Category: Udupi

  • ಮೇ 15ರಿಂದ 17ರವರೆಗೆ ಸುಕ್ಷೇತ್ರ ಗುರುಪುರ ಶ್ರೀಗುರುಮಹಾಕಾಲೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ

    ಉಡುಪಿ: ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ಶ್ರೀಗುರುಮಹಾಕಾಲೇಶ್ವರ ದೇವರ ಬೃಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ ಮೇ. 15ರಿಂದ 17 ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಕುಂಜಾಡಿ ಬೀಡು ನಳಿನ್ ಕುಮಾರ್ ಕಟೀಲು ತಿಳಿಸಿದರು.

    ಈ ಬಗ್ಗೆ ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವೇದ ಕೃಷಿಕ ಬ್ರಹ್ಮ‌ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಪತ್ರಿಷ್ಠಾ ಬ್ರಹ್ಮಕಲಶ ನೆರವೇರಲಿದೆ.

    ಮೇ 16 ರಂದು ಸಂಜೆ ನಡೆಯಲಿರುವ ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭೀಷೇಕ ಕಾರ್ಯದಲ್ಲಿ ಜಾತಿ, ಪಂಗಡ, ಲಿಂಗಭೇದ ಇಲ್ಲದೇ ಭಾಗವಹಿಸಬಹುದಾಗಿದೆ. ದೇವರ ಬೃಹತ್ ಏಕಶಿಲಾ ಮೂರ್ತಿಗೆ ಪಂಚಕಲ್ಯಾಣ ಸ್ವರೂಪದ ಕಲಶಾಭೀಷೇಕವನ್ನು ಸಮರ್ಪಿಸಬಹುದಾಗಿದೆ ಎಂದರು.

    ಮೇ 17 ರಂದು ಸಂಜೆ 6 ಗಂಟೆಗೆ ಶಿವಾನುಭವ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವೇದ ಕೃಷಿಕ ಬ್ರಹ್ಮ‌ಋಷಿ ಕೆ.ಎಸ್.ನಿತ್ಯಾನಂದ ಸಾನಿಧ್ಯ ವಹಿಸಲಿದ್ದಾರೆ. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಯಾಜಿ ನಿರಂಜನ್ ಭಟ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು, ಚಲನಚಿತ್ರ ನಟ, ಸ್ವಾಗತ ಸಮಿತಿ‌ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲ್, ಪ್ರಮುಖರಾದ ಚಂದ್ರಹಾಸ್ ಆಮೀನ್, ಸುಜಾತ ಸದಾಶಿವ, ದಿವಾಕರ್ ಉಪಸ್ಥಿತರಿದ್ದರು.

  • ಉಡುಪಿಯ ಗಾಂಧಿ ಆಸ್ಪತ್ರೆಗೆ 30ರ ಸಡಗರ; ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಗಾಂಧಿ ಆಸ್ಪತ್ರೆಗೆ 30ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಅಜ್ಜರಕಾಡು​ಜಿಲ್ಲಾ ಸರಕಾರಿ ಆಸ್ಪತ್ರೆಯ ​ಜಿಲ್ಲಾ  ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

    ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂ​ಜಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಿಂದ​ ಪಡೆದುದನ್ನು  ಸಮಾಜಕ್ಕೆ ​ಹಂಚುವ ಕೆಲಸವನ್ನು ​ಗಾಂಧಿ ಆಸ್ಪತ್ರೆ ಮಾಡುತ್ತಿದೆ . ನಗರಸಭೆ ಜತೆ ಗಾಂಧಿ ಆಸ್ಪತ್ರೆ ಕೈ​ಜೋಡಿಸಿದ್ದು​, ಎಂ.ಹರಿಶ್ಚಂದ್ರರ​ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.

    ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ, ಆದಾಯದ ಆಧಾರದಲ್ಲಿ ಮಾನವ ಅಭಿವೃದ್ಧಿ ಅಳತೆಗೋಲಾಗಿದ್ದು ಮಡಾಮಕ್ಕಿಯಂತಹ ಕುಗ್ರಾಮದಿಂದ ಬಂದ ಎಂ.ಹರಿಶ್ಚಂದ್ರರ ಸಾಧನೆ  ಅನ್ಯರಿಗೆ ಮಾದರಿ ಎಂದು ಹೇಳಿದರು.

    30ವರ್ಷಗಳ ಹಿಂದೆ ಗೆಳೆಯನ ಜತೆ 25 ಬೆಡ್‍ಗಳಿಂದ ​ಎಂ ಹರಿಶ್ಚಂದ್ರರು ಆರಂಭಿಸಿದ ಆಸ್ಪತ್ರೆ  2002ರಲ್ಲಿ ಸ್ವಂತ ಕಟ್ಟಡ ಹೊಂದಿ, ಐದು ಡಯಾಲಿಸಿಸ್ ಯಂತ್ರ ಅಳವಡಿಸಿದೆ.​  25  ವರುಷಗಳಿಂದ  ಪಂಚಮಿ ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆ, ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ತನಕದ ಮುಖ್ಯರಸ್ತೆಯನ್ನು  ​ಹತ್ತು ವರ್ಷದಿಂದ  ಪ್ರತಿ ಭಾನುವಾರ ಸ್ವಚ್ಚತೆ ಕಾರ್ಯ, ಗಾರ್ಡನ್ ನಿರ್ವಹಣೆ ಮಾಡಲಾಗುತ್ತಿದೆ  ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಡಾ. ವ್ಯಾಸರಾಜ ತಂತ್ರಿ ಹೇಳಿದರು.

    ಉಡುಪಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ​ ಗಾಂಧಿ ಆಸ್ಪತ್ರೆ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ, ನಾನಾ ಕ್ಷೇತ್ರದ ಸಾಧಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಗೌರವಿಸಲಾಯಿತು.

    ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ  ಎಜಿಎಂ ವಾದಿರಾಜ ಭ​ಟ್,  ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ​, ಡಾ. ವಿದ್ಯಾ ವಿ ತಂತ್ರಿ ಉಪಸ್ಥಿತರಿದ್ದರು. ​ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.

  • ಉಡುಪಿ: ಇಂದಿನಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ

    ಉಡುಪಿ: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಕ್ರೋಢೀಕರಿಸಲು ಮೇ 5ರಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಯಲಿದೆ.

    ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದ್ದು, ಪರಿಶಿಷ್ಟ ಜಾತಿಯವರ ಮನೆಗಳಿಗೆ ಮಾತ್ರ ಭೇಟಿ ನೀಡಿ ವಿವರ ಪಡೆಯಲಾಗುವುದು. ಮೇ 5ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ, ಮೇ 19ರಿಂದ 21ರ ವರೆಗೆ ಅಲ್ಲಲ್ಲಿ ಕ್ಯಾಂಪ್ ಮಾಡಿ ದಾಖಲೀಕರಣ ಹಾಗೂ ಮೂರನೇ ಹಂತದಲ್ಲಿ ಆನ್‌ಲೈನ್ ಮೂಲಕ ನಮೂದು ಕಾರ್ಯ ನಡೆಯಲಿದೆ. 2011ರ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 75 ಸಾವಿರ ಪ.ಜಾತಿ ಜನಸಂಖ್ಯೆಯಿದ್ದು, ನಿರ್ದಿಷ್ಟ ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

    ಜಿಲ್ಲೆಯ ಮಾಸ್ಟ‌ರ್ ಟ್ರೈನರ್‌ಗಳಿಂದ 35 ತಾಲೂಕು ಮಟ್ಟದ ಟ್ರೈನರ್‌ಗಳಿಗೆ ತರಬೇತಿ ನೀಡಲಾಗಿದೆ. 1112 ಶಿಕ್ಷಕರು ಹಾಗೂ 112 ಮೇಲ್ವಿಚಾರಕರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಸಮೀಕ್ಷೆ ಕುರಿತ ಮಾಹಿತಿಗೆ 9480843046, ಸಹಾಯವಾಣಿಗೂ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

    ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಸಹಿತ ಯಾವುದಾದರೂ ಒಂದು ದಾಖಲೆ ನೀಡಬೇಕು. ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದಿರುವ 101 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸರಕಾರವೇ ನೀಡಿದೆ. ಮೊಬೈಲ್ ಆ್ಯಪ್ ಮೂಲಕ ಸರ್ವೆ ನಡೆಯಲಿದ್ದು ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಿದೆ.

  • ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಸಂದೇಶ: ಆರೋಪಿ ಬಂಧನ

    ಉಡುಪಿ: ಮೇ 2ರಂದು ಸಂಪುಸಾಲಿನ್ (ಸಂಪು ಎಸ್ ಸಾಣೂರು) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಜಕೀಯ ವೈಷಮ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರಚೋದನಕಾರಿ ಸಂದೇಶ ಹಾಕಿದ ಬೆಂಗಳೂರು ಹೋಮ್ಗಾರ್ಡ್ ಕಚೇರಿಯ ಉದ್ಯೋಗಿ ಸಂಪತ್ ಸಾಲಿಯಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ‘ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ರಾಜಕೀಯ ಪಕ್ಷದ ಮುಖಂಡರ ಹಾಗೂ ಹಿಂದುಗಳಿಗೆ ನೆಮ್ಮದಿ ಎಂದು ಪ್ರಚೋದಿಸಿ ವೈರತ್ವವನ್ನು ಬೆಳಸಿ ದ್ಷೇಷ ಭಾವನೆ ಹರಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

    ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸೂರಜ್ ಕುಕ್ಕುಂದೂರು ಎಂಬವರು ದೂರಿನಂತೆ ಅಪರಾಧ ಕ್ರಮಾಂಕ : 68/2025 ಕಲಂ 353(2) ಬಿಎನ್ಎಸ್ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

    ತನಿಖೆಯ ಬಳಿಕ ಆರೋಪಿ ಬೆಂಗಳೂರಿನ ಹೋಂಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂಪತ್ ಸಾಲಿಯಾನ್ ಎಂಬಾತನನ್ನು ಮೇ 4ರಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

  • ಉಡುಪಿ: ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

    ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದಲ್ಲಿ ಗೌರವಧನ ಆಧಾರದ ಮೇಲೆ ಯುವ ಪರಿವರ್ತಕರ ಹುದ್ದೆಯ ಕರ್ತವ್ಯ ನಿರ್ವಹಿಸಲು ಯಾವುದೇ ಪದವಿ ಅಥವಾ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 21 ರಿಂದ 35 ವರ್ಷದೊಳಗಿನ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಕನ್ನಡ ಸ್ಪಷ್ಠವಾಗಿ ಮಾತನಾಡಬಲ್ಲ, ಸಂವಹನ ಕಲೆ ಕೌಶಲ್ಯ ಹೊಂದಿರುವ ಹಾಗೂ ಸಮುದಾಯದಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುವುದು.

     ಸ್ವ-ವಿವರ ಹಾಗೂ ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

  • ಕುಂದಾಪುರ: ಕಳೆದುಹೋದ ಮೊಬೈಲ್ ಫೋನ್ CEIR ಪೋರ್ಟಲ್ ಮೂಲಕ ಪತ್ತೆ, ಮಾಲೀಕರಿಗೆ ಹಸ್ತಾಂತರ

    ಕುಂದಾಪುರ, ಮೇ 5: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ ಒಂದನ್ನು ಕೇಂದ್ರ ಸರ್ಕಾರದ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್ ಬಳಸಿ ಪತ್ತೆಹಚ್ಚಿರುವ ಉಡುಪಿ ಪೊಲೀಸರು, ಫೋನ್‌ನ ಮಾಲೀಕರಿಗೆ ಯಶಸ್ವಿಯಾಗಿ ಹಿಂದಿರುಗಿಸಿದ್ದಾರೆ.

    ಏನಿದು ಸಿಇಐಆರ್? ಹೇಗೆ ಕೆಲಸ ಮಾಡುತ್ತದೆ?

    ಸಿಇಐಆರ್ ದೂರು ನೀಡುವ ಕಾರ್ಯವಿಧಾನ ಕದ್ದ ಸಾಧನಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅವುಗಳನ್ನು ಬಳಸಲು ಪ್ರಯತ್ನಿಸಿದಾಗ ಪೊಲೀಸರಿಗೆ ಎಚ್ಚರಿಕೆ ನೀಡುತ್ತದೆ. CEIR ಪೋರ್ಟಲ್‌ನಲ್ಲಿ ಸಾಧನ ಮತ್ತು ಅದರ ಮಾಲೀಕರ ಎಲ್ಲಾ ವಿವರಗಳನ್ನು ಒದಗಿಸಿದ ನಂತರ, ಮೊಬೈಲ್ ಸ್ವಯಂಚಾಲಿತವಾಗಿ ನಿರ್ಬಂಧಿಸಲ್ಪಡುತ್ತದೆ. ಹೊಸ ಸಿಮ್ ಕಾರ್ಡ್ ಅನ್ನು ಸೇರಿಸುವ ಮೂಲಕ ಸಾಧನವನ್ನು ಬಳಸುವ ಯಾವುದೇ ಪ್ರಯತ್ನವು ಹೊಸ ಬಳಕೆದಾರರ ಸಂಖ್ಯೆ ಮತ್ತು ಸ್ಥಳ ಮತ್ತು ಇತರ ವಿವರಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.

    ದೂರು ಬಂದ ಬಳಿಕ ಮೊದಲು ಪೊಲೀಸರು ಆ ಸಂಖ್ಯೆಗೆ ಮರಳಿ ಕರೆ ಮಾಡುತ್ತಾರೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಮೊಬೈಲ್ ಫೋನ್ ಸಕ್ರಿಯಗೊಳಿಸುತ್ತಾರೆ. ಇದು ಕದ್ದ ಅಥವಾ ಕಳೆದು ಹೋದ ಫೋನ್ ಎಂದು ತಿಳಿಸುತ್ತಾರೆ. ಮತ್ತು ಅದನ್ನು ಹಿಂತಿರುಗಿಸಬೇಕು ಇಲ್ಲಾ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡುತ್ತಾರೆ. ಇದು ರಿಸೀವರ್ ಬಳಸಿದ ಸಿಮ್ ಕಾರ್ಡ್ ಎಲ್ಲಾ ವಿವರಗಳನ್ನು ಒದಗಿಸುತ್ತದೆ ಮತ್ತು ಪೊಲೀಸರು ಫೋನ್‌ ಸಿಕ್ಕ ವ್ಯಕ್ತಿ ಜೊತೆ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಇಂತಹ ಪ್ರಕರಣದಲ್ಲಿ ಖುದ್ದಾಗಿ ಬಂದು ಫೋನ್‌ ನೀಡುವುದಿಲ್ಲ ಬದಲಿಗೆ ಮೊಬೈಲ್‌ಗಳನ್ನು ಕೊರಿಯರ್‌ಗಳ ಮೂಲಕ ಪೊಲೀಸರಿಗೆ ಹಿಂತಿರುಗಿಸುತ್ತಾರೆ.

    ಮೊಬೈಲ್ ಕಳೆದುಹೋದವರು ದೂರು ದಾಖಲಿಸುವುದು ಹೇಗೆ?

    ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳ ಬಗ್ಗೆ ದೂರು ದಾಖಲಿಸಲು ನಾಗರಿಕರು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

    1. CEIR ಪೋರ್ಟಲ್‌ಗೆ ಭೇಟಿ: www.ceir.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
    2. ದೂರು ದಾಖಲಾತಿ: “Block/Lost Mobile” ಆಯ್ಕೆಯನ್ನು ಆರಿಸಿ, ಅಗತ್ಯವಿರುವ ಮಾಹಿತಿಯಾದ ಫೋನ್‌ನ IMEI ಸಂಖ್ಯೆ, ಮೊಬೈಲ್ ಸಂಖ್ಯೆ, ಕಳೆದ ಸ್ಥಳದ ವಿವರಗಳು ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
    3. ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್: ಕರ್ನಾಟಕದ ನಾಗರಿಕರು KSP ಆ್ಯಪ್‌ನಲ್ಲಿ “e-Lost” ವಿಭಾಗದ ಮೂಲಕ ದೂರು ದಾಖಲಿಸಬಹುದು. ದೂರು ದಾಖಲಾದ ನಂತರ, CEIR ಪೋರ್ಟಲ್ ಮೂಲಕ ಫೋನ್‌ನ IMEI ಸಂಖ್ಯೆಯನ್ನು ತಡೆಯಲಾಗುತ್ತದೆ ಮತ್ತು ಟ್ರ್ಯಾಕಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ.
    4. ಸ್ಥಳೀಯ ಪೊಲೀಸ್ ಠಾಣೆ: ದೂರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿ, ಇದರಿಂದ ಪೊಲೀಸರು CEIR ವ್ಯವಸ್ಥೆಯ ಮೂಲಕ ಫೋನ್ ಪತ್ತೆಗೆ ಕ್ರಮ ಕೈಗೊಳ್ಳಬಹುದು.

    ಈ ಪೋರ್ಟಲ್‌ ಬಳಸಲು ಸಿಮ್ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು

    ಈ ವ್ಯವಸ್ಥೆ ಬಳಸಿಕೊಳ್ಳಲು ಮೊಬೈಲ್ ಮತ್ತು ಸಿಮ್ ಅನ್ನು ಕರ್ನಾಟಕದಲ್ಲಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಕಳೆದು ಹೋದ ಮೊಬೈಲ್ ಅನ್ನು ದೇಶದ ಯಾವುದೇ ಭಾಗಕ್ಕೆ ತೆಗೆದುಕೊಂಡ ಹೋದರೂ ಪತ್ತೆಹಚ್ಚಬಹುದು. ಹಿಂದೆ ರಾಜ್ಯದಲ್ಲಿ ಕಳೆದು ಹೋದ ಮೊಬೈಲ್ಗಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಈಗ ಅದು ಸುಲಭವಾದ ಮಾರ್ಗವಾಗಿದೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಕೊಲ್ಲೂರು ಗಂಗೆ ಕೊರಗ ಮನೆ ಧ್ವಂಸ: ಆರೋಪಿಗಳ ಬಂಧನಕ್ಕೆ ಆಗ್ರಹ

    ಕೊಲ್ಲೂರು: ಯಾವುದೇ ಮಾಹಿತಿ ನೀಡದೇ ಬುಡಕಟ್ಟು ಜನಾಂಗದ ಗಂಗೆ ಕೊರಗ ಎಂಬ ಬಡ ಮಹಿಳೆ 40 ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ಜೆಸಿಬಿ ತಂದು ನೆಲಸಮ ಮಾಡಿ ಧ್ವಂಸಗೊಳಿಸಿರುವ ಜಗದಾಂಭ ಟ್ರಸ್ಟ್‌ ನ ಮಾಲೀಕರಾದ ಪರಮೇಶ್ವರ ಅಡಿಗ ಅವರನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಉಡುಪಿ ಜಿಲ್ಲೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು ಆಗ್ರಹಿಸಿದ್ದಾರೆ.

    ಮಾನವಿಯತೆ ಇಲ್ಲದೇ ಮೃಗಗಳಂತೆ ವರ್ತಿಸುತ್ತಿರುವ, ಬಡವರ ಬದುಕಿನಲ್ಲಿ ಚೆಲ್ಲಾಟ ಆಡುವ ಪರಮೇಶ್ವರ ಅಡಿಗರಂತಹವರಿಗೆ ಕಾನೂನು ಭಯ ಉಂಟಾಗಬೇಕೆಂದರೆ ಅವರ ಬಂಧನ ಆಗಬೇಕು. ಆಗ ಮಾತ್ರ ಇಂತಹವರನ್ನು ಮಟ್ಟ ಹಾಕಲು ಸಾಧ್ಯ.

    ಹೀಗಾಗಿ ಶೀಘ್ರವಾಗಿ ಅವರನ್ನು ಬಂಧಿಸುವಂತೆ ಉಡುಪಿ ಜಿಲ್ಲೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು, ಉಡುಪಿಯ ದಲಿತ ಮುಖಂಡರು ಹಾಗೂ ಜನಪರ ಹೋರಾಟಗಾರರು ಅದ ಜಯ ಮಲ್ಪೆ, ಉಪ್ಪೂರು ಜಿಲ್ಲಾಧ್ಯಕ್ಷರು ಪ.ಜಾತಿ/ ಪ.ಪಂಗಡ ಸಂಘ ಉಡುಪಿ ಗುತ್ತಿಗೆದಾರರರಾದ ಪರಮೇಶ್ವರ, ಅಂಬೇಡ್ಕರ್ ಯುವ ಸೇನೆ ಉಡುಪಿಯ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ , ನರಸಿಂಹ ಹಳಗೇರಿ ಕೆಡಿಪಿ ಸದಸ್ಯರು, ಮಾಜಿ ದರ್ಮದರ್ಶಿಗಳು ಕೊಲ್ಲೂರು, ನಾಗರಾಜ್ ಉಪ್ಪುಂದ ಜಿಲ್ಲಾ ಸಂಘಟನಾ ಸಂಚಾಲಕರು, ಲಕ್ಷ್ಮಣ ಸಂಚಾಲಕರು ಬೈಂದೂರು ನಾಗರಾಜ್ ಸಟ್ವಾಡಿ ಕುಂದಾಪುರ ಇವರು ಜಂಟಿ ಪತ್ರೀಕ ಹೇಳಿಯಲ್ಲಿ ಆಗ್ರಹಿಸಿದ್ದಾರೆ.

  • ದಕ್ಷಿಣ ಕನ್ನಡ, ಉಡುಪಿಯೆಲ್ಲಿ anti-communal ಟಾಸ್ಕ್ ಫೋರ್ಸ್ ಸ್ಥಾಪನೆ

    ಮಂಗಳೂರು, ಮೇ 3: ಇತ್ತೀಚಿನ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಶನಿವಾರ ದಕ್ಷಿಣ ಕನ್ನಡ (ಡಿಕೆ) ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ಮತ್ತು ಇಂತಹ ಘಟನೆಗಳ ಮರುಕಳಿಕೆ ತಡೆಯಲು ಕೋಮುವಾದ ವಿರೋಧಿ ಟಾಸ್ಕ್ ಫೋರ್ಸ್ (anti-communal task force) ರಚನೆಯನ್ನು ಘೋಷಿಸಿದರು.

    “ಈ ಟಾಸ್ಕ್ ಫೋರ್ಸ್ ಅನ್ನು ನಕ್ಸಲ್ ವಿರೋಧಿ ದಳದ ಮಾದರಿಯಲ್ಲಿ ರೂಪಿಸಲಾಗುವುದು,” ಎಂದು ಸಚಿವರು ತಿಳಿಸಿದ್ದು, ಒಂದು ವಾರದೊಳಗೆ ಇದನ್ನು ಸ್ಥಾಪಿಸಲಾಗುವುದು ಎಂದರು. ಈ ಘಟಕಕ್ಕೆ ಕೋಮುವಾದಿ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ, ಒಳಸಂಚುಕಾರರು ಮತ್ತು ಬೆಂಬಲಿಗರನ್ನು ಒಳಗೊಂಡಂತೆ ಕಾನೂನು ಕ್ರಮ ಕೈಗೊಳ್ಳಲು ಪೂರ್ಣ ಕಾನೂನು ಅಧಿಕಾರ ನೀಡಲಾಗುವುದು.

    “ಕೋಮುವಾದಿ ಹಿಂಸಾಚಾರದಲ್ಲಿ ತೊಡಗುವವರು ಅಥವಾ ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಟಾಸ್ಕ್ ಫೋರ್ಸ್‌ಗೆ ಸ್ಪಷ್ಟ ಆದೇಶವಿರುತ್ತದೆ. ಕಾನೂನಿನ ಎಲ್ಲ ಅಧಿಕಾರಗಳನ್ನು ಅವರಿಗೆ ನೀಡಲಾಗುವುದು,” ಎಂದು ಅವರು ಹೇಳಿದರು.

    ಡಾ. ಪರಮೇಶ್ವರ ಅವರು, ಉದ್ವಿಗ್ನ ಭಾಷಣಗಳನ್ನು ಮಾಡುವವರು ಅಥವಾ ಉದ್ದೇಶಪೂರ್ವಕ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    “ಇಂತಹ ಅಂಶಗಳನ್ನು ನಾವು ಕಬ್ಬಿಣದ ಕೈಯಿಂದ ಎದುರಿಸುತ್ತೇವೆ,” ಎಂದು ಅವರು ಎಚ್ಚರಿಕೆ ನೀಡಿ, ಸೂಕ್ಷ್ಮವಾದ ಕರಾವಳಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಖಾತರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

    ಸರ್ಕಾರವು ಜಾಗರೂಕವಾಗಿದ್ದು, ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯಾವುದೇ ಸಾಮುದಾಯಿಕ ಶಕ್ತಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ. “ನಮ್ಮ ಪ್ರಮುಖ ಗುರಿಯು ಈ ಪ್ರದೇಶವು ಶಾಂತಿಯುತವಾಗಿರುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತಿರುವುದು. ಇಂತಹ ಸಾಮುದಾಯಿಕ ಘಟನೆಗಳ ಮರುಕಳಿಕೆಯನ್ನು ತಡೆಯಲು ನಾವು ನಿರ್ಧರಿಸಿದ್ದೇವೆ,” ಎಂದರು.

    ಉದ್ವಿಗ್ನ ಭಾಷಣಗಳಲ್ಲಿ ತೊಡಗಿರುವವರು ಅಥವಾ ವಿಭಜನೆಯ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ರಾಜಿಯಿಲ್ಲದೆ ಎತ್ತಿಹಿಡಿಯಲಾಗುವುದು ಎಂದು ಅವರು ಹೇಳಿದರು.

    ರಾಜ್ಯದಲ್ಲಿ ಪ್ರಸ್ತುತ ನಕ್ಸಲ್ ಉಪಸ್ಥಿತಿಯಿಲ್ಲದ ಕಾರಣ, ನಕ್ಸಲ್ ವಿರೋಧಿ ದಳವನ್ನು ಕ್ರಮೇಣ ಕಡಿಮೆಗೊಳಿಸುವ ಬಗ್ಗೆ ಸರ್ಕಾರ ವಿಚಾರಣೆ ನಡೆಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

  • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಪತ್ರಿಕಾ ಪ್ರಕಟಣೆ

    2024 – 25ನೇ (ಈ ವರ್ಷ) ಸಾಲಿನ SSLC ಮತ್ತು 2nd PUC ಯಲ್ಲಿ 90% ಶೇಕಡಕ್ಕಿಂತ ಅಧಿಕ ಅಂಕ ಪಡೆದಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 90%ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ತಕ್ಷಣ ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. 

    ನಿಬಂಧನೆಗಳು:

    1. ವಿದ್ಯಾರ್ಥಿಗಳು ಅಲ್ಪಸಂಖ್ಯಾತರಾಗಿರಬೇಕು.
    2. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ 90% ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು.
    3. ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯವರಾಗಿರಬೇಕು.
    4. ವಿದ್ಯಾರ್ಥಿಗಳು ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ: https://forms.gle/6EjXiAUWjmABw7sf8
    5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮೇ 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಝಮೀರ್ ಅಹ್ಮದ್ ರಶಾದಿ (ಸಂಚಾಲಕರು) 9880122968

    _______________💐_______________

    ಮುಷ್ತಾಕ್ ಅಹ್ಮದ್ ಬೆಳ್ವೆ

    ಜಿಲ್ಲಾಧ್ಯಕ್ಷರು 

    ಝಹೀರ್ ನಾಖುದಾ ಗಂಗೊಳ್ಳಿ

    ಪ್ರಧಾನ ಕಾರ್ಯದರ್ಶಿ 

    ನಕ್ವಾ ಯಾಹ್ಯ ಮಲ್ಪೆ

    ಕೋಶಾಧಿಕಾರಿ

  • ಕಾರ್ಕಳದಲ್ಲಿ ಮತ್ತೆರಡು ಕಲ್ಲು ತೂರಾಟ ಪ್ರಕರಣಗಳು ವರದಿ

    ಕಾರ್ಕಳ, ಮೇ 03: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಕಾರ್ಕಳ ತಾಲೂಕಿನಲ್ಲಿ ಮತ್ತೆರಡು ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿವೆ.

    ಮೊದಲ ಘಟನೆಯಲ್ಲಿ, ಇಬ್ಬರು ಮುಸುಕುಧಾರಿ ವ್ಯಕ್ತಿಗಳು ತಮಿಳುನಾಡು ನೋಂದಾಯಿತ ಮೀನುಗಾರಿಕಾ ಟ್ರಕ್‌ನ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದಾರೆ. ಈ ಟ್ರಕ್ ಮಲ್ಪೆಯಿಂದ ಮೀನು ತುಂಬಿಸಿಕೊಂಡು ತಮಿಳುನಾಡಿಗೆ ತೆರಳುತ್ತಿತ್ತು. ಕೆಮರು ಪರ್ಪಲೆ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 15,000 ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

    ಇನ್ನೊಂದು ಘಟನೆಯಲ್ಲಿ, ಕಾರ್ಕಳದಿಂದ ಬೆಳ್ಮಣ್‌ಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗದ ಗಾಜಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಿ ಹಾನಿಗೊಳಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 45,000 ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.