Category: Udupi

  • ಮೇ 14ರಿಂದ ಉಡುಪಿಯಲ್ಲಿ “ಮಾವು ಮೇಳ-2025”

    ಉಡುಪಿ: ಸೀಕೋ ಮತ್ತು ಯು.ಬಿ. ಫ್ರೂಟ್ಸ್, ಮಂಗಳೂರು ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಐದು ದಿನಗಳ “ಮಾವು ಮೇಳ-2025” ಇದೇ ಮೇ 14 ರಿಂದ 18 ರವರೆಗೆ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ ಎಂದು ಸೀಕೋ ಮತ್ತು ಯು.ಬಿ. ಫ್ರೂಟ್ಸ್ ಪಾಲುದಾರ ಅಬ್ದುಲ್ ಕುಂಞಿ ತಿಳಿಸಿದರು.

    ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 14ರಂದು ಸಂಜೆ 4 ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಅವರು ಮಾವು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

    ಮಾವು ಮೇಳದಲ್ಲಿ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್, ಕಾಲಪ್ಪಾಡಿ ಮಾರಾಟಕ್ಕೆ ಲಭ್ಯವಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಬೆಳೆಯುವ ತಳಿಗಳಾದ ಮಲ್ಲಿಕ,

    ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್ ಬೇಬಿ ಸಹಿತ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲುದಾರರಾದ ಸಮೀರ್, ಸಿದ್ದೀಕ್ ಹಾಗೂ ಮ್ಯಾನೇಜರ್ ಮಹಮ್ಮದ್ ಹ್ಯಾರೀಸ್ ಕುದ್ರೋಳಿ ಉಪಸ್ಥಿತರಿದ್ದರು.

  • ಕಾಪು: ಹಣ್ಣು ವ್ಯಾಪಾರಿಗಳ ಮೇಲೆ ಹಲ್ಲೆ, ಬೆದರಿಕೆ – ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಕಾಪು, ಮೇ 10: ಉಡುಪಿ ಜಿಲ್ಲೆಯ ಕಾಪು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ಮೂವರು ಸಹೋದರರ ಮೇಲೆ ಶಾರೀಕ್‌ ಎಂಬಾತನ ನೇತೃತ್ವದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ದಿನಾಂಕ 09/05/2025 ರಂದು ನಡೆದಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರರಾದ ಬಾಷಾಸಾಬ್ (20), ಕಲಬುರ್ಗಿ ಮೂಲದವರಾಗಿದ್ದು, ಪ್ರಸ್ತುತ ತಮ್ಮ ಪತ್ನಿ, ತಾಯಿ ಹಾಗೂ ಇಬ್ಬರು ತಮ್ಮಂದಿರಾದ ನಬೀಸಾಬ್ (19) ಮತ್ತು ಮಹಮ್ಮದ್‌ ರಫೀಕ್‌ (18) ಜೊತೆಗೆ ಮೂಡನಿಡಂಬೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮೂವರೂ ಸಹೋದರರು ಉಡುಪಿ ಜಿಲ್ಲೆಯ ವಿವಿಧ ಸಂತೆಗಳಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

    ದಿನಾಂಕ 09/05/2025 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ, ಬಾಷಾಸಾಬ್‌ ಮತ್ತು ಮಹಮ್ಮದ್‌ ರಫೀಕ್‌ ಕಾಪು ಮಾರುಕಟ್ಟೆಯಲ್ಲಿ ವಾಹನದಿಂದ ಹಣ್ಣುಗಳನ್ನು ಇಳಿಸುತ್ತಿದ್ದ ವೇಳೆ, ಪಿರ್ಯಾದಿದಾರರ ಬಾಡಿಗೆ ಮನೆಯ ಸಮೀಪದ ನಿವಾಸಿಯಾದ ಶಾರೀಕ್‌ ಎಂಬಾತ KA-19-MF-2667 ಸ್ವಿಫ್ಟ್‌ ಕಾರಿನಲ್ಲಿ ಇಬ್ಬರು ಅಪರಿಚಿತರೊಂದಿಗೆ ಆಗಮಿಸಿದ್ದಾನೆ. ಶಾರೀಕ್‌, ಬಾಷಾಸಾಬ್‌ ಮತ್ತು ರಫೀಕ್‌ ರವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ್ದಾನೆ. ಆಗ ಇಬ್ಬರೂ ಕಾರಿನಲ್ಲಿ ಕುಳಿತಾಗ, ಶಾರೀಕ್‌ ಕಾರನ್ನು ಉಡುಪಿಯತ್ತ ಚಲಾಯಿಸುವಂತೆ ತನ್ನ ಸಹಚರನಿಗೆ ಸೂಚಿಸಿದ್ದಾನೆ.

    ಕಾರಿನಲ್ಲಿ ಚಲಿಸುವಾಗ, ಶಾರೀಕ್‌ ಮತ್ತು ಇನ್ನೊಬ್ಬ ವ್ಯಕ್ತಿ ಬಾಷಾಸಾಬ್‌ರಿಗೆ ಹೊಡೆದಿದ್ದು, ಶಾರೀಕ್‌ ತನ್ನ ಬಳಿಯಿದ್ದ ಚಾಕುವನ್ನು ರಫೀಕ್‌ಗೆ ತೋರಿಸಿ ಬೆದರಿಕೆ ಹಾಕಿದ್ದಾನೆ. ನಂತರ ಉಡುಪಿ APMC ಮಾರುಕಟ್ಟೆಗೆ ತೆರಳಿ, ಅಲ್ಲಿದ್ದ ನಬೀಸಾಬ್‌ನನ್ನೂ ಕಾರಿನಲ್ಲಿ ಕರೆತಂದ ಆರೋಪಿಗಳು, ಮೂವರನ್ನೂ ಮಲ್ಪೆ ಬೀಚ್‌ಗೆ ಕರೆದೊಯ್ದು ಕೈಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ.

    ಅಲ್ಲಿಂದ ಅಂಬಾಗಿಲು ಮಾರ್ಗವಾಗಿ ಮಣಿಪಾಲಕ್ಕೆ ತೆರಳುವಾಗ, ಶಾರೀಕ್‌ ರಫೀಕ್‌ ಜೇಬಿನಲ್ಲಿದ್ದ 1,500 ರೂ. ಹಣವನ್ನು ಕಸಿದುಕೊಂಡು, ಕಾರಿಗೆ ಪೆಟ್ರೋಲ್‌ ಹಾಕಿಸಿಕೊಂಡಿದ್ದಾನೆ. ನಂತರ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ, ಡಿ.ಸಿ ಆಫೀಸ್‌ ಬಳಿ ಕರ್ಕೊಂಡು ಹೋಗಿದ್ದಾರೆ.

    ಮಣಿಪಾಲದ ಕಾಡಿನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಅಲ್ಲಿ ಕೂಡ ಬೆದರಿಕೆಯನ್ನು ಮುಂದುವರಿಸಿದ್ದಾರೆ. ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಅಂಬಾಗಿಲಿಗೆ ಮರಳಿದ ಆರೋಪಿಗಳ ಜೊತೆಗಿದ್ದ ಇಬ್ಬರು ಅಪರಿಚಿತರು ಕಾರಿನಿಂದ ಇಳಿದುಕೊಂಡಿದ್ದಾರೆ.

    ಈ ಘಟನೆಯ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025, ಕಲಂ 140(3), 115(2), 352, 351(2) R/w 3(5) BNS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ಉಡುಪಿ: ಭಾರತ-ಪಾಕ್ ಉದ್ವಿಗ್ನತೆ; ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

    ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಉಡುಪಿಯಾದ್ಯಂತ ಶುಕ್ರವಾರ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಶಾಂತಿ ಮತ್ತು ರಾಷ್ಟ್ರೀಯ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಸಾಮೂಹಿಕ ಪ್ರಾರ್ಥನೆಯ ನಂತರ, ಧಾರ್ಮಿಕ ಮುಖಂಡರು ಮತ್ತು ಸಮುದಾಯದ ಸದಸ್ಯರು ದೇಶದ ಸುರಕ್ಷತೆ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮುದಾಯದ ಮುಖಂಡ ಇಕ್ಬಾಲ್ ಮನ್ನಾ, “ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಅಗತ್ಯವಿದ್ದರೆ, ಭಾರತವು ಅರ್ಧ ಗಂಟೆಯೊಳಗೆ ಕಾರ್ಯನಿರ್ವಹಿಸಬಹುದು” ಎಂದು ಹೇಳಿದರು.

    “ಪಾಕಿಸ್ತಾನದ ಪುನರಾವರ್ತಿತ ಪ್ರಚೋದನೆಗಳನ್ನು ಸಹಿಸಲಾಗುವುದಿಲ್ಲ. ಈ ನಿರ್ಣಾಯಕ ಸಮಯದಲ್ಲಿ, ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ನಮಗೆ ವಕ್ಫ್ ಮಂಡಳಿಯಿಂದಲೂ ಮಾರ್ಗದರ್ಶನ ದೊರೆತಿದೆ. ಆದರೆ ಅದಕ್ಕೂ ಮೊದಲು, ನಾವು ಶಾಂತಿ ಮತ್ತು ದೇಶದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.

    ಜಿಲ್ಲೆಯಾದ್ಯಂತ ಮುಸ್ಲಿಮರು ಮಸೀದಿಗಳಲ್ಲಿ ಸೇರಿ ದೇಶವು ಶೀಘ್ರವಾಗಿ ಶಾಂತಿ ಮತ್ತು ಸ್ಥಿರತೆಗೆ ಮರಳಲಿ ಎಂಬ ಸಂದೇಶವನ್ನು ನೀಡಿದರು. ಈ ಪ್ರಾರ್ಥನೆಯನ್ನು ಕೇವಲ ಸಂಘರ್ಷದಿಂದ ಸುರಕ್ಷತೆಗಾಗಿ ಮಾತ್ರವಲ್ಲದೆ, ಎಲ್ಲಾ ಸಮುದಾಯಗಳ ನಡುವಿನ ಸಾಮರಸ್ಯಕ್ಕಾಗಿ ಮಾಡಲಾಯಿತು.

  • ಕಾರ್ಕಳ: ಕಲ್ಲುಕೋರೆಯಲ್ಲಿ ಸ್ಪೋಟಕ ಸಿಡಿದು ಕಾರ್ಮಿಕನಿಗೆ ಗಂಭೀರ ಗಾಯ

    ಕಾರ್ಕಳ: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಫ್ರಾನ್ಸಿಸ್ ಡಿಸೋಜ ಎಂಬವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ರಾಯಚೂರಿನ ಶಿವರಾಜ್ (27) ಎಂಬ ಕಾರ್ಮಿಕನಿಗೆ ಸ್ಪೋಟಕ ಸಿಡಿದ ಪರಿಣಾಮ ತಲೆಗೆ ಮಾರಣಾಂತಿಕ ಗಾಯವಾಗಿರುವ ಘಟನೆ ನಡೆದಿದೆ. ಈ ಕುರಿತು ಶಿವರಾಜ್‌ರ ಪತ್ನಿ ಪಲ್ಲವಿ (25) ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆಯ ವಿವರಗಳ ಪ್ರಕಾರ, ದಿನಾಂಕ 08/05/2025 ರಂದು ಮಧ್ಯಾಹ್ನ 1:40 ಗಂಟೆಗೆ ಶಿವರಾಜ್ ಮತ್ತು ಇತರ ಕಾರ್ಮಿಕರು ಕಂಪ್ರೆಸರ್ ಬಳಸಿ ಕಲ್ಲುಕೋರೆಯಲ್ಲಿ ಸಿಡಿಮದ್ದು ಸಿಡಿಸಲು ಡ್ರಿಲಿಂಗ್ ಕಾರ್ಯ ನಡೆಸಿದ್ದರು. ಡ್ರಿಲಿಂಗ್ ಮುಗಿಸಿ ಕಲ್ಲುಕೋರೆಯಿಂದ ಹೊರಬಂದು ಕಂಪ್ರೆಸರ್ ಬಳಿ ಕುಳಿತಿದ್ದ ವೇಳೆ, ಕಲ್ಲು ಸಿಡಿಸಲು ಇಟ್ಟಿದ್ದ ಸ್ಪೋಟಕವು ಸಿಡಿದಿದೆ. ಈ ವೇಳೆ ವೇಗವಾಗಿ ಬಂದ ಕಲ್ಲೊಂದು ಕಂಪ್ರೆಸರ್‌ಗೆ ಬಡಿದು, ಶಿವರಾಜ್‌ರ ತಲೆಯ ಎಡಭಾಗಕ್ಕೆ ತಗುಲಿದ್ದರಿಂದ ಗಂಭೀರ ರಕ್ತಗಾಯವಾಗಿದೆ.

    ದೂರಿನಲ್ಲಿ, ಕಲ್ಲುಕೋರೆಯ ಮಾಲಿಕ ಫ್ರಾನ್ಸಿಸ್ ಡಿಸೋಜ ಮತ್ತು ಸ್ಪೋಟಕ ಸಿಡಿಸಿದ ಜೋಸೆಫ್ ರಿಚರ್ಡ್ ಡಿಸೋಜ ಎಂಬವರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2025ರಡಿಯಲ್ಲಿ ಕಲಂ 288, 125(a), 125(b) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

    ಮುಂದಿನ ತನಿಖೆ ನಡೆಯುತ್ತಿದೆ.

  • ತ್ರಾಸಿ-ಮರವಂತೆ ಪ್ರವಾಸೋಧ್ಯಮ ಕೇಂದ್ರವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ಮುತುವರ್ಜಿ ಕ್ರಮ: ಕೇಂದ್ರ ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್

    ಕುಂದಾಪುರ: ಉಡುಪಿ ಜಿಲ್ಲೆ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಲು ಪೂರಕವಾಗಿದೆ. ಮರವಂತೆಯಲ್ಲಿ ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಹಾಗೂ‌ ಮದ್ಯೆ ರಸ್ತೆಯಿದ್ದು ಇದೊಂದು ಅದ್ಭುತ ಪ್ರದೇಶ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಯೋಜನೆ‌ ಸಿದ್ಧಪಡಿಸಿ ನೀಡಿದಲ್ಲಿ ಅಗತ್ಯಕ್ರಮ ವಹಿಸಲಾಗುವುದು ಎಂದು ಕೇಂದ್ರ ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.

    ಗುರುವಾರ ಸಂಜೆ ತ್ರಾಸಿ- ಮರವಂತೆ ಸಮುದ್ರ ತೀರ ವೀಕ್ಷಣೆ ಬಳಿಕ ಅವರು ಇಲ್ಲಿನ ಅಭಿವೃದ್ಧಿ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದರು.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಬೈಂದೂರು ಕ್ಷೇತೃದ ಕೊಲ್ಲೂರು ಸಹಿತ ಮರವಂತೆ, ಸೋಮೇಶ್ವರ ಬೀಚ್ ಅಭಿವೃದ್ಧಿಯ ಕುರಿತು ತಿಂಗಳಿನ ಹಿಂದೆ ಸ್ಥಳೀಯ ಶಾಸಕರು ಹಾಗೂ ಮುಖಂಡರ ಜೊತೆಗೆ ಕೇಂದ್ರ ಪ್ರವಾಸೋಧ್ಯಮ ಸಚಿವರನ್ನು ಭೇಟಿ ಮಾಡಲಾಗಿತ್ತು. ‘ಸಾಸಿ’ ಎನ್ನುವ ಯೋಜನೆಯಡಿ ಪಡುವರಿ-ಸೋಮೇಶ್ವರ, ಮರವಂತೆ ಹಾಗೂ ಕೊಲ್ಲೂರು ದೇವಸ್ಥಾನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬೇಡಿಕೆಯಿಟ್ಟು ಪ್ರಸ್ತಾವನೆ ಕಳಿಸಲಾಗಿತ್ತು. ಗುರುವಾರ ಕೇಂದ್ರ ಮಂತ್ರಿಗಳು ಈ ಮೂರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ನಿರೀಕ್ಷೆಯಿದೆ ಎಂದರು.

    ಇದಕ್ಕೂ ಮೊದಲು ಕೇಂದ್ರ ಸಚಿವರು ಮರವಂತೆಯಲ್ಲಿ ಕೆಲ ತಿಂಗಳ ಹಿಂದೆ ಆರಂಭಗೊಂಡ ಸ್ಕೈ ಡೈನಿಂಗ್ ಏರಿದರು.

    ಈ ಸಂದರ್ಭ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸ್ಥಳೀಯಾಡಳಿತ ಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಇದ್ದರು.

  • ಮಣಿಪಾಲ: ಕುಟುಂಬ ಕಲಹ; ಕಬ್ಬಿಣದ ರಾಡ್ ನಿಂದ ಹಲ್ಲೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಮಣಿಪಾಲ, ಮೇ 8, 2025: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕುಟುಂಬ ವಿವಾದದಿಂದ ಉಂಟಾದ ಘರ್ಷಣೆಯೊಂದರಲ್ಲಿ ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ದಾಳಿ ನಡೆದಿದ್ದು, ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರ ಮೊಹಮ್ಮದ್ ಇರ್ಫಾನ್ (27, ಹೆಜಮಾಡಿ, ಕಾಪು) ತಮ್ಮ ದೂರಿನಲ್ಲಿ ತಿಳಿಸಿರುವಂತೆ, ಆರೋಪಿ ರಫೀಕ್‌ನ ಅಕ್ಕನ ಮಗನಾದ ಇವರಿಗೆ ಆರೋಪಿಗಳೊಂದಿಗೆ ಕುಟುಂಬ ವಿಷಯದಲ್ಲಿ ಹಿಂದಿನಿಂದಲೂ ದ್ವೇಷವಿತ್ತು. ಮೇ 7, 2025ರ ಸಂಜೆ 4:45ರ ಸುಮಾರಿಗೆ, ಇರ್ಫಾನ್ ತಮ್ಮ ಪತ್ನಿ ರೆಹನಾ, ತಂಗಿ ಇಶ್ಮಿನ್ ಮತ್ತು ಮಾವನ ಮಗ ಮಾಝ್‌ನೊಂದಿಗೆ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಶೆಟ್ಟಿಬೆಟ್ಟಿನಲ್ಲಿರುವ ಮಾವನ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳಾದ ರಫೀಕ್, ಸಲ್ಮಾ ಮತ್ತು ರಿಫಾಜ್‌ ಮನೆಗೆ ಬಂದು ಇರ್ಫಾನ್‌ರನ್ನು ಗದರಿಸಿದ್ದಾರೆ.

    ದೂರಿನ ಪ್ರಕಾರ, ರಫೀಕ್‌, “ನೀನು ನಮಗೆ ಭಾರಿ ಮಾತನಾಡುತ್ತೀಯಾ?” ಎಂದು ಕೂಗಿ, ಕಬ್ಬಿಣದ ರಾಡ್‌ನಿಂದ ಇರ್ಫಾನ್‌ರ ಎಡ ತೊಡೆ ಮತ್ತು ಎಡ ಕೈಗೆ ಗಾಯಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಲ್ಮಾ ಚಪ್ಪಲಿಯಿಂದ ಇರ್ಫಾನ್‌ಗೆ ಹೊಡೆದು ಅವಮಾನಿಸಿದ್ದಾರೆ, ಜೊತೆಗೆ ರಿಫಾಜ್‌ ಕೈಯಿಂದ ಹಲ್ಲೆ ನಡೆಸಿದ್ದಾರೆ. ಘರ್ಷಣೆಯ ಸಂದರ್ಭದಲ್ಲಿ ಇರ್ಫಾನ್‌ರ ಪತ್ನಿ, ತಂಗಿ ಮತ್ತು ಮಾಝ್‌ ಜಗಳವನ್ನು ತಡೆಯಲು ಮಧ್ಯಪ್ರವೇಶಿಸಿದಾಗ, ಆರೋಪಿಗಳು ಮಾಝ್‌ನ ಮೇಲೂ ಕೈಯಿಂದ ಹಲ್ಲೆ ಮಾಡಿದ್ದಾರೆ. ರಫೀಕ್‌, “ಇನ್ನು ಮುಂದೆ ನಮ್ಮ ವಿಷಯದ ಬಗ್ಗೆ ಮಾತನಾಡಿದರೆ ಈ ರಾಡ್‌ನಿಂದ ಕೊಂದುಹಾಕುತ್ತೇನೆ,” ಎಂದು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಘಟನೆಯ ಬಳಿಕ ಗಾಯಗೊಂಡ ಇರ್ಫಾನ್ ಮತ್ತು ಮಾಝ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2025ರಡಿಯಲ್ಲಿ ಕಲಂ 118(1), 115(2), 133, 352, 351(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ದೇಶದ ಸೈನಿಕರ ಶೌರ್ಯ, ಪರಾಕ್ರಮಕ್ಕೆ ಅಭಿನಂದನೆ – ಪರ್ಯಾಯ ಪುತ್ತಿಗೆ ಶ್ರೀ

    ಉಡುಪಿ: ಭಾರತದ ಸೈನಿಕರ ಶೌರ್ಯ ಪರಾಕ್ರಮ ಮತ್ತು ಸಾತ್ವಿಕ ನಿಷ್ಠೆಯನ್ನು ಮೆಚ್ಚುತ್ತೇವೆ. ಅವರ ಈ ಸಾಧನೆಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

    ಸೈನಿಕರ ಒಂದು ಉದ್ದೇಶ, ಕಾರ್ಯ ಸಫಲವಾಗಿದ್ದು ಅದಕ್ಕಾಗಿ ಶ್ರೀಕೃಷ್ಣಮುಖ್ಯಪ್ರಾಣರಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಎಲ್ಲವೂ ಶಾಂತಿಯುತವಾಗಿ ನಡೆಯಲಿ. ದೇಶ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

    ಹಲವು ದೇವಸ್ಥಾನಗಳಲ್ಲಿ ಪೂಜೆ

    ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿ ಜಿಲ್ಲಾದ್ಯಂತ ಸಂಭ್ರಮಾಚರಣೆ ನಡೆದಿದೆ.

    ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಜತೆಗೆ ಮನೆ ಮನೆಗಳಲ್ಲೂ ಪೂಜೆ, ಪ್ರಾರ್ಥನೆ, ಸಿಹಿ ವಿತರಣೆ, ಸಂಘ ಸಂಸ್ಥೆಗಳಿಂದ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ಹೀಗೆ ಭಾರತೀಯ ಸೇನೆಯ ಸಾಹಸಕ್ಕೆ ಇಡೀ ಜಿಲ್ಲೆ ಸಂಭ್ರಮಿಸಿದೆ. ದೇಶ ಸುರಕ್ಷಿತವಾಗಿರಲಿ, ಯೋಧರಿಗೆ ಒಳಿತಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಭಾರತೀಯ ಸೈನಿಕರ ಶೌರ್ಯ, ಪರಾಕ್ರಮ ಹಾಗೂ ತಾತ್ವಿಕ ನಿಷ್ಠೆಯನ್ನು ಮೆಚ್ಚಿಕೊಂಡಿದ್ದೇವೆ. ಭಾರತೀಯ ಸೇನೆಯ ಸಾಧನೆ ಅಭಿನಂದನಾರ್ಹ. ಸೈನಿಕರ ಉದ್ದೇಶ ಸಫಲವಾಗಿ ಎಲ್ಲವೂ ಶಾಂತಿಯುವಾಗಿ ನಡೆದು, ಎಲ್ಲರಿಗೂ ಶುಭವಾಗಲಿ ಮತ್ತು ದೇಶ ರಕ್ಷಣೆಯಾಗಲಿ ಎಂಬಂತೆ ಶ್ರೀ ಕೃಷ್ಣ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

    ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ದೇಶದ ಹೆಮ್ಮೆ ಹಾಗೂ ಗೌರವ ಹೆಚ್ಚಿಸಿ ರುವ ಭಾರತೀಯ ಸೇನೆಯ ಸೈನಿಕರ ಶ್ರೇಯಸ್ಸಿಗಾಗಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ತುಪ್ಪದ ದೀಪ ಬೆಳಗಿಸಲಾಯಿತು.

  • ಎಸ್‌.ಎಂ.ಎಸ್‌ ತೃಪ್ತಿ ರಾಷ್ಟ್ರಮಟ್ಟದ ಸಾಧನೆ

    ಬ್ರಹ್ಮಾವರ: 39ನೇ ಸಬ್ ಜೂನಿಯರ್ ‘ಬಾಲಕಿಯರ ರಾಷ್ಟ್ರೀಯ ಹ್ಯಾಂಡ್ ಬಾಲ್ ಚ್ಯಾಂಪಿಯನ್‌ಶಿಪ್ ಕ್ರೀಡಾಕೂಟ’ದಲ್ಲಿ ಬ್ರಹ್ಮಾವರದ ಎಸ್‌.ಎಂ.ಎಸ್‌ ಆಂಗ್ಲ ಮಾಧ್ಯಮ ಶಾಲೆ‌ಯ 8ನೇ ತರಗತಿ ವಿದ್ಯಾರ್ಥಿನಿ ತೃಪ್ತಿ ಬೆಳ್ಳಿ ಪದಕ ಗೆದ್ದಿದ್ದಾಳೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಡ್ಯ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ವತಿಯಿಂದ ನಡೆದ ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 24 ರಾಜ್ಯಗಳು ಭಾಗವಹಿಸಿದ್ದವು. ಫೈನಲ್ಸ್‌ನಲ್ಲಿ ಗುಜರಾತ್ ತಂಡದೊಂದಿಗೆ ಸೆಣೆಸಿದ ಕರ್ನಾಟಕ, ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ಭಾಜನವಾಯಿತು.

    ತೃಪ್ತಿ ರಾಜ್ಯ ತಂಡವನ್ನು ಪ್ರತಿನಿಧಿಸಿ, ರಾಜ್ಯಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾಳೆ. ಇವರು, ಸಾಲಿಗ್ರಾಮ ಚಿತ್ರಪಾಡಿಯ ನಿತ್ಯಾನಂದ ನಾಯರಿ ಮತ್ತು ಜ್ಯೋತಿ ಅವರ ಪುತ್ರಿ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ನಾಯಕ್ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಫಾ. ಎಂ.ಸಿ.ಮಥಾಯ್ ತಿಳಿಸಿದರು.

  • ಮಂಗಳೂರು/ಉಡುಪಿ: ‘ಆಪರೇಷನ್ ಸಿಂಧೂರ್’ ಬೆನ್ನಲ್ಲೇ ಕರಾವಳಿಯಲ್ಲಿ ಹೈಅಲರ್ಟ್‌

    ಮಂಗಳೂರು/ಉಡುಪಿ, ಮೇ. 08: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ’ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ 324 ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಮಂಗಳೂರು, ಮಲ್ಪೆ, ಕಾರವಾರ, ಕುಮಟಾ, ಭಟ್ಕಳ, ಹೆಜಮಾಡಿ, ಹೊನ್ನಾವರ, ಬೇಲೆಕೇರಿ ಮತ್ತು ಗಂಗೊಳ್ಳಿಯಲ್ಲಿ ಸಿಎಸ್‌ಪಿ ಕೇಂದ್ರಗಳು ಸೇರಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 340 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅದರಲ್ಲಿ 180 ಸಿಬ್ಬಂದಿಯನ್ನು ಕರಾವಳಿ ನಿಯಂತ್ರಣ ಪಡೆಗೆ ಸೇರಿಸಲಾಗಿದೆ. 13 ದೋಣಿಗಳು ಮತ್ತು ಜೆಟ್ ಸ್ಕೀ ಗಳನ್ನು ಬಳಸಿಕೊಂಡು 24/7 ಕಣ್ಗಾವಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕರಾವಳಿ ಭದ್ರತಾ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    “ಪಹಲ್ಗಾಮ್ ಘಟನೆಯ ನಂತರ, ನಮ್ಮ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆಯಲ್ಲಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಇಂದು ಕಾರವಾರದಲ್ಲಿ ಅಣಕು ನಾಗರಿಕ ರಕ್ಷಣಾ ಕವಾಯತು ನಡೆಸಲಾಯಿತು. ಸಮುದ್ರದಲ್ಲಿ ಕಾರ್ಯನಿರ್ವಹಿಸುವ ದೋಣಿಗಳನ್ನು ಸಾಮಾನ್ಯ ದಿನಗಳಿಗಿಂತ ಹೆಚ್ಚು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ” ಎಂದು ಅವರು ಹೇಳಿದರು.

    ಮೇ 7 ರಂದು, ಸಿಎಸ್‌ಪಿ ಗಸ್ತು ದೋಣಿಗಳು ಮಂಗಳೂರಿನ ಹಳೆಯ ಬಂದರು ಪ್ರದೇಶದಲ್ಲಿ ಕಣ್ಗಾವಲು ನಡೆಸಿದವು. ಇದರ ಜೊತೆಗೆ, ಸುತ್ತಮುತ್ತಲಿನ ದೋಣಿಗಳನ್ನು ಪರಿಶೀಲಿಸಲು ಅಣಕು ಕಾರ್ಯಾಚರಣೆಯನ್ನು ಸಹ ನಡೆಸಲಾಯಿತು. ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಕರಾವಳಿ ಭದ್ರತಾ ಪೊಲೀಸರು, ಕರಾವಳಿ ಮತ್ತು ಆಳ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಕರಾವಳಿ ಕಾವಲು ಪಡೆ ಹಡಗುಗಳು ಈಗಾಗಲೇ 24×7 ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು, ವಿದೇಶಿ ಹಡಗುಗಳ ಮೇಲೆ ಹೆಚ್ಚಿನ ಕಣ್ಗಾವಲು ನಡೆಸುತ್ತಿವೆ.

    ಲಭ್ಯವಿರುವ ದೋಣಿಗಳ ಸಮೂಹವನ್ನು ಬಳಸಿಕೊಂಡು ನಿರಂತರ ಗಸ್ತು ನಡೆಸಲಾಗುತ್ತಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದರು. ಇಂದು ಮಲ್ಪೆಯಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು. ಇತರ ಜಿಲ್ಲೆಗಳಿಂದ ಬರುವ ದೋಣಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ದೋಣಿಗಳಿಗೆ ದಂಡ ವಿಧಿಸಲಾಗಿದೆ. ಅನುಮಾನಾಸ್ಪದವಾಗಿ ಕಂಡುಬಂದ ಯಾರನ್ನಾದರೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನಾ ಸಮಾವೇಶ ಮುಂದೂಡಿಕೆ

    ಉಡುಪಿ: ಕೇಂದ್ರ ಸರ್ಕಾರವು ಜಾರಿಗೊಳಿಸಲು ಯೋಜಿಸಿರುವ ಸಂವಿಧಾನ ವಿರೋಧಿ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮೇ 13ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಮುಂದೂಡಿದೆ ಎಂದು ಮುಸ್ತಾಕ್ ಹೆನ್ನಾಬೈಲ್ ತಿಳಿಸಿದರು.

    ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತ್ಯತೀತ ಮನೋಭಾವದ ಸಂವಿಧಾನ ಪ್ರೇಮಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು, ಚಿಂತಕರು ಮತ್ತು ಹೋರಾಟಗಾರರು ಒಗ್ಗೂಡಿ, ಹಲವು ಸಿದ್ಧತಾ ಸಭೆಗಳನ್ನು ನಡೆಸಿ, ಪೊಲೀಸ್ ಅನುಮತಿಯೊಂದಿಗೆ ಪ್ರಚಾರ ಕಾರ್ಯ ನಡೆಸಿದ್ದರು. ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸುವ ನಿರೀಕ್ಷೆಯಿತ್ತು. ಪ್ರಚಾರದ ವೇಳೆ ಸಮಾಜದ ಎಲ್ಲ ವರ್ಗದವರಿಂದ ಅಗಾಧ ಬೆಂಬಲ ವ್ಯಕ್ತವಾಗಿತ್ತು,” ಎಂದರು.

    “ಆದರೆ, ಕಾಶ್ಮೀರದ ಪೆಹಲ್ಗಾಮಿನಲ್ಲಿ ನಡೆದ ಉಗ್ರವಾದಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರವಾದಿ ನೆಲೆಗಳ ಮೇಲೆ ನಿಖರ ವೈಮಾನಿಕ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬಲವನ್ನು ನೀಡುವ ಜವಾಬ್ದಾರಿ ನಮ್ಮದು. ಆದ್ದರಿಂದ, ದೇಶದ ವರ್ಚಸ್ಸನ್ನು ಕಾಪಾಡುವ ಸದುದ್ದೇಶದಿಂದ ಪ್ರತಿಭಟನೆಯನ್ನು ಮುಂದೂಡಲು ಸಮಿತಿಯು ನಿರ್ಧರಿಸಿದೆ,” ಎಂದು ಅವರು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ನಾಗೇಶ್ ಉದ್ಯಾವರ, ರಫೀಕ್ ಗಂಗೊಳ್ಳಿ, ರಮೇಶ್ ಕಾಂಚನ್, ರಿಯಾಝ್ ಕೋಡಿ, ಇದ್ರಿಸ್ ಹೂಡೆ, ಅಝೀಜ್ ಉದ್ಯಾವರ, ಇಸ್ಮಾಯಿಲ್ ಕಟಪಾಡಿ, ಅಫ್ವಾನ್ ಹೂಡೆ, ಸುಂದರ್ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು.