಿತು.

    ಹಾಲಾಡಿ ಶಾಖೆ ಶಾಖಾ ವ್ಯವಸ್ಥಾಪಕ ಚಂದ್ರಶೇಖರ ಪೂಜಾರಿ, ನಿರ್ದೇಶಕರಾದ ಎಚ್.ಕೆ.ಸೀತಾರಾಮ ಶೆಟ್ಟಿ, ದಯಾನಂದ ಆರ್.ಶೆಟ್ಟಿ, ಎಮ್.ಚಂದ್ರಶೇಖರ ಶೆಟ್ಟಿ, ದಯಾನಂದ ಪೂಜಾರಿ ಕೆ., ಇಚ್ಚಿತಾರ್ಥ ಶೆಟ್ಟಿ, ಉದಯ ಶೆಟ್ಟಿ, ಕೃಷ್ಣ ನಾಯ್ಕ, ಶ್ರೀಮತಿ ಸವಿತಾ ಪಿ ಶೆಟ್ಟಿ, ಶ್ರೀಮತಿ ಸುಜಾತ ಪೂಜಾರಿ, ಶಿವರಾಮ, ಪ್ರದೀಪ, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

    ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಘದ ಬೆಳವಣಿಗೆಯ ವಿವರ ನೀಡುತ್ತಾ, 7 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವು 12 ಸಾವಿರ ಸದಸ್ಯರನ್ನು ಹೊಂದಿದೆ. 99% ಸಾಲ ವಸೂಲಾತಿ, 100 ಸ್ವಸಹಾಯ ಸಂಘಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಭಾಗದ ಬಹುದಿನಗಳ ಬೇಡಿಕೆಯಾದ ಹೊಸ ಕಟ್ಟಡವು ಸುಮಾರು 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಸದಸ್ಯರ ಸೇವೆ ಸಜ್ಜಾಗಿದೆ ಎಂದರು.

    ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ಹರೀಶ್ ಕಿಣಿ ಬಿ. ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

  • ಉಡುಪಿ: ಮೇ 31 ರಂದು ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ (Diabetic Foot) ತಪಾಸಣಾ ಶಿಬಿರ

    ಉಡುಪಿ, ಮೇ 28, 2025: ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಮೇ 31 ರ ಶನಿವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಪ್ರತಿಷ್ಠಿತ ಆಸ್ಪತ್ರೆ MAHE ಪೊಡಿಯಾಟ್ರಿ ಮತ್ತು ಡಯಾಬಿಟಿಕ್ ಪಾದ ಆರೈಕೆ ಸಂಶೋಧನಾ ಕೇಂದ್ರ, ಮಣಿಪಾಲ ಆರೋಗ್ಯ ಕಾಲೇಜು ಮತ್ತು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ. ನವೀನ್ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸಿಎಸ್‌ಆರ್ ಯೋಜನೆಯ ಬೆಂಬಲದೊಂದಿಗೆ ಈ ಉಪಕ್ರಮವನ್ನು ನಡೆಸಲಾಗುತ್ತಿದೆ.

    ಗುಳ್ಳೆಗಳು, ಕ್ಯಾಲಸಸ್ ಮತ್ತು ಕಳಪೆ ರಕ್ತ ಪರಿಚಲನೆಯಂತಹ ಮಧುಮೇಹದಿಂದ ಉಂಟಾಗುವ ಪಾದ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದು ಶಿಬಿರದ ಗುರಿಯಾಗಿದೆ. ಈ ಶಿಬಿರದಲ್ಲಿ ರಕ್ತನಾಳ ಮತ್ತು ನರ ತಪಾಸಣೆ, ತಜ್ಞರಿಂದ ಫುಟ್‌ವೇರ್ ಸಲಹೆ ಮತ್ತು ಉಚಿತ ಸಂಪರ್ಕ ಸೇವೆಗಳು ಒದಗಿಸಲಾಗುತ್ತವೆ. ಇದಲ್ಲದೆ, ಜೂನ್ 15, 2025ರವರೆಗೆ ಇನ್ನಷ್ಟು ತಪಾಸಣೆ ಮತ್ತು ಚಿಕಿತ್ಸೆಗೆ 20% ರಿಯಾಯಿತಿ ಒದಗಿಸಲಾಗುತ್ತದೆ.

    ಡಾ. ಡಾ. ಶಶಿಕಿರಣ ಉಮಾಕಾಂತ್, ವೈದ್ಯಕೀಯ ಆಡಳಿತಾಧಿಕಾರಿ, ಟಿ.ಎಂ.ಎ. ಪೈ ಆಸ್ಪತ್ರೆಯ ನಿರ್ದೇಶಕರು, “ಡಯಾಬೆಟಿಸ್‌ನಿಂದ ಬಳಲುವ ಅನೇಕರು ಪಾದದ ಸಮಸ್ಯೆಗಳಿಂದಾಗಿ ತಮ್ಮ ಸ್ವಾಯತ್ತತೆ ಮತ್ತು ಚಲನಶೀಲತೆಯನ್ನು ಕಳೆದುಕೊಳ್ಳುತ್ತಾರೆ. ಸಮಯೋಚಿತ ತಪಾಸಣೆ ಮತ್ತು ಚಿಕಿತ್ಸೆಯಿಂದ ಇದನ್ನು ತಪ್ಪಿಸಬಹುದು. ಖಾಸಗಿ ಪಾದ ನೋವು, ಊತ ಅಥವಾ ಸುಡುವಿಕೆಯನ್ನು ಎದುರಿಸುತ್ತಿರುವ ಮಧುಮೇಹಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.

    ಮಣಿಪಾಲ ಆರೋಗ್ಯ ತಜ್ಞರ ಕಾಲೇಜಿನ ಡೀನ್ ಡಾ. ಜಿ. ಅರುಣ್ ಮೈಯಾ, ಮೊದಲ ಹಂತದ ತಪಾಸಣೆಯೇ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಲು ಮುಖ್ಯವೆಂದು ಉಲ್ಲೇಖಿಸಿದರು. ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಮತ್ತು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉತ್ತಮ ಡಯಾಬೆಟಿಕ್ ಫುಟ್ ಕೇರ್ ಸೌಲಭ್ಯ ಲಭ್ಯವಿದೆ ಎಂದು ಭರವಸೆ ನೀಡಿದರು.

    ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: 7338343777

  • ಅವೈಜ್ಞಾನಿಕ ಕೇಬಲ್‌ ವೈರ್‌ ಅಳವಡಿಕೆ ನಿಯಂತ್ರಣಕ್ಕೆ ಸಭೆ ಒತ್ತಾಯ; ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಭೆ

    ಕುಂದಾಪುರ, 28 ಮೇ,2025: ರಸ್ತೆಯಲ್ಲಿ ಹಾದು ಹೋಗುವಾಗ ನೀವೊಮ್ಮೆ ಸುಮ್ಮನೆ ತಲೆ ಎತ್ತಿ ನೋಡಬೇಕು. ಕಂಬದಿಂದ ಕಂಬಕ್ಕೆ ತೋರಣ ಕಟ್ಟಿದಂತೆ ಕೇಬಲ್‌ ವೈರ್‌ ಗಳು ಇನ್ನೇನು ಬಿದ್ದೇ ಬಿಡುವುದೋ ಎನ್ನುವಂತೆ ಜೋತಾಡುತ್ತಿರುವ ನೋಟ ಭಯ ಹುಟ್ಟಿಸುತ್ತದೆ. ಕುಂದಾಪುರದಿಂದ ಅಮಾವಾಸೆಯವರೆಗೂ ತಲೆಮೇಲೆ ಜೋತುಬಿದ್ದಂತೆಯೇ ಇವೆ. ಅಪಾಯವನ್ನು ತಂದೊಡ್ಡುತ್ತಿವೆ. ಮೆಸ್ಕಾಂ ಅನುಮತಿಯಿಲ್ಲದೇ ಅನಧಿಕೃತ ಕಂಬಗಳನ್ನು ಅಳವಡಿಸಿ ಪ್ರೈವೇಟ್‌ ಕಂಪೆನಿಗಳನ್ನು ಕೇಬಲ್‌ ವೈರ್ ಗಳನ್ನು ಎಳೆಯುತ್ತಿವೆ. ನೂರಾರು ಕಿ. ಮೀ. ಉದ್ದದ ಅನಧಿಕೃತ ಕೇಬಲ್‌ ಜಾಲ ಹರಡಿಕೊಂಡಿದೆ. ಮಾನದಂಡಗಳನ್ನು ಮೀರಿ ಅವೈಜ್ಞಾನಿಕವಾಗಿ ಕೇಬಲ್‌ ವೈರ್‌ ಗಳನ್ನು ಎಳೆಯಲಾಗುತ್ತಿದೆ. ಮೆಸ್ಕಾಂ ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಮುಂದಿನ ಸಭೆಯಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಕುಂದಾಪುರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಮುಂದಿನ ಸಭೆಯಲ್ಲಿ ಕೇಬಲ್‌ ಕಂಪೆನಿಗಳಿಂದ ಎಷ್ಟು ಹಣ ಪಾವತಿ ಮಾಡಿಕೊಳ್ಳಲಾಗುತ್ತಿದೆ, ಎಷ್ಟು ಕಂಬಗಳಿಗೆ ಮೆಸ್ಕಾಂ ನಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎನ್ನುವುದರ ಬಗ್ಗೆ ಅನುಪಾಲನ ವರದಿ ಸಲ್ಲಿಸುವಂತೆ ಅವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅವರು ಇಂದು(ಬುಧವಾರ) ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಚಂದ್ರ ಕಾಂಚನ್‌, ವಿದ್ಯುತ್‌ ತಂತಿಗಳು, ಕೇಬಲ್‌ ವೈರ್ ಗಳ ಅವೈಜ್ಞಾನಿಕ ಅಳವಡಿಕೆಯ ಬಗ್ಗೆ ಸಭೆಯ ಗಮನ ಸೆಳೆದರು. ಅವೈಜ್ಞಾನಿಕ ಕೇಬಲ್‌ ವೈರ್‌ ಗಳ ಅಳವಡಿಕೆಗೆ ಮೆಸ್ಕಾಂ ಇಲಾಖೆ ಅನುಮತಿ ನೀಡಬಾರದು. ಕೇಬಲ್‌ ಅಳವಡಿಕೆಗೆಗೆ ಇಲಾಖೆಯಿಂದ ಕೇಳಿದ ಕೂಡಲೇ ಹೆಚ್ಚಿನ ನಿರ್ಬಂಧವಿಲ್ಲದೆ ಅನುಮತಿ ದೊರಕುವುದು ವಾಡಿಕೆ ಎಂಬಂತಾಗಿದೆ. ಸ್ಥಳ ಪರಿಶೀಲನೆ ಮಾಡಿ ಅನುಮತಿ ನೀಡಬೇಕು. ಆಗ ಮಾತ್ರ ಅಪಾಯ ತಪ್ಪಿಸಬಹುದಾಗಿದೆ ಎಂದು ಹೇಳಿದರು.

