Category: Udupi District

  • ಯಕ್ಷನಿಧಿ ಯೋಜನೆಯಡಿ ಶ್ರಾವಣಿಗೆ ವಿದ್ಯಾಪೋಷಣ: ‘ಸುಮಿತ್ರಾ ಸುಂದರ’ ಮನೆಯ ಹಸ್ತಾಂತರ

    ಕುಂದಾಪುರ, ಮೇ 26, 2025: ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆ‍್ಯಂಡ್ ರಿಸರ್ಚ್ ಸೆಂಟರ್ (ಐವೈಸಿ) ಉಡುಪಿ ವತಿಯಿಂದ ಯಕ್ಷನಿಧಿ – ವಿದ್ಯಾಪೋಷಕ್ – ಯಕ್ಷಶಿಕ್ಷಣ ಯೋಜನೆಯಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರಾವಣಿಗೆ ವಿದ್ಯಾಪೋಷಣ ಒದಗಿಸಲಾಯಿತು. ಈ ಕಾರ್ಯಕ್ರಮ ಕುಂದಾಪುರ ತಾಲ್ಲೂಕಿನ ಕಮಲಶಿಲೆಯಲ್ಲಿ ನಡೆಯಿತು.

    ಈ ಸಂದರ್ಭದಲ್ಲಿ, ಡಾ. ಉಡುಪಿ ಸುಂದರಾಯ ಶೇಟ್-ಸುಮಿತ್ರಾ ಬಾಯಿ ಅವರ ಸುಪುತ್ರ ಉಡುಪಿ ಬನ್ನಂಜೆಯ ಯು. ಎಸ್. ಶ್ರೀಧರ್ ಶೇಟ್ ಅವರು, ತಮ್ಮ ಮಾತೃಶ್ರೀಯವರ ಜನ್ಮಶತಾಬ್ದಿಯ ಸವಿ ನೆನಪಿನಲ್ಲಿ ನಿರ್ಮಿಸಿದ ನೂತನ ಮನೆ ‘ಸುಮಿತ್ರಾ ಸುಂದರ’ ಮನೆಯ ಹಸ್ತಾಂತರ ಕಾರ್ಯಕ್ರಮವೂ ನೆರವೇರಿತು. ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉಪಸ್ಥಿತರಿದ್ದರು.

  • ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಪಲ್ಟಿ

    ಕಾಪು, ಮೇ 26, 2025: ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ಮೇ. 26 ರಂದು ಸೋಮವಾರ ಸಂಜೆ ರಾಷ್ಟ್ರಿಯ ಹೆದ್ದಾರಿ 66ರ ಕಾಪು ಪೊಲಿಪು ಮಸೀದಿ ಬಳಿ ಸಂಭವಿಸಿದೆ.

    ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಓವರ್ ಟೆಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎಂದು ತಿಳಿದು ಬಂದಿದೆ.
    ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಅಪಘಾತಕ್ಕೆ ಬಸ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆ ಕಾರಣ ಎನ್ನಲಾಗಿದೆ.
    ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ದಕ್ಷಿಣ ಕನ್ನಡ, ಉಡುಪಿಯ ಸರ್ಕಾರಿ ಶಾಲೆಗಳ ತರಗತಿ ಕೊಠಡಿಗಳ ದುರಸ್ತಿಗೆ 11 ಕೋಟಿ ರೂ. ಮಂಜೂರು

    ಮಂಗಳೂರು/ಉಡುಪಿ, ಮೇ 26: ದಕ್ಷಿಣ ಕನ್ನಡ (ಡಿಕೆ) ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಶಾಲೆಗಳ ತರಗತಿ ಕೊಠಡಿಗಳ ದುರಸ್ತಿಗಾಗಿ ಸರ್ಕಾರವು ಸುಮಾರು 11 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಹೊಸ ಶೈಕ್ಷಣಿಕ ವರ್ಷದ ಆರಂಭದೊಂದಿಗೆ ದುರಸ್ತಿ ಕಾಮಗಾರಿಗಳು ಪ್ರಾರಂಭವಾಗಲಿವೆ.

    ದಕ್ಷಿಣ ಕನ್ನಡ ಜಿಲ್ಲೆಯ 312 ಶಾಲೆಗಳಲ್ಲಿ 750ಕ್ಕೂ ಹೆಚ್ಚು ತರಗತಿ ಕೊಠಡಿಗಳ ದುರಸ್ತಿಗಾಗಿ 6.97 ಕೋಟಿ ರೂ. ಮಂಜೂರಾಗಿದೆ. ಉಡುಪಿ ಜಿಲ್ಲೆಯ 228 ಸರ್ಕಾರಿ ಶಾಲೆಗಳ 699 ತರಗತಿ ಕೊಠಡಿಗಳ ದುರಸ್ತಿಗಾಗಿ 4.11 ಕೋಟಿ ರೂ. ಮಂಜೂರಾಗಿದೆ. 2024–25ನೇ ಸಾಲಿನ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತಿದ್ದು, ಈಗ ಎರಡೂ ಜಿಲ್ಲೆಗಳಲ್ಲಿ ದುರಸ್ತಿ ಕಾಮಗಾರಿಗಳು ನಡೆಯಲಿವೆ.

    2025–26ನೇ ಶೈಕ್ಷಣಿಕ ವರ್ಷವು ಮೇ 29ರಂದು ಆರಂಭವಾಗಲಿದೆ. ಶಿಕ್ಷಣ ಇಲಾಖೆಯು ಶಾಲೆಗಳಿಗೆ ಪ್ರಾರಂಭೋತ್ಸವ (ಶಾಲೆಯ ಮರು ಆರಂಭದ ಆಚರಣೆ) ನಡೆಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ, ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಯ ಸೌಲಭ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಎಸ್‌ಡಿಎಂಸಿ ಸದಸ್ಯರು ಮತ್ತು ಹಳೆ ವಿದ್ಯಾರ್ಥಿಗಳ ಸಂಘಗಳು ಸಹ ತಮ್ಮ ಬೆಂಬಲವನ್ನು ವಿಸ್ತರಿಸುತ್ತಿವೆ.

    ಎರಡೂ ಜಿಲ್ಲೆಗಳಲ್ಲಿ ಮಂಜೂರಾದ ದುರಸ್ತಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ತರಗತಿ ಕೊಠಡಿಗಳನ್ನು ವಿದ್ಯಾರ್ಥಿಗಳಿಗೆ ಸಿದ್ಧಗೊಳಿಸಬೇಕು. ಡಿಡಿಪಿಐ ಕಚೇರಿಯು ಎಲ್ಲ ಬಿಇಒಗಳಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಿ, ಜಿಲ್ಲಾ ಕೇಂದ್ರಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

    ಮೊದಲ ದಿನ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದೊಂದಿಗೆ ಸಿಹಿ ಪಾಯಸವನ್ನು ನೀಡಲಾಗುವುದು. ಕೆಲವು ಶಾಲೆಗಳಲ್ಲಿ ಸ್ಥಳೀಯ ದಾನಿಗಳಿಂದ ಪ್ರಾಯೋಜಿತವಾದ ವಿಶೇಷ ಸಿಹಿತಿಂಡಿಗಳನ್ನು ಸಹ ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಳನ್ನು, ವಿಶೇಷವಾಗಿ ಹೊಸದಾಗಿ ಸೇರಿದವರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸುವಂತೆ ಇಲಾಖೆಯು ಶಾಲೆಗಳಿಗೆ ನಿರ್ದೇಶನ ನೀಡಿದೆ. ಪ್ರವೇಶದ್ವಾರಗಳನ್ನು ಕೆಂಪು ಮಾವಿನ ಎಲೆಯ ತೋರಣಗಳು ಮತ್ತು ಹೂವುಗಳಿಂದ ಅಲಂಕರಿಸಲಾಗುವುದು. ವಿದ್ಯಾರ್ಥಿಗಳಿಗೆ ಹೂವುಗಳಿಂದ ಸ್ವಾಗತಿಸಲಾಗುವುದು, ಮತ್ತು ಸ್ಥಳೀಯ ದಾನಿಗಳು ಹಾಗೂ ಶಿಕ್ಷಣ ಉತ್ಸಾಹಿಗಳನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಭಾಷಣಗಳ ಮೂಲಕ ಸ್ಫೂರ್ತಿ ನೀಡಲಾಗುವುದು.

    “ತರಗತಿ ಕೊಠಡಿಗಳ ದುರಸ್ತಿಗಾಗಿ ನಿಧಿಯನ್ನು ಬಿಡುಗಡೆ ಮಾಡಲಾಗಿದೆ, ಮತ್ತು ಶಾಲೆಗಳಿಗೆ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಮುಂಗಾರು ಋತುವಿನ ದೃಷ್ಟಿಯಿಂದ ಎಲ್ಲ ಶಾಲೆಗಳಿಗೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಪ್ರವೇಶ ಮತ್ತು ಸೌಲಭ್ಯಗಳ ಪರಿಶೀಲನೆಯು ಪ್ರಸ್ತುತ ನಡೆಯುತ್ತಿದೆ,” ಎಂದು ಗಣಪತಿ ಕೆ. ಮತ್ತು ಗೋವಿಂದ ಮಾದಿವಾಳ, ಡಿಡಿಪಿಐ, ಉಡುಪಿ ಮತ್ತು ದಕ್ಷಿಣ ಕನ್ನಡ ತಿಳಿಸಿದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 750ಕ್ಕೂ ಹೆಚ್ಚು ತರಗತಿ ಕೊಠಡಿಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 699 ತರಗತಿ ಕೊಠಡಿಗಳು ವಿವಿಧ ಶೈಕ್ಷಣಿಕ ವಲಯಗಳಲ್ಲಿ ದುರಸ್ತಿಯಾಗಲಿವೆ. ದಕ್ಷಿಣ ಕನ್ನಡದಲ್ಲಿ, ಬಂಟ್ವಾಳದ 57 ಶಾಲೆಗಳು, ಬೆಳ್ತಂಗಡಿಯ 48, ಮಂಗಳೂರು ಉತ್ತರದ 37, ಮಂಗಳೂರು ದಕ್ಷಿಣದ 69, ಮೂಡಬಿದ್ರಿಯ 23, ಪುತ್ತೂರಿನ 49, ಮತ್ತು ಸುಳ್ಯದ 29 ಶಾಲೆಗಳು ಒಳಗೊಂಡಿವೆ. ಉಡುಪಿ ಜಿಲ್ಲೆಯಲ್ಲಿ, ಉಡುಪಿಯ 46 ಶಾಲೆಗಳು, ಕಾಪುವಿನ 32, ಕುಂದಾಪುರದ 66, ಕಾರ್ಕಳದ 34, ಮತ್ತು ಬೈಂದೂರಿನ 51 ಶಾಲೆಗಳಲ್ಲಿ ದುರಸ್ತಿ ಕಾಮಗಾರಿಗಳು ನಡೆಯಲಿವೆ.

  • ಬೈಂದೂರು: ಸಾಕು ನಾಯಿಯನ್ನು ಬೈಕಿಗೆ ಕಟ್ಟಿ 2 ಕಿಲೋಮೀಟರ್ ಎಳೆದೊಯ್ದ ರಾಕ್ಷಸ!

    ಬೈಂದೂರು, ಮೇ 26, 2025: ತನ್ನ ಮನೆಯಲ್ಲಿ ಸಾಕಿ ಬೆಳೆಸಿದ ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ.

    ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೊರ್ವ ತನ್ನ ಸಾಕು ನಾಯಿಯನ್ನು ಅತ್ಯಂತ ಕ್ರೂರವಾಗಿ ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ 2ಕಿ.ಮೀ. ದೂರದವರೆಗೆ ಎಳೆದೊಯ್ಯಿದಿದ್ದಾನೆ.

    ನಾಯಿಯನ್ನು ಅತ್ಯಂತ ಕ್ರೂರವಾಗಿ ರಸ್ತೆಯ ಮೇಲೆ ಎಳೆದೊಯ್ಯುತ್ತಿರುವುದನ್ನು ನೋಡಿದ ಸಾರ್ವಜನಿಕರು ತಕ್ಷಣ ನಿಲ್ಲಿಸಿ ವಿಚಾರಿಸಿದಾಗ ನಾನು ಮನೆಯಲ್ಲಿ ಸಾಕಿದ ನಾಯಿ ನೀವ್ಯಾರು ಕೇಳುವವರು ಎಂಬ ಹುದ್ದಾಟತನ ತೋರಿದ್ದಾನೆ.

    ನಾಯಿಯನ್ನು ಎಳೆದೊಯ್ದ ರಭಸಕ್ಕೆ ನಾಯಿಯ ಕಾಲಿನಲ್ಲಿ ಗಾಯವಾಗಿ ರಕ್ತ ದರದರನೇ ಸುರಿದೆ. ರಸ್ತೆಯ ಮೇಲೆ ಬಿದ್ದಿರುವ ರಕ್ತವನ್ನು ನೋಡಿದ ನೆಟ್ಟಿಗರು ವ್ಯಕ್ತಿಯನ್ನು ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾರ್ಕಳ: ಮಟ್ಕಾ ಜೂಜಾಟ ಆರೋಪಿಗಳ ಬಂಧನ; ಸೊತ್ತುಗಳು ವಶಕ್ಕೆ

    ಕಾರ್ಕಳ, ಮೇ 25, 2025: ಕಾರ್ಕಳ ತಾಲೂಕಿನ ಕೆದಿಂಜೆ ಗ್ರಾಮದ ಮಂಜರಪಲ್ಕೆಯ ಶೇಷಗಿರಿ ಎಂಬವರಿಗೆ ಸೇರಿದ ಕಟ್ಟಡದ ಪಕ್ಕದ ಅಂಗಡಿಗಳ ಶೆಡ್‌ನ ಹಿಂಭಾಗದಲ್ಲಿ ಕೆಲವು ವ್ಯಕ್ತಿಗಳು ಸಾರ್ವಜನಿಕರಿಂದ ತಮ್ಮ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟವಾಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕೆದಿಂಜೆ-ನಂದಳಿಕೆ ಗ್ರಾಮದ ಬೀಟ್ ಕರ್ತವ್ಯದ ಸಿಬ್ಬಂದಿಯಿಂದ ಪಡೆದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಂದರ್ ಅವರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಿನಾಂಕ 25/05/2025 ರಂದು ಮಧ್ಯಾಹ್ನ 1:45 ಗಂಟೆಗೆ ದಾಳಿ ನಡೆಸಿದ್ದಾರೆ.

    ಈ ದಾಳಿಯಲ್ಲಿ ಆಪಾದಿತರಾದ ಸಾಜನ್ ಮತ್ತು ಅಜಿತ್ ಕುಮಾರ್ ಎಂಬಿವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ಬಳಿಯಿಂದ 2 ಖಾಲಿ ಕಾಗದದ ಹಾಳೆಗಳು, ಒಂದು ನಂಬರ್ ಬರೆದ ಕಾಗದದ ಹಾಳೆ, ಅಂಕಿಗಳನ್ನು ಬರೆಯಲು ಇಟ್ಟಿದ್ದ ಬಿಳಿ ಬಣ್ಣದ ಕಾಗದದ ಸಣ್ಣ ಸ್ಲಿಪ್‌ಗಳು, 2 ಪೆನ್‌ಗಳು, 2 ಪ್ಲಾಸ್ಟಿಕ್ ಕುರ್ಚಿಗಳು, ಒಂದು ಮರದ ಟೇಬಲ್ ಹಾಗೂ ಮಟ್ಕಾ ಜುಗಾರಿಗೆ ಬಳಸಲು ತಂದಿದ್ದ 2,930 ರೂಪಾಯಿ ನಗದನ್ನು ಮಹಜರು ಮೂಲಕ ವಶಕ್ಕೆ ಪಡೆಯಲಾಗಿದೆ.

    ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 78(iii) KP Act & 112(1), R/w 3(5) ಭಾರತೀಯ ನ್ಯಾಯ ಸಂಹಿತೆ 2023 ರ ಅಡಿಯಲ್ಲಿ ಪ್ರಕರಣ ಸಂಖ್ಯೆ 72/2025 ರಂತೆ ದಾಖಲಿಸಲಾಗಿದೆ.

    ತನಿಖೆ ಮುಂದುವರೆದಿದೆ.

  • ಕೊಲ್ಲೂರು ಗಂಗೆ ಕೊರಗ ಮನೆ ಧ್ವಂಸ ಪ್ರಕರಣ- ಕುಟುಂಬಕ್ಕೆ 10 ಸೆಂಟ್ಸ್ ಜಾಗ ಮಂಜೂರು: ಡಿಸಿ ಆದೇಶ

    ಕುಂದಾಪುರ, ಮೇ 24: ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಎಂಬಲ್ಲಿ ಎ.17ರಂದು ನಡೆದ ಮನೆ ಧ್ವಂಸ ಪ್ರಕರಣದ ಸಂತ್ರಸ್ತ ಕೊರಗ ಕುಟುಂಬಕ್ಕೆ ಪುನರ್ವಸತಿಗಾಗಿ 10 ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

    ಕಳೆದ 40ವರ್ಷಗಳಿಂದ ಕಲ್ಯಾಣಿಗುಡೆಯಲ್ಲಿ ವಾಸವಾಗಿದ್ದ ಗಂಗೆ ಕೊರಗ ಅವರ ಮನೆಯನ್ನು ಕೊಲ್ಲೂರು ಶ್ರೀಜಗದಂಭಾ ಸೇವಾ ಟ್ರಸ್ಟ್‌ನವರು ಏಕಾಏಕಿ ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳು ಹಾಗೂ ಕೊರಗಾಭಿವೃದ್ಧಿ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಈ ಸಂಬಂಧ ಟ್ರಸ್ಟ್ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

    ಆದೇಶದಲ್ಲಿ ಏನಿದೆ?: ಗಂಗೆ ಕೊರಗ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು ಅವರ ವಾಸ್ತವ್ಯದ ಮನೆಯನ್ನು ಧ್ವಂಸ ಮಾಡಿರುವುದರಿಂದ ಭೂ ರಹಿತರಾಗಿದ್ದು, ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡಲು 10 ಎಕ್ರೆ ಸೆಂಟ್ಸ್ ದರ್ಖಾಸ್ತು ಮಂಜೂರು ಮಾಡುವ ಬಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

    ಅದರಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 5(ಎ)ರಡಿ ತಾಲ್ಲೂಕಿನಲ್ಲಿ ಶೇ.50ಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಅನುಸೂಚಿತ ಜಾತಿಯ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಭೂಮಿಗಳನ್ನು ಮಂಜೂರಾತಿಗೆ ಮೀಸಲಿಡಲು ಅವಕಾಶ ಕಲ್ಪಿಸಿರುವಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಮಂಜೂರಾತಿ ನಿಯಮಗಳು, 1969 ರ ನಿಯಮ 12(4) ರಂತೆ ಭೂ ಮೌಲ್ಯವನ್ನು ವಿನಾಯಿತಿಗೊಳಿಸಿ ಷರತ್ತುಗಳಿಗೆ ಒಳಪಟ್ಟು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ 10 ಸೆಂಟ್ಸ್ ಜಮೀನನ್ನು ಪರಿಶಿಷ್ಟ ಪಂಗಡದ ಗಂಗೆ ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಲು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ

  • ಜಾನಪದ ಅಕಾಡೆಮಿಯ 2023-24ರ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿತರಣಾ ಸಮಾರಂಭ; ಎನ್. ಗಣೇಶ್ ಗಂಗೊಳ್ಳಿ ಗೆ ಸನ್ಮಾನ

    ಬೀದರ್: ಕರ್ನಾಟಕ ಜಾನಪದ ಅಕಾಡೆಮಿಯ 2023 ಮತ್ತು 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ, ಪುಸ್ತಕ ಪ್ರದಾನ ಸಮಾರಂಭ ಹಾಗೂ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವು ದಿನಾಂಕ 15-03-2025ರಂದು ಬೀದರ್‌ನ ಪೂಜ್ಯಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಜಾನಪದ ಗಾಯನ ಮತ್ತು ಕಲಾಪ್ರದರ್ಶನಗಳು ಜನಮನ ಸೆಳೆದವು.

    ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಆಯೋಜಿಸಿದ್ದು, ಶ್ರೀ ವಿಜಯಕುಮಾರ್ ಸೋನಾರೆ ಅವರು ಸದಸ್ಯ ಸಂಚಾಲಕತ್ವ ವಹಿಸಿದ್ದರು. 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಕೆಳಗಿನ ಕಲಾವಿದರನ್ನು ಸನ್ಮಾನಿಸಲಾಯಿತು:

    1. ಶ್ರೀಮತಿ ಎಸ್. ಆರ್. ಸರೋಜ – ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ (ಕೊಡಗು ಜಿಲ್ಲೆ)
    2. ಶ್ರೀಮತಿ ಸುನಂದಮ್ಮ – ಕೋಲಾಟ (ಕೋಲಾರ ಜಿಲ್ಲೆ)
    3. ಶ್ರೀ ಮಾರುತಿ ಕೋಳಿ – ಜಾನಪದ ಗಾಯನ (ಬೀದರ್ ಜಿಲ್ಲೆ)
    4. ಶ್ರೀ ಹುರುಗಲವಾಡಿ ರಾಮಯ್ಯ – ಜಾನಪದ ಗಾಯಕರು (ಮಂಡ್ಯ ಜಿಲ್ಲೆ)
    5. ಶ್ರೀ ಎನ್. ಗಣೇಶ್ ಗಂಗೊಳ್ಳಿ – ಜಾನಪದ ಗಾಯಕರು (ಉಡುಪಿ ಜಿಲ್ಲೆ)

    ಈ ಸಮಾರಂಭವು ಕರ್ನಾಟಕದ ಜಾನಪದ ಕಲೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ. ಕಾರ್ಯಕ್ರಮದಲ್ಲಿ ಕಲಾವಿದರಿಂದ ಪ್ರದರ್ಶಿತವಾದ ಜಾನಪದ ಗಾಯನ ಮತ್ತು ಕಲಾಪ್ರದರ್ಶನಗಳು ಜನರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನಾ ಸಮಾವೇಶ ಮೇ 30ಕ್ಕೆ!

    ಉಡುಪಿ, ಮೇ 24, 2025: ಕೇಂದ್ರ ಸರ್ಕಾರದ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮೇ 13ರಂದು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಮುಂದೂಡಿತ್ತು. ಈ ಪ್ರತಿಭಟನಾ ಸಮಾವೇಶವು ಈಗ ಮೇ 30, 2025, ಶುಕ್ರವಾರ ಸಂಜೆ 4:00 ಗಂಟೆಗೆ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

    ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸಲಿದ್ದಾರೆ. ಕಾಶ್ಮೀರದ ಪೆಹಲ್ಗಾಮಿನ ಉಗ್ರವಾದಿ ದಾಳಿಯ ನಂತರ ಭಾರತೀಯ ಸೇನೆಯ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ವರ್ಚಸ್ಸನ್ನು ಕಾಪಾಡಲು ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಈಗ ಮೇ 30ರಂದು ಈ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

