Category: Udupi

  • ಜೂ.16ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ

    ಉಡುಪಿ,ಜೂ.15: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 16ರಂದು ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ.

    ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

    ರಜೆ ಘೋಷಿಸುವ ಪೂರ್ವದಲ್ಲಿ ಸೋಮವಾರ ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಿರಲಿಲ್ಲ. ಆದರೆ ಆಯಾ ಊರಿನ ಪರಿಸ್ಥಿತಿಗೆ ಅನುಗುಣವಾಗಿ ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸಮಿತಿ ಚರ್ಚಿಸಿ ಶಾಲೆಗೆ ರಜೆಯನ್ನು ಘೋಷಿಸಬಹುದಾಗಿದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಭಾನುವಾರ ರಾತ್ರಿ 9 ಗಂಟೆಯ ಬಳಿಕ ಮಳೆ ಪರಿಸ್ಥಿತಿ ಅವಲೋಕಿಸಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಕಳೆದ ನಾಲ್ಕುದು ದಿನಗಳಿಂದ ರೆಡ್‌ ಅಲರ್ಟ್‌ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶನಿವಾರ ಮಳೆ ಕಡಿಮೆಯಿದ್ದುದರಿಂದ ಎಂದಿನಂತೆ ತರಗತಿಗಳು ನಡೆದಿದ್ದವು. ಸೋಮವಾರ ಆರೆಂಜ್‌ ಅಲರ್ಟ್‌ ಇದ್ದುದರಿಂದ ಜಿಲ್ಲಾಡಳಿತ ನೇರವಾಗಿ ರಜೆ ಘೋಷಿಸದೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ನಿರ್ಧಾರವನ್ನು ಶಾಲಾಡಳಿತಕ್ಕೆ ಬಿಟ್ಟಿದ್ದು, ಕೆಲವು ಶಾಲೆಗಳು ಅದಾಗಲೇ ರಜೆಯನ್ನೂ ಘೋಷಿಸಿಕೊಂಡಿದ್ದವು. ಅಂತಿಮವಾಗಿ ಜಿಲ್ಲಾಡಳಿತವೇ ರಜೆ ನೀಡಿದೆ.

  • Udupi: A crane accident, the man died, the woman serious

    Udupi, June 14: In a tragic incident, one person died on the spot and a woman was seriously injured after a crane fell from the cradle to the ground while inspecting the slab leakage site near the Public Works Department office on Udupi Court Road on Saturday.

    Francis Furtado (65), who had called a crane to check for a slab leak at his brother’s house, climbed out of its cradle (bucket) with his maid, Sharada, when the belt on one side of the cradle snapped and they both fell to the ground.

    Social worker Nithyananda Olakadu, who rushed to the spot after learning about the incident, took both of them in his ambulance to Ajjarakadu district hospital. She was admitted to the hospital and her condition is said to be serious.

    Though both of them fell down after the accident, the driver of the crane fled from the spot with the crane.
    A case has been registered in Udupi town police station.

  • ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳಿಗೆ ನಿರ್ಬಂಧ: ಉಡುಪಿ ಜಿಲ್ಲಾಡಳಿತ

    ಉಡುಪಿ, ಜೂನ್ 13, 2025: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ಭಾರಿ ಮಳೆ ಮತ್ತು ಭಾರಿ ವಾಹನಗಳ ಓಡಾಟದಿಂದ ರಸ್ತೆ ಬದಿಯಲ್ಲಿ ಭೂಕುಸಿತದ ಸಂಭವ ಇರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತವು ಜೂನ್ 15, 2025 ರಿಂದ ಸೆಪ್ಟೆಂಬರ್ 30, 2025 ರವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ (Heavy Vehicles) ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

    ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅವರ ನೇತೃತ್ವದಲ್ಲಿ ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಮತ್ತು ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳ 1989ರ ಕಲಂ 221(ಎ)(2) ಹಾಗೂ (5) ಅನ್ವಯ ಈ ನಿರ್ಬಂಧವನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಆಗುಂಬೆ ಘಾಟಿಯಲ್ಲಿ ಕೇವಲ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರುತ್ತದೆ. ಮರಳು ಮತ್ತು ಸರಕು ಸಾಗಾಣಿಕೆ ವಾಹನಗಳ ಸೇರಿದಂತೆ ಭಾರಿ ವಾಹನಗಳು ಬದಲಿ ಮಾರ್ಗವನ್ನು ಬಳಸಬೇಕು.

    ಈ ಆದೇಶವು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಅವರ ಪತ್ರ (ದಿನಾಂಕ: 11-06-2025) ಮತ್ತು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರ ವರದಿ (ದಿನಾಂಕ: 12-06-2025) ಆಧಾರದ ಮೇಲೆ ಹೊರಡಿಸಲಾಗಿದೆ. ಭಾರಿ ಮಳೆಯಿಂದ ರಸ್ತೆಯಲ್ಲಿ ಭೂಕುಸಿತದ ಸಾಧ್ಯತೆ ಇರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಭಾರಿ ವಾಹನಗಳ ಚಾಲಕರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು. ಈ ಆದೇಶದ ಉಲ್ಲಂಘನೆಯಿಂದ ಉಂಟಾಗುವ ಅಡಚಣೆಗಳನ್ನು ತಪ್ಪಿಸಲು ಸಾರ್ವಜನಿಕರಿಗೆ ಸಹಕಾರ ನೀಡುವಂತೆ ಜಿಲ್ಲಾಡಳಿತ ಕೋರಿದೆ.

    ಪರ್ಯಾಯ ಮಾರ್ಗ

    ಕ್ರ.ಸಂಸಂಚಾರ ಮಾರ್ಗಬದಲಿ ಮಾರ್ಗ
    1ಉಡುಪಿ – ತೀರ್ಥಹಳ್ಳಿಉಡುಪಿ – ಕುಂದಾಪುರ – ಸಿದ್ಧಾಪುರ – ಮಾಸ್ತಿಕಟ್ಟೆ – ತೀರ್ಥಹಳ್ಳಿ
    2ಉಡುಪಿ – ತೀರ್ಥಹಳ್ಳಿಉಡುಪಿ – ಕಾರ್ಕಳ – ಮಾಳ ಘಾಟಿ – ಶೃಂಗೇರಿ – ತೀರ್ಥಹಳ್ಳಿ

    ಈ ಆದೇಶದ ಪ್ರತಿಯನ್ನು ಶಿವಮೊಗ್ಗ ಜಿಲ್ಲಾಧಿಕಾರಿಗಳು ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ.

  • ಉಡುಪಿ: ಅನರ್ಹ ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಚೀಟಿ ಒಪ್ಪಿಸಿ ಅಥವಾ ರದ್ದತಿಗೆ ಸಿದ್ಧರಾಗಿ

    ಉಡುಪಿ, ಜೂನ್ 13, 2025: ಉಡುಪಿ ಜಿಲ್ಲಾಡಳಿತವು ಅಂತ್ಯೋದಯ, ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ (BPL) ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಪಡಿತರ ಚೀಟಿ ಪಡೆದಿರುವವರು ತಕ್ಷಣವೇ ತಮ್ಮ ಚೀಟಿಯನ್ನು ಸಂಬಂಧಿತ ತಾಲೂಕು ಕಚೇರಿಯ ಆಹಾರ ಶಾಖೆಯ ಅಧಿಕಾರಿಗಳಿಗೆ ಒಪ್ಪಿಸಿ ರದ್ದುಗೊಳಿಸಿಕೊಳ್ಳಬೇಕೆಂದು (Surrender) ಸೂಚಿಸಲಾಗಿದೆ.

    ಜಿಲ್ಲಾಡಳಿತದ ಪ್ರಕಾರ, ಕೆಲವು ಪಡಿತರ ಚೀಟಿದಾರರು ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಚೀಟಿಗಳನ್ನು ಹೊಂದಿದ್ದಾರೆ, ಇದು ಸರ್ಕಾರಿ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಅಂತಹವರು ತಮ್ಮ ಹೆಚ್ಚುವರಿ ಚೀಟಿಗಳನ್ನು ರದ್ದುಗೊಳಿಸಲು ಆಹಾರ ಶಾಖೆಗೆ ಮಾಹಿತಿ ನೀಡಬೇಕು. ಇದಲ್ಲದೆ, ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಒದಗಿಸಲಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕೆಲವು ಕುಟುಂಬಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ. ಇದು ಕಾನೂನುಬಾಹಿರವಾಗಿದ್ದು, ಇಂತಹ ಚಟುವಟಿಕೆಯಲ್ಲಿ ತೊಡಗಿರುವವರ ಪಡಿತರ ಚೀಟಿಯನ್ನು ತಕ್ಷಣ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

    ಅನರ್ಹರ ವಿವರ:
    ಸರ್ಕಾರಿ ಮಾನದಂಡಗಳ ಪ್ರಕಾರ, ಈ ಕೆಳಗಿನ ಕುಟುಂಬಗಳು ಆದ್ಯತಾ ಪಡಿತರ ಚೀಟಿಗೆ ಅನರ್ಹವಾಗಿವೆ:

    1. ಸರ್ಕಾರಿ/ಸರ್ಕಾರಿ ಸಂಸ್ಥೆಯ ಖಾಯಂ ನೌಕರರು: ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ಅಥವಾ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
    2. ಭೂಮಿ ಮತ್ತು ಆಸ್ತಿ: ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ, ಅಥವಾ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬಗಳು.
    3. ವಾಹನ ಮಾಲೀಕತ್ವ: ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಮುಂತಾದ ಒಂದು ವಾಣಿಜ್ಯ ವಾಹನವನ್ನು ಜೀವನೋಪಾಯಕ್ಕಾಗಿ ಒಡಿಸುವ ಕುಟುಂಬಗಳನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಗಳು.
    4. ಆದಾಯ ಮಿತಿ: ವಾರ್ಷಿಕ ಆದಾಯವು 1.20 ಲಕ್ಷ ರೂ.ಗಿಂತ ಹೆಚ್ಚಿರುವ ಕುಟುಂಬಗಳು.

    ಜಿಲ್ಲಾಡಳಿತವು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ ಮತ್ತು ಅನರ್ಹ ಕುಟುಂಬಗಳು ತಮ್ಮ ಪಡಿತರ ಚೀಟಿಗಳನ್ನು ಒಪ್ಪಿಸದಿದ್ದರೆ, ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

  • ಅಹಮದಾಬಾದ್ ವಿಮಾನ ಪತನ: ಜಮಾಅತ್ ಇಸ್ಲಾಮಿ ಹಿಂದ್ ಸಂತಾಪ

    ಅಹಮದಾಬಾದ್‌ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಸುದ್ದಿ ಕೇಳಿ ನಮಗೆ ತೀವ್ರ ಆಘಾತ ಮತ್ತು ಅತೀವ ದುಃಖವಾಗಿದೆ. ಈ ಘೋರ ದುರ್ಘಟನೆಯಲ್ಲಿ ವಿವಿಧ ದೇಶಗಳ ಪ್ರಯಾಣಿಕರು, ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಅನೇಕ ಅಮಾಯಕ ಜೀವಗಳು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಭಾರತದಲ್ಲಿ ಮತ್ತು ವಿದೇಶದಲ್ಲಿರುವ ಎಲ್ಲಾ ಮೃತರ ಕುಟುಂಬಗಳಿಗೆ ನಮ್ಮ ಅತೀವ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ಅಪಾರ ದುಃಖದ ಸಮಯದಲ್ಲಿ ದೇವನು ಅವರಿಗೆ ಶಕ್ತಿ ಮತ್ತು ಸಹನೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೈನಿಯವರು ಹೇಳಿದ್ದಾರೆ.

    ದುರಂತ ಸ್ಥಳದಿಂದ ಹೊರಹೊಮ್ಮುತ್ತಿರುವ ದೃಶ್ಯಗಳು ನಿಜಕ್ಕೂ ಹೃದಯ ಕಲಕುವಂತಿವೆ. ತಮ್ಮ ಪ್ರೀತಿಪಾತ್ರರ ಗುರುತು ಮತ್ತು ಸುದ್ದಿಗಾಗಿ ಕಾಯುತ್ತಿರುವ ಕುಟುಂಬಗಳ ನೋವನ್ನ ವಿವರಿಸಲು ಪದಗಳಿಲ್ಲ. ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆಯಲ್ಲಿ ಅವಿರತವಾಗಿ ಶ್ರಮಿಸಿದ ಸ್ಥಳೀಯ ಅಧಿಕಾರಿಗಳು, ಪ್ರಥಮ ಪ್ರತಿಸ್ಪಂದಕರು ಮತ್ತು ಸ್ವಯಂಸೇವಕರ ಕಾರ್ಯವನ್ನು ನಾವು ತುಂಬು ಹೃದಯದಿಂದ ಶ್ಲಾಘಿಸುತ್ತೇವೆ.

    ಈ ದುರಂತ ಘಟನೆಗೆ ಕಾರಣಗಳನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಸರ್ಕಾರವು ಸಮಗ್ರ ತನಿಖೆ ನಡೆಸಿ, ಹೊಣೆಗಾರಿಕೆ ಮತ್ತು ಸುರಕ್ಷತೆಯ ಕುರಿತು ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.

    ಜಮಾಅತೆ ಇಸ್ಲಾಮಿ ಹಿಂದ್ ಈ ದುರ್ಘಟನೆಯಿಂದ ಬಾಧಿತರಾದ ಎಲ್ಲಾ ಕುಟುಂಬಗಳಿಗ ಸಂತಾಪವನ್ನು ಸೂಚಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಉಡುಪಿ ಜಿಲ್ಲೆ: ಪೊಲೀಸ್ ಠಾಣೆಗಳಲ್ಲಿ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದಂದು ಬಾಲ ಕಾರ್ಮಿಕರ ಸೇವೆಯನ್ನು ತಡೆಗಟ್ಟುವ ಪ್ರತಿಜ್ಞೆ

    ಉಡುಪಿ, ಜೂನ್ 12, 2025: ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಬಾಲ ಕಾರ್ಮಿಕರ ಸೇವೆಯನ್ನು ಪಡೆಯದಿರುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಈ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆಯಿತು.

    ಪೊಲೀಸ್ ಠಾಣೆಗಳಲ್ಲಿ ಈ ಸಂದರ್ಭದಲ್ಲಿ ಬಾಲ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟುವ ಮತ್ತು ಅವರ ಶಿಕ್ಷಣ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವ ಬಗ್ಗೆ ಒತ್ತು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದ ಪ್ರಮುಖರು ಭಾಗವಹಿಸಿದ್ದರು.

  • ಉಡುಪಿ ಜಿಲ್ಲೆ: ಪೆಟ್ರೋಲ್ ಬಂಕ್‌ಗಳಿಗೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ

    ಉಡುಪಿ, ಜೂನ್ 11, 2025: ಉಡುಪಿ ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್‌ ಮಾಲೀಕರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮಹತ್ವದ ಸೂಚನೆಯೊಂದನ್ನು ಹೊರಡಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿನ ಶೌಚಾಲಯಗಳ ಸ್ವಚ್ಛತೆಯ ಕೊರತೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಾದ ಜಾಕಿ ಡಾ. ಕೆ ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ.

    1. ಶೌಚಾಲಯಗಳ ಸ್ವಚ್ಛತೆ: ಎಲ್ಲಾ ಪೆಟ್ರೋಲ್ ಬಂಕ್‌ಗಳ ಶೌಚಾಲಯಗಳು ಕಡ್ಡಾಯವಾಗಿ ಸ್ವಚ್ಛವಾಗಿರಬೇಕು. ಸ್ಯಾನಿಟೈಸರ್, ಟಾಯ್ಲೆಟ್ ಪೇಪರ್ ಮತ್ತು ಇತರ ಅಗತ್ಯ ವಸ್ತುಗಳು ಯಾವಾಗಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು.
    2. ನೀರಿನ ಸಂಪರ್ಕ: ಶೌಚಾಲಯಗಳಲ್ಲಿ ಸುಸಜ್ಜಿತ ನೀರಿನ ಸಂಪರ್ಕವಿರಬೇಕು.
    3. ಮುಕ್ತ ಪ್ರವೇಶ: ಪೆಟ್ರೋಲ್ ಬಂಕ್‌ಗೆ ಬರುವ ಗ್ರಾಹಕರಿಗೆ ಶೌಚಾಲಯಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಬೇಕು.
    4. ಪ್ರತ್ಯೇಕ ಶೌಚಾಲಯಗಳು: ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ಒದಗಿಸಬೇಕು.

    ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಾರ್ವಜನಿಕ ಜಾಗೃತಿಗಾಗಿ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದಂತೆ ದಿನಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ಪ್ರಸಾರ ಮಾಡಲು ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಉಡುಪಿಗೆ ಸೂಚಿಸಲಾಗಿದೆ.

  • ಉಡುಪಿ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯದ ಅಕ್ಕಿ ವಶಕ್ಕೆ; ಆರೋಪಿಯ ಬಂಧನ

    ಉಡುಪಿ, ಜೂ. 10: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇರಿಸಿದ ಆರೋಪದ ಮೇರೆಗೆ ಜೂನ್ 10ರಂದು ದಾಳಿ ನಡೆಸಿದ ಹಿರಿಯಡ್ಕ ಪೊಲೀಸರು ಸುಮಾರು 1,27,880 ರೂ. ಮೌಲ್ಯದ 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

    ಬೊಮ್ಮರಬೆಟ್ಟುವಿನ ವಾಸುದೇವ ಪ್ರಭು (56) ಬಂಧಿತ ಆರೋಪಿ.

    ಆರೋಪಿಯು ಮಾಂಬೆಟ್ಟು ಎಂಬಲ್ಲಿರುವ ತನ್ನ ಜನರಲ್ ಸ್ಟೋರ್‌ನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಉಡುಪಿಯ ಆಹಾರ ನಿರೀಕ್ಷಕರು ಮತ್ತು ಹಿರಿಯಡಕ ಠಾಣಾ ಪಿಎಸ್‌ಐ ಪುನಿತ್ ಕುಮಾರ್ ಬಿ.ಇ. ಹಾಗೂ ಸಿಬ್ಬಂದಿಗಳಾದ ಆದರ್ಶ, ಕಾರ್ತಿಕ್ ಅವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಅಂಗಡಿಯ ಸಿಟೌಟ್‌ನಲ್ಲಿ ಒಟ್ಟು 131 ಪ್ಲಾಸ್ಟಿಕ್ ಚೀಲಗಳಲ್ಲಿ 1,27,880 ರೂ. ಮೌಲ್ಯದ ಒಟ್ಟು 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿ ದಾಸ್ತಾನು ಮಾಡಲಾಗಿತ್ತು. ಇದನ್ನು ಪರಿಶೀಲಿಸಿದಾಗ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿ ಎಂದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆನ್ನಾಬೈಲ್‌ನಲ್ಲಿ ಬಕ್ರೀದ್ ಸಂಭ್ರಮಾಚರಣೆ

    ಹೆನ್ನಾಬೈಲ್, ಜೂನ್ 07, 2025: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಹೆನ್ನಾಬೈಲ್‌ನ ಜುಮಾ ಮಸೀದಿಯಲ್ಲಿ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು. ಈದುಲ್ ಆಝ್ಹಾ ಪ್ರಾರ್ಥನಾ ಸಭೆಯಲ್ಲಿ ಪ್ರವಾದಿ ಇಬ್ರಾಹಿಮರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಲಾಯಿತು.

    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧರ್ಮಗುರು, “ಪ್ರವಾದಿ ಇಬ್ರಾಹಿಮರು ದೇವನಿಷ್ಠೆ ಮತ್ತು ಶ್ರದ್ಧೆಯ ದೊಡ್ಡ ಸಂಕೇತವಾಗಿ ಲೋಕಕ್ಕೆ ಮೂಡಿಬಂದರು. ಅವರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವುದರಿಂದ ಮನುಷ್ಯನ ಮನಸ್ಸು ಸಂವೇದನಾಶೀಲವಾಗಿ, ಸಾಮಾಜಿಕ ಸಂಬಂಧಗಳು ಸುಗಮವಾಗಲು ಕಾರಣವಾಗುತ್ತದೆ. ಇಬ್ರಾಹಿಮರು ತಮ್ಮ ಜೀವಮಾನವಿಡೀ ಬಡವ-ಶ್ರೀಮಂತ, ಕರಿಯ-ಬಿಳಿಯ ಮುಂತಾದ ಸಾಮಾಜಿಕ ತಾರತಮ್ಯಗಳನ್ನು ತೊಡೆದುಹಾಕಲು ಶ್ರಮಿಸಿದರು. ಮನುಕುಲಕ್ಕೆ ಅವರು ನೀಡಿದ ಕೊಡುಗೆಯನ್ನು ಸೀಮಿತ ಅವಧಿಯಲ್ಲಿ ವಿವರಿಸಲಾಗದು,” ಎಂದರು.

    ಪ್ರಾರ್ಥನಾ ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸೈಯದ್ ರಫೀಕ್, ಉಪಾಧ್ಯಕ್ಷ ಸೈಯದ್ ಆಸೀಫ್, ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ಮಾಜಿ ಅಧ್ಯಕ್ಷ ಸಯ್ಯದ್ ಅಬ್ಬಾಸ್, ಹಸನ್ ಸಾಹೇಬ್, ಅಲಿಯಬ್ಬ, ನಜಿರ್ ಸಾಹೇಬ್, ಹಯಾತ್ ಭಾಷಾ ಸಾಹೇಬ್, ಯೂಸುಫ್ ಖಾದರ್, ಶಬ್ಬೀರ್ ಸಾಹೇಬ್, ಅಮಾನ್ ಜಮಾಲ್, ಆದಮ್ ಸಾಹೇಬ್, ಅಷ್ಪಾಕ್ ಸಾಬ್ಜನ್, ಖಲೀಲ್ ತವಕ್ಕಲ್, ಮುಹಮ್ಮದ್ ರಫೀಕ್, ಖ್ವಾಜಾ ಸಾಹೇಬ್ ಮುಂತಾದವರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ, ಮಕ್ಕಳು ಮತ್ತು ಹಿರಿಯರು ಹೊಸ ಉಡುಪುಗಳನ್ನು ಧರಿಸಿ, ವಿಶೇಷ ನಮಾಜ್‌ನಲ್ಲಿ ಭಾಗವಹಿಸಿದರು. ಬಕ್ರೀದ್ ಹಬ್ಬವು ಸಾಮಾಜಿಕ ಸಾಮರಸ್ಯ, ತ್ಯಾಗ ಮತ್ತು ಸಮರ್ಪಣೆಯ ಮನೋಭಾವವನ್ನು ಎತ್ತಿಹಿಡಿಯುವ ಮಹತ್ವದ ಆಚರಣೆಯಾಗಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು.

  • ಉಡುಪಿ: ಉದ್ಯಾವರದಲ್ಲಿ ಕಾರು ಡಿವೈಡರ್‌ಗೆ ಏರಿ ಅಪಘಾತ, ಮೂವರಿಗೆ ಸಣ್ಣಪುಟ್ಟ ಗಾಯಗಳು

    ಉಡುಪಿ, ಜೂನ್ 6, 2025: ಶುಕ್ರವಾರ, ಜೂನ್ 6ರ ಬೆಳಗಿನ ಜಾವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದ ಕಿಯಾ ಶೋರೂಂ ಬಳಿ ಇತ್ತೀಚೆಗೆ ಖರೀದಿಸಿದ ಎಸ್‌ಯುವಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಏರಿದ ಘಟನೆ ನಡೆದಿದೆ.

    ಈ ವಾಹನವು ಹರಿಯಾಣದ ವ್ಯಕ್ತಿಗಳಿಗೆ ಸೇರಿದ್ದು, ಕೆಲವೇ ದಿನಗಳ ಹಿಂದೆ ಖರೀದಿಸಲಾಗಿತ್ತು ಎಂದು ವರದಿಯಾಗಿದೆ. ಕಾರು ಮಂಗಳೂರಿನಿಂದ ಹರಿಯಾಣಕ್ಕೆ ಪ್ರಯಾಣಿಸುತ್ತಿತ್ತು. ವಾಹನದಲ್ಲಿ ಒಟ್ಟು ಮೂವರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

    ಕಾರು ಮತ್ತು ಡಿವೈಡರ್‌ನ ಕ್ರ್ಯಾಶ್ ಗಾರ್ಡ್‌ಗೆ ಗಣನೀಯ ಹಾನಿಯಾಗಿದೆ.

    ಈ ಘಟನೆಯನ್ನು ಕಾಪು ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.