ಕಾರವಾರ, ಜೂನ್ 06, 2025: ಕಾರವಾರ ನಗರದ ಕೋಡಿಬಾಗ ನಾಯಿಕಟ್ಟಾದ ಶ್ರೀ ಸಾಯಿಮಂದಿರದಲ್ಲಿ ದಿನಾಂಕ 15.04.2025 ರಂದು ರಾತ್ರಿ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿ, ಮೂರ್ತಿಯ ಮೇಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳ್ಳರು ಕದ್ದ ಘಟನೆಗೆ ಸಂಬಂಧಿಸಿದಂತೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಶ್ರೀ ಸಂತೋಷ ರಾಘೋಬಾ ನಾಯ್ಕ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಕಾರವಾರ ಶಹರ ಪೊಲೀಸ್ ಠಾಣೆಯ ತನಿಖಾ ತಂಡವು ತಕ್ಷಣ ಕಾರ್ಯಪ್ರವೃತ್ತವಾಗಿ, ಈ ಗಂಭೀರ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಯಿತು. ಶಹರ ಪೊಲೀಸ್ ಠಾಣೆಯ ಆಗೀನ ಪ್ರಭಾರಿ ಪೊಲೀಸ್ ನಿರೀಕ್ಷಕ ಶ್ರೀ ಯು.ಹೆಚ್. ಸಾತೇನಹಳ್ಳಿ, ಉಪ-ನಿರೀಕ್ಷಕ ಶ್ರೀ ರವೀಂದ್ರ ಬಿರಾದರ ನೇತೃತ್ವದ ತಂಡವು ಕಾರವಾರ, ಗೋವಾ, ಮಧ್ಯಪ್ರದೇಶದ ಖೊಂಡವಾ, ದೆಹರಾದೂನ್, ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಆರೋಪಿಗಳನ್ನು ಪತ್ತೆಹಚ್ಚಿತು.
ಬಂಧಿತ ಆರೋಪಿಗಳ ವಿವರ:
- ಕುಲವಂತ ಸಿಂಗ್ @ ರಾಜು, 40 ವರ್ಷ, ಆಟೋ ಚಾಲಕ, ಸ್ಥಳ: ಪತ್ತೆಗಂಜ್, ಗದರಪುರ (ಉದಯಸಿಂಗ್ ನಗರ, ಉತ್ತರಾಖಂಡ).
- ರೇಶಮ ಸಿಂಗ್ @ ರಿಂಕೂ, 34 ವರ್ಷ, ಕೃಷಿಕ, ಸ್ಥಳ: ಗೋಟಾ, ಸಿತಾರಗಂಜ್ (ಉದಂಸಿಂಗ್ ನಗರ, ಉತ್ತರಾಖಂಡ).
- ತ್ರಿಲೊಕ ಸಿಂಗ್, 32 ವರ್ಷ, ಆಟೋ ಚಾಲಕ, ಸ್ಥಳ: ಲತಿಶುರ, ಪಸ್ಥಿನಾಮರ, ಮೀರತ್ (ಉತ್ತರ ಪ್ರದೇಶ).
ಈ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ವಸ್ತುಗಳು ಮತ್ತು ಕದ್ದ 6 ಕೆ.ಜಿ. ಬೆಳ್ಳಿಯ ಛತ್ರಿ (ಅಂದಾಜು ಮೌಲ್ಯ 5,50,000 ರೂ.) ಸೇರಿದಂತೆ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಖ್ಯಾತ ಅಂತರರಾಜ್ಯ ಕಳ್ಳರ ತಂಡ: ಬಂಧಿತ ಆರೋಪಿಗಳು ಹರಿಯಾಣ, ಪಂಜಾಬ್, ದೆಹರಾದೂನ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಚಂಡೀಗಡ, ಉತ್ತರ ಪ್ರದೇಶ, ಮತ್ತು ಕರ್ನಾಟಕದ ಪ್ರಮುಖ ನಗರಗಳ ದೇವಸ್ಥಾನಗಳು, ಮನೆಗಳು, ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುವ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡದ ಸದಸ್ಯರಾಗಿದ್ದಾರೆ.
ತನಿಖಾ ತಂಡದ ಮಾರ್ಗದರ್ಶನ: ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲು ಶ್ರೀ ನಾರಾಯಣ ಎಂ., ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ, ಕಾರವಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ, ಶ್ರೀ ಜಗದೀಶ ಎಂ., ಡಿವೈ.ಎಸ್.ಪಿ. ಶ್ರೀ ಎಸ್.ವಿ. ಗಿರೀಶ, ಪೊಲೀಸ್ ನಿರೀಕ್ಷಕರಾದ ಶ್ರೀ ರಮೇಶ ಶಂ. ಹೂಗಾರ, ಶ್ರೀ ಯು.ಹೆಚ್. ಸಾತೇನಹಳ್ಳಿ, ವೈರ್‌ಲೆಸ್ ವಿಭಾಗದ ಪೊಲೀಸ್ ನಿರೀಕ್ಷಕ ಶ್ರೀ ಸತೀಶ ಕುಮಾರ ಕೆ.ವಿ., ಬೆರಳಚ್ಚು ಘಟಕದ ಶ್ರೀ ರಾಘವೇಂದ್ರ ನಾಯ್ಕ್, ಮತ್ತು ಇತರ ಸಿಬ್ಬಂದಿಗಳಾದ ಶ್ರೀ ಸುಬ್ರಮಣ್ಯ, ಅಂಗಜ್ಜ ಡಿ., ರವೀಂದ್ರ ಬಿರಾದರ, ಮಂಜುನಾಥ ಪಾಟೀಲ, ಕುಮಾರ ಕಾಂಬಳೆ, ಸೂರಣ ಕೊಠಾರಕರ, ಹಸನ ಕುಟ್ಟಿ, ಗಿರಿಶಯ್ಯ ಎಂ.ಎಸ್., ರಾಜೇಶ ನಾಯಕ, ಅರ್ಜುನ ದೇಸಾಯಿ, ಮಕ್ತುಮಸಾಬ್ ಫತ್ತೇಖಾನ್, ಪ್ರಕಾಶ ದಂಡಪ್ಪನವರ, ಪ್ರತಾಪಕುಮಾರ ಎಂ., ಸಿ.ಡಿ.ಆರ್. ವಿಭಾಗದ ಶ್ರೀ ಬಬನ್ ಕದಂ, ಮತ್ತು ಉದಯ ಗುಣಗಾ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೊಲೀಸ್ ಅಧೀಕ್ಷಕರಿಂದ ಶ್ಲಾಘನೆ: ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.