Category: Udupi

  • ಜುಲೈ14 ರಂದು ಉಡುಪಿಯಲ್ಲಿ ಎಸ್ ವೈ ಎಸ್ ಸೌಹಾರ್ದ ಸಂಚಾರ ಕಾರ್ಯಕ್ರಮ

    ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ವತಿಯಿಂದ ಜುಲೈ 14ರಿಂದ 16 ರ ವರೆಗೆ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜುಲೈ 14 ರಂದು ಉಡುಪಿಗೆ ಸೌಹಾರ್ದ ಸಂದೇಶ ಜಾಥಾ ಆಗಮಿಸಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹಂಝತ್ ಹೆಜಮಾಡಿ ಹೇಳಿದರು.

    ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬುದ್ಧಿವಂತರ ಜಿಲ್ಲೆ ಎಂದು ಹೆಸರುವಾಸಿಯಾದ ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಶೀರಾ ಆತಂಕಕಾರಿಯಾಗಿದೆ.ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಮವು ತೀವ್ರಗೊಳ್ಳುತ್ತಿದ್ದು ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು ನಮ್ಮದು ಆದರೆ ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಜಾತಿ ಮತ ಪಥ ಪಂಥ ಪಕ್ಷ ಪಂಗಡಗಳ ಹೆಸರಿನಲ್ಲಿ ಪರಸ್ಪರ ಮಾಂಸ ಕೀಳುವ, ರಕ್ತ ಹರಿಸುವ, ಒಬ್ಬರನ್ನೊಬ್ಬರು ಕೊಲ್ಲುವ ತನಕ ಮೊರ, ವಿದ್ವೇಷಗಳು ಮಿತಿ ಮೀರಿವೆ. ಇದಕ್ಕೆಲ್ಲ ಇತಿಶ್ರೀ ಹಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಜಾತಿ ಮತ ಪಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ’ (ಎಸ್ ವೈ ಎಸ್)  ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

    ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವು ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ದಿನಾಂಕ: 14-07-2025 ಸೋಮವಾರ ಬೆಳಿಗೆ 8 ಗಂಟೆಗೆ ಕುಂದಾಪುರ ಅಸ್ವಯ್ಯದ್ ಯೂಸುಫ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಸೌಹಾರ್ದ ಸಂಚಾರವು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ದರ್ಗಾದಿಂದ ಶಾಸ್ತ್ರಿ ಸರ್ಕಲ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ನಂತರ ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ

    ಮಧ್ಯಾಹ್ನ 12 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯಿಂದ ಮದರ್ ಆಫ್ ಸೋರೋಸ್ ಚರ್ಚ್ ತನಕ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಕಾರ್ಕಳ ಗ್ಯಾಲಕ್ಸಿ ಹಾಲ್ ನಿಂದ ಬಸ್ಸು ನಿಲ್ದಾಣದವರೆಗೆ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ದ ಸಂದೇಶ ನಡೆಯಲಿದೆ. ಸಂಜೆ 5:30 ಗಂಟೆಗೆ ಕಾಪು ಪೊಲಿವು ಜಾಮಿಯಾ ಮಸೀದಿಯಿಂದ ಕಾಪು ಪೇಟೆ ತನಕ ಸೌಹಾರ್ದ ನಡಿಗೆ ಹಾಗೂ ಸಂದೇಶ ಭಾಷಣ ನಡೆಯಲಿದೆ. ರಾತ್ರಿ 8 ಗಂಟೆಗೆ ಪಡುಬಿದ್ರಿ ಸೌಹಾರ್ದ ಭಾಷಣ ನಡೆಯಲಿದೆ ಎಂದರು.

    ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮಗುರುಗಳು ಮುಸ್ಲಿಂ ಧಾರ್ಮಿಕ ವಿದ್ವಾಂಸರು, ಸಾಮಾಜಿಕ ಶೈಕ್ಷಣಿಕ ಹಾಗೂ ಇನ್ನಿತರ ಪ್ರಮುಖ ನಾಯಕರುಗಳು ಭಾಗವಹಿಸಲಿರುವರು.

    ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಹಬೀಬ್ ಆಲಿ, ಪ್ರಧಾನ ಕಾರ್ಯದರ್ಶಿ ಎಮ್ ಸಲೀಂ ಪಕೀರ್ಣಕಟ್ಟೆ, ಎಸ್ ವೈ ಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಹುಸೈನ್ ಸಅದಿ ಹೊಸ್ಮಾರು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಹೆಮ್ಮಾಡಿ, ಸ್ವಾಗತ ಸಮಿತಿ ಸಂಚಾಲಕರಾದ ಇಂತಿಯಾಝ್ ಹೊನ್ನಾಳ, ಕಾರ್ಯದರ್ಶಿ ತೌಫೀಕ್ ಅಂಬಾಗಿಲು ಉಪಸ್ಥಿತರಿದ್ದರು.

  • ಕಲ್ಯಾಣಪುರ ಮೀನು ಮಾರು ಕಟ್ಟೆ ಬಳಿ ವೃದ್ಧರ ರಕ್ಷಣೆ: ಸೂಚನೆ

    ಉಡುಪಿ ಜುಲೈ. 10, 2025: ಕಲ್ಯಾಣಪುರ ಮೀನು ಮಾರುಕಟ್ಟೆ ಬಳಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಗಾಳಿಗೆ ಅಸಹಾಯಕರಾಗಿದ್ದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ. ವೃದ್ಧರು ತನ್ನ ಹೆಸರು ಲಕ್ಷ್ಮಣ ಪೂಜಾರಿ, ಮಕ್ಕಳು ಬರುತ್ತಾರೆ ಎಂದು ಕಾಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. 

    ಮೇಲ್ನೋಟಕ್ಕೆ ಮರೆವು ಕಾಯಿಲೆಯಂತೆ ಕಾಣುತ್ತಾರೆ. ಈ ಬಗ್ಗೆ ಮೀನು ಮಾರಾಟ ಮಾಡುವ ಮಹಿಳೆಯೋರ್ವರಿಂದ ಮಾಹಿತಿ ಪಡೆದ ವಿಶು ಶೆಟ್ಟಿಯವರು, ರಕ್ಷಿಸಿ ಆಶ್ರಮಕ್ಕೆ ದಾಖಲಿಸಿದ್ದಾರೆ.

  • ಗರುಡ ಗ್ಯಾಂಗ್‌ನ ಕುಖ್ಯಾತ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ

    ಉಡುಪಿ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಉಡುಪಿ ಜಿಲ್ಲೆ, ಉಡುಪಿ ಇವರು ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್(46) ಎಂಬಾತನಿಗೆ ಗೂಂಡಾ ಕಾಯ್ದೆ ಅಡಿ ಬಂಧನ ಆದೇಶ ಹೊರಡಿಸಿರುತ್ತಾರೆ.  

    ಈತನನ್ನ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಬಿಡಲಾಗಿದೆ. ಈತನು 2005ನೇ ಇಸವಿಯಿಂದ ಇಲ್ಲಿಯ ತನಕ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮುಂತಾದ 17 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಇವುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಸಜೆ ಹೊಂದಿದ್ದು, 8 ಪ್ರಕರಣಗಳಲ್ಲಿ ಖುಲಾಸೆ ಹೊಂದಿರುತ್ತಾನೆ. ಮೂರು ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಿದ್ದು, ಎರಡು ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿ ಇರುತ್ತದೆ. ಉಳಿದ ಎರಡು ಪ್ರಕರಣಗಳು ಪೊಲೀಸ್ ತನಿಖೆಯಲ್ಲಿರುತ್ತದೆ. 

    ಈತನು ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ, ಪಡುಬಿದ್ರಿ, ಮಣಿಪಾಲ, ಶಿರ್ವ,  ಕಾಪು ಠಾಣೆಗಳ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. 

    ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ,  ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಠಾಣೆಯ ಪ್ರಕರಣಗಳಲ್ಲೂ ಭಾಗಿಯಾಗಿರುತ್ತಾನೆ. 

    ಈತನು ಗರುಡ ಗ್ಯಾಂಗನ ಸಕ್ರಿಯ ಸದಸ್ಯನಾಗಿರುತ್ತಾನೆ

  • ಉಡುಪಿ: ದೈಹಿಕ ಕ್ಷಮತೆಗಾಗಿ ಜಿಲ್ಲಾ ಪೊಲೀಸರಿಗೆ ನವಚೇತನ ಶಿಬಿರ

    ಉಡುಪಿ, ಜುಲೈ 10, 2025: ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಲ್ಲಿ ಆಯ್ದ 71 ಮಂದಿಗೆ ಉತ್ತಮ ಆರೋಗ್ಯವನ್ನು ಹೊಂದಲು ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಲು 30 ದಿನಗಳ ಉಚಿತ ನವಚೇತನ ಶಿಬಿರವೊಂದನ್ನು ಪರ್ಕಳ ಸಮೀಪದಲ್ಲಿರುವ ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ದಲ್ಲಿ ಆಯೋಜಿಸಲಾಗಿದೆ.

    ಜಿಲ್ಲೆಯ ಒಟ್ಟು 71 ಮಂದಿ ಪೊಲೀಸರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಇವರಲ್ಲಿ 62 ಮಂದಿ ಪುರುಷರು ಹಾಗೂ 9 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಒಬ್ಬ ಎಸ್‌ಐ, 12 ಮಂದಿ ಎಎಎಸ್‌ಐ, 35 ಮಂದಿ ಹೆಡ್ ಕಾನ್‌ಸ್ಟೇಬರ್‌ಗಳು ಹಾಗೂ 23 ಮಂದಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ಶಿಬಿರದಲ್ಲಿ ದೇಹ ದಂಡನೆಯ ಮೂಲಕ ತಮ್ಮ ಫಿಟ್ನೆಸ್‌ನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ.

    ಶಿಬಿರದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಯೋಗ, ಪಿ.ಟಿ., ಝುಂಬಾ, ಜಿಮ್ ಹಾಗೂ ಕರಾಟೆಯನ್ನು ಆಯಾ ಕ್ಷೇತ್ರದ ತಜ್ಞರಿಂದ ಕಲಿಸಿ ಅಭ್ಯಸಿಸಲಾಗು ತ್ತದೆ. ಅಲ್ಲದೇ ಒತ್ತಡ ರಹಿತ ಉತ್ತಮ ಜೀವನ ನಡೆಸಲು ಅಗತ್ಯವಿರುವ ಹಲವು ವಿಷಯಗಳ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಶಿಬಿರಾರ್ಥಿಗಳು ಶಿಬಿರದ ಅವಧಿಯುದ್ದಕ್ಕೂ ಸೌಖ್ಯವನದ ‘ಪಥ್ಯಾಹಾರ’ವನ್ನೇ ಅವಲಂಬಿಸಬೇಕಾಗಿದೆ.

    ಜು.1ರಂದು ಉದ್ಘಾಟನೆಗೊಂಡ ಈ ಶಿಬಿರ ಒಂದು ತಿಂಗಳ ಕಾಲ ನಡೆಯಲಿದೆ. ಈ ಶಿಬಿರ ಪೊಲೀಸರ ದೈಹಿಕ ಕ್ಷಮತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಬೇಡುವ ಪೊಲೀಸ್ ವೃತ್ತಿಯಲ್ಲಿರುವವರು ವಿವಿಧ ಕಾರಣಗಳಿಂದ ಕೆಲವೇ ವರ್ಷಗಳಲ್ಲಿ ಬೊಜ್ಜು ಬೆಳೆಸಿಕೊ ಳ್ಳುವುದು, ವಿವಿಧ ಕಾಯಿಲೆಗಳಿಗೆ ತುತ್ತಾಗುವುದು ಸಾಮಾನ್ಯವೆನಿಸಿದೆ. ಇವುಗಳಿಗೆಲ್ಲಾ ಪರೀಕದ ಪ್ರಕೃತಿ ಚಿಕಿತ್ಸಾ ಪದ್ಧತಿ ರಾಮಬಾಣವೆನಿಸಿಕೊಳ್ಳುವ ನಿರೀಕ್ಷೆ ಪೊಲೀಸ್ ಇಲಾಖೆಯದು.

    ಇಂದು ಬೆಳಗಿನ ಶಿಬಿರದಲ್ಲಿ ವ್ಯಾಯಾಮ ಹಾಗೂ ಇತರ ಚಟುವಟಿಕೆಯ ಸಂದರ್ಭದಲ್ಲಿ ಪರೀಕದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು, ‘ಇದು ಕೇವಲ ಬೊಜ್ಜು ಕರಗಿಸುವ ಕಾರ್ಯಕ್ರಮವಲ್ಲ. ಪೊಲೀಸ್ ಸಿಬ್ಬಂದಿಗಳ ಸಂಪೂರ್ಣ ಆರೋಗ್ಯ ಹಾಗೂ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿದೆ’ ಎಂದರು.

    ‘ಕೊಲೆಸ್ಟ್ರಾಲ್, ಹೈ ಬ್ಲಡ್ ಶುಗರ್ ಸಮಸ್ಯೆ ಇರುವವರಿಗೆ ಇದು ಬಹಳ ಉಪಯುಕ್ತವಾಗುತ್ತದೆ. ಇಲ್ಲಿನ ಕಟ್ಟುನಿಟ್ಟಿನ ಡಯಟ್ ಹಾಗೂ ವ್ಯಾಯಾಮದಿಂದ ಖಂಡಿತ ಉಪಯೋಗವಾಗುವ ನಿರೀಕ್ಷೆ ಇದೆ. ಇದು ‘ರಿಲಾಕ್ಸ್’ ಆಗುವ ಶಿಬಿರ ಅಲ್ಲ. ದೈಹಿಕ ಕ್ಷಮತೆಗಾಗಿ ತರಬೇತಿ ಕಾರ್ಯಕ್ರಮ ಗಳು ಬೆಳಗ್ಗೆ 7:00ರಿಂದ ಸಂಜೆ 6:00ಗಂಟೆಯವರೆಗೆ ಆರು ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತವೆ ಎಂದು ಅವರು ವಿವರಿಸಿದರು.

    ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಯಲ್ಲಿ ಪುನಶ್ಚೇತನಕ್ಕಾಗಿ ಬರುವ ಶಿಬಿರಾರ್ಥಿಗಳಿಗೆ ನೀಡುವ ತರಬೇತಿ, ವಿವಿಧ ಚಿಕಿತ್ಸೆ, ಆಹಾರ ಹಾಗೂ ಪಾನೀಯಗಳನ್ನು ಪೊಲೀಸರಿಗೂ ನೀಡಲಾಗುತ್ತಿದೆ. ಯೋಗ ತರಬೇತಿಯನ್ನು ಎಸ್‌ಡಿಎಂ ಆಸ್ಪತ್ರೆಯ ಯೋಗ ಶಿಕ್ಷಕರು ನೀಡಿದರೆ, ಪೊಲೀಸ್ ಡ್ರಿಲ್, ಪೆರೇಡ್‌ನ್ನು ನಮ್ಮದೇ ಸಿಬ್ಬಂದಿಗಳು ನಡೆಸುತಿದ್ದಾರೆ. ಪ್ರತಿದಿನ ಇವರಿಂದ ಕನಿಷ್ಠ 10 ಕಿ.ಮೀ.ಗಳ ವಾಕಿಂಗ್ ಮಾಡಿಸಲಾಗುತ್ತದೆ. ಕರಾಟೆ ಹಾಗೂ ಝುಂಬಾ ತರಬೇತಿಯನ್ನು ಹೊರಗಿನ ಎಜೆನ್ಸಿಯಿಂದ ನೀಡಲಾಗುತ್ತಿದೆ ಎಂದು ಹರಿರಾಮ್ ಶಂಕರ್ ವಿವರಿಸಿದರು.

    ಪೊಲೀಸ್ ಇಲಾಖೆಗೆ ಸೇರುವ ಸಮಯದಲ್ಲಿ ನಮ್ಮ ಯುವಕರು ದೈಹಿಕವಾಗಿ ಅತ್ಯಂತ ಸದೃಢರಾಗಿರು ತ್ತಾರೆ. ಆದರೆ ಕೆಲಸದ ಒತ್ತಡ ಹಾಗೂ ಇತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿ ಸಲು ಸಾಧ್ಯವಾಗದೇ ಅವರಲ್ಲಿ ದೈಹಿಕವಾಗಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಲಾಖೆಯ ಕೆಲಸದಿಂದಾಗಿ ಅವರಿಗೆ ಈ ಸಮಸ್ಯೆಯಾಗಿರುವುದರಿಂದ ಇಲಾಖೆಯೇ ಅದರ ಪರಿಹಾರ ತೋರಿಸಬೇಕೆನ್ನುವ ಕಾರಣಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಕೊನೆಯಲ್ಲಿ ಉತ್ತಮ ಪಲಿತಾಂಶ ಬರಲಿದೆ ಎಂಬುದು ನಮ್ಮ ವಿಶ್ವಾಸ ಎಂದು ಹರಿರಾಮ್ ಶಂಕರ್ ನುಡಿದರು.

    “ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ 71 ಮಂದಿ ಆಯ್ದ ಪೊಲೀಸ್ ಸಿಬ್ಬಂದಿಗಳಿಗೆ ಪರೀಕದಲ್ಲಿ ಆಯೋಜಿಸಿರುವ ಒಂದು ತಿಂಗಳ ‘ನವಚೇತನ ಶಿಬಿರ’ ಬೊಜ್ಜು ಕರಗಿಸುವ ಕಾರ್ಯಕ್ರಮವಲ್ಲ. ಇದು ಪೊಲೀಸರ ಆರೋಗ್ಯವನ್ನು ಸುಧಾರಿಸುವ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ತರಬೇತಿ ಕಾರ್ಯಕ್ರಮ”-ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

    “ಬಿಎಂಐ ಹೆಚ್ಚಿರುವವರಿಗೆ ಅದನ್ನು ಇಳಿಸಲು ಪರೀಕದಲ್ಲಿ ನವಚೇತನ ಶಿಬಿರವನ್ನು ಏರ್ಪಡಿಸುವ ಮೂಲಕ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆಶಯವನ್ನು ಒಂದು ತಿಂಗಳ ಅವಧಿಯಲ್ಲಿ ಶೇ.100ರಷ್ಟು ಈಡೇರಿಸುವ ವಿಶ್ವಾಸ ನಮಗಿದೆ. ಮೊದಲು ಕಷ್ಟವಾದರೂ ಈಗ ತರಬೇತಿಗೆ ಸಂಪೂರ್ಣವಾಗಿ ಹೊಂದಿಕೊಂಡು ಆನಂದಿಸುತಿದ್ದೇವೆ. ನಮ್ಮಗಳ ಚಟುವಟಿಕೆಯಿಂದ ನಮ್ಮ ಮನೆಯವರಿಗೂ ಖುಷಿಯಾಗಿದೆ. ಅವರೂ ಎಸ್ಪಿ ಸಾಹೇಬರಿಗೆ ಧನ್ಯವಾದ ತಿಳಿಸಿದ್ದಾರೆ”.-ರಾಜೇಂದ್ರ ಮಣಿಯಾಣಿ, ಎಎಸ್‌ಐ ಶಂಕರನಾರಾಯಣ ಠಾಣೆ.

  • ಚಿನ್ನ ಖರೀದಿಸಿ ಲಕ್ಷಾಂತರ ರೂ. ಹಣ ನೀಡದೆ ವಂಚಿಸಿದ ಮಹಿಳೆ ವಿರುದ್ಧ ದೂರು

    ಶಿರ್ವಾ, ಜುಲೈ 10, 2025: ಮಹಿಳೆಯೋರ್ವರು ವಿವಿಧ ಚಿನ್ನದ ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಖರೀದಿಸಿ ಬಿಲ್ಲು ಮೊತ್ತ ಪಾವತಿಸುವುದಾಗಿ ಹೇಳಿ ಬಳಿಕ ಹಣ ಪಾವತಿಸದೇ ವಂಚನೆ ಮಾಡಿರುವ ಘಟನೆ ಶಿರ್ವ ಪೇಟೆಯ ಬಳಿ ನಡೆದಿದೆ.

    ಫರೀದಾ ಎನ್ನುವ ಮಹಿಳೆ ಶಿರ್ವ ಗ್ರಾಮದ ಗಣೇಶ್‌ ಎನ್ನುವವರು ನಡೆಸಿಕೊಂಡು ಹೋಗುತ್ತಿರುವ ಶಿರ್ವ ಪೇಟೆಯ ಬಳಿಯ “ ನ್ಯೂ ಭಾರ್ಗವಿ ಜುವೆಲ್ಲರ್ಸ್‌ ” ಎಂಬ ಹೆಸರಿನ ಚಿನ್ನಾಭರಣಗಳ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಗೆ ಬಂದಿದ್ದಾರೆ. ಅಪ್ಸಲ್‌ ಮತ್ತು ಇತರ ಇಬ್ಬರು ಸಂಬಂಧಿಕರ ಮುಖಾಂತರ ಮಾರ್ಚ್‌ 8 ರಿಂದ 11ನೇ ತಾರೀಖಿನ ನಡುವೆ 1,78,000/- ಮೊತ್ತದ 69.165 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ. ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚನೆ ಮಾಡಿದ್ದಾರೆ.

    ಅಲ್ಲದೇ ಮಾರ್ಚ್‌ 16 ರಂದು ಆರೋಪಿ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಕೃಪಾ ಜುವೆಲ್ಲರ್ಸ್‌ ನ ಅನುಷ್‌ ರವರಿಗೂ ಫೋನ್‌ ಕರೆ ಮಾಡಿ, ಅವರನ್ನು ನಂಬಿಸಿ, ಒಟ್ಟು 10.740 ಗ್ರಾಂ ತೂಕದ ವಿವಿಧ ಮಾಧರಿಯ ಚಿನ್ನಾಭರಣಗಳನ್ನು ಖರೀದಿಸಿ, ಆರೋಪಿ ಅಪ್ಸಲ್‌ ಮುಖಾಂತರ ಮಂಗಳೂರಿನಲ್ಲಿ ಪಡೆದುಕೊಂಡು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ಮೋಸ ಮಾಡಿದ್ದಾರೆ.

    ಈ ಎರಡು ಪ್ರಕರಣಗಳು ಮಾತ್ರವಲ್ಲದೇ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಪುಷ್ಪಾ ಜುವೆಲ್ಲರ್ಸ್‌ ನ ಶ್ರೀಹರ್ಷರವರಿಗೂ ಫೋನ್‌ ಕರೆ ಮಾಡಿ, ಅವರನ್ನು ನಂಬಿಸಿ ಮಾರ್ಚ್ 09ರಂದು ಒಟ್ಟು 18.660 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚನೆ ಮಾಡಿದ್ದಾರೆ.

    ಇನ್ನು, ಮೇಲಿನ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಫರೀದಾಳ ವಿರುದ್ಧ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಜುಲೈ 11 ರಂದು ನೇರ ಸಂದರ್ಶನ

    ಉಡುಪಿ, ಜುಲೈ 10, 2025: ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜುಲೈ 11 ರಂದು ಬೆಳಗ್ಗೆ 10.30 ಕ್ಕೆ ನೇರ ಸಂದರ್ಶನ ನಡೆಯಲಿದೆ.

    ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ  ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. 

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 8105618291, 9945856670, 8105774936 ಹಾಗೂ 9901472710 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

  • ಅವಧಿ ಮೀರಿದ ಅನುಪಯುಕ್ತ ದಾಖಲೆ ವಿಲೇವಾರಿ 

    ಉಡುಪಿ, ಜುಲೈ 09 : ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಇಲ್ಲಿನ 2021 ಜೂನ್ 30 ರ ಹಿಂದಿನ ಒಳರೋಗಿ ದಾಖಲೆಗಳನ್ನು ಪ್ರಕಟಣೆ ಪ್ರಕಟಿಸಿದ 7 ದಿನಗಳ ನಂತರ ವಿಲೇವಾರಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿ, ಜಿಲ್ಲಾ ಆಸ್ಪತ್ರೆ, ಉಡುಪಿ ಯನ್ನು ಕಚೇರಿ ವೇಳೆಯಲ್ಲಿ ಸಂರ್ಕಿಸಬಹುದಾಗಿದೆ ಎಂದು ಜಿಲ್ಲಾ ಸರ್ಜನ್‍ರ ಕಚೇರಿ ಪ್ರಕಟಣೆ ತಿಳಿಸಿದೆ. 

  • ಉಡುಪಿ: ಜಿಲ್ಲೆಯಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ

    ಉಡುಪಿ, ಜುಲೈ 09, 2025: ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ 4 ಶಿಶುಪಾಲನಾ ಕೇಂದ್ರಗಳನ್ನು ತರೆಯಲಾಗಿದ್ದು, ಉದ್ಯೋಗಸ್ಥ ಮಹಿಳೆಯರು ಸುಗಮವಾಗಿ ಕಛೇರಿಗಳಲ್ಲಿ ಕೆಲಸ ನಿರ್ವಹಿಸಲು ಹಾಗೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 6 ತಿಂಗಳಿನಿಂದ 6 ವರ್ಷದ ಮಕ್ಕಳ ಯೋಗಕ್ಷೇಮ, ರಕ್ಷಣೆ ಹಾಗೂ ಪೋಷಣೆ ಅನುವಾಗುವಂತೆ, ಹಾಲುಣಿಸುವ ಕೊಠಡಿ, ಮಕ್ಕಳಿಗೆ ಆಟಿಕೆಗಳು ಮತ್ತು ಪೂರಕ ಪೌಷ್ಟಿಕ ಆಹಾರದೊಂದಿಗೆ ಮಕ್ಕಳ ಲಾಲನೆ, ಪಾಲನೆ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

    ಕೇಂದ್ರಗಳ ಪಟ್ಟಿ

    • ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಪಂಚಾಯತ್‍ನ ಸಿ ಬ್ಲಾಕ್ ನೆಲಮಹಡಿ ದೂ.ಸಂ:9448951074 (ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಉಡುಪಿ)
    • ಉಡುಪಿ ನಗರದ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆ ಎದುರುಗಡೆಯ ಮಹಾತ್ಮಾಗಾಂಧಿ ಶಾಲೆ, ದೂ.ಸಂ: 9448951074 (ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಉಡುಪಿ)
    • ಕುಂದಾಪುರದ ಎ.ಕೆ.ಜಿ ರಸ್ತೆಯ ಹಿತಾ ಹಾರ್ಮೋನಿ ಎದುರುಗಡೆಯ ಶ್ರೀದೇವಿ ನಸಿರ್ಂಗ್ ಹೋಮ್ ದೂ.ಸಂ:7619195452 (ಸ್ತ್ರೀಶಕ್ತಿ ಒಕ್ಕೂಟ ಕುಂದಾಪುರ)
    • ಕಾರ್ಕಳದ ಕಿಸಾನ್ ಸಭಾ ಟ್ರಸ್ಟ್ ಬಳಿಯ ಮಹಿಳಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ದೂ.ಸಂ:9449382787 (ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಕಾರ್ಕಳ)

    ಶಿಶುಪಾಲನಾ ಕೇಂದ್ರಗಳು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಲಾಲನೆ ಮತ್ತು ಪಾಲನೆಗಾಗಿ ಶಿಕ್ಷಕಿ ಮತ್ತು ಸಹಾಯಕಿಯರು ಕಾರ್ಯನಿರ್ವಹಿಸುತ್ತಿರುತ್ತಾರೆ. ಆಸಕ್ತ ಮಹಿಳೆಯರು ತಮ್ಮ ಮಕ್ಕಳನ್ನು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಪಂಚಾಯತ್‍ನ ಸಿ ಬ್ಲಾಕ್ ನೆಲಮಹಡಿ ದೂ.ಸಂ:9448951074 (ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಉಡುಪಿ), ಉಡುಪಿ ನಗರದ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆ ಎದುರುಗಡೆಯ ಮಹಾತ್ಮಾಗಾಂಧಿ ಶಾಲೆ, ದೂ.ಸಂ: 9448951074 (ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಉಡುಪಿ), ಕುಂದಾಪುರದ ಎ.ಕೆ.ಜಿ ರಸ್ತೆಯ ಹಿತಾ ಹಾರ್ಮೋನಿ ಎದುರುಗಡೆಯ ಶ್ರೀದೇವಿ ನಸಿರ್ಂಗ್ ಹೋಮ್ ದೂ.ಸಂ:7619195452 (ಸ್ತ್ರೀಶಕ್ತಿ ಒಕ್ಕೂಟ ಕುಂದಾಪುರ) ಹಾಗೂ ಕಾರ್ಕಳದ ಕಿಸಾನ್ ಸಭಾ ಟ್ರಸ್ಟ್ ಬಳಿಯ ಮಹಿಳಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ದೂ.ಸಂ:9449382787 (ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಕಾರ್ಕಳ) ದ ಶಿಶುಪಾಲನ ಕೇಂದ್ರಗಳಲ್ಲಿ ನೋಂದಾಯಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • ಉಡುಪಿ: ಯುವನಿಧಿ ವಿಶೇಷ ನೋಂದಣಿ

    ಉಡುಪಿ, ಜೂಲೈ 9, 2025 : ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸದ ಅರ್ಹರ ಅನೂಕೂಲಕ್ಕಾಗಿ ಆಗಸ್ಟ್ 7 ರವರೆಗೂ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ.

    ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ನೋಂದಣಿ ಹಾಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು, 2024-2025 ನೇ ಸಾಲಿನ ಪದವಿ ಸ್ನಾತಕೋತ್ತರ ಪದವಿ, ಡಿಪ್ಲೋಮ, ಪಡೆದು ನಿರುದ್ಯೋಗಿಯಾಗಿರುವವರು ಅರ್ಹರು.ಯುವನಿಧಿ ಯೋಜನೆಯ ಫಲಾನುಭವಿಗಳು ತ್ರೈಮಾಸಿಕ ಆನ್ಲೈನ್ ಲಾಗಿನ್ ಆಗಿ ಸ್ವ ಘೋಷಣೆ ನೀಡಬೇಕು, ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಲು ಪ್ರಕಟಣೆ ತಿಳಿಸಿದೆ

  • ಉಡುಪಿ: ಎಬಿವಿಪಿ 77ನೇ ಸಂಸ್ಥಾಪನಾ ದಿನಾಚರಣೆ

    ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಜುಲೈ 9ರಂದು ಎಬಿವಿಪಿಯ 77ನೇ ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಯಿತು. 

    ಬೆಳಗ್ಗೆ 9 ಗಂಟೆಗೆ ಸರಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಕಾರ್ಯಾಲಯ ಕೇಶವ ನಿಲಯದ ಮಾಧವ ಸಭಾಂಗಣದಲ್ಲಿ ಧ್ವಜಾರೋಹಣ ನಡೆಸಿ ನಂತರ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಡಾ| ಶಿವಾನಂದ ನಾಯಕ್ ಕಳೆದ ಅನೇಕ ದಶಕಗಳಿಂದ ಕಾಲೇಜಿನಲ್ಲಿರುವ ಯುವಕರಲ್ಲಿ ರಾಷ್ಟ್ರ ಪ್ರೇಮದ ಬೀಜವನ್ನು ಬಿತ್ತಿ ರಾಷ್ಟ್ರ ಪುನರ್ನಿರ್ಮಾಣದ ಸಂಕಲ್ಪದ ಕೈಂಕರ್ಯವನ್ನು ಕೈಗೊಳ್ಳುವಂತೆ ಮಾಡುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂದು ಹೇಳಿದರು.

    ನಗರ ಕಾರ್ಯದರ್ಶಿ ಮಾಣಿಕ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಬಿವಿಪಿ ತನ್ನ ಸದಸ್ಯತ್ವದ ಮೂಲಕ ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಮತ್ತು ಈ ಬಾರಿಯ ಸದಸ್ಯತ್ವ ಅಭಿಯಾನವು ಇಂದಿನಿಂದ ಪ್ರಾರಂಭವಾಗಲಿದ್ದು ಉಡುಪಿಯ ವಿದ್ಯಾರ್ಥಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿ ಈ ಹಿಂದಿನಂತೆ ಮುಂದೆ ನಡೆಯಲಿರುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ನಗರ ಉಪಾಧ್ಯಕ್ಷರಾದ ಪ್ರೊ| ಪ್ರವೀಣ್ ಆಚಾರ್ಯ ಅವರ ಉಪಸ್ಥಿತರಿದ್ದರು. ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕ ಶ್ರೇಯಸ್ ಅಂಚನ್,  ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಪ್ರಮುಖ್ ನವೀನ್, ನಗರ ಸಹ ಕಾರ್ಯದರ್ಶಿ ಶಿವನ್,  ಹಾಗೂ ಹಿರಿಯ ಕಾರ್ಯಕರ್ತರಾದ ಆಶೀಷ್ ಶೆಟ್ಟಿ ಬೋಳ ಮತ್ತು ಅಜಿತ್ ಜೋಗಿ ಮತ್ತು ಪ್ರಮುಖರಾದ ಮನೀಶ್, ಸ್ವಸ್ತಿಕ್, ಅಂಕಿತಾ, ಮನು, ಲ್ಯಾರಿ, ಕಿಶೋರ್, ಹೃಷಿತ್ ಸೇರಿದಂತೆ ಇತರೆ ಕಾರ್ಯಕರ್ತರು ಭಾಗವಹಿಸಿದ್ದರು.