    ಮೆಸ್ಕಾಂ ಬಗ್ಗೆ ಅಧ್ಯಕ್ಷರ ಅಸಮಧಾನ :

    ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್‌ ತಂತಿಗಳು ಹಾಗೂ ಕಂಬಗಳ ಮೇಲೆ ಅಕ್ಕಪಕ್ಕದ ಮರಗಳ ಕೊಂಬೆಗಳು ಮಳೆ, ಗಾಳಿಯಿಂದ ಬಿದ್ದು ವಿದ್ಯುತ್‌ ಕಂಬ, ತಂತಿಗಳಿಗೂ ಹಾನಿ ಉಂಟಾಗುತ್ತದೆ ಎನ್ನುವುದರ ಬಗ್ಗೆ ಮೆಸ್ಕಾಂ ಸಿಬ್ಬಂದಿಗಳಿಗೆ, ಇಲಾಖೆಗೆ ಹೇಳಬೇಕೆಂದಿಲ್ಲ. ಮಳೆಗಾಲ ಆರಂಭಕ್ಕೂ ಮುಂಚೆಯೇ ವಿದ್ಯುತ್‌ ತಂತಿ, ಕಂಬಗಳ ಅಕ್ಕಪ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಿ ಮುಂಜಾಗ್ರತೆ ವಹಿಸದೆ ಇರುವುದು ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ.

    ಅಪಾಯವನ್ನು ತಡೆಯುವ ಉದ್ದೇಶದಿಂದ ಕಂಬಗಳು, ತಂತಿಗಳ ಮೇಲೆ ಚಾಚಿಕೊಂಡಿರುವ ಮರದ ಕೊಂಬೆಗಳನ್ನು ಮೆಸ್ಕಾಂ ಇಲಾಖೆ ಕಡಿದು ಅಪಾಯವನ್ನು ತಪ್ಪಿಸಬಹುದಿತ್ತು. ಇನ್ನಾದರೂ ಮುಂಜಾಗ್ರತೆ ವಹಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು. ಖಾಸಗಿ ಜಾಗದಲ್ಲಿರುವ ತಂತಿಗಳ ಮೇಲೆ ಬಂದ ಕೊಂಬೆಗಳನ್ನು ತೆಗೆಯುವುದಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂತು. ಇಲಾಖೆ ಮುತುವರ್ಜಿ ವಹಿಸಿಕೊಂಡು ಅವಘಡವನ್ನು ತಪ್ಪಿಸುವಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

    ಲೈನ್‌ ಮ್ಯಾನ್‌ ಕೊರತೆ :

    ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಜಹೀರ್ ನಾಖುದ ಗಂಗೊಳ್ಳಿ‌, ಮಳೆಯಿಂದಾಗಿ ವಿದ್ಯುತ್‌ ವ್ಯತ್ಯವಾಗುತ್ತಿರುವುದನ್ನು ಮತ್ತು ಗಂಗೊಳ್ಳಿ ಭಾಗದಲ್ಲಿ ಲೈನ್‌ ಮ್ಯಾನ್ ಗಳ ಕೊರತೆಯ ಬಗ್ಗೆ ಸಭೆಯ ಗಮನ ಸೆಳೆದರು. ಹೆಚ್ಚವರಿ ಲೈನ್‌ ಮ್ಯಾನ್ ಗಳನ್ನು ನಿಯೋಜಿಸುವಂತೆ ಅವರು ಒತ್ತಾಯಿಸಿದರು. ಮೆಸ್ಕಾಂ ತಲ್ಲೂರು ಉಪ ವಿಭಾಗದ ಅಸಿಸ್ಟೆಂಟ್‌ ಇಂಜಿನಿಯರ್‌ ಶಿವಾನಂದ್‌ ನಾಯಕ್‌ ಮಾತನಾಡಿ, ಉಡುಪಿ ಜಿಲ್ಲಾಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ತಲ್ಲೂರು ಉಪವಿಭಾಗಕ್ಕೆ ಲೈನ್‌ ಮ್ಯಾನ್‌ ನೇಮಕಗೊಳ್ಳಬಹುದು ಎಂದು ಅವರು ಹೇಳಿದರು.