  • ಕುಂದಾಪುರ: ಚಿನ್ನ ವಂಚನೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್‌

    ಕುಂದಾಪುರ, ಮೇ 19, 2025: ತಾಲೂಕಿನ ಹಂಗಳೂರು ನಿವಾಸಿಯೊಬ್ಬರು (ಮಹಿಳೆ, 30) ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಚಿನ್ನದ ವಂಚನೆ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಪಿರ್ಯಾದಿದಾರರ ಗಂಡ ವಿದೇಶದಲ್ಲಿದ್ದು, ಕಷ್ಟದ ಸಮಯಕ್ಕಾಗಿ 850 ಗ್ರಾಂ ಚಿನ್ನವನ್ನು ತೆಗೆದಿಟ್ಟಿದ್ದರು. ಸುಮಾರು ಐದು ವರ್ಷಗಳ ಹಿಂದೆ, ಪಿರ್ಯಾದಿದಾರರ ತಮ್ಮನಾದ ಮೊದಲ ಆರೋಪಿ, ವ್ಯವಹಾರದ ಉದ್ದೇಶಕ್ಕಾಗಿ ಈ ಚಿನ್ನವನ್ನು ಪಡೆದುಕೊಂಡಿದ್ದಾನೆ. ಆದರೆ, ಚಿನ್ನವನ್ನು ವಾಪಸ್ ನೀಡದೆ, ಪಿರ್ಯಾದಿದಾರರು ಕೇಳಿದಾಗ “ಇವತ್ತು-ನಾಳೆ” ಎಂದು ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ನಂತರ, ಪಿರ್ಯಾದಿದಾರರು ಮೊದಲ ಆರೋಪಿಯಲ್ಲಿ ಚಿನ್ನದ ಬಗ್ಗೆ ವಿಚಾರಿಸಿದಾಗ, ಎರಡನೇ ಆರೋಪಿಯ ಮೂಲಕ ಚಿನ್ನವನ್ನು ಮೂರನೇ ಆರೋಪಿಗೆ ನೀಡಿರುವುದಾಗಿ ತಿಳಿಸಿದ್ದಾನೆ. ಆದರೆ, ಮೂರನೇ ಆರೋಪಿಯ ಬಳಿ ವಿಚಾರಿಸಿದಾಗ, “ಅದನ್ನು ನಿಮಗೆ ಕೊಡಲು ಆಗುವುದಿಲ್ಲ, ಅದು ನನ್ನ ಚಿನ್ನ. ಇನ್ನು ಮುಂದೆ ಚಿನ್ನದ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಚಿನ್ನವನ್ನು ತೆಗೆದುಕೊಂಡು, ನಂಬಿಕೆ ದ್ರೋಹ ಮಾಡಿ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2025ರ ಅಡಿಯಲ್ಲಿ ಕಲಂ 351, 352, 318(4), 316(2), ಮತ್ತು 3(2) BNS ರಂತೆ ಪ್ರಕರಣ ದಾಖಲಾಗಿದೆ.

  • ಇಂದು “ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ”

    ಉಡುಪಿ, ಮೇ 25, 2025: ಮಲ್ಪೆ ಫುಡ್ ಸ್ಟ್ರೀಟ್ ಮತ್ತು ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ವತಿಯಿಂದ “ನಿನಾದ ಹೆಜ್ಜೆ ಗೆಜ್ಜೆಗಳ ಮಿಲನ ಸಾಂಸ್ಕೃತಿಕ ಸಂಜೆ ಮತ್ತು ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ” ಕಾರ್ಯಕ್ರಮ ಮೇ.25 ರಂದು ಸಂಜೆ 4.30 ರಿಂದ ಮಲ್ಪೆಯ ಫಿಶ್ ಟ್ರೇಡ್ ಸೆಂಟರ್ ಹತ್ತಿರದ ಮಲ್ಪೆ ಫುಡ್ ಸ್ಟ್ರೀಟ್ ನಲ್ಲಿ ನಡೆಯಲಿದೆ.

    ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು ಫನ್ ಗೇಮ್ಸ್, ವಿವಿಧ ಫುಡ್ ಸ್ಟಾಲ್‌ಗಳು, ಕಲ್ಚರಲ್ ಇವೆಂಟ್‌ಗಳು, ತುಳು ನಾಟಕ, ಫ್ಯಾಷನ್ ಶೋ, ಡಾನ್ಸ್ ಪರ್ಫಾರ್ಮೆನ್ಸ್, ಡಿಜೆ ಮ್ಯೂಸಿಕ್ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಇರಲಿದೆ.