Category: Udupi District

  • ಕಾರ್ಕಳ: ಶ್ರೀ ವೆಂಕಟರಮಣ ದೇವಳದ ರಾಥೋತ್ಸವ ಸಂಬಂಧ ಪರ್ಯಾಯ ಸಂಚಾರ ವ್ಯವಸ್ಥೆ

    ಕಾರ್ಕಳ: ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಾಥೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ದಿನಾಂಕ 02-05-2025 ರಂದು ಸಂಜೆ 4:00 ಗಂಟೆಯಿಂದ ಮರುದಿನ ಬೆಳಿಗ್ಗೆ 6:00 ಗಂಟೆಯವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜುಂಕ್ಷನ್ ರವರೆಗೆ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಸಂಚಾರ ವ್ಯವಸ್ಥೆ ಬಗ್ಗೆ ಈ ಕೆಳಗಿನ ಆದೇಶ ಹೊರಡಿಸಿದ್ದಾರೆ.

    ಪರ್ಯಾಯ ಮಾರ್ಗದ ವಿವರ

    • ಘನವಾಹನಗಳು ಬಂಗ್ಲೆ ಗುಡ್ಡೆ – ಹಿರಿಯಂಗಡಿ – ಪುಲ್ಕೆರಿ ಮಾರ್ಗವಾಗಿ ಸಂಚರಿಸುದು.
    • ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡು ರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜುಂಕ್ಷನ್ ನಿಂದ ಕಲೊಟ್ಟೆ , ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸುವುದು.
    • ಸ್ಟೇಟ್ ಬ್ಯಾಂಕ್ – ಮೂರು ಮಾರ್ಗದಲ್ಲಿ ಸಂಚರಿಸುವ ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಸ್ಟೇಟ್ ಬ್ಯಾಂಕ್ ಜುಂಕ್ಷನ್ ನಿಂದ ಗಾಂಧಿ ಮೈದಾನವಾಗಿ ಅಂಚೆ ಕಚೇರಿ, ಕಾಮಧೇನು ಹೋಟೆಲ್ ಜುಂಕ್ಷನ್ ಮಾರ್ಗವಾಗಿ ಸಂಚರಿಸುದು.

    ಸಾರ್ವಜನಿಕರಲ್ಲಿ ಸಹಕರಿಸಲು ಉಡುಪಿ ಪೊಲೀಸ್ ವಿನಂತಿಸಿದ್ದಾರೆ.

  • ಆರ್‌ಎಸ್‌ಎಸ್‌ನಿಂದ ಬ್ರಹ್ಮಾವರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉದ್ಘಾಟನೆ

    ಉಡುಪಿ, ಏಪ್ರಿಲ್ 30, 2025: ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿಯ ಕೇಶವನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡಗಳು ಏಪ್ರಿಲ್ 29, 2025 ರಂದು ಉದ್ಘಾಟನೆಗೊಂಡವು. ಈ ಸಮಾರಂಭದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆಗೆ ನಿಕಟ ಸಂಬಂಧವನ್ನು ಹೊಂದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಕರ್ನಾಟಕದಲ್ಲಿರುವ ಶಿಕ್ಷಣ ಸಂಸ್ಥೆಗಳ ಒಂದು ಗುಂಪಾಗಿದ್ದು, ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾರ್ಗದರ್ಶನ ಮತ್ತು ಪ್ರೇರಣೆಯಡಿಯಲ್ಲಿ ಸ್ಥಾಪಿಸಲಾಗಿದೆ. 1965ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ದೇಶಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ಆರಂಭಿಸುವ ಮೂಲಕ, ಆರ್‌ಎಸ್‌ಎಸ್-ಪ್ರೇರಿತ ಈ ಸಂಸ್ಥೆಯು ಯುವಕರಲ್ಲಿ ಹಿಂದುತ್ವದ ತತ್ವಗಳನ್ನು ಬೆಳೆಸಲು ಉದ್ದೇಶಿಸಿರಬಹುದು ಎಂದು ಕೆಲವರು ಗಮನಿಸಿದ್ದಾರೆ. ಈ ಶಾಲೆಯ ಪಂಚಮುಖಿ ಶಿಕ್ಷಣ ಪದ್ಧತಿಯು ಶೈಕ್ಷಣಿಕ ಜ್ಞಾನದ ಜೊತೆಗೆ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಒತ್ತಿಹೇಳುತ್ತದೆ.

    ಡಾ. ಸೋಮನಾಥ್ ತಮ್ಮ ಭಾಷಣದಲ್ಲಿ ಭಾರತವು ಶಾಂತಿಯ ಸಂದೇಶದೊಂದಿಗೆ ವಿಶ್ವಗುರುವಾಗಬೇಕು ಎಂದು ಕರೆ ನೀಡಿದರು. ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದ ಮತ್ತು ವಿಜ್ಞಾನದ ಕೊಡುಗೆಗಳನ್ನು ಯುವ ಪೀಳಿಗೆಗೆ ರವಾನಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪೇಜಾವರ ಸ್ವಾಮೀಜಿ, ಸ್ಥಳೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಶಿಕ್ಷಣದ ಮಹತ್ವವನ್ನು ಒತ್ತಾಯಿಸಿದರು.

    ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಭೇಟಿಯು ಈ ಸಂಸ್ಥೆಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ. ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಸಮಿತಿ ಅಧ್ಯಕ್ಷ ಸಾಧು ಸಾಲಿಯನ್ ಮತ್ತು ಇತರರು ಉಪಸ್ಥಿತರಿದ್ದರು. ಕೆಲವರು ಈ ಶಾಲೆಯ ಸ್ಥಾಪನೆಯನ್ನು ಸಾಂಸ್ಕೃತಿಕ ಗುರುತನ್ನು ಬಲಪಡಿಸುವ ಆರ್‌ಎಸ್‌ಎಸ್‌ನ ಒಂದು ಹೆಜ್ಜೆ ಎಂದು ಪರಿಗಣಿಸಿದರೆ, ಇತರರು ಇದನ್ನು ಶಿಕ್ಷಣದ ಮೂಲಕ ಸಮಾಜ ಸೇವೆಯ ಭಾಗವೆಂದು ಗುರುತಿಸುತ್ತಾರೆ.

  • ಉಡುಪಿ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್‌ಟೇಬಲ್ ಶ್ರೀ ಅರುಣ್‌ಗೆ ನಿವೃತ್ತಿ ಸನ್ಮಾನ

    ಉಡುಪಿ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹೆಡ್ ಕಾನ್ಸ್‌ಟೇಬಲ್ ಶ್ರೀ ಅರುಣ್ ಅವರು ಏಪ್ರಿಲ್ 29 ರಂದು ಸ್ವಯಂ ಇಚ್ಛೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

    ಶ್ರೀ ಅರುಣ್ ಅವರ ಸಮರ್ಪಣೆ ಮತ್ತು ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ ಪೊಲೀಸ್ ಇಲಾಖೆ, ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದೆ. ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

  • ಉಡುಪಿ ಪೊಲೀಸ್ ಕಚೇರಿಯೆಲ್ಲಿ ಬಸವ ಜಯಂತಿ

    ಬಸವ ಜಯಂತಿ ಪ್ರಯುಕ್ತ ಈ ದಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು

    ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ,ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

  • ಗಂಗೊಳ್ಳಿ: ಮೀನುಗಾರನ ಸಾವಿನ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ

    ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದ ಹಲ್ಲೆಯಿಂದ ಮೀನುಗಾರನೊಬ್ಬ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಆರೋಪಿಯನ್ನು ಭಟ್ಕಳ ಮೂಲದ ಚಂದ್ರಕಾಂತ ಖಾರ್ವಿ ಎಂದು ಗುರುತಿಸಲಾಗಿದೆ. 2017ರ ಸೆಪ್ಟೆಂಬರ್ 15ರ ರಾತ್ರಿ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಲು ಪ್ರಕಾಶ ಪೂಜಾರಿ ತಾನು ಕೆಲಸ ಮಾಡುತ್ತಿದ್ದ ಮೀನುಗಾರಿಕಾ ಬೋಟ್‌ನ ಹಗ್ಗವನ್ನು ಚಂದ್ರಕಾಂತ ಚಾಲಕನಾಗಿದ್ದ ಬೋಟ್‌ಗೆ ಕಟ್ಟುತ್ತಿದ್ದಾಗ, ಆರೋಪಿಯು ಪ್ರಕಾಶ್‌ಗೆ ಅವಾಚ್ಯವಾಗಿ ಬೈದಿದ್ದನು.

    ಇದನ್ನು ಆಕ್ಷೇಪಿಸಿದ್ದಕ್ಕೆ, ಚಂದ್ರಕಾಂತನು ತನ್ನ ಬೋಟ್‌ನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್‌ನ ತಲೆಗೆ, ಆತನಿಗೆ ಮಾರಕವಾಗಬಹುದೆಂಬ ತಿಳಿವಳಿಕೆ ಇದ್ದರೂ, ಹೊಡೆದಿದ್ದನು. ಪರಿಣಾಮವಾಗಿ, ತಲೆಗೆ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದನು. ಆತನ ಶವವು ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.

    ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಆರೋಪಿಯನ್ನು ದೋಷಿಯೆಂದು ಘೋಷಿಸಿ, ಐಪಿಸಿ ಕಲಂ 304(2) ಅಡಿಯಲ್ಲಿ 10 ವರ್ಷ ಕಠಿಣ ಜೈಲುಶಿಕ್ಷೆಯ ಜೊತೆಗೆ 10,000 ರೂ. ದಂಡ, ಮತ್ತು ಕಲಂ 504 ಅಡಿಯಲ್ಲಿ 2 ವರ್ಷ ಶಿಕ್ಷೆಯ ಜೊತೆಗೆ 5,000 ರೂ. ದಂಡ ವಿಧಿಸಿ ಆದೇಶಿಸಿದರು.

    ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಅಂದಿನ ಸರಕಾರಿ ಅಭಿಯೋಜಕರಾದ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಹರಿಶ್ಚಂದ್ರ ಉದ್ಯಾವರ ನಡೆಸಿದ್ದರು. ಈಗಿನ ಸರಕಾರಿ ಅಭಿಯೋಜಕ ಇಂದಿರಾ ನಾಯ್ಕ ಅವರು ವಿಚಾರಣೆಯನ್ನು ಮುಂದುವರಿಸಿ ವಾದ ಮಂಡಿಸಿದ್ದಾರೆ.

  • Udupi: ಪರಸ್ಪರ ಹಲ್ಲೆ; ವಶಕ್ಕೆ

    ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹಲ್ಲೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಗರ ಠಾಣೆಯ ಪೊಲೀಸ್‌ ಎಚ್‌ಸಿ ಸುರೇಶ್‌ ಕರ್ತವ್ಯದಲ್ಲಿದ್ದ ವೇಳೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಾಹನದ ಪಾರ್ಕಿಂಗ್‌ ಸ್ಥಳದಲ್ಲಿ ಆರೋಪಿಗಳಾದ ಹನುಮಪ್ಪ ಬೆಂಡ್ಯಪ್ಪ ಮಗಡಾರ್‌ (46), ನಾಗರಾಜ ಭೀಮಪ್ಪ ದೊಡ್ಡಮನಿ (27) ಮತ್ತು ನಾಗಪ್ಪ ಹನುಮಂತ ಸಿದ್ದಲಿಂಗಪ್ಪನವರ್‌ (30) ತಮ್ಮೊಳಗೆ ಜಗಳವಾಡುತ್ತ ಅವಾಚ್ಯ ಶಬ್ದಗಳಿಂದ ಬೈದು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ವೇಳೆ ಅವರಿಗೆ ಎಚ್ಚರಿಕೆ ನೀಡಿದರೂ ಸುಮ್ಮನಿರಲಿಲ್ಲ. ಪರಸ್ಪರ ಬೈದಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಉಂಟುಮಾಡಿದ್ದರು ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಂದಾಪುರ: 75,000 ರೂ. ವಂಚನೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು

    ಕುಂದಾಪುರ, ಮಾರ್ಚ್ 12, 2025: ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಆಕಸ್ಮಿಕವಾಗಿ ಭೇಟಿಯಾದ ವ್ಯಕ್ತಿಯೊಬ್ಬ ಎಲ್‌ಇಡಿ ಅಳವಡಿಕೆಯ ಕಾರಣಕ್ಕೆಂದು ಹೇಳಿ, 68 ವರ್ಷದ ಕೃಷ್ಣಯ್ಯ ಎಂಬುವವರಿಂದ 75,000 ರೂ. ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಮೂಡಲಕಟ್ಟೆಯ ಕೃಷ್ಣಯ್ಯ ಎಂಬುವವರು ದಿನಾಂಕ 12 ಮಾರ್ಚ್ 2024ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶಾಸ್ತ್ರಿ ಸರ್ಕಲ್‌ನಲ್ಲಿ ಆರೋಪಿ ಕಿರಣ್ ಎಂಬಾತನನ್ನು ಭೇಟಿಯಾಗಿದ್ದಾರೆ. ಆರೋಪಿಯು ಎಲ್‌ಇಡಿ ಅಳವಡಿಕೆಗೆ ಕುಂದಾಪುರಕ್ಕೆ ಬಂದಿರುವುದಾಗಿ ಹೇಳಿ, ಪಿರ್ಯಾದಿದಾರರ ಮೊಬೈಲ್‌ನಿಂದ ಫೋನ್‌ಪೇ ಮೂಲಕ 75,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಕೃಷ್ಣಯ್ಯ ಅವರು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2025ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚಿಸಿದ್ದಾರೆ.

  • ಬೈಂದೂರು: ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ; ಸಹಾಯ

    ಬೈಂದೂರು, ಫೆಬ್ರವರಿ 3, 2025: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವುಂದ ಅರೆಹೊಳೆಯಲ್ಲಿ ರೈಲ್ವೆ ಹಳಿಯಲ್ಲಿ ಸುಮಾರು 30 ವರ್ಷದ ಯುವಕನ ಶವ ದೊರಕಿದ ಘಟನೆ ನಡೆದಿದೆ. ಶವದ ಅವಶೇಷಗಳು ಸುಮಾರು ಅರ್ಧ ಕಿಲೋಮೀಟರ್ ತನಕ ಚದರಿವೆಯಾಗಿದ್ದವು.

    ತಕ್ಷಣ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿಯ 24×7 ಆಂಬ್ಯುಲೆನ್ಸ್ ತಂಡದ ಸದಸ್ಯರಾದ ಇಬ್ರಾಹಿಂ, ಮೌಲಾನ ಶಕೀಲ್, ಸಮೀ ಉಲ್ಲಾ ಕಾಝೀ ಮತ್ತು ಮಗ್ದೂಮ್ ಅರೆಹೊಳೆ ಅವರು ಶವದ ಅವಶೇಷಗಳನ್ನು ಗುರುತಿಸಿ, ಸಂಗ್ರಹಿಸಿ ಶವಾಗಾರಕ್ಕೆ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು

  • ಉಡುಪಿ: ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಚೌಗಲೆ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಉಡುಪಿ ಜಿಲ್ಲೆಯ ನೇಜಾರುವಿನಲ್ಲಿ ಏರ್ ಹೋಸ್ಟೆಸ್ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಆರೋಪಿ ಪ್ರವೀಣ್ ಅರುಣ್ ಚೌಗಲೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ.

    ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ, ಜಾಮೀನು ಅರ್ಜಿ ವಜಾಗೊಳಿಸಿದೆ.

  • Nejar Murders: ಗಗನಸಖಿಗೆ ಪ್ರವೀಣ್‌ ಚೌಗಲೆ ಪರಿಚಯ ಹೇಗಾಯ್ತು?; 16 ವರ್ಷ ಮಂಗಳೂರಿನಲ್ಲೇ ಇದ್ದ ಹಂತಕ!

    ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಪ್ರವೀಣ್‌ ಚೌಗಲೆ ಕುರಿತ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿದೆ. ಸಿಸಿಟಿವಿ ಕೊಟ್ಟ ಸುಳಿವಿನಿಂದ ಉಡುಪಿ ಪೊಲೀಸರು ಆರೋಪಿಯನ್ನ ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ. ಇದೀಗ ಖಾಕಿ ಪಡೆಯ ವಿಚಾರಣೆಯಲ್ಲಿ ಈತನ ಕೇರ್‌ ಆಫ್‌ ಅಡ್ರೆಸ್‌ ಮಂಗಳೂರಾಗಿತ್ತು ಅನ್ನೋ ಅಂಶ ಗೊತ್ತಾಗಿದೆ.

    ಉಡುಪಿಯ ಅಯ್ನಾಯ್‌ ಹಾಗೂ ಆರೋಪಿ ಪ್ರವೀಣ್ ಏರ್ ಇಂಡಿಯಾ ವಿಮಾನದಲ್ಲಿ ಸಹೋದ್ಯೋಗಿಗಳಾಗಿದ್ದರು. ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಯ್‌ಗೂ ಕ್ಯಾಬಿನ್ ಕ್ರ್ಯೂ ಆಗಿದ್ದ ಪ್ರವೀಣ್‌ಗೂ ಪರಿಚಯವಿತ್ತು. ಒಂದೇ ಸಂಸ್ಥೆಯಲ್ಲಿ ಅಯ್ನಾಝ್ ಹಾಗೂ ಪ್ರವೀಣ್‌ ಜೊತೆಯಾಗಿ ಕೆಲಸ ಮಾಡುತ್ತಿದ್ದು ಇದೀಗ ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ.

    ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಝ್‌ಗೆ ವಿಮಾನದಲ್ಲಿ ಸುರಕ್ಷತಾ ನಿಯಮ ಹೇಳಿಕೊಡ್ತಿದ್ದವನೇ ಕಂಟಕವಾಗಿದ್ದಾನೆ. ಏರ್ ಇಂಡಿಯಾದ ಉದ್ಯೋಗಿಯಾಗಿದ್ದ ಆರೋಪಿ ಪ್ರವೀಣ್, ವಿಮಾನದಲ್ಲಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಹಾಗೂ ಇನ್ನಿತರ ಸುರಕ್ಷತೆ ನಿಯಮ ಹೇಳಿಕೊಡುತ್ತಿದ್ದ. ಕೊನೆಗೆ ಅಯ್ನಾಝ್ ಮೇಲಿದ್ದ ಮೋಹ ದ್ವೇಷಕ್ಕೆ ತಿರುಗಿ ಪ್ರವೀಣ್ ಹತ್ಯೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

    ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರು ಆರೋಪಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಕನ್ನಡದಲ್ಲೇ ಆರೋಪಿ ಪ್ರವೀಣ್ ಚೌಗುಲೆ ಉತ್ತರಿಸಿದ್ದಾರೆ. ಇದರ ವಿವರ ಇಲ್ಲಿದೆ ನೋಡಿ.

    ನ್ಯಾಯಾಧೀಶರು- ನಿಮ್ಮನ್ನು ಯಾವಾಗ ಅರೆಸ್ಟ್ ಮಾಡಿದ್ರು?
    ಆರೋಪಿ- ಮಂಗಳವಾರ ಸಂಜೆ 6 ಗಂಟೆಗೆ ಸರ್
    ನ್ಯಾಯಾಧೀಶರು- ನಿಮ್ಮ ಊರು ಯಾವುದು
    ಆರೋಪಿ- ಮಹಾರಾಷ್ಟ್ರ, ಸಾಂಗ್ಲಿಯಲ್ಲಿ
    ನ್ಯಾಯಾಧೀಶರು- ನೀವು ಕೊಟ್ಟ ಅಡ್ರೆಸ್‌ನಲ್ಲಿ ಮಂಗಳೂರು ಇದ್ಯಲ್ಲಾ?
    ಆರೋಪಿ- ಮಂಗಳೂರಲ್ಲಿ ಕಳೆದ 16 ವರ್ಷದಿಂದ ಇದ್ದೇನೆ. ಬಿಜೈ ಸಮೀಪ ಫ್ಲ್ಯಾಟ್‌ನಲ್ಲಿದ್ದೇನೆ

    ನ್ಯಾಯಾಧೀಶರ ಪ್ರಶ್ನೆಗೆ ಹೀಗೆ ಉತ್ತರಿಸಿರುವ ಆರೋಪಿ ಪ್ರವೀಣ್‌, ತಾನು ಮಹಾರಾಷ್ಟ್ರದ ಸಾಂಗ್ಲಿಯವನಾದ್ರೂ 16 ವರ್ಷದಿಂದ ಮಂಗಳೂರಲ್ಲೇ ನೆಲೆಸಿರುವುದಾಗಿ ಹೇಳಿದ್ದಾನೆ.