    ರೇಷನ್‌ ಕಾರ್ಡ್‌ ತಿದ್ದುಪಡಿಗೆ ಸಹಕರಿಸಿ :

    ಕೊರಗ ಕುಟುಂಬಗಳು ಪಡಿತರ ಚೀಟಿಯಲ್ಲಿ ದೋಷದಿಂದ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯದಂತಾಗಿದೆ. ಪಡಿತರ ಚೀಟಿ ತಿದ್ದುಪಡಿ ಕಾರ್ಯವನ್ನು ಆಹಾರ ಇಲಾಖೆ ಸ್ವಯಂ ಮುತುವರ್ಜಿ ವಹಿಸಿ ನಿರ್ವಹಿಸಬೇಕೆಂದು ಅಧ್ಯಕ್ಷರು ತಿಳಿಸಿದರು.

    ತಾಲೂಕಿಗೆ ಏಪ್ರಿಲ್‌ ನಲ್ಲಿ 9,72,72,172 ರೂ.
    ಕುಂದಾಪುರ ತಾಲೂಕಿಗೆ ಈವರೆಗೆ ಗ್ರಹಲಕ್ಷ್ಮೀ ಯೋಜನೆಯಿಂದ 176,92,96,000 ರೂ. ಗ್ರಹಜ್ಯೋತಿ ಯೋಜನೆಯಿಂದ ಏಪ್ರಿಲ್ ತಿಂಗಳಲ್ಲಿ ತಾಲೂಕಿಗೆ 3,93,14,282 ರೂ. ಅನ್ನ ಭಾಗ್ಯ ಯೋಜನೆಯಿಂದ 3,05,10,000 ರೂ. ಶಕ್ತಿ ಯೋಜನೆಗಾಗಿ 2,74,47,870 ರೂ. ಯುವನಿಧಿ ಯೋಜನೆಗಾಗಿ ಈವರೆಗೆ 1,18,00500 ರೂ. ಬಂದಿದೆ. ಒಟ್ಟು ಏಪ್ರಿಲ್ ತಿಂಗಳಲ್ಲಿ 9,72,72,172 ರೂ. ತಾಲೂಕಿಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿರುವುದಾಗಿ ಅವರು ತಿಳಿಸಿದರು.

    ಸಭೆಯಲ್ಲಿ ತಾಲೂಕು ಪಂಚಾಯತತ್‌ ಕಾರ್ಯ ನಿರ್ವಹಣಾಧಿಕಾರಿ ಡಾ. ರವಿಕುಮಾರ್‌ ಹುಕ್ಕೇರಿ, ಸಮಿತಿಯ ಸದಸ್ಯರಾದ ಅಭಿಜಿತ್‌ ಪೂಜಾರಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್‌, ಅಉಣ್‌, ವಾಣಿ ಆರ್‌ ಶೆಟ್ಟಿ, ಸವಿತಾ ಪೂಜಾರಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

  • ಉಡುಪಿ: ಜಿಲ್ಲಾ ಸೆನ್ ಪೊಲೀಸ್ ಠಾಣೆ ವತಿಯಿಂದ ಸೈಬರ್ ಜಾಗೃತಿ ಕಾರ್ಯಕ್ರಮ

    ಉಡುಪಿ, 28 ಮೇ,2025: ಜಿಲ್ಲೆ ಸೆನ್ ಪೊಲೀಸ್ ಠಾಣೆಯ ವತಿಯಿಂದ ಮಣಿಪಾಲದ ಎಂಐಟಿ ಸಹಯೋಗ ಮತ್ತು ಎನ್‌ಸಿಸಿ ಘಟಕದ ಸಹಭಾಗಿತ್ವದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಆನ್‌ಲೈನ್ ಮೋಸಗಳು, ಡೇಟಾ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ವಿವರಣೆ ನೀಡಲಾಯಿತು.

  • ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಆಗಿ ಡಾ. ಅನಿಲ್ ಕೆ. ಭಟ್ ನೇಮಕ

    ಮಣಿಪಾಲ, ಮೇ 28, 2025: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಡೀನ್ ಆಗಿ ಡಾ. ಅನಿಲ್ ಕೆ. ಭಟ್ ಅವರನ್ನು 2025ರ ಮೇ 1 ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

    ಪ್ರತಿಷ್ಠಿತ ವೈದ್ಯ, ಶಿಕ್ಷಣ ತಜ್ಞ ಮತ್ತು ಆಡಳಿತಗಾರರಾದ ಡಾ. ಭಟ್, ಮೂಳೆಚಿಕಿತ್ಸೆ, ಕೈ ಶಸ್ತ್ರಚಿಕಿತ್ಸೆ, ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.

    ಈ ನೇಮಕಾತಿಯ ಕುರಿತು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಮಾತನಾಡಿ, “ಕೆಎಂಸಿ ಶೈಕ್ಷಣಿಕ, ವೈದ್ಯಕೀಯ ಸೇವೆ ಮತ್ತು ಸಂಶೋಧನೆಯಲ್ಲಿ ತನ್ನ ಶ್ರೇಷ್ಠತೆಯ ಪರಂಪರೆಯನ್ನು ಹೊಂದಿದೆ. ಡಾ. ಅನಿಲ್ ಭಟ್ ಅವರ ಡೀನ್ ಆಗಿ ನೇಮಕವು, ದೂರದೃಷ್ಟಿಯುಳ್ಳ ನಾಯಕತ್ವವನ್ನು ಆಯ್ಕೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರ ನೇತೃತ್ವದಲ್ಲಿ ಕೆಎಂಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಗುರುತನ್ನು ಮುಂದುವರಿಸಿಕೊಂಡು ಹೋಗುವುದೆಂದು ನಾವು ವಿಶ್ವಾಸ ಹೊಂದಿದ್ದೇವೆ,” ಎಂದರು.

    ಡಾ. ಭಟ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮತ್ತು ಕೆಎಂಸಿ ಮಣಿಪಾಲದಿಂದ (1999) ಮೂಳೆಚಿಕಿತ್ಸೆಯಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಜೊತೆಗೆ, ಮೂಳೆಚಿಕಿತ್ಸೆಯಲ್ಲಿ ಡಿಎನ್‌ಬಿ ಪದವಿಯನ್ನೂ ಪಡೆದಿದ್ದಾರೆ. 1999ರಲ್ಲಿ ಕೆಎಂಸಿಯಲ್ಲಿ ವೃತ್ತಿಜೀವನ ಆರಂಭಿಸಿದ ಅವರು, 2014-2019ರವರೆಗೆ ಮೂಳೆಚಿಕಿತ್ಸೆ ವಿಭಾಗದ ಮುಖ್ಯಸ್ಥರಾಗಿ ಮತ್ತು 2019ರಿಂದ ಅಸೋಸಿಯೇಟ್ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಕೈ ಶಸ্ত್ರಚಿಕಿತ್ಸೆ ವಿಭಾಗ ಮತ್ತು ಎಂ.ಸಿ.ಎಚ್. ಕೈ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ, ಇದು ಭಾರತದ ಮೂರು ಕಡೆಗಳಲ್ಲಿ ಲಭ್ಯವಿರುವ ಅಪರೂಪದ ಕಾರ್ಯಕ್ರಮವಾಗಿದೆ.

    ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಡಾ. ಭಟ್, ಮಣಿಕಟ್ಟಿನ ಶಸ್ತ್ರಚಿಕಿತ್ಸೆ, ಆರ್ತ್ರೋಸ್ಕೋಪಿ, ಜನ್ಮಜಾತ ವಿರೂಪ ತಿದ್ದುಪಡಿ ಮತ್ತು AI-ಸಂಯೋಜಿತ ಸೋಂಕು ಪತ್ತೆ ಸಂಶೋಧನೆಯಲ್ಲಿ ನಾಯಕತ್ವ ವಹಿಸಿದ್ದಾರೆ. ಭಾರತೀಯರಿಗಾಗಿ ಹಲವು ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು 14 ಆಂಥ್ರೊಪೊಮೆಟ್ರಿಕ್ ಡೇಟಾಸೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಜನ್ಮಜಾತ ಕೈ ವೈಕಲ್ಯಕ್ಕಾಗಿ ರಾಷ್ಟ್ರೀಯ ನೋಂದಾವಣೆಯನ್ನು ಪ್ರಾರಂಭಿಸಿದ್ದು, ‘ಹಸ্তಾ: ಸೆಂಟರ್ ಫಾರ್ ಕಂಜೆನಿಟಲ್ ಹ್ಯಾಂಡ್ ಡಿಫರೆನ್ಸಸ್’ ಮೂಲಕ 3D ಮುದ್ರಣ ಪ್ರಾಸ್ಥೆಟಿಕ್ಸ್ ಸೌಲಭ್ಯವನ್ನು ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ಬಾರಿಗೆ ರಚಿಸಿದ್ದಾರೆ.

    ಡಾ. ಭಟ್ 130ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ಜರ್ನಲ್ ಆಫ್ ಆರ್ತ್ರೋಪೆಡಿಕ್ ಟ್ರಾಮಾ ಅಂಡ್ ರೀಕನ್ಸ್ಟ್ರಕ್ಷನ್‌ನ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಜರ್ನಲ್ ಆಫ್ ಹ್ಯಾಂಡ್ ಸರ್ಜರಿ (ಏಷ್ಯಾ ಪೆಸಿಫಿಕ್) ಮತ್ತು ಆನಲ್ಸ್ ಆಫ್ ಪ್ಲಾಸ್ಟಿಕ್ ಸರ್ಜರಿಯಂತಹ ಜಾಗತಿಕ ಜರ್ನಲ್‌ಗಳಲ್ಲಿ ಸಂಪಾದಕೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. 41 ಸ್ನಾತಕೋತ್ತರ ಪ್ರಬಂಧಗಳು ಮತ್ತು 7 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ (ISSH) ನ ಪ್ರಮುಖ ಸದಸ್ಯರಾಗಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಕೊಡುಗೆ ನೀಡಿದ್ದಾರೆ. ಅವರ ‘ಕೇಸಸ್ ಇನ್ ಆರ್ತ್ರೋಪೆಡಿಕ್ಸ್’ ಪುಸ್ತಕವು ವ್ಯಾಪಕವಾಗಿ ಬಳಸಲ್ಪಡುವ ಶೈಕ್ಷಣಿಕ ಸಂಪನ್ಮೂಲವಾಗಿದೆ.

    ಐಎಫ್‌ಎಸ್‌ಎಸ್‌ಎಚ್, ಎಎಸ್‌ಎಸ್‌ಎಚ್, ಬಿಎಸ್‌ಎಸ್‌ಎಚ್ ಮತ್ತು ಎಪಿಎಫ್‌ಎಸ್‌ಎಸ್‌ಎಚ್‌ನಂತಹ ವೇದಿಕೆಗಳಲ್ಲಿ 400ಕ್ಕೂ ಹೆಚ್ಚು ಆಹ್ವಾನಿತ ಉಪನ್ಯಾಸಗಳನ್ನು ನೀಡಿದ್ದಾರೆ ಮತ್ತು ಪ್ರಪಂಚದಾದ್ಯಂತ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡಿದ್ದಾರೆ.

  • ಉಡುಪಿ: ಕಾರು ಅಫಘಾತ ಫೋಟೊಗ್ರಾಫರ್ ಸಾವು

    ಉಡುಪಿ, ಮೇ 28, 2025: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋಡಿಕಲ್ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಮಗುಚಿ ಬಿದ್ದ ಘಟನೆಯಲ್ಲಿ ಫೋಟೋಗ್ರಾಫರ್ ಸೂರ್ಯ ನಾರಾಯಣ (48) ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.

    ಸೂರ್ಯ ನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೋಗ್ರಾಫಿಗಾಗಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೋಡಿಕಲ್ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

    ಸೂರ್ಯ ನಾರಾಯಣ ಅವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಸ್ವಂತ ಫೋಟೋಗ್ರಾಫಿ ಸ್ಟೂಡಿಯೋ ಆರಂಭಿಸಿದ್ದರು. ಉಡುಪಿಯಲ್ಲಿ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ಅವರನ್ನು ‘ವರ್ ಸೂರ್ಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.

  • ಉಡುಪಿ ಜಿಲ್ಲೆಯ ನಡಪಾಲು ಗ್ರಾಮ; ಕರ್ನಾಟಕದ ಎರಡನೇ ಅತಿ ಹೆಚ್ಚು ಮಳೆ ದಾಖಲು

    ಉಡುಪಿ, ಮೇ 28, 2025: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಡಪಾಲು ಗ್ರಾಮ ಪಂಚಾಯತ್‌ನಲ್ಲಿ ಮೇ 28 ರ ಬೆಳಿಗ್ಗೆ 8:30 ರವರೆಗಿನ 24 ಗಂಟೆಗಳಲ್ಲಿ 144.5 ಮಿ.ಮೀ. ಮಳೆ ದಾಖಲಾಗಿದ್ದು, ಕರ್ನಾಟಕದಲ್ಲಿ ಎರಡನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (KSNDMC) ತಿಳಿಸಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮ ಪಂಚಾಯತ್‌ನಲ್ಲಿ ಅತಿ ಹೆಚ್ಚು 145.5 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್‌ನಲ್ಲಿ 139.5 ಮಿ.ಮೀ. ಮತ್ತು ಅದೇ ತಾಲೂಕಿನ ಹೆಮ್ಮಾಡಿ ಗ್ರಾಮ ಪಂಚಾಯತ್‌ನಲ್ಲಿ 133 ಮಿ.ಮೀ. ಮಳೆ ಬಿದ್ದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮ ಪಂಚಾಯತ್‌ನಲ್ಲಿ 129.5 ಮಿ.ಮೀ. ಮಳೆ ದಾಖಲಾಗಿದ್ದರೆ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ 38 ಕಳ್ತೂರು ಗ್ರಾಮ ಪಂಚಾಯತ್‌ನಲ್ಲಿ 127 ಮಿ.ಮೀ. ಮಳೆ ಬಿದ್ದಿದೆ. ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯತ್‌ನಲ್ಲಿ 120.5 ಮಿ.ಮೀ. ಮಳೆ ದಾಖಲಾಗಿದೆ.

    ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶವು ಮಾರ್ಚ್ 1 ರ ಬೆಳಿಗ್ಗೆ 8:30 ರಿಂದ ಮೇ 27 ರ ಬೆಳಿಗ್ಗೆ 8:30 ರವರೆಗೆ ಸಾಮಾನ್ಯವಾಗಿ 123 ಮಿ.ಮೀ. ಮಳೆಯ ಬದಲು 515 ಮಿ.ಮೀ. ಮಳೆಯನ್ನು ದಾಖಲಿಸಿದೆ. ಇದು 316% ಹೆಚ್ಚಳವನ್ನು ಸೂಚಿಸುತ್ತದೆ ಮತ್ತು ‘ದೊಡ್ಡ ಹೆಚ್ಚುವರಿ’ ವಿಭಾಗಕ್ಕೆ ಸೇರುತ್ತದೆ.

    ಮೇ 28 ರಂದು ಕರಾವಳಿ ಪಟ್ಟಿಯಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಿದೆ.