Category: Udupi

  • ಉಡುಪಿ: ಆನ್‌ಲೈನ್ ವಂಚನೆ; ಐಸ್‌ಕ್ರೀಂ ಅಂಗಡಿ ಮಾಲೀಕನಿಗೆ ₹10,000 ನಷ್ಟ

    ಉಡುಪಿ, ಜೂನ್ 29, 2025: ಉಡುಪಿ ತಾಲೂಕಿನ ಕೊರಂಗ್ರಪಾಡಿ ಗ್ರಾಮದ ಜಿಗರ್ಥಾಂಡ ಐಸ್‌ಕ್ರೀಂ ಅಂಗಡಿಯ ಫ್ರಾಂಚೈಸಿ ಮಾಲೀಕರಾದ ಪಿ.ಪಿ. ಗೋಕುಲ್ ರಾಜ್ (31) ಎಂಬವರಿಗೆ ಆನ್‌ಲೈನ್ ವಂಚನೆಯ ಮೂಲಕ ₹10,000 ನಷ್ಟವಾದ ಘಟನೆ ನಡೆದಿದೆ.

    ಪಿರ್ಯಾದಿದಾರರಾದ ಗೋಕುಲ್ ರಾಜ್, ಐಸ್‌ಕ್ರೀಂ ಅಂಗಡಿಯಲ್ಲಿ ದಿನಾಂಕ 27/06/2025ರ ಸಂಜೆ 5:30 ಗಂಟೆಗೆ ಇದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ 9014030651 ಸಂಖ್ಯೆಯಿಂದ ಕರೆ ಮಾಡಿ, ಕಾರ್ಯಕ್ರಮವೊಂದಕ್ಕೆ ₹45,000 ಮೌಲ್ಯದ ಆರ್ಡರ್ ನೀಡುವುದಾಗಿ ತಿಳಿಸಿದ್ದಾನೆ. ಮುಂಗಡವಾಗಿ NEFT ಮೂಲಕ ₹20,000 ಕಳುಹಿಸುವುದಾಗಿ ಆರೋಪಿಯು ಭರವಸೆ ನೀಡಿದ್ದಾನೆ.

    ಕೆಲವು ಸಮಯದ ನಂತರ ಆರೋಪಿಯು ಮತ್ತೆ ಕರೆ ಮಾಡಿ, ತಪ್ಪಾಗಿ ₹30,000 ವರ್ಗಾವಣೆ ಮಾಡಿರುವುದಾಗಿ ಹೇಳಿ, ₹10,000 ವಾಪಸ್ ಕಳುಹಿಸುವಂತೆ ಕೇಳಿದ್ದಾನೆ. ಪಿರ್ಯಾದಿದಾರರು ತಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿದಾಗ, NEFT ವರ್ಗಾವಣೆಯಿಂದ ಹಣವು ಕೆಲವೇ ಸಮಯದಲ್ಲಿ ಖಾತೆಗೆ ಜಮೆಯಾಗಬಹುದು ಎಂದು ಭಾವಿಸಿ, ಆರೋಪಿಯು ಕಳುಹಿಸಿದ ಸ್ಕ್ಯಾನರ್‌ನ ಖಾತೆ ಸಂಖ್ಯೆ 50100167838423 ಮೂಲಕ ₹10,000 ವರ್ಗಾಯಿಸಿದ್ದಾರೆ.

    ಆದರೆ, ನಂತರ ಗೋಕುಲ್ ರಾಜ್‌ರ ಖಾತೆಗೆ ಯಾವುದೇ ಹಣ ಜಮೆಯಾಗದೇ ಇದ್ದು, ಇದು ಆನ್‌ಲೈನ್ ವಂಚನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2025ರಡಿ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2) ಮತ್ತು ಐಟಿ ಕಾಯ್ದೆ ಕಲಂ 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಪುತ್ತೂರು: ಬಿಜೆಪಿ ನಾಯಕನ ಮಗನ ವಿರುದ್ಧ ಸಹಪಾಠಿಯನ್ನು ಪ್ರೀತಿಯ ಆಮಿಷದಡಿ ಲೈಂಗಿಕವಾಗಿ ದುರ್ಬಳಕೆ ಮಾಡಿದ ಆರೋಪ; ಆರೋಪಿ ಪರಾರಿ

    ಪುತ್ತೂರು, ಜೂನ್ 29: ಪುತ್ತೂರಿನ ಬಿಜೆಪಿ ನಾಯಕ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ರಾವ್ ವಿರುದ್ಧ, ಪ್ರೀತಿಯ ಆಮಿಷದಡಿ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ, ಗರ್ಭಿಣಿಯಾಗಿಸಿ, ನಂತರ ವಿವಾಹವಾಗಲು ನಿರಾಕರಿಸಿದ ಗಂಭೀರ ಆರೋಪ ಕೇಳಿಬಂದಿದೆ. ಯುವತಿ ಈಗ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ದಾಖಲಿಸಿದ್ದಾಳೆ.

    ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಕೃಷ್ಣ ರಾವ್ ಮತ್ತು ಸಂತ್ರಸ್ತೆ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಶಾಲೆಯ ನಂತರವೂ ಇವರಿಬ್ಬರ ಸಂಬಂಧ ಮುಂದುವರೆದಿತ್ತು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, ಕೃಷ್ಣ ರಾವ್ ತನ್ನನ್ನು 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಕರೆದು, ವಿವಾಹದ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಆರೋಪಿಸಿದ್ದಾಳೆ.

    2025ರ ಜನವರಿಯಲ್ಲಿ ಮತ್ತೊಮ್ಮೆ ಅವನು ಯುವತಿಯ ಮೇಲೆ ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಯುವತಿಗೆ ತಾನು ಗರ್ಭಿಣಿಯಾಗಿರುವುದು ತಿಳಿದು, ಈ ವಿಷಯವನ್ನು ಕೃಷ್ಣನಿಗೆ ತಿಳಿಸಿದಾಗ, ಅವನು ವಿವಾಹವಾಗಲು ನಿರಾಕರಿಸಿದ್ದಾನೆ.

    ಪುತ್ತೂರಿನ ನಿವಾಸಿಯಾಗಿರುವ ಯುವತಿ, ಕೃಷ್ಣ ರಾವ್ ತನ್ನ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡು, ಹಲವಾರು ಬಾರಿ ತನ್ನ ಮನೆಯಲ್ಲಿ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಗರ್ಭಿಣಿಯಾಗಿರುವ ವಿಷಯ ತಿಳಿದ ನಂತರ, ಯುವತಿ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದಾಳೆ. ಯುವತಿಯ ಕುಟುಂಬವು ಕೃಷ್ಣನ ಕುಟುಂಬವನ್ನು ಸಂಪರ್ಕಿಸಿದಾಗ, ಆರಂಭದಲ್ಲಿ ವಿವಾಹಕ್ಕೆ ಒಪ್ಪಿಗೆ ನೀಡಿದ್ದರೂ, ಕೃಷ್ಣ ನಂತರ ವಿವಾಹವನ್ನು ತಿರಸ್ಕರಿಸಿದ್ದಾನೆ.

    ಜೂನ್ 24ರ ರಾತ್ರಿ ದಾಖಲಾದ ದೂರಿನ ಆಧಾರದ ಮೇಲೆ, ಪುತ್ತೂರು ಪೊಲೀಸರು ಕೃಷ್ಣ ರಾವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64(1) ಮತ್ತು 69ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಕೃಷ್ಣ ರಾವ್ ಪ್ರಸ್ತುತ ಪರಾರಿಯಾಗಿದ್ದು, ಪೊಲೀಸರು ಅವನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಎಫ್‌ಐಆರ್ ಪ್ರಕಾರ, ಕೃಷ್ಣ ರಾವ್ ಯುವತಿಯನ್ನು ವಿವಾಹದ ಆಮಿಷದಡಿ 2024ರ ಅಕ್ಟೋಬರ್ 11ರಂದು ತನ್ನ ಮನೆಗೆ ಕರೆದು, ದೈಹಿಕ ಸಂಬಂಧ ಬಲವಂತವಾಗಿ ಬೆಳೆಸಲು ಯತ್ನಿಸಿದ್ದಾನೆ. ಯುವತಿ ವಿರೋಧಿಸಿದಾಗ, ವಿವಾಹದ ಭರವಸೆ ನೀಡಿ, ವಿಷಯವನ್ನು ಗೌಪ್ಯವಾಗಿಡುವಂತೆ ತಿಳಿಸಿದ್ದಾನೆ. ಜನವರಿಯಲ್ಲಿ ಅವನು ಮತ್ತೊಮ್ಮೆ ಈ ಕೃತ್ಯವನ್ನು ಪುನರಾವರ್ತಿಸಿದ್ದಾನೆ.

    ಯುವತಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದೆ.

  • ಮುಸ್ಲಿಂ ವಿರೋಧಿ ಹೇಳಿಕೆ: ಕಾಂಗ್ರೆಸ್ ಶಾಸಕನ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ: ವಜಾಗೊಳಿಸಲು ಆಗ್ರಹ

    ಉಡುಪಿ, ಜೂನ್ 24, 2025: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ಬಂಡೀಸಿದ್ದೇಗೌಡನ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಖಂಡಿಸಿ ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರ್ ಕಾಂಗ್ರೆಸ್ ಸರಕಾರ ಮುಸ್ಲಿಮರ ವೋಟ್ ಪಡೆದು ನಿರಂತರವಾಗಿ ಮುಸ್ಲಿಮರ ವಿರುದ್ಧವೇ ಕೆಲಸ ಮಾಡಿದೆ. ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧವನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದ ಸಿದ್ಧರಾಮಯ್ಯ ಅಧಿಕಾರ ಹಿಡಿದು 2 ವರ್ಷವಾದರೂ ಅದರ ಬಗ್ಗೆ ಮಾತೆತ್ತುತ್ತಿಲ್ಲ. ಒಂದು ವೇಳೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸದಿದ್ದರೆ ತೀವ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.

    ಎಸ್ ಡಿ ಪಿ ಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಂ ಆದಿ ಉಡುಪಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ ಹಾಗೂ ಮತ್ತಿತರು ಉಪಸ್ಥಿತರಿದ್ದರು.

  • ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    ಉಡುಪಿ: ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಪಿ.ಯು.ಸಿ, ಐ.ಟಿ.ಐ ಹಾಗೂ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in/bcwd ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in/ ಅಥವಾ ಸಹಾಯವಾಣಿ ಸಂಖ್ಯೆ: 805077004 ಹಾಗೂ 8050770005 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಉಡುಪಿ ರೈಲ್ವೆ ಯಾತ್ರಿ ಸಂಘ :ಧೀರಜ್ ಶಾಂತಿ ಅಧ್ಯಕ್ಷರಾಗಿ ಆಯ್ಕೆ, ನೂತನ ಆಡಳಿತ ಮಂಡಳಿ ರಚನೆ

    ಉಡುಪಿ: ಉಡುಪಿ ರೈಲ್ವೆ ಯಾತ್ರಿ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ ಉಡುಪಿಯ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಉಪಾಧ್ಯಕ್ಷರಾದ ಅಜಿತ್ ಕುಮಾರ್ ಶೆಣೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮುಂಬರುವ 2025-27ರ  ವರ್ಷದ ಸಾಲಿನ ಅಧ್ಯಕ್ಷರಾಗಿ ಧೀರಜ್ ಶಾಂತಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಧುಸೂದನ್ ಹೇರೂರು, ಕೋಶಾಧಿಕಾರಿಯಾಗಿ ಅಜಿತ್ ಕುಮಾರ್ ಶೆಣೈ ಉದ್ಯಾವರ ರವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಮಂಜುನಾಥ ಮಣಿಪಾಲ್ ರವರನ್ನು ಮುಂದುವರಿಸಲಾಯಿತು.

    ನಿರ್ದೇಶಕರಾಗಿ ಜಾನ್ ರೆಬೆಲ್ಲೊ, ಸದಾನಂದ ಅಮೀನ್, ಜನಾರ್ದನ್ ಕೋಟ್ಯಾನ್, ಜಯಚಂದ್ರ ರಾವ್,  ಪ್ರಭಾಕರ್ ಆಚಾರ್ಯ.  ರತ್ನ ಶ್ರೀ ಆಚಾರ್ಯ, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಸಿ.ಎಸ್ ರಾವ್, ವೆಂಕಟರಾಜ್ ಭಟ್, ರವಿ ಪೂಜಾರಿ ಹಿರಿಯಡ್ಕ, ಪಿ ಅಪ್ರಾಯ ಶೆಟ್ಟಿಗಾರ್, ಪ್ಲಾಸಿಡ್ ಜೆ.ಪಿ,  ನಾರಾಯಣ್ ಕಾಂಚನ್, ರಘುರಾಮ್ ನಾಯಕ್, ಪಿ.ಎನ್  ರವೀಂದ್ರ, ರವೀಶ್ ಕೋಟ್ಯಾನ್, ಸತೀಶ್ ಪೂಜಾರಿ, ದಿನೇಶ್ ಅಮೀನ್ ಕದಿಕೆ  ಆಯ್ಕೆಯಾದರು. ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿದರು.

  • ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ. ಕೆ ಅಧಿಕಾರ ಸ್ವೀಕಾರ

    ಉಡುಪಿ,ಜೂ.18: ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ರವರು ಅಪರಾಹ್ನ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಂದ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಬೆಂಗಳೂರಿನ ಆರ್. ಡಿ. ಪಿ. ಆರ್ ಇ -ಗವರ್ನೆನ್ಸ್ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಟೈಕ್ಸ್‌ಟೈಲ್ ಇಂಜಿನಿಯರಿಂಗ್‌ನಲ್ಲಿ ಐಐಟಿ ದಿಲ್ಲಿಯಿಂದ ಎಂಟೆಕ್ ಪದವಿ ಪಡೆದಿರುವ ಸ್ವರೂಪ ಅವರು 2025ರ ಫೆಬ್ರವರಿಯಿಂದ ಆರ್‌ಡಿಪಿಆರ್ ಇಲಾಖೆಯಲ್ಲಿ ಇ-ಗವರ್ನೆನ್ಸ್‌ನ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಅದಕ್ಕೆ ಮುನ್ನ ಅವರು ಧಾರವಾಡ ಜಿಲ್ಲಾ ಪಂಚಾಯತ್‌ನಲ್ಲಿ ಸಿಇಓ ಹಾಗೂ ನೇಶನಲ್ ರೂರಲ್ ಲೈಲ್ಲಿಹುಡ್ ಮಿಷನ್‌ನ ಸಿಓಓ ಹಾಗೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.

  • ಉಡುಪಿ: ಖಾಸಗಿ ಬಸ್ ಅಜಾಗರೂಕ ಚಾಲನೆ ವಿಡಿಯೋ ವೈರಲ್; ಚಾಲಕ ಬಂಧನ

    ಉಡುಪಿ, ಜೂ. 18: ಬಸ್ ಚಾಲಕನೊಬ್ಬ ಅಪಾಯಕಾರಿ ಅಜಾಗರೂಕತೆಯ ಚಾಲನೆಯಿಂದ ವಾಹನ ಚಲಾಯಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿರುವ ವಿಡಿಯೋ ಜೂನ್ 17ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಉಡುಪಿ ಸಂಚಾರ ಪೊಲೀಸರು ತನಿಖೆ ನಡೆಸಿ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.

    ಆರೋಪಿ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದೆ. ಇವರು ಶ್ರೀ ದುರ್ಗಾಂಬಾ ಬಸ್ ಅನ್ನು ಎನ್‌ಎಚ್ 169ಎ ಸಾರ್ವಜನಿಕ ರಸ್ತೆಯ ಮೂಲಕ ಉಡುಪಿ ಮಾರ್ಗದಲ್ಲಿ ಚಲಾಯಿಸುತ್ತಿದ್ದರು. ಕರಾವಳಿ ಕಡೆಯಿಂದ ಉಡುಪಿಯ ಕಡೆಗೆ ಚಲಿಸುವಾಗ, ಇವರು ಅಜಾಗರೂಕ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

    ಬಸ್ ನಿಯಂತ್ರಣ ಕಳೆದುಕೊಂಡು ಬನ್ನಂಜೆಯ ಬಳಿ ದಿಢೀರನೆ ಪಕ್ಕಕ್ಕೆ ಸರಿದು ಅಪಾಯಕಾರಿ ರೀತಿಯಲ್ಲಿ ನಿಂತಿದೆ ಎಂದು ವರದಿಯಾಗಿದೆ. ನಂತರ, ಚಾಲಕ ಬಸ್ ಅನ್ನು ಉಡುಪಿಯ ಕಡೆಗೆ ತಪ್ಪಾದ ದಿಕ್ಕಿನಲ್ಲಿ ಚಲಾಯಿಸಿದ್ದಾನೆ ಎನ್ನಲಾಗಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

    ಈ ಸಂಬಂಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ದೇವರಾಜ್‌ನನ್ನು ಬಂಧಿಸಲಾಗಿದ್ದು, ಬಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

  • ಕುಂದಾಪುರ: ಆನ್‌ಲೈನ್ ಟಾಸ್ಕ್ ಹಗರಣ; ಸಾಫ್ಟ್‌ವೇರ್ ಇಂಜಿನಿಯರ್‌ಗೆ 28 ಲ.ರೂ ವಂಚನೆ

    ಕುಂದಾಪುರ, ಜೂ. 17: ಶಿರಿಯಾರ ಗ್ರಾಮದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆನ್‌ಲೈನ್ ಉದ್ಯೋಗ ಹಗರಣದಲ್ಲಿ ಒಟ್ಟು 28,01,095 ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ನಿವಾಸಿ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶಶಿಧರ್ (31) ಎಂಬುವರು ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮೇ 29 ರಂದು, ಅವರಿಗೆ ತಮ್ಮ ಮೊಬೈಲ್ ಫೋನ್‌ಗೆ ಗೂಗಲ್‌ನಲ್ಲಿ ರೆಸ್ಯೂಮ್ ಸಲ್ಲಿಸುವ ಬಗ್ಗೆ ಸಂದೇಶವೊಂದು ಬಂದಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅವರಿಗೆ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ಮರುನಿರ್ದೇಶಿಸಲಾಯಿತು. ಅಲ್ಲಿ ಶರ್ಮಾಯ್ ರಾಣಿ ಎಂಬ ವ್ಯಕ್ತಿ ಅವರನ್ನು ಸಂಪರ್ಕಿಸಿದ್ದಾರೆ.

    ಶರ್ಮಾಯ್ ರಾಣಿ ಅವರು ಶಶಿಧರ್ ಅವರನ್ನು ‘ಕಿಂಗ್ಸ್ ಡಿಜಿಲಕ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಟೆಲಿಗ್ರಾಮ್ ಗುಂಪಿಗೆ ಸೇರಿಸಿದರು. ಅಲ್ಲಿ ಅವರಿಗೆ ಆನ್‌ಲೈನ್ ಕಾರ್ಯಗಳನ್ನು ನೀಡಲಾಯಿತು. ಆರಂಭದಲ್ಲಿ, ದೂರುದಾರರು ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಿ ಹಣವನ್ನು ಪಡೆದರು. ಇದು ಗುಂಪಿನ ಬಗ್ಗೆ ಅವರ ನಂಬಿಕೆಯನ್ನು ಹೆಚ್ಚಿಸಿತು.

    ನಂತರ, ಆರೋಪಿಗಳು ಹಲವಾರು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ, ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಮತ್ತು ಪಾವತಿಗಳನ್ನು ಮಾಡಲು ಸೂಚಿಸಿದರು. ಆರೋಪಿಗಳು ಸೂಚನೆಗಳನ್ನು ನಂಬಿದ ಶಶಿಧರ್ ಮೇ 30 ರಿಂದ ಜೂನ್ 12 ರವರೆಗೆ ಹಲವು ಬಾರಿ ಪಾವತಿ ಮಾಡಿದರು. ಅವರು UPI ಮೂಲಕ 7,93,095 ರೂ. ಮತ್ತು IMPS ಹಾಗೂ ITGRS ಮೂಲಕ 20,08,000 ರೂ. ವರ್ಗಾಯಿಸಿದ್ದಾರೆ. ಈ ಮೂಲಕ ಶಶಿಧರ್ ಒಟ್ಟು 28,01,095 ರೂ. ವರ್ಗಾಯಿಸಿದ್ದಾರೆ.

    ಕಾರ್ಯ ಪೂರ್ಣಗೊಂಡ ನಂತರ ದ್ವಿಗುಣ ಲಾಭ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ ಶಶಿಧರ್ ಹಣ ಪಾವತಿಸಿದ ನಂತರ ಆರೋಪಿಗಳು ಅವರನ್ನು ಸಂಪರ್ಕಿಸದೆ ವಂಚಿಸಿದ್ದಾರೆ.

    ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

  • ಅಧಿಕಾರ ಕಿತ್ತುಕೊಂಡಿದ್ದಾರೆ, ನಾನು ಯಾವ ಅಧಿಕಾರ ಹಸ್ತಾಂತರಿಸಲಿ : ಕಿಶೋರ್ ಕುಮಾರ್ ಕುಂದಾಪುರ

    ಉಡುಪಿ: ಉಡುಪಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕತೆಯ ಗರಿಷ್ಠ ಮಟ್ಟದಲ್ಲಿ ನಾನು ಕೆಲಸ ಮಾಡಿದ್ದೇನೆ. ಇನ್ನು ಯಾವ ರೀತಿಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಕ್ಷ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನಿಂದ ಪಕ್ಷಕ್ಕೆ ಏನು ತೊಂದರೆಯಾಗಿದೆ ಎನ್ನುವುದು ತಿಳಿದಿಲ್ಲ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಬಹಿರಂಗವಾಗಿ ರಾಜ್ಯ ಬಿಜೆಪಿ ಘಟಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶಿಕಾರಿಪುರದಲ್ಲಿ ರಾಜ್ಯಾಧ್ಯಕ್ಷರು ಸಿಕ್ಕಿದ್ದರು, ಚೆಂದ ಮಾಡಿ ಮಾತನಾಡಿಸಿದ್ದರು. ಚೆಂದ ಮಾಡಿ ಮಾತನಾಡಿಸಿದ್ದು ಯಾಕೆ ಎನ್ನುವುದು ನನಗೆ ಮತ್ತೆ ಗೊತ್ತಾಯಿತು ಎಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಪರೋಕ್ಷವಾಗಿ ಅವರು ಸಾತ್ವಿಕ ಕೋಪ ವ್ಯಕ್ತಪಡಿಸಿದರು.

    ನಾನು ಕಾರ್ಯಕರ್ತರ ನಡುವೆಯೇ ಇದ್ದು ಬೆಳೆದು ಬಂದವ. ಇವತ್ತಿಗೂ ನಾನು ಯಾವ ನಾಯಕರ ಬೆನ್ನ ಹಿಂದೆ ತಿರುಗಿದವ ಅಲ್ಲ, ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆಲ್ಲಾ ಮಾಡಿದವನಲ್ಲ. ಪಕ್ಷದ ಕಾರ್ಯಕರ್ತರಿಗೆ ನಾನು ಏನು ಎನ್ನುವುದರ ಬಗ್ಗೆ ಗೊತ್ತಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಕರೆ ಮಾಡಿ ಜಿಲ್ಲಾಧ್ಯಕ್ಷರನ್ನು ಬದಲು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಶಾಸಕರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವುದಿಲ್ಲ ಎಂದಿದ್ದಕ್ಕೆ, ಶಾಸಕರನ್ನೇ ಮಾಡಿ ಯಾರನ್ನೇ ಮಾಡಿ ನನ್ನನ್ನು ಕೈ ಬಿಟ್ಟಾದ ಮೇಲೆ ನನಗೆ ಅದರ ಅವಶ್ಯಕತೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದೆ. ಕರೆ ಇಟ್ಟ ಕೆಲ ಕ್ಷಣಗಳಲ್ಲೇ ಆದೇಶ ಪತ್ರ ಬರುತ್ತದೆ. ಈ ಥರ ಎಲ್ಲಾ ಡೋಂಗಿ ಯಾಕೆ ಮಾಡಬೇಕಿತ್ತು ಎಂದು ಅವರು ಖಾರವಾಗಿಯೇ ಪಕ್ಷದ ರಾಜ್ಯ ಘಟಕದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

    ಪಕ್ಷಕ್ಕಾಗಿ, ಪಕ್ಷದ ಸಂಘಟನೆಗಾಗಿ ಸ್ವಂತ ಹಣ ವ್ಯಯ ಮಾಡಿದ್ದೇನೆ. ಅನೇಕರು ಸಹಾಯ ಮಾಡಿದ್ದಾರೆ. ಪದಾಧಿಕಾರಿಗಳು ನನ್ನೊಂದಿಗೆ ಇದ್ದು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಹಕರಿಸಿದ್ದಾರೆ. ಪಕ್ಷದ ಈ ನಿರ್ಧಾರದಿಂದ ನನಗೆ ಖಂಡಿತ ನೋವಾಗಿದೆ. ನೂತನ ಅಧ್ಯಕ್ಷರಿಗೆ ನನ್ನ ಬೆಂಬಲ ಸದಾ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ಬಹುಶಃ ಜಿಲ್ಲಾಧ್ಯಕ್ಷನ ಅಧಿಕಾರ ವಹಿಸಿಕೊಂಡು ಎಂಟು ತಿಂಗಳು ಎದೆಯುಬ್ಬಿಸಿ ಅಧ್ಯಕ್ಷ ಎಂದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಎಂಟು ತಿಂಗಳಾದ ಮೇಲೆ ಪಕ್ಷದ ವದಂತಿಗಳಲ್ಲೇ ಕಾಲ ಕಳೆಯುವಂತಾಯಿತು. ಅಧ್ಯಕ್ಷನಾಗಿರುವ ಕಾಲದವರೆಗೂ ಪಕ್ಷಕ್ಕಾಗಿ ದುಡಿದ ಹಿರಿಯ ಕಿರಿಯರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದೇನೆ. ಪಕ್ಷದ ಚೌಕಟ್ಟನ್ನು ಮೀರಿ ಯಾವುದನ್ನೂ ಮಾಡಿಲ್ಲ. ಕೆಲವರು ನನ್ನ ಬಗ್ಗೆ ಕೆಟ್ಟದನ್ನು ಮಾತಾಡಿದ್ದಾರೆ. ಅವೆಲ್ಲದಕ್ಕೂ ಸ್ಪಷ್ಟನೆ ಕೊಡಬೇಕಾದ ಯಾವ ಅವಶ್ಯಕತೆಯೂ ನನಗಿಲ್ಲ. ನಾನು ನಾನೇ. ನಾನು ಏನೆಂಬುವುದನ್ನು ನನಗಿಂತ ಹೆಚ್ಚಾಗಿ ಬೇರೆ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿಲ್ಲ. ರಾಜಕಾರಣವನ್ನು ಬಿಟ್ಟು ನನಗೆ ದೊಡ್ಡ ಪ್ರಪಂಚವಿದೆ. ಹೇಗೆ ಬೆಳೆಯಬೇಕು, ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ಬಿಜೆಪಿಯ ಅವಕಾಶಕ್ಕೆ ಧನ್ಯವಾದ ಎಂದು ಹೇಳಿದರು.

    ನಿರ್ಗಮನ ಅಧ್ಯಕ್ಷರಿಗೆ ಸನ್ಮಾನ ಮಾಡುವ ಪದ್ಧತಿ ಇದೆ. ಯಾವ ಸನ್ಮಾನವನ್ನೂ ನಾನು ಸ್ವೀಕರಿಸುವುದಿಲ್ಲ. ಇಲ್ಲಿ ಅಧಿಕಾರ ಹಸ್ತಾಂತರ ಎನ್ನುವುದಲ್ಲ. ಅಧಿಕಾರವನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಹಾಗಾಗಿ ನನ್ನಲ್ಲಿ ಅಧಿಕಾರ ಇಲ್ಲದೇ ಇರುವಾಗ ಅಧಿಕಾರ ಹಸ್ತಾಂತರ ಮಾಡಿದರೇ ತಪ್ಪು ಸಂದೇಶ ರವಾನೆಯಾಗುತ್ತದೆ. ಅಧಿಕಾರ ಹಸ್ತಾಂತರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳು (ಶಾಸಕ ವಿ.ಸುನೀಲ್ ಕುಮಾರ್) ಹಸ್ತಾಂತರ ಮಾಡುತ್ತಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಸಚಿವ, ಕಾರ್ಕಳ ವಿಧಾನಸಭಾ ಶಾಸಕ ವಿ.ಸುನೀಲ್ ಕುಮಾರ್ ಕಾರ್ಕಳ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

    ಇತ್ತೀಚೆಗಷ್ಟೇ, ರಾಜ್ಯದಲ್ಲಿ ಬಾಕಿ ಉಳಿದಿದ್ದ 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ರಾಜ್ಯ ಬಿಜೆಪಿ ನೇಮಕ ಮಾಡಿತ್ತು. ಕಿಶೋರ್ ಕುಮಾರ್ ಕುಂದಾಪುರ ಅವರಲ್ಲಿದ್ದ ಉಡುಪಿ ಜಿಲ್ಲೆಯ ಅಧ್ಯಕ್ಷಗಿರಿಯನ್ನು ಕಿತ್ತು ಕುತ್ಯಾರು ನವೀನ್ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿತ್ತು.

  • ಮುಂದವರಿದ ಮಳೆ – ಜೂ.17ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ

    ಉಡುಪಿ,ಜೂ.16: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಪಿಯುಸಿ ಹಾಗೂ ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ.

    ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

    ಕಳೆದ ಆರು ದಿನಗಳಿಂದ ರೆಡ್‌ ಅಲರ್ಟ್‌ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶನಿವಾರ ಮಳೆ ಕಡಿಮೆಯಿದ್ದುದರಿಂದ ಎಂದಿನಂತೆ ತರಗತಿಗಳು ನಡೆದಿದ್ದವು. ಸೋಮವಾರ ಆರೆಂಜ್‌ ಅಲರ್ಟ್‌ ಇದ್ದುದರಿಂದ ಜಿಲ್ಲಾಡಳಿತ ನೇರವಾಗಿ ರಜೆ ಘೋಷಿಸದೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ನಿರ್ಧಾರವನ್ನು ಶಾಲಾಡಳಿತಕ್ಕೆ ಬಿಟ್ಟಿದ್ದು, ಕೆಲವು ಶಾಲೆಗಳು ಅದಾಗಲೇ ರಜೆಯನ್ನೂ ಘೋಷಿಸಿಕೊಂಡಿದ್ದವು. ಆದರೆ ಅಂತಿಮವಾಗಿ ಜಿಲ್ಲಾಡಳಿತವೇ ರಜೆ ನೀಡಿತ್ತು. ಮಂಗಳವಾರವೂ ಅಧಿಕ ಮಳೆ ಮುನ್ಸೂಚನೆ ಇರುವುದರಿಂದ ರಜೆ ಘೋಷಿಸಲಾಗಿದೆ.