Category: Udupi

  • Udupi: ‘Namma Nada Okkoota Community Center’ Inauguration Set for July 20

    Udupi, July 8, 2025: The inauguration of the ‘Namma Nada Okkoota Community Center’ in Udupi is scheduled for Sunday, July 20, 2025, to be held in the morning in the presence of distinguished guests. This event marks a significant step toward community service and social development in the region.

    Located at Adi Udupi Masjid Complex, Udupi, the center is designed to offer a range of services aimed at enhancing education, employment, and empowerment. These include educational and scholarship guidance, career and skill development support, assistance with government schemes, medical and insurance guidance, as well as public services and data collection. Building on its previous initiatives—such as scholarship distributions, awareness programs, and honor ceremonies in Kundapura, Udupi, and Kaup—the center is poised to become a vital hub for the local community.

    The inauguration reflects NNO’s ongoing commitment to fostering growth and unity, with community leaders expressing optimism about its potential impact. Stay tuned for more details on additional services to be introduced at the center.

  • ಪ್ರಜಾಪ್ರಭುತ್ವದ ಕಗ್ಗೊಲೆ – ಶರಣ್ ಪಂಪುವೆಲ್ ಮೇಲೆ ಕೇಸ್ ಖಂಡನೀಯ: ವಿಎಚ್‌ಪಿ

    ಉಡುಪಿ, ಜುಲೈ 7, 2025: ಗೋ ಹತ್ಯೆ ಮಾಡಿ ಗೋವಿನ ರುಂಡವನ್ನು ಎಸೆದಿರುವ ಕೃತ್ಯವನ್ನು ಖಂಡಿಸಿ ಪತ್ರಿಕಾ ಹೇಳಿಕೆಗೆ ಶರಣ್ ಪಂಪವೆಲ್ ರವರ ಮೇಲೆ ಕೇಸ್ ದಾಖಲಿಸಿರುದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ. ಕಳೆದ ಕೆಲವು ದಶಕಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಗೋಕಳ್ಳತನ /ಗೋಹತ್ಯೆ / ಅಕ್ರಮ ಗೋಸಾಗಾಟದ ಹಿಂದೆ ವ್ಯವಸ್ಥಿತ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದ್ದು ಇಡೀ ಕರಾವಳಿಯ ಜನತೆಗೆ ತಿಳಿದಿರುವ ವಿಷಯ, ಆದರೆ ಯಾರದು ಒತ್ತಡಕ್ಕೆ ಮಣಿದು ಅಥವಾ ರಾಜಕೀಯ ತುಷ್ಟಿಕರಣಕ್ಕಾಗಿ ಆ ಹೇಳಿಕೆಯನ್ನು ಕಾರಣವಾಗಿಟ್ಟು ಕೊಂಡು ಕೇಸು ದಾಖಲಿಸಿರುವುದು ಅತ್ಯಂತ ಖಂಡನೀಯ, ಇದರಿಂದ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ದಕ್ಕೆಯಾವುದರ ಜೊತೆಗೆ, ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಆದುದರಿಂದ ತಕ್ಷಣ ಪೊಲೀಸ್ ಇಲಾಖೆ ಹಾಕಿರುವ ಕೇಸನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆ.

    ಶರಣ್ ಪಂಪವೆಲ್ ರವರಿಗೆ ಚಿಕ್ಕಮಗಳೂರು ಜಿಲ್ಲೆ ನಿರ್ಬಂಧ – ಆದೇಶ ಹಿಂಪಡೆಯಲು ಆಗ್ರಹ

    ಸಂಘಟನಾ ಕಾರ್ಯಕ್ಕೆ ಮತ್ತು ಕಾರ್ಯಕ್ರಮ ದೃಷ್ಟಿಯಿಂದ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಚಿಕ್ಕಮಗಳೂರು ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಖಂಡನೀಯ, ಓಲೈಕೆ ರಾಜಕಾರಣಕೋಸ್ಕರ ಹಿಂದೂ ನಾಯಕರನ್ನು ಧಮನಿಸುವ ಕೃತ್ಯವನ್ನು ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಮಾಡುತ್ತಿದ್ದು, ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ ಮತ್ತು ತಕ್ಷಣ ಈ ಆದೇಶವನ್ನು ಹಿಂದೆ ಪಡೆಯುವಂತೆ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನೀಲ್ ಕೆ ಆರ್ ಪ್ರಕಟಣೆಯಲ್ಲಿ ತಿಳಿಸಿದರು.

  • ಉಡುಪಿ: ಗಾಳಿಗೆ ಕಾರ್ಕಳ, ಕುಂದಾಪುರದಲ್ಲಿ ಅಡಿಕೆ ತೋಟಕ್ಕೆ ಹಾನಿ

    ಉಡುಪಿ, ಜುಲೈ 7, 2025: ಭಾರೀ ಮಳೆ, ಗಾಳಿಗೆ ಕಾರ್ಕಳ, ಕುಂದಾಪುರದಲ್ಲಿ ಅಡಿಕೆ ತೋಟಕ್ಕೆ ಹಾನಿಕಳೆದ 24 ಗಂಟೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಗಣನೀಯ ಇಳಿಮುಖ ಕಂಡು ಬಂದಿದ್ದರೂ, ಆಗಾಗ ಮಳೆಯೊಂದಿಗೆ ಬೀಸುವ ಗಾಳಿಗೆ ಜಿಲ್ಲೆಯಲ್ಲಿ ಮನೆಗಳಿಗೆ ಹಾಗೂ ಸೊತ್ತುಗಳಿಗೆ ಆಗುವ ಹಾನಿ ಹೆಚ್ಚುತ್ತಿದೆ.

    ರವಿವಾರ ಬೀಸಿದ ಗಾಳಿಗೆ ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಅನೇಕ ತೋಟಗಾರಿಕಾ ಬೆಳೆಗಳಿಗೆ 3 ಹಾನಿಯುಂಟಾಗಿದ್ದರೆ, ಉಳಿದಂತೆ ಕನಿಷ್ಠ ಆರು ಮನೆಗಳಿಗೆ ಹಾನಿಯುಂಟಾಗಿದ್ದು 3.5 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ವರದಿಗಳು ಬಂದಿವೆ.ಕಾರ್ಕಳ ತಾಲೂಕು ಈದು ಗ್ರಾಮದ ದಿನೇಶ್ ಹಾಗೂ ಕುಂದಾಪುರ ತಾಲೂಕು ಸೇನಾಪುರದ ಶ್ರೀಧರ ಶೆಟ್ಟಿ ಎಂಬವರ ತೋಟಗಳಿಗೆ ಗಾಳಿಯಿಂದ ಅಪಾರ ಹಾನಿಯಾಗಿದೆ. ತೋಟದ ಅಡಿಕೆ ಮರಗಳು ಧರಾಶಾಯಿಯಾಗಿದ್ದು 50ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

  • ಉಡುಪಿ: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಕಿರುಕುಳ ಆರೋಪಿಸಿ ಹಿಂ.ಜಾ.ವೇ ನೇತೃತ್ವದಲ್ಲಿ ಪ್ರತಿಭಟನೆ

    ಉಡುಪಿ, ಜುಲೈ 7, 2025:  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪೊಲೀಸರ ಅಕ್ರಮ ಕ್ರಮಗಳನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, ಹಿಂದೂ ವಿರೋಧಿ ಎಂದು ಆರೋಪಿಸಿದರು.

    ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖ ಗೋರಕ್ಷಕ ಕಾರ್ಯಕರ್ತ ಸುನಿಲ್ ಕೆ.ಆರ್. ಅವರು, “ರಾಜ್ಯ ಸರ್ಕಾರ ಕರಾವಳಿ ಪ್ರದೇಶವನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿದೆ. ಕರಾವಳಿ ಭಾಗದಲ್ಲಿ ಸ್ಪಷ್ಟವಾದ ಷಡ್ಯಂತ್ರ ನಡೆಯುತ್ತಿದೆ. ಅಲ್ಲಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಮತ್ತು ಅವರನ್ನು ರೌಡಿ ಶೀಟ್‌ಗಳು ಹಾಗೂ ಗೂಂಡಾ ಕಾಯ್ದೆಯ ಅಡಿಯಲ್ಲಿ ಸುಳ್ಳಾಗಿ ಬ್ರಾಂಡ್ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

    “ಒಂದು ಕಾಲದಲ್ಲಿ ಕರಾವಳಿಯನ್ನು ‘ಹಿಂದುತ್ವ ಕಾರ್ಖಾನೆ’ ಎಂದು ಕರೆದಿದ್ದ ಅದೇ ಸಿದ್ದರಾಮಯ್ಯ ಈಗ ಅದರ ವಿನಾಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ಸುಳ್ಳು ಪ್ರಕರಣಗಳನ್ನು ದಾಖಲಿಸುವುದಲ್ಲದೆ, ಹಿಂದೂ ಕಾರ್ಯಕರ್ತರ ಮನೆಗಳು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ. ಹಿಂದೂ ಸಮುದಾಯವು ಜಾಗರೂಕವಾಗಿದೆ ಮತ್ತು ಒಂದಾಗಿದೆ” ಎಂದರು.

    “ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಪೊಲೀಸ್ ಇಲಾಖೆಯು ನಿಷ್ಪಕ್ಷಪಾತ ಮತ್ತು ಕಾನೂನುಬದ್ಧ ತನಿಖೆ ನಡೆಸಲು ಅವಕಾಶ ನೀಡುವಂತೆ ನಾನು ಅವರನ್ನು ಬಲವಾಗಿ ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.

    “ವಿಶೇಷ ತನಿಖಾ ದಳ ರಚನೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಅವರು, ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುವ ಬದಲು, ಅಧಿಕಾರಿಗಳು ನಿಜವಾದ ಅಪರಾಧಿಗಳಾದ ಗೋಹತ್ಯೆ, ಗೋಕಳ್ಳತನ ಮತ್ತು ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ” ಎಂದು ವಾದಿಸಿದರು.

    ಪ್ರತಿಭಟನೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಹೆಚ್‌ಪಿ ಮುಖಂಡರಾದ ವಾಸುದೇವ ಗಂಗೊಳ್ಳಿ, ದಿನೇಶ್ ಮೆಂಡೋನ್, ಮಹೇಶ್ ಬೈಲೂರು, ಉಮೇಶ್ ಕೋಕಲ್, ನಿಖಿಲ್ ಮಂಚಿ, ರೇಷ್ಮಾ ಉದಯ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

  • ಉಡುಪಿ: ಸಾಲಿಹಾತ್ ಶಿಕ್ಷಣ ಸಮಸ್ಥೆಯಲ್ಲಿ “ಕೊಡೆ ದಿನ” – ವಿದ್ಯಾರ್ಥಿಗಳಿಂದ ಮಾನ್ಸೂನ್ ಸ್ವಾಗತ 

    ಉಡುಪಿ: ಸಾಲಿಹಾತ್ ಶಿಕ್ಷಣ ಸಂಸ್ಥೆ ವತಿಯಿಂದ ಮಾನ್ಸೂನ್ (ಮಳೆಗಾಲ) ಹಿನ್ನೆಲೆಯಲ್ಲಿ ಕೊಡೆ ದಿನ ಆಚರಿಸಲಾಯಿತು. 

    ವಿದ್ಯಾರ್ಥಿಗಳು ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದು ಮಳೆಯನ್ನು ಸಂಭ್ರಮಿಸಿ ಸ್ವಾಗತಿಸಿದರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಕೊಡೆ ದಿನದಲ್ಲಿ ವಿದ್ಯಾರ್ಥಿಗಳು ಆಧುನಿಕ ಕೊಡೆಯೊಂದಿಗೆ ಹಳೆಯ ಪದ್ಧತಿಯ ಮಳೆಯಿಂದ ರಕ್ಷಣೆ ಪಡೆಯುವ ಸಾಧನಗಳನ್ನು ಪ್ರದರ್ಶಿಸಿದರು. 

    ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಅಕಾಡೆಮಿಕ್ ಮುಖ್ಯಸ್ಥರಾದ ಹಸೀಬ್ ತರಫ್ದಾರ್, ಶಿಕ್ಷಕಿಯರು ಉಪಸ್ಥಿತರಿದ್ದರು.

  • ಉಡುಪಿ: ಕೊಡಂಕೂರಿನ ಎರಡು ಮನೆಗಳಲ್ಲಿ ಕಳ್ಳತನ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ

    ಉಡುಪಿ, ಜುಲೈ 7, 2025: ಉಡುಪಿ ತಾಲೂಕಿನ ಕೊಡಂಕೂರು ಗ್ರಾಮದಲ್ಲಿ ಎರಡು ಪ್ರತ್ಯೇಕ ಕಳ್ಳತನದ ಘಟನೆಗಳು ಜುಲೈ 5 ರಿಂದ 6 ರವರೆಗೆ ನಡೆದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

    ಮೊದಲ ಘಟನೆ: ಸುಧಾಕರ (30), ಈಶ್ವರನಗರ, ಮಣಿಪಾಲ ಇವರ ಅತ್ತೆ ಕಲಾವತಿ, ಕೊಡಂಕೂರು ವಾರ್ಡಿನ ಎರಡನೇ ಅಡ್ಡ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಜುಲೈ 5, 2025 ರಂದು ರಾತ್ರಿ 10:00 ಗಂಟೆಗೆ ಕಲಾವತಿ ತಮ್ಮ ಗಂಡ ಗಿರೀಶ್ ಜೊತೆ ಬೆಂಗಳೂರಿಗೆ ತೆರಳಿದ್ದರು. ಜುಲೈ 6 ರಂದು ಬೆಳಿಗ್ಗೆ 11:00 ಗಂಟೆಗೆ ಸುಕೇಶ್ ಎಂಬವರು ಕಲಾವತಿಗೆ ಫೋನ್ ಮಾಡಿ, ಮನೆಯ ಬೀಗವನ್ನು ಒಡೆಯಲಾಗಿದೆ ಎಂದು ತಿಳಿಸಿದರು. ಸುಧಾಕರ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಒಡೆದು, ಒಳಗಿನ ಗೋಡ್ರೆಜ್‌ನನ್ನು ಒಡೆದಿರುವುದು ಕಂಡುಬಂದಿತು. ಕಲಾವತಿ ಬೆಂಗಳೂರಿನಿಂದ ವಾಪಸ್ ಬಂದ ಬಳಿಕ ಕಳವಾದ ಸೊತ್ತಿನ ವಿವರ ನೀಡಲಿದ್ದಾರೆ. ಈ ಘಟನೆಗೆ ಸಂಬಂಧಿಸಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 127/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

    ಎರಡನೇ ಘಟನೆ: ಅಶ್ವತ್ (31), ಪುತ್ತೂರು ಗ್ರಾಮ, ಕೊಡಂಕೂರಿನ ನ್ಯೂ ಕಾಲೋನಿಯ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಶಿಕಾರಿಪುರದಲ್ಲಿ ಟೈಲ್ಸ್ ಉದ್ಯಮದಲ್ಲಿದ್ದಾರೆ. ಅವರ ತಾಯಿ ಗಿರಿಜಾ ಕೊಡಂಕೂರಿನ ಮನೆಯಲ್ಲಿ ವಾಸವಾಗಿದ್ದು, ವಾರಕ್ಕೊಮ್ಮೆ ಅವರ ತಂಗಿಯ ಮಗಳು ಚೈತ್ರಾ ಮನೆಗೆ ಭೇಟಿ ನೀಡುತ್ತಿದ್ದರು. 15 ದಿನಗಳ ಹಿಂದೆ ಅಶ್ವತ್ ತಾಯಿಯನ್ನು ಶಿಕಾರಿಪುರಕ್ಕೆ ಕರೆದೊಯ್ದಿದ್ದರು. ಜುಲೈ 5, 2025 ರಂದು ರಾತ್ರಿ ಚೈತ್ರಾ ಮನೆಗೆ ಬಂದಾಗ ಯಾರೂ ಇಲ್ಲದ ಕಾರಣ ಬೀಗ ಹಾಕಿ ಗೆಳತಿಯ ಮನೆಗೆ ತೆರಳಿದ್ದರು. ಜುಲೈ 6 ರಂದು ಬೆಳಿಗ್ಗೆ 7:15 ಗಂಟೆಗೆ ಮನೆಗೆ ವಾಪಸ್ ಬಂದಾಗ, ಮುಂಭಾಗದ ಬಾಗಿಲು ಮುರಿದಿದ್ದು, ಸೊತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಜುಲೈ 5 ರಾತ್ರಿ 12:00 ಗಂಟೆಯಿಂದ ಜುಲೈ 6 ಬೆಳಿಗ್ಗೆ 7:15 ಗಂಟೆಯ ನಡುವೆ ಮನೆಗೆ ನುಗ್ಗಿ, ಬೆಡ್‌ರೂಮ್‌ನ ವಾಲ್ಡ್ರೋಬ್‌ನಿಂದ 5 ಗ್ರಾಂ ಚಿನ್ನದ ಕಿವಿಓಲೆ, 2 ಗ್ರಾಂ ಚಿನ್ನದ ಪೆಂಡೆಂಟ್ ಮತ್ತು 20,000 ರೂ. ನಗದು ಕಳವು ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

    ಪೊಲೀಸರು ಎರಡೂ ಘಟನೆಗಳ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.

  • ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್

    ಉಡುಪಿ: ರಾಜ್ಯದ ಮಹಿಳಾ ಕಾಂಗ್ರೆಸ್ ನ ರಾಜಾಧ್ಯಕ್ಷೆ ಆಗಿರುವ ಸೌಮ್ಯ ರೆಡ್ಡಿ ಅವರನ್ನು ಟೀಕಿಸಿರುವ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಂಧ್ಯಾ ರಮೇಶ್ ಅವರಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್ ಅವರು ಬಹಿರಂಗ ಪತ್ರ ಬರೆದಿದ್ದಾರೆ.

    ಸಂಧ್ಯಾ ರಮೇಶ್ ಅವರಿಗೆ ಬರೆದ ಬಹಿರಂಗ ಪತ್ರದ ವಿವರ

    1. ತಮ್ಮ ಪಕ್ಷದವರಾದ ಶ್ರೀ.ಸಿ.ಟಿ. ರವಿ ಹಾಗೂ ಶ್ರೀ ರವಿಕುಮಾರ್ ಮಹಿಳೆಯರ ಬಗ್ಗೆ ಮಾತನಾಡುವ ಅಸಹ್ಯಕರ, ಅಪಾರ್ಥ ಮಾತುಗಳು ಮಾತ್ರ ಉಪದೇಶವಾಗಿ ತಾವು ಸ್ವೀಕರಿಸುತ್ತೀರಾ? ಅಭಿಪ್ರಾಯ ಕೋರಲಾಗಿದೆ.
    2. ತಮ್ಮ‌ ನಾಯಕರುಗಳ ಮಾತುಗಳಿಗೆ ಯಾವುದೇ ಅನಗತ್ಯ ಆಕ್ಷೇಪ‌, ತಕರಾರು ಇಲ್ಲವೇ?
    3. ರಾಜ್ಯದ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಸೌಮ್ಯ ರೆಡ್ಡಿ ಮೇಡಂ ಅವರು ಮಾತನಾಡಿದರೆ, ಅದು  ಉಪದೇಶ, ಅದು ತಮಗೆ ಅನಗತ್ಯವೆಂದಾದರೇ, ಮಹಿಳೆಯರ ಬಗೆಗಿನ ತಮ್ಮ‌ ನಿಲುವೇನು?
    4. ರಾಜಕೀಯದಲ್ಲಿ ಸೋಲು‌ ಗೆಲುವು‌ ಸಾಮಾನ್ಯ ,  ಘಟಾನುಘಟಿ‌ನಾಯಕರುಗಳೇ , ಒಂದಲ್ಲ‌ ಎರೆಡೆರಡು ಬಾರಿ‌ ಸೋತು ಗೆದ್ದಿದ್ದಾರೆ, ( ಮಾಜಿ ಪ್ರಧಾನಮಂತ್ರಿಗಳಾದ ಶ್ರೀ‌.ಹೆಚ್.ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ, ಶ್ರೀ ಜಗದೀಶ್ ಶೆಟ್ಟರ್, ಪ್ರಸ್ತುತ ತಮ್ಮ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಶ್ರೀ ವಿ.ಸೋಮಣ್ಣ, ಕು. ಶೋಭ ಕಾರದ್ಲಾಂಜೆ, ಇನ್ನು ಹೆಸರುಗಳು ಬೇಕಿದ್ದರೆ ತಿಳಿಸುತ್ತೇವೆ.
    5. ಇದೆಲ್ಲ ದೊಡ್ಡ ವಿಷಯ ಬಿಡಿ, ನೀವು ಎಂದಾದರೂ ಚುನಾವಣೆಯಲ್ಲಿ‌‌ ನಿಂತು ಜನಾಭಿಪ್ರಾಯ ‌ಪಡೆದು‌ ಯಾವುದೇ ಶಾಸಕ‌ ಸ್ಥಾನಮಾನ ಅಲಂಕರಿಸಿದ್ದೀರಾ? ಅದು ಬೇಡ ಗ್ರಾಮ ಪಂಚಾಯಿತಿ ಚುನಾವಣೆಗಾದರೂ ನಿಂತಿದ್ದೀರಾ ? ಸೌಮ್ಯ ರೆಡ್ಡಿ‌ ಮೇಡಂ ಅವರು ಸೋತಿದ್ದಾರೆ ಎಂದು ಹೇಳುವ ಯಾವ‌ ನೈತಿಕತೆ‌‌ ತಮಗಿದೆ ?
    6. ಸೋತಿರಬಹುದು ಆದರೂ ಮತ್ತೊಮ್ಮೆ ಪುಟಿದೇಳಬೇಕು ಎನ್ನುವ ಛಲವಿರುವ, ಆತ್ಮ ವಿಶ್ವಾಸ ತೋರುವ ಹೆಣ್ಣುಮಕ್ಕಳನ್ನು ಗೌರವಿಸುವ ಸೌಜನ್ಯ ಬೇಡವೇ? ‌ಇದೇ ತಾವು ತಮ್ಮ ಪಕ್ಷದವರಿಂದ ಕಲಿತಿರುವ ಉಪದೇಶವೇ? ನಿಮ್ಮಂತಹವರಿಂದ ಮತ್ತೇನು ‌ನಿರೀಕ್ಷಿಸಲು ಸಾಧ್ಯ? 
    7. ಸಾರಿಗೆ ಸಂಸ್ಥೆಯಲ್ಲಿ  ತಮ್ಮ ಪಕ್ಷದ ಅವಧಿಯಲ್ಲಿ ರೂ.5900 ಕೋಟಿ ಸಾಲ ಬಿಟ್ಟು ಹೋಗಿದ್ದರು ಇದು ತಮಗೆ ತಿಳಿದಿಲ್ಲವಾದರೇ , ತಮ್ಮ‌ ಪಕ್ಷದವರಿಂದ ಉಪದೇಶ ಕೇಳಿ‌ ತಿಳಿದುಕೊಳ್ಳಬಹುದು.
    8. ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಒಂದೇ ಒಂದು‌ ನೇಮಕಾತಿ ಆಗಿರಲಿಲ್ಲ, ಸೌಮ್ಯ ರೆಡ್ಡಿ ‌ಮೇಡಂ ಅವರ  ತಂದೆಯವರ ಬಗ್ಗೆ ಮಾತನಾಡಿದ್ದೀರೋ, ಅದೇ  ಸಾರಿಗೆ ಸಚಿವರು ಅಧಿಕಾರವಹಿಸಿಕೊಂಡ‌ ನಂತರ 9000 ನೇರ ನೇಮಕಾತಿಗೆ ಅನುಮತಿ ನೀಡಿ‌, ಈಗಾಗಲೇ 7500 ನೇಮಕಾತಿ ಪೂರ್ಣಗೊಂಡಿದೆ.
    9. ಇದರೊಂದಿಗೆ ಮೃತಪಟ್ಟ ಸಾರಿಗೆ ಸಿಬ್ಬಂದಿಗಳ ಅವಲಂಬಿತರಿಗೆ ಕಳೆದ‌ ಎರಡು ವರ್ಷದಲ್ಲಿ 1000 ಅನುಕಂಪದ ಆಧಾರದ ನೌಕರಿ ನೀಡಿರುವುದು ಇದೇ ಸಾರಿಗೆ ಸಚಿವರು ಅಧಿಕಾರ ವಹಿಸಿಕೊಂಡ‌‌ ನಂತರ.
    10. ತಾವು ಸತ್ಯವನ್ನೇ ‌ನುಡಿದ್ದೀರಾ, ಸತ್ಯ ಬೆಂಕಿ‌ ಕೆಂಡವಿದ್ದಂತೆ ತುಂಬಾ ಹೊತ್ತು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಧನ್ಯವಾದಗಳು. 
    11. ತಮ್ಮ‌ ಪಕ್ಷದ ಅಧಿಕಾರಾವಧಿಯಲ್ಲಿ ಒಂದೇ ಒಂದು ಹೊಸ‌ ಬಸ್ ಸೇರ್ಪಡೆಯಾಗಿರಲಿಲ್ಲ, ಡಕೋಟ ಬಸ್ ಕಲ್ಪಿಸಿದ ಕೀರ್ತಿ ತಮ್ಮ‌ ಪಕ್ಷಕ್ಕೆ ಸಲ್ಲಬೇಕು. ಡೀಸೆಲ್ ಪಾವತಿ ಬಾಕಿ ಇತ್ತು, ಶೂನ್ಯ  ನೇಮಕಾತಿ ಎಲ್ಲವೂ ತಮ್ಮ ಪಕ್ಷದ  ಕಾಲದಲ್ಲಿ.  ಆಗ ಉಡುಪಿ ‌ಭಾಗಕ್ಕೆ ಬಸ್ ಬೇಕು ಎಂದು ಕೇಳುವ ತಾಕತ್ತು‌‌ ತಮ್ಮಲ್ಲಿ ಇರಲಿಲ್ಲವೇ?
    12. ಇದೇ ಸಾರಿಗೆ ಸಚಿವರು‌ ಬಂದ ಮೇಲೆ‌  5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮತಿ‌ ನೀಡಿದ್ದು ಈಗಾಗಲೇ 4987 ಬಸ್ಸುಗಳು ಸೇರ್ಪಡೆಯಾಗಿವೆ.
    13. ಉಡುಪಿ, ಮಂಗಳೂರು ,ಪುತ್ತೂರು ವ್ಯಾಪ್ತಿಯ ಘಟಕಗಳಿಗೆ ಚಾಲಕ ನಿರ್ವಾಹಕರಿಲ್ಲದೆ‌‌ ಬಸ್ಸುಗಳ‌ನ್ನು ಓಡಿಸಲು ಸಾಧ್ಯವಾಗದೇ, ಟ್ರಿಪ್ ಗಳನ್ನು ಕಡಿತಗೊಳಿಸಿದ್ದು ತಮ್ಮ‌‌‌ ಪಕ್ಷದ ಅಧಿಕಾರದ ಅವಧಿಯಲ್ಲಿ ಈ ಬಗ್ಗೆಯೂ ಉಪದೇಶ ಕೇಳಿ‌ ತಿಳಿದುಕೊಳ್ಳಬಹುದು.
    14. ಇದೇ ಸಾರಿಗೆ ಸಚಿವರು ಅಧಿಕಾರಕ್ಕೆ ಬಂದ‌ ಮೇಲೆ ಉಡುಪಿ, ಕುಂದಾಪುರ,ಮಂಗಳೂರು, ಪುತ್ತೂರು ಗೆ 800 ಹೊಸ ಚಾಲಕ/ನಿರ್ವಾಹಕರನ್ನು ನೇಮಕ ಮಾಡಿ‌ ಒದಗಿಸಿರುವುದು.
    15. 14. ಮುಜರಾಯಿ‌ ಇಲಾಖೆ‌‌ಯಲ್ಲಿ ಈವರೆಗೂ ಯಾವೊಬ್ಬ ಮಂತ್ರಿಯೂ ಮಾಡಿರದಂತಹ ಕ್ರಾಂತಿಕಾರಿ‌ ಕೆಲಸಗಳನ್ನು ಮಾಡಿ ಅರ್ಚಕರ‌‌‌ ಕಣ್ಮಣಿ ಎಂದೇ ಹೆಸರು‌ ಮಾಡಿರುವರು ಬೇರಾರು ಅಲ್ಲ, ,ಇದೇ ಸೌಮ್ಯ ರೆಡ್ಡಿ‌ಮೇಡಂ ರವರ ತಂದೆಯವರು.  
    16. ದೇವಸ್ಥಾನಗಳ ಅಭಿವೃದ್ಧಿಗೆ ಪ್ರಾಧಿಕಾರಗಳ ರಚನೆ:  ಚಾಮುಂಡಿ ಬೆಟ್ಟ ಮೈಸೂರು, ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಹುಲಿಗೆಮ್ಮ ದೇವಾಲಯ ಕೊಪ್ಪಳ, ಸವದತ್ತಿ ಯಲ್ಲಮ್ಮ ದೇವಾಲಯ
    17. DBT ಮೊಬೈಲ್  ಮೂಲಕ ತಸ್ತೀಕ್ ವರ್ಷಾಸನ ಜಮಾ
    18. ಅರ್ಚಕರು / ನೌಕರರು ಮತ್ತು ಅವರ ಕುಟುಂಬದವರಿಗೆ ಉಚಿತ ಕಾಶಿ-ಗಯಾ ಯಾತ್ರೆ ಹಾಗೂ ದಕ್ಷಿಣ ಯಾತ್ರೆ
    19. ಅರ್ಚಕರ / ನೌಕರರ ಮೃತ ಕುಟುಂಬಕ್ಕೆ ಪರಿಹಾರ ಧನ ರೂ. 30,000 ರಿಂದ ರೂ. 2.ಲಕ್ಷಕ್ಕೆ ಹೆಚ್ಚಿಸಲಾಗಿದೆ
    20. ಸಾಮೂಹಿಕ ಮದುವೆಗಳಿಗೆ ಉತ್ತೇಜನ: ʼಮಾಂಗಲ್ಯ ಭಾಗ್ಯʼ ಯೋಜನೆಯಡಿ ರೂ. 63,000/-ಗಳ ಪ್ರೋತ್ಸಾಹ ಧನ
    21. ಅರ್ಚಕರ / ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ‌‌ ನೀಡಿಕೆ ಪ್ರಾರಂಭ
    22. ಶ್ರೀ ಕುಕ್ಕೆ‌ಸುಬ್ರಹ್ಮಣ್ಯ ದೇವಸ್ಥಾನ ಸಮಗ್ರ ಅಭಿವೃದ್ಧಿ ಗೆ ಕ್ರಿಯಾಯೋಜನೆಗೆ ಅನುಮತಿ. ಈ ಯೋಜನೆಯಡಿ ಸರ್ಪ ಸಂಸ್ಕಾರ ಯಾಗ ಶಾಲೆ‌ ನಿರ್ಮಾಣ,‌ಅನ್ನ ದಾಸೋಹ ಭವನ ನಿರ್ಮಾಣ, ಪಾರಂಪರಿಕ‌ ರಥ ಬೀದಿ ನಿರ್ಮಾಣ, ವಸತಿ ಗೃಹಗಳ‌ ನವೀಕರಣ, ಶೌಚಾಲಯ, ಸ್ನಾನಗೃಹಗಳ ನಿರ್ಮಾಣ, ತ್ಯಾಜ್ಯವಿಲೇವಾರಿ ಘಟಕ, ನೀರಿನ ಶುದ್ದೀಕರಣ ಘಟಕ‌ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ ನೀಡಿದ್ದಾರೆ.
    23. ಕನ್ನಡಿಗರ ಬಹುದಿನಗಳ‌ ಕನಸು‌‌ ತಿರುಪತಿಯಲ್ಲಿ ವಸತಿಗೃಹಗಳಾದ ಐಹೊಳೆ, ಹಂಪಿ‌ ಬ್ಲಾಕ್‌ಗಳ ಉದ್ಘಾಟನೆ
    24. ರೂ.500 ಕೋಟಿ‌ ಮೊತ್ತದ ದೇವಸ್ಥಾನಗಳ‌ ಆಸ್ತಿಯನ್ನು ಸಂರಕ್ಷಿಸಿ ದೇವಸ್ಥಾನಗಳ‌ ಸುಪರ್ದಿಗೆ ವಹಿಸಲಾಗಿದೆ.
    25. ಬೆಂಗಳೂರಿನಲ್ಲಿ ಧಾರ್ಮಿಕ ಸೌಧ‌‌ ನಿರ್ಮಾಣ, ಇ – ಪ್ರಸಾದ ಯೋಜನೆ ಜಾರಿ
    26. 25551 ದೇವಸ್ಥಾನಗಳಲ್ಲಿರುವ ಅರ್ಚಕರುಗಳಿಗೆ ನೀಡಲಾಗುತ್ತಿದ್ದ ತಸ್ತಿಕ್ ಹಣ ರೂ.60,000 ಗಳಿಂದ ರೂ.72,000 ಕ್ಕೆ ಹೆಚ್ಚಳ

    ಸಂಧ್ಯಾ ರಮೇಶ್ ಅವರೇ, ಸೌಮ್ಯ ರೆಡ್ಡಿ ಮೇಡಂ‌ ಅವರ ತಂದೆಯವರು ಯಾರು?  ಅವರ ಕಾರ್ಯವೈಖರಿ ಏನು ? ಎಂದು ತಿಳಿದುಕೊಳ್ಳಲು ಸಾವಿರಾರು ಉಪದೇಶ ಕೇಳಿದರೂ ನಿಮಗೆ ಸಾಲದು, ಅವರ ಬಗ್ಗೆ ಮಾತನಾಡಲು ಒಂದಷ್ಟು ಯೋಗ್ಯತೆಯಂತೂ ಹೊಂದಿರಲೇಬೇಕು ಎಂದು ನಾನಂತೂ ಭಾವಿಸಿದ್ದೇನೆ. ಕಳೆದ ಎಂಟು ವಿಧಾನಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಗೆಲ್ಲುತ್ತಿರುವ ಸೋಲಿಲ್ಲದ ಸರದಾರ ಅಂದರೆ ಅದು ಸನ್ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ‌ಅವರು, ಸೌಮ್ಯ ರೆಡ್ಡಿ ಮೇಡಂ ರವರ ತಂದೆಯವರು.

    ಸೌಮ್ಯ ರೆಡ್ಡಿ ಮೇಡಂ ಅವರ  ತಂದೆ ಹಾಗೂ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ತಮ್ಮ ಹಾಗೂ ತಮ್ಮ‌‌ ಪಕ್ಷದವರ ರೀತಿ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಬರೀ ಮಾತಿನಲ್ಲಿ‌ ಕೆಲಸ‌ ಮಾಡಿ ತೋರಿಸುವ ಸಾಮಾನ್ಯರಲ್ಲ, ಅವರ ಕೆಲಸವೇ ಮಾತನಾಡುವಂತಿರುತ್ತದೆ.

    ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಮಹಿಳಾ ಸಬಲೀಕರಣದ ಗ್ಯಾರೆಂಟಿ‌ಯಾದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದು, 500 ಕೋಟಿ‌ ಮಹಿಳಾ‌‌ ಪ್ರಯಾಣಿಕರ ಪ್ರಯಾಣಕ್ಕೆ ಇನ್ನೇನು‌‌ ಕೆಲವೇ‌‌ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಶಕ್ತಿ ಯೋಜನೆ ಯಶಸ್ವಿನ ರೂವಾರಿ ಆದವರು ಇದೇ ಸಾರಿಗೆ ಸಚಿವರು. ಸಂಧ್ಯಾ ರಮೇಶ್‌ ಅವರೇ,

    ನೀವು ಸೇರಿ‌‌ ನಿಮ್ಮ ಬಿ.ಜೆ.ಪಿ‌ ಪಕ್ಷದ‌‌ ಮಹಿಳಾ ಪದಾಧಿಕಾರಿಗಳು ಮತ್ತು ತಮ್ಮ ಪಕ್ಷಕ್ಕೆ ವೋಟು ಹಾಕುವ ಮಹಿಳೆಯರು ಸಹ ಶಕ್ತಿ ಯೋಜ‌ನೆಯ ಫಲಾನುಭವಿಗಳೇ‌‌ ಎಂಬುದನ್ನು ಆಗಾಗ ನೆನಪು ಮಾಡಿಕೊಳ್ಳಿ.

    ಪಾಪ ಬಿಡಿ.. ತಮ್ಮನ್ನು ದೂಷಿಸಿ ಪ್ರಯೋಜನವಿಲ್ಲ, ತಮ್ಮ ಪಕ್ಷದಲ್ಲಿ ತಮಗೆ ದೊರಕಿರುವ ತರಬೇತಿ , ಉಪದೇಶ ಆ ರೀತಿ ಇದೆ.‌ 

    ತಮ್ಮ ಜಿಲ್ಲೆಗೆ ಇತರರ ಉಪದೇಶ ಅನಗತ್ಯವೆಂದಲ್ಲಿ,‌ ತಮ್ಮ‌ ಪಕ್ಷದವರ ಯಾವ ಘನಂದಾರಿ‌ ಕೆಲಸಗಳು ತಮಗೆ ಅಲ್ಲಿ ಅಧಿಕಾರ ತಂದುಕೊಟ್ಟಿದೆ ಎಂದು ದಯವಿಟ್ಟು ಹೇಳುತ್ತಿರಾ?

    1. ಸಾವಿನ ಮೇಲೆ‌ ರಾಜಕೀಯ ಮಾಡಿದರೆ ಅಷ್ಟೇ ತಮ್ಮ‌ಪಕ್ಷ ಅಧಿಕಾರಕ್ಕೆ ಬರುವುದು.
    2. ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ರಾಜಕೀಯ ಮಾಡಿದರಷ್ಟೇ‌ ತಮಗೆ ಅಧಿಕಾರ ಸಿಗುವುದು
    3. ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿದರಷ್ಟೇ‌‌ ತಮ್ಮ ಪಕ್ಷದ ರಾಜಕೀಯ ಬೇಳೆ ಬೇಯವುದು
    4. ಒಂದರ‌ ನಂತರ ಒಂದು ಕೊಲೆ ,ತಂದೆ ತಾಯಿಯನ್ನು, ಹೆಂಡತಿ‌ ಮಕ್ಕಳನ್ನು ಅನಾಥರನ್ನಾಗಿ ಮಾಡಿಸಿ ರಾಜಕೀಯ ಮಾಡುವುದು‌ ತಮ್ಮ ಪಕ್ಷಕ್ಕೆ ಕರಗತವಾಗಿರುವ ಕಲೆ.

    ಈ  ಪಟ್ಟಿ ಹೀಗೆಯೇ ಮುಂದುವರೆಯುತ್ತಾ ಹೋದಷ್ಷು‌ ತಮ್ಮ ‌ಪಕ್ಷ ಅಧಿಕಾರ ಮಾಡುತ್ತಾ ಹೋಗುತ್ತದೆ. ತಮ್ಮ ಮನಸ್ಥಿತಿಗೆ ಹಿಡಿದ ಕೈಗನ್ನಡಿ ತಮ್ಮ‌ ಹೇಳಿಕೆ ಎಂಬುದು ಜನಸಾಮಾನ್ಯರಿಗೆ ಈಗಾಗಲೇ ಅರಿವಿಗೆ ಬಂದಿದೆ.

    ದೊಡ್ಡ ಮನುಷ್ಯರ ಮೇಲೆ ಹೇಳಿಕೆಗಳನ್ನು ನೀಡಿ ತಾವು ದೊಡ್ಡವರಾಗಿ ಬಿಡಬಹುದು ಎಂಬ ಭ್ರಮೆಯಿಂದ ಹೊರಬನ್ನಿ, ಈ ಹೇಳಿಕೆಯಿಂದ ಇನ್ನೂ ಪಾತಾಳಕ್ಕೆ ಇಳಿದಿದ್ದೀರಾ ನೀವು ಎಂದು ಗೊತ್ತಾಗಲು ತುಂಬಾ ಸಮಯ ಬೇಕಾಗುವುದಿಲ್ಲ ಎಂದು ಪತ್ರದಲ್ಲಿ ಜ್ಯೋತಿ ಹೆಬ್ಬಾರ್ ತಿಳಿಸಿದ್ದಾರೆ

  • ₹ 10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಂತೆಕಟ್ಟೆ ಒಣಮೀನು ಮಾರುಕಟ್ಟೆ  ಉದ್ಘಾಟನೆ

    ಉಡುಪಿ, ಜುಲೈ 6, 2025: ಉಡುಪಿ ನಗರಸಭೆಯ ಅನುದಾನದಲ್ಲಿ ನಿರ್ಮಾಣಗೊಂಡ ಗೋಪಾಲಪುರ ವಾರ್ಡಿನ ಸಂತೆಕಟ್ಟೆ ಒಣ ಮೀನು ಮಾರುಕಟ್ಟೆಯನ್ನು ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

    ನೂತನ ಮಾರುಕಟ್ಟೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಸಂತೆಕಟ್ಟೆಯ ಒಣ ಮೀನು ಮಾರಾಟಗಾರ ಮಹಿಳೆಯರ ಬಹು ವರ್ಷಗಳ ಬೇಡಿಕೆಯಂತೆ ಉಡುಪಿ ನಗರಸಭೆಯ ಮೂಲಕ ₹10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದ್ದು, ವಿದ್ಯುತ್ ದೀಪ ಹಾಗೂ ಫ್ಯಾನ್ ಅಳವಡಿಕೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಮೀನು ಮಾರುಕಟ್ಟೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು.

    ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀಮತಿ ಮಂಜುಳಾ ನಾಯಕ್, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಜಯಂತಿ ಪೂಜಾರಿ, ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷರಾದ ಶ್ರೀಮತಿ ಬೇಬಿ ಸಾಲ್ಯಾನ್, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಾಗರಾಜ ಕುಂದರ್, ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಸುರೇಶ್ ಕುಂದರ್, ಶ್ರೀ ನಾರಾಯಣ, ಮುಖಂಡರಾದ ಶ್ರೀ ಪ್ರಶಾಂತ್ ಕಾಂಚನ್ ಬೆಂಗ್ರೆ, ಶ್ರೀ ಉಮೇಶ್ ಶೆಟ್ಟಿ, ಶ್ರೀ ಸತೀಶ್ ನಾಯ್ಕ್, ಶ್ರೀ ಚಿನ್ಮಯ ಮೂರ್ತಿ, ಶ್ರೀ ಪ್ರಸಾದ್ ರಾವ್, ಶ್ರೀ ಅಜಿತ್ ಕೊಡವೂರು, ಶ್ರೀ ಕೃಷ್ಣ ಶೆಟ್ಟಿ, ಶ್ರೀ ರುಡಾಲ್ಫ್ ಹಾಗೂ ಒಣ ಮೀನು ಮಾರಾಟಗಾರ ಮಹಿಳೆಯರು ಉಪಸ್ಥಿತರಿದ್ದರು.

  • ಹಿಂಜಾವೇ ನಾಯಕ ಸತೀಶ್ ಪೂಜಾರಿ ಉಡುಪಿ ಜಿಲ್ಲೆ ಪ್ರವೇಶಿಸದಂತೆ ನಿಷೇಧ: ಜಿಲ್ಲಾಧಿಕಾರಿ ಆದೇಶ

    ಉಡುಪಿ, ಜುಲೈ 6, 2025: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ, ರೌಡಿ ಶೀಟರ್ ಸತೀಶ್ ಪೂಜಾರಿ ದಾವಣಗೆರೆ ಎಂಬಾತನಿಗೆ ಜು.7ರಿಂದ ಸೆ.7 ರವರೆಗೆ 2 ತಿಂಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

    ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಜು.7ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗೆ ರೌಡಿ ಶೀಟರ್ ಸತೀಶ್ ಪೂಜಾರಿಯನ್ನು ಪ್ರಮುಖ ಭಾಷಣಕಾರನಾಗಿ ಕರೆಸಿ ಸಮಾಜದ ಸ್ವಾಸ್ತ್ಯ ಕದಡುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

    ಅಲ್ಲದೆ ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಅಲ್ಲಿಯೂ ಸತೀಶ ಪೂಜಾರಿಯನ್ನು ಕರೆಸಿ ಕೋಮು ಪ್ರಚೋಚಕ ಭಾಷಣ ಮಾಡಿಸಿ ಗಲಾಬೆ ಎಬ್ಬಿಸುವ ಹುನ್ನಾರ ಮಾಡಿರುವುದು ತಿಳಿದು ಬಂದಿದೆ.

    ಇವರ ಕೋಮು ಪ್ರಚೋದಕ ಭಾಷಣಗಳಿಂದ ಇನ್ನೊಂದು ಸಮುದಾಯದ ಜನರನ್ನು ಕೆರಳಿಸಿ ಶಾಂತಿ ಕದಡುವ ಸಾಧ್ಯತೆಗಳು ಇರುವುದರಿಂದ ಸತೀಶ್ ಪೂಜಾರಿಗೆ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸುವಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

    ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಎಸ್ಪಿಯ ವರದಿಯನ್ನು ಆಧರಿಸಿ ಮುಂಜಾಗೃತ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.

    ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ಉಡುಪಿ, ಜುಲೈ 6, 2025: ರಾಷ್ಟ್ರೀಯ ಹೆದ್ದಾರಿ 169ಎ ಕೆಳಪರ್ಕಳ ಭಾಗದಲ್ಲಿ ರಸ್ತೆಯ ದುರಾವಸ್ಥೆಯನ್ನು ಖಂಡಿಸಿ ಪರ್ಕಳ ರಸ್ತೆ ಹೋರಾಟ ಸಮಿತಿಯ ವತಿಯಿಂದ ರವಿವಾರ ಪರ್ಕಳ ನಾರಾಯಣಗುರು ಮಂದಿರದ ತಿರುವಿನ ಬಳಿ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಪರ್ಕಳ ಪ್ರದೇಶದ ರಸ್ತೆಗಳ ಹದಗೆಟ್ಟ ಸ್ಥಿತಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತಿದ್ದಾರೆ. ಸತತ ಮಳೆಯ ಕಾರಣ ದಿನದಿಂದ ದಿನಕ್ಕೆ ರಸ್ತೆ ಪರಿಸ್ಥಿತಿ ಹದಗೆಡುತ್ತಿದ್ದು, ಸಂಚಾರಕ್ಕೆ ಬಳಸಲು ಅಸಮರ್ಥವಾಗಿದೆ. ಆದುದರಿಂದ ಕೂಡಲೇ ಅದನ್ನು ಸಂಚಾರ ಯೋಗ್ಯವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

    ಜನಪ್ರತಿನಿಧಿಗಳು ಈ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಮೋಸ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರಸ್ತೆ ಕಾಮಗಾರಿ ವಿವಾದ ಹೈಕೋರ್ಟ್‌ನಲ್ಲಿರುವ ಸಬೂಬು ನೀಡಲಾಗುತ್ತಿದೆ. ನಮಗೆ ಸಮಸ್ಯೆ ಇರುವುದು ಹೈಕೋರ್ಟ್‌ನಲ್ಲಿರುವ ರಸ್ತೆ ಅಲ್ಲ. ಹಳೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಮಗಾರಿ ಮುಗಿಯುವವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಹಳೆ ರಸ್ತೆ ನಿರ್ವಹಣೆಯೇ ಇಲ್ಲ. ಇದರಿಂದ ಸಾರ್ವಜನಿಕರು ಅನಾನುಕೂಲವಾಗುತ್ತಿದೆ. ನಮ್ಮ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದರು.

    ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಪ್ರತಿಭಟನೆ ಯಾವುದೇ ಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧವೂ ಅಲ್ಲ. ನಮಗೆ ನ್ಯಾಯ ಬೇಕು. ಈಗ ಇರುವ ಹಳೆಯ ರಸ್ತೆಯನ್ನೇ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕು. ಇದು ಮೊದಲ ಹಂತದ ಹೋರಾಟ. ರಸ್ತೆ ದುರಸ್ತಿಯಾಗದಿದ್ದರೆ ನಾಲ್ಕು ವಾರಗಳ ಬಳಿಕ ಮತ್ತೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ, ಪ್ರಮುಖರಾದ ಜೈವಿಠಲ್, ಅನ್ಸಾರ್ ಅಹ್ಮದ್, ರಮೇಶ್ ಕಾಂಚನ್, ವೈದ್ಯೆ ಡಾ.ಸುಲತಾ ಭಂಡಾರಿ, ರೋಟರಿ ಕ್ಲಬ್‌ನ ಮಂಜುನಾಥ ಉಪಾಧ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರ್ಕಳ, ಮಂಜುನಾಥ್ ನಗರ ನಿವಾಸಿಗಳು ಉಪಸ್ಥಿತರಿದ್ದರು.