Category: Udupi District

  • ಕೋಟ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ; ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ

    ಕೋಟ, ಮೇ 06, 2025: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ನಾಲ್ವರು ಯುವಕರ ವಿರುದ್ಧ ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

    ಮೇ 05, 2025 ರಂದು ರಾತ್ರಿ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ. ಅವರಿಗೆ, ಹೈದರಾಬಾದ್ ಮತ್ತು ದೆಹಲಿ ತಂಡಗಳ ನಡುವಿನ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಕೆಲವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತು. ಈ ಮಾಹಿತಿಯ ಆಧಾರದ ಮೇಲೆ, ರಾಘವೇಂದ್ರ ಸಿ. ಸ್ಥಳಕ್ಕೆ ತೆರಳಿ, ಆರೋಪಿಗಳಾದ ಕಿರಣ್, ಶಾಂತರಾಮ, ಅಜಿತ್ ಮತ್ತು ವಿವೇಕ ಇವರು ‘ಪಾರ್ಕರ್’ ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಎಸ್‌ಆರ್‌ಎಚ್ ಮತ್ತು ಡಿಸಿ ತಂಡಗಳ ಮೇಲೆ ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿರುವುದನ್ನು ಕಂಡುಹಿಡಿದರು.

    ಪೊಲೀಸರು ದಾಳಿಯ ವೇಳೆ ಬೆಟ್ಟಿಂಗ್‌ಗೆ ಬಳಸಿದ ಎರಡು ಮೊಬೈಲ್ ಫೋನ್‌ಗಳು ಮತ್ತು 4,000 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2025, ಕಲಂ 78 KP ಆಕ್ಟ್ ಮತ್ತು 112 RW 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಮಣಿಪಾಲ: ಇಂಡಸ್ ಮೊಬೈಲ್ ಟವರ್‌ನ ಬ್ಯಾಟರಿಗಳ ಕಳ್ಳತನ; 60,000 ರೂ. ಮೌಲ್ಯದ ಆಸ್ತಿ ಕಳವು

    ಮಣಿಪಾಲ, ಮೇ 06, 2025: ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಎದುರುಗಡೆ ಇರುವ ಇಂಡಸ್ ಮೊಬೈಲ್ ಟವರ್‌ನಿಂದ 60,000 ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಅಪರಿಚಿತ ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.

    ಶಿವಳ್ಳಿ ಗ್ರಾಮದ ಪ್ರದೀಪ (38), ಇಂಡಸ್ ಮೊಬೈಲ್ ಟವರ್‌ನ ಸೆಕ್ಯೂರಿಟಿ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮೇ 01, 2025 ರಾತ್ರಿ 10:00 ಗಂಟೆಯಿಂದ ಮೇ 04, 2025 ಮಧ್ಯಾಹ್ನ 1:00 ಗಂಟೆಯ ನಡುವೆ, ಟವರಿನ ಕಪಾಟಿನ ಬೀಗವನ್ನು ಮುರಿದು, ಒಳಗೆ ಅಳವಡಿಸಲಾಗಿದ್ದ ಬ್ಯಾಟರಿ ಬ್ಯಾಂಕಿನ 24 ಸೆಲ್‌ಗಳನ್ನು (ಇಂಡಸ್ ಐಡಿ: 1274432, ಸೈಟ್ ಐಡಿ: MAN055) ಕಳ್ಳರು ಕದ್ದಿರುವುದಾಗಿ ದೂರು ನೀಡಿದ್ದಾರೆ.

    ಕಳವಾದ ಬ್ಯಾಟರಿಗಳ ಅಂದಾಜು ಮೌಲ್ಯ 60,000 ರೂಪಾಯಿಗಳಾಗಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2025, ಕಲಂ 331(3), 331(4), 305(a) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಕೋಟೇಶ್ವರ: ಮಟ್ಕಾ ಜುಗಾರಿ ಪ್ರಕರಣ; ಒಬ್ಬನ ಬಂಧನ, ಹಲವರ ವಿರುದ್ಧ ಪ್ರಕರಣ

    ಕುಂದಾಪುರ, ಮೇ 06, 2025: ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಎಂ ಕೋಡಿಯಿಂದ ಹಳೆ ಅಳಿವೆಗೆ ಹೋಗುವ ರಸ್ತೆಯ ಕೊಂಬಾರ ರೆಸಾರ್ಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಜುಗಾರಿ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ, ಒಬ್ಬ ವ್ಯಕ್ತಿಯನ್ನು ಬಂಧಿಸಿ, ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮೇ 05, 2025 ರಂದು ರಾತ್ರಿ 10:00 ಗಂಟೆಗೆ, ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಎನ್. ನಂಜಾನಾಯ್ಕ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕೋಟೇಶ್ವರ ಗ್ರಾಮದ ಬೀಟ್ ಸಿಬ್ಬಂದಿ ಆಲಿಂಗರಾಯ ಕಾಟೆರ ಅವರು ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯನ್ನು ಆಧರಿಸಿ, ಎನ್. ನಂಜಾನಾಯ್ಕ ಸಿಬ್ಬಂದಿಯೊಂದಿಗೆ ರಾತ್ರಿ 10:40 ಗಂಟೆಗೆ ಸ್ಥಳಕ್ಕೆ ತೆರಳಿ, ಮರೆಯಲ್ಲಿ ನಿಂತು ಪರಿಶೀಲನೆ ನಡೆಸಿದರು. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ, ಮಟ್ಕಾ ಸಂಖ್ಯೆ ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡರು.

    ರಾತ್ರಿ 10:45 ಗಂಟೆಗೆ ದಾಳಿ ನಡೆಸಿದ ಪೊಲೀಸರು, ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸುರೇಶ ಎಂಬಾತನನ್ನು ವಶಕ್ಕೆ ಪಡೆದರು. ವಿಚಾರಣೆಯಲ್ಲಿ, ಸುರೇಶ ತನ್ನ ತಪ್ಪನ್ನು ಒಪ್ಪಿಕೊಂಡು, ಸಂದೇಶ ಎಂಬಾತ ಜುಗಾರಿಯ ಸಂಗ್ರಹ ಮೊತ್ತವನ್ನು ಪಡೆದುಕೊಂಡು ಕಮಿಷನ್ ನೀಡುತ್ತಿದ್ದನೆಂದು ತಿಳಿಸಿದ. ಜುಗಾರಿಯಲ್ಲಿ 00 ರಿಂದ 99 ರವರೆಗಿನ ಸಂಖ್ಯೆಗಳಿಗೆ ಹಣವನ್ನು ಪಣವಾಗಿಟ್ಟು ಆಟ ನಡೆಸಲಾಗುತ್ತಿತ್ತು.

    ಪೊಲೀಸರು ದಾಳಿಯ ವೇಳೆ ರೂ. 4,640 ನಗದು, 8 ಮಟ್ಕಾ ಚೀಟಿಗಳು, 1 ಬಾಲ್‌ಪೆನ್, ಒಟ್ಟು ರೂ. 10,000 ಮೌಲ್ಯದ 2 ಒಪ್ಪೋ ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್‌ನಲ್ಲಿ ಸ್ಕ್ರೀನ್‌ಶಾಟ್ ರೂಪದಲ್ಲಿ ದೊರೆತ 8 ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸುರೇಶ (ತೆಕ್ಕಟ್ಟೆ), ಸಂದೇಶ, ಶಂಕರ (ಕುಂಭಾಶಿ), ಜಯರಾಮ್ (ತೆಕ್ಕಟ್ಟೆ), ಶ್ರೀನಿವಾಸ (ಕುಂಭಾಶಿ), ವಿನಾಯಕ (ಕುಂಭಾಶಿ), ಗಣೇಶ್ (ಸಾಲಿಗ್ರಾಮ), ರಾಜು (ಕೋಟ), ಸಿಓ ರಾಜು (ಕುಂಭಾಶಿ) ಮತ್ತು ಬಾಬು (ತೆಕ್ಕಟ್ಟೆ) ಇವರ ವಿರುದ್ಧ ಅಪರಾಧ ಕ್ರಮಾಂಕ 57/2025, ಕಲಂ 112 BNS ಮತ್ತು 78(I)(III) KP ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಕುಂದಾಪುರ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಬ್ರಹ್ಮಾವರ: ಅರಿವು ಕೇಂದ್ರ – ಹಾರಾಡಿಯೆಲ್ಲಿ ಬೇಸಿಗೆ ಶಿಬಿರ

    ಬ್ರಹ್ಮಾವರ: ಇಲ್ಲಿನ ಹಾರಾಡಿಯೆಲ್ಲಿನ ಅರಿವು ಕೇಂದ್ರದಲ್ಲಿ ಮಕ್ಕಳಿಗೆ ಬೀಗೆ ಶಿಬಿರ ಆರಂಭವಾಗಿದ್ದು, ಮಕ್ಕಳಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಬೇಸಿಗೆ ಶಿಬಿರದ ಮೊದಲನೇ ದಿನದ ಚಟುವಟಿಕೆಎಲ್ಲಿ ಗಟ್ಟಿ ಓದು, ಫನ್ನಿ ಗೇಮ್ಸ್ ಹಾಗೂ ಡ್ರಾಯಿಂಗ್ ಮಾಡಿಸಲಾಯಿತು.

    ಅರಿವು ಕೇಂದ್ರದಲ್ಲಿ ವರ್ಷ ಉದ್ದಕ್ಕೋ ಬೇರೆ ಬೇರೆ ತರಬೇತಿ ನೀಡಲಾಗುತಿತ್ತು, ಈ ವರ್ಷ ಪಕ್ಷಿಗಳ ಮಾಯಾಲೋಕ ತರಬೇತಿ ಕಾರ್ಯಕರಮ ವೀಕ್ಷಣೆ , ಚೆಸ್ ಆಟ, ಪರೀಕ್ಷೆಯ ತಯಾರಿ, ಇಂಗ್ಲಿಷ್ ಟೈಪಿಂಗ್, ಗಟ್ಟಿ ಓದು ಕಾರ್ಯಕ್ರಮ ನಡಿಯಿತು.

  • ಉಡುಪಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೇ 13ರಂದು ಪ್ರತಿಭಟನೆ

    ಉಡುಪಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಮೇ 8ರಂದು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು “ವಾಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ಉಡುಪಿ ಜಿಲ್ಲೆ ಪ್ರಕಟಣೆಯೆಲ್ಲಿ ತಿಳಿಸಿದೆ.

    ಈ ಪ್ರತಿಭಟನೆಯು ಮಂಗಳವಾರ 13ನೇ ಮೇ ಸಂಜೆ 4:00 ಗಂಟೆಗೆ ಉಡುಪಿಯ ಮಿಷನ್ ಕಾಂಪೌಂಡ್ನಲ್ಲಿರುವ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

  • ಮೃತ ವ್ಯಕ್ತಿಯ ವಾರಸುದಾರರಿಗೆ ಸೂಚನೆ

    ಉಡುಪಿ, ಮೇ 05 : ಇಂದ್ರಾಳಿ ರೈಲ್ವೆ ಪೊಲೀಸ್ ಸ್ಟೇಷನ್ನ ಉಡುಪಿಯಿಂದ ಬಾರ್ಕೂರು ರೈಲ್ವೆ ಹಳಿಯ ಮೇಲೆ ಏಪ್ರಿಲ್ 26 ರಂದು ಅಸ್ವಸ್ಥರಾಗಿ ಬಿದ್ದದ್ದ ಸುಮಾರು 25 ರಿಂದ 30 ವರ್ಷ ಪ್ರಾಯದ ಅಪರಿಚಿತ ಗಂಡಸನ್ನು ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

    ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

  • ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ

    ಉಡುಪಿ :  ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ  ನೂತನ ಪದಾಧಿಕಾರಿಗಳ ಆಯ್ಕೆ ಅನ್ಸಾರ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಮಹಿಳಾ ಜಿಲ್ಲಾಧ್ಯಕ್ಷರಾದ ಜ್ಯೋತಿ ಸೇರಿಗಾರ್ತಿ ರವರ ನೇತೃತ್ವದಲ್ಲಿ ಇಂದು ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿ ರಚನೆಯಾಗಿ ಘೋಷಿಸಲಾಯಿತು.

    ಕರವೇ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಸಯ್ಯದ್ ನಿಜಾಮ್, ಅಲ್ಫೋನ್ಸ್  ಮಿನೇಜಸ್, ಸುಧೀರ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.

    ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಪೂಜಾರಿ ಕಾರ್ಯದರ್ಶಿಯಾಗಿ ಸಂತೋಷ ಕುಲಾಲ ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ್ ದೊರೆಯವರನ್ನು ಆಯ್ಕೆ ಮಾಡಲಾಯಿತು.

    ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರಶಾಂತ್ ಸಾಲಿಯಾನ್  ಪಡುಬಿದ್ರೆ, ರತ್ನಾಕರ್ ಪೂಜಾರಿ, ರಾಘವೇಂದ್ರ ಪೂಜಾರಿ, ಪ್ರಕಾಶ್ ದೇವಾಡಿಗ, ನಾಗರಾಜ್ ಹಾಗೂ ರಾಜು ರವರನ್ನು ಆಯ್ಕೆ ಮಾಡಲಾಯಿತು.

    ಮಹಿಳಾ ಜಿಲ್ಲಾ ಉಪಾಧ್ಯಕ್ಷರಾಗಿ ದೇವಕಿ ಬಾರ್ಕೂರು, ಕಿರಣ್ ಪ್ರತಾಪ್ ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅನುಷಾ ಆಚಾರ್ ಪಳ್ಳಿ, ಕಾರ್ಯದರ್ಶಿಯಾಗಿ ಡಾ.ಶಶಿಕಲಾ, ಸಂಘಟನಾ ಕಾರ್ಯದರ್ಶಿಯಾಗಿ ವಿಶಾಲಾಕ್ಷಿಯವರನ್ನು ಆಯ್ಕೆ ಮಾಡಲಾಯಿತು.

    ಉಡುಪಿ ತಾಲೂಕು ಅಧ್ಯಕ್ಷರಾಗಿ ಯತೀಶ್, ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ  ಸ್ಟ್ಯಾನಿ ಡಿಸೋಜ, ಕಾಪು ತಾಲೂಕು ಅಧ್ಯಕ್ಷರಾಗಿ ಚೇತನ್ ಪಡುಬಿದ್ರೆ, ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಹನೀಫ್ ಕಾರ್ಕಳ, ಹೆಬ್ರಿ ತಾಲೂಕು ಅಧ್ಯಕ್ಷರಾಗಿ ವಿಜಯೇಂದ್ರ ಹೆಬ್ರಿ,  ಬೈಂದೂರು ತಾಲೂಕು ಅಧ್ಯಕ್ಷರಾಗಿ ನಾಗೇಶ್ ರವರು ಆಯ್ಕೆಯಾದರು.

    ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.

  • ಉಡುಪಿ: ಉದ್ಯೋಗ ಮೇಳ

    ಉಡುಪಿ, ಮೇ 5: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಯಲ್ಲಿ ಮೇ 8ರಂದು ಬೆಳಗ್ಗೆ 10:30 ರಿಂದ ಮಿನಿ ಉದ್ಯೋಗ ಮೇಳ ನಡೆಯಲಿದೆ.

    ಎಸೆಸೆಲ್ಸಿ, ಪಿಯುಸಿ, ಐಟಿಐ, ಬಿಕಾಂ, ಬಿಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ, 8105618291, 8105774936, 9901472710 ಹಾಗೂ 9945856670 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

  • ಮೇ 15ರಿಂದ 17ರವರೆಗೆ ಸುಕ್ಷೇತ್ರ ಗುರುಪುರ ಶ್ರೀಗುರುಮಹಾಕಾಲೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ

    ಉಡುಪಿ: ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ಶ್ರೀಗುರುಮಹಾಕಾಲೇಶ್ವರ ದೇವರ ಬೃಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ ಮೇ. 15ರಿಂದ 17 ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಕುಂಜಾಡಿ ಬೀಡು ನಳಿನ್ ಕುಮಾರ್ ಕಟೀಲು ತಿಳಿಸಿದರು.

    ಈ ಬಗ್ಗೆ ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವೇದ ಕೃಷಿಕ ಬ್ರಹ್ಮ‌ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಪತ್ರಿಷ್ಠಾ ಬ್ರಹ್ಮಕಲಶ ನೆರವೇರಲಿದೆ.

    ಮೇ 16 ರಂದು ಸಂಜೆ ನಡೆಯಲಿರುವ ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭೀಷೇಕ ಕಾರ್ಯದಲ್ಲಿ ಜಾತಿ, ಪಂಗಡ, ಲಿಂಗಭೇದ ಇಲ್ಲದೇ ಭಾಗವಹಿಸಬಹುದಾಗಿದೆ. ದೇವರ ಬೃಹತ್ ಏಕಶಿಲಾ ಮೂರ್ತಿಗೆ ಪಂಚಕಲ್ಯಾಣ ಸ್ವರೂಪದ ಕಲಶಾಭೀಷೇಕವನ್ನು ಸಮರ್ಪಿಸಬಹುದಾಗಿದೆ ಎಂದರು.

    ಮೇ 17 ರಂದು ಸಂಜೆ 6 ಗಂಟೆಗೆ ಶಿವಾನುಭವ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವೇದ ಕೃಷಿಕ ಬ್ರಹ್ಮ‌ಋಷಿ ಕೆ.ಎಸ್.ನಿತ್ಯಾನಂದ ಸಾನಿಧ್ಯ ವಹಿಸಲಿದ್ದಾರೆ. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಯಾಜಿ ನಿರಂಜನ್ ಭಟ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು, ಚಲನಚಿತ್ರ ನಟ, ಸ್ವಾಗತ ಸಮಿತಿ‌ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲ್, ಪ್ರಮುಖರಾದ ಚಂದ್ರಹಾಸ್ ಆಮೀನ್, ಸುಜಾತ ಸದಾಶಿವ, ದಿವಾಕರ್ ಉಪಸ್ಥಿತರಿದ್ದರು.

  • ಉಡುಪಿಯ ಗಾಂಧಿ ಆಸ್ಪತ್ರೆಗೆ 30ರ ಸಡಗರ; ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಗಾಂಧಿ ಆಸ್ಪತ್ರೆಗೆ 30ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಅಜ್ಜರಕಾಡು​ಜಿಲ್ಲಾ ಸರಕಾರಿ ಆಸ್ಪತ್ರೆಯ ​ಜಿಲ್ಲಾ  ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

    ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂ​ಜಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಿಂದ​ ಪಡೆದುದನ್ನು  ಸಮಾಜಕ್ಕೆ ​ಹಂಚುವ ಕೆಲಸವನ್ನು ​ಗಾಂಧಿ ಆಸ್ಪತ್ರೆ ಮಾಡುತ್ತಿದೆ . ನಗರಸಭೆ ಜತೆ ಗಾಂಧಿ ಆಸ್ಪತ್ರೆ ಕೈ​ಜೋಡಿಸಿದ್ದು​, ಎಂ.ಹರಿಶ್ಚಂದ್ರರ​ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.

    ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ, ಆದಾಯದ ಆಧಾರದಲ್ಲಿ ಮಾನವ ಅಭಿವೃದ್ಧಿ ಅಳತೆಗೋಲಾಗಿದ್ದು ಮಡಾಮಕ್ಕಿಯಂತಹ ಕುಗ್ರಾಮದಿಂದ ಬಂದ ಎಂ.ಹರಿಶ್ಚಂದ್ರರ ಸಾಧನೆ  ಅನ್ಯರಿಗೆ ಮಾದರಿ ಎಂದು ಹೇಳಿದರು.

    30ವರ್ಷಗಳ ಹಿಂದೆ ಗೆಳೆಯನ ಜತೆ 25 ಬೆಡ್‍ಗಳಿಂದ ​ಎಂ ಹರಿಶ್ಚಂದ್ರರು ಆರಂಭಿಸಿದ ಆಸ್ಪತ್ರೆ  2002ರಲ್ಲಿ ಸ್ವಂತ ಕಟ್ಟಡ ಹೊಂದಿ, ಐದು ಡಯಾಲಿಸಿಸ್ ಯಂತ್ರ ಅಳವಡಿಸಿದೆ.​  25  ವರುಷಗಳಿಂದ  ಪಂಚಮಿ ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆ, ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ತನಕದ ಮುಖ್ಯರಸ್ತೆಯನ್ನು  ​ಹತ್ತು ವರ್ಷದಿಂದ  ಪ್ರತಿ ಭಾನುವಾರ ಸ್ವಚ್ಚತೆ ಕಾರ್ಯ, ಗಾರ್ಡನ್ ನಿರ್ವಹಣೆ ಮಾಡಲಾಗುತ್ತಿದೆ  ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಡಾ. ವ್ಯಾಸರಾಜ ತಂತ್ರಿ ಹೇಳಿದರು.

    ಉಡುಪಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ​ ಗಾಂಧಿ ಆಸ್ಪತ್ರೆ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ, ನಾನಾ ಕ್ಷೇತ್ರದ ಸಾಧಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಗೌರವಿಸಲಾಯಿತು.

    ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ  ಎಜಿಎಂ ವಾದಿರಾಜ ಭ​ಟ್,  ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ​, ಡಾ. ವಿದ್ಯಾ ವಿ ತಂತ್ರಿ ಉಪಸ್ಥಿತರಿದ್ದರು. ​ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.