Category: Honnavar

  • ಉತ್ತರ ಕನ್ನಡದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ: ಪೊಲೀಸರಿಂದ ವಿವಿಧ ಕಡೆ ಅರಿವು ಕಾರ್ಯಕ್ರಮ

    ಕಾರವಾರ, ಜೂನ್ 24, 2025: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

    ಮಂಕಿ: ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನ ಕಟ್ಟದ ಗ್ರಾಮದ ಜನರಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

    ಹೊನ್ನಾವರ: ಕಾಸರಕೊಡದ ಟೊಂಕ ಬಂದರಿನಲ್ಲಿ ಸಾರ್ವಜನಿಕರಿಗೆ 112 ಸಹಾಯವಾಣಿಯ ಮಾಹಿತಿಯೊಂದಿಗೆ ಮಾದಕ ದ್ರವ್ಯ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

    ಹೊನ್ನಾವರ

    ಸಿದ್ದಾಪುರ: ಹಾಳದಕಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಚೇತನ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳು, ಸಂಚಾರ ನಿಯಮಗಳು ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಾಯಿತು.

    ಸಿದ್ದಾಪುರ

    ಚಿತ್ತಾಕುಲ: ಅಸ್ನೋಟಿಯ ಶಿವಾಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಚಿತ್ತಾಕುಲ

    ಭಟ್ಕಳ: ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಯಿತು.

    ಭಟ್ಕಳ

    ಕಾರವಾರ: ಸಿದ್ದರ ಮಲ್ಲಿಕಾರ್ಜುನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಈ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಯುವಕರು ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಹೆಚ್ಚಿಸುವ ಗುರಿಯನ್ನು ಹೊಂದಿದ್ದವು.

  • ಉತ್ತರ ಕನ್ನಡ: ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ; ಅಂಗನವಾಡಿಗಳಿಗೆ ರಜೆ ಘೋಷಣೆ

    ಕಾರವಾರ, ಮೇ 28,2025: ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 28, 2025ರ ಮಧ್ಯಾಹ್ನ 1:00 ಗಂಟೆಯಿಂದ ಮೇ 29, 2025ರ ಬೆಳಗ್ಗೆ 8:30 ಗಂಟೆಯವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಕ್ಕಳ ಹಿತದೃಷ್ಟಿಯಿಂದ ಮತ್ತು ಯಾವುದೇ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಮೇ 29, 2025ರಂದು (ನಾಳೆ) ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ.

    𝕏 |Devaraj Bhatkal

    ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಈಗಾಗಲೇ ರಜೆಯಲ್ಲಿರುವುದರಿಂದ ಅವುಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಆದರೆ, ಅಂಗನವಾಡಿಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಡುಗಡೆಯಾದ ಪತ್ರಿಕಾ ಪ್ರಕಟಣೆ ತಿಳಿಸಿದೆ.

    ಸಾರ್ವಜನಿಕರು ಮಳೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

  • ಹೊನ್ನಾವರ: ಅಕ್ರಮ ಜಾನುವಾರು ಸಾಗಾಟ: ಮೂವರು ಬಂಧನ, 19 ಜಾನುವಾರುಗಳ ವಶ

    ಹೊನ್ನಾವರ, ಮೇ 25, 2025: ಶನಿವಾರ ಬೆಳಗಿನ ಜಾವದಲ್ಲಿ ಹೊನ್ನಾವರದಿಂದ ಭಟ್ಕಳದ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಭರಮಪ್ಪ ಬೆಳಗಲಿ ನೇತೃತ್ವದ ತಂಡವು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಸುಮಾರು 5.70 ಲಕ್ಷ ರೂಪಾಯಿ ಮೌಲ್ಯದ 19 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಾಗಾಟಕ್ಕೆ ಬಳಸಿದ ವಾಹನವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.

    ಬಂಧಿತ ಆರೋಪಿಗಳು ಹಾವೇರಿಯ ಚೇತನ ನಂದೀಶ ಕಡ್ಲಿ (26), ಸಂತೋಷ ದ್ಯಾನಪ್ಪ ಬೋರದ (25) ಮತ್ತು ಗದಗ ನಿವಾಸಿ ದುರ್ಗಪ್ಪ ಫಕ್ಕೀರಪ್ಪ ಛಲವಾದಿ (50). ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ಅಣ್ಣಪ್ಪ ನಾಯ್ಕ, ರಾಮಯ್ಯ ನಾಯ್ಕ, ಬಸವನಗೌಡ ಪಾಟೀಲ ಮತ್ತು ಚಾಲಕ ದೇವರಾಜ ಮೊಗೇರ ಪಾಲ್ಗೊಂಡಿದ್ದರು.

    ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.