Category: Uttara Kannada

  • ಶಿರಸಿ: ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಪ್ರದಾನ

    ಶಿರಸಿ, ಜೂಲೈ 8, 2025: ಶಿರಸಿ ಉಪವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳ ಪತ್ತೆ, ತನಿಖೆಯಲ್ಲಿ ಸಹಾಯಕರಾಗಿ, ಠಾಣಾ ಬರಹಗಾರರಾಗಿ, ಪ್ರೊಸೆಸ್ ಜಾರಿ, ಕೋರ್ಟ್ ಮಾನಿಟರಿಂಗ್ ಕಾರ್ಯಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವರ ಸಮರ್ಪಿತ ಸೇವೆಯನ್ನು ಮೆಚ್ಚಿ ಪ್ರಶಂಸನಾ ಪತ್ರವನ್ನು ಪ್ರದಾನ ಮಾಡಲಾಯಿತು.

  • ಕಾರವಾರ: ಅಕ್ರಮ ಗೋಮಾಂಸ ಸಾಗಾಟ: ಆರೋಪಿಗಳ ಬಂಧನ, 3930 ಕೆಜಿ ಗೋಮಾಂಸ ವಶ

    ಕಾರವಾರ, ಜೂಲೈ 8, 2025: ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 4(ಎ) ಕುಸಿತಗೊಂಡಿರುವ ಕಾರಣ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ, ದಿನಾಂಕ 07-07-2025ರಂದು ರಾಮನಗರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಮಹಂತೇಶ ಉದಯ ನಾಯಕ್ ಅವರು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ, ರಾಮನಗರದ ಶಿವಾಜಿ ಸರ್ಕಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಶ್ರೀ ರಾಜಪ್ಪ ದೊಡ್ಡಮನಿ ಅವರು ಬೆಳಗಾವಿಯಿಂದ ಬಂದ ಟಾಟಾ ಯೋಧಾ ವಾಹನ (ನಂ: ಕೆಎ-25/ಎಬಿ-6640)ವನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ, ಚಾಲಕ ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಅನಮೋಡ ಕಡೆಗೆ ತೆರಳಿದ್ದಾನೆ.

    ಚಾಲಕನ ಸಂಶಯಾಸ್ಪದ ನಡವಳಿಕೆಯ ಬಗ್ಗೆ ಪಿಎಸ್‌ಐಗೆ ಮಾಹಿತಿ ನೀಡಿದಾಗ, ರಾಮನಗರದ ಜಾಮೀಯಾ ಮಸೀದಿ ಬಳಿ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ವಾಹನದಲ್ಲಿದ್ದ ಆರೋಪಿತರಾದ ಚಾಲಕ ಸಿದ್ದಪ್ಪ ಬಾಳಪ್ಪ ಬೂದ್ದೂರ ಮತ್ತು ಕ್ಲೀನರ್ ರಾಜು ಬಾಳು ನಾಯ್ಕ ಇವರು ವಾಹನದಲ್ಲಿ ದನದ ಮಾಂಸವಿದೆ ಎಂದು ತಿಳಿಸಿದರು. ಪಂಚರ ಸಮಕ್ಷಮದಲ್ಲಿ ವಾಹನವನ್ನು ಪರಿಶೀಲಿಸಿದಾಗ 3,930 ಕೆ.ಜಿ. ದನದ ಮಾಂಸ ಕಂಡುಬಂದಿದ್ದು, ಇದರ ಅಂದಾಜು ಮೌಲ್ಯ 6,75,500 ರೂ. ಆಗಿದೆ. ಆರೋಪಿತರನ್ನು ವಿಚಾರಿಸಿದಾಗ, ಈ ಸ್ವತ್ತು ಬೆಳಗಾವಿಯ ಅಮೋಲ ಮೋಹನದಾಸ್‌ಗೆ ಸೇರಿದ್ದು, ದನದ ಮಾಂಸವನ್ನು ಬೆಳಗಾವಿಯಿಂದ ಗೋವಾಕ್ಕೆ ಸಾಗಿಸಿ ಮಾರಾಟ ಮಾಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ.

    ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿ, 3,930 ಕೆ.ಜಿ. ದನದ ಮಾಂಸ (ಮೌಲ್ಯ 6,75,500 ರೂ.) ಮತ್ತು ಟಾಟಾ ಯೋಧಾ ವಾಹನ (ನಂ: ಕೆಎ-25/ಎಬಿ-6640, ಮೌಲ್ಯ 8,00,000 ರೂ.)ವನ್ನು ಜಪ್ತು ಮಾಡಿಕೊಂಡಿದ್ದಾರೆ. ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 68/2025ರ ಅಡಿಯಲ್ಲಿ ಕರ್ನಾಟಕ ಗೋವುಗಳ ಕಡಿತ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 7, 12 , ಕಲಂ 325 ಭಾರತೀಯ ನ್ಯಾಯ ಸಂಹಿತೆ, IMV 192 (a)ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

  • ಹೊನ್ನಾವರ: ಕುಡಿದು ಬೈಕ್ ವೀಲಿಂಗ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

    ಹೊನ್ನಾವರ, ಜೂಲೈ 8, 2025: ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕಿ ಮೀನು ಮಾರುಕಟ್ಟೆಯಿಂದ ರೈಲ್ವೆ ಕ್ರಾಸ್‌ವರೆಗಿನ ಹೆದ್ದಾರಿಯಲ್ಲಿ ಕೆಲವರು ಕುಡಿದು ಅಮಲಿನಲ್ಲಿ ಬೈಕ್‌ ವೀಲಿಂಗ್‌ ಮಾಡುತ್ತಾ, ಅತೀ ವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಬಗ್ಗೆ ವಾಟ್ಸ್‌ಆ್ಯಪ್‌ ಮೂಲಕ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸರು ಕಾರ್ಯಪ್ರವೃತ್ತರಾಗಿ, ತಪ್ಪಿತಸ್ಥ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ.

    ಕಿಡಿಗೇಡಿಗಳ ವಿರುದ್ಧ ಕರ್ನಾಟಕ ಮೋಟರ್ ವಾಹನ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

  • ಶಿರಸಿ: 41 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ಶಿರಸಿ ಪೊಲೀಸರು

    ಶಿರಸಿ, ಜೂಲೈ 8, 2025: ದಕ್ಷಿಣ ಕನ್ನಡ ಜಿಲ್ಲೆಯ ಬೆಲ್ತಂಗಡಿ ತಾಲೂಕಿನ ಮಂಡೂರು ನಿವಾಸಿ ಆರೋಪಿ ಪಾಸ್ಕಲ್‌ನ ವಿರುದ್ಧ 1984ರಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/1984ರ ಅಡಿಯಲ್ಲಿ ಐಪಿಸಿ ಕಲಂ 279, 337, 427 ಹಾಗೂ 116 ಐಎಂವಿ ಕಾಯ್ದೆಯಡಿ ಅಪಘಾತ ಪ್ರಕರಣ ದಾಖಲಾಗಿತ್ತು. ಶಿರಸಿ ನಗರ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಆದರೆ, ಬೇರೆ ಜಿಲ್ಲೆಯವನಾಗಿದ್ದ ಆರೋಪಿ ಪಾಸ್ಕಲ್, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಣ್ತಪ್ಪಿಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಶಿರಸಿ ನ್ಯಾಯಾಲಯವು 1987ರಲ್ಲಿ ಎಲ್‌ಪಿಸಿ 13/1987ರಂತೆ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು.

    ಶಿರಸಿ ನಗರ ಪೊಲೀಸರು ಆರೋಪಿಯ ಪತ್ತೆಗಾಗಿ ಬೆಲ್ತಂಗಡಿ, ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ತಿರುಗಾಡಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿ ಪಾಸ್ಕಲ್‌ನ ತಂದೆ ಮಾರ್ಟಿನ್ ರೊಡ್ರಿಗಸ್ ನೀಡಿದ್ದ ವಿಳಾಸವನ್ನು ಬದಲಾಯಿಸಿ, ಬೆಂಗಳೂರಿನ ಬಾಗಲಗುಂಟೆಯಲ್ಲಿ ತಲೆಮರೆಸಿಕೊಂಡಿದ್ದನು. ನಂತರ ಆತ ಮೃತಪಟ್ಟಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ, ಆರೋಪಿಯ ಬೆನ್ನುಹತ್ತಿದ ಶಿರಸಿ ನಗರ ಪೊಲೀಸರು ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳು:
    ಈ ಪ್ರಕರಣದ ಯಶಸ್ವಿ ಪತ್ತೆಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಜೆ. ಮತ್ತು ಶ್ರೀ ಜಗದೀಶ್ ನಾಯ್ಕ್, ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್, ಶಿರಸಿ ವೃತ್ತ ನಿರೀಕ್ಷಕರಾದ ಶ್ರೀ ಶಶಿಕಾಂತ್ ವರ್ಮಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರಸಿ ನಗರ ಠಾಣೆಯ ಪಿಎಸ್‌ಐ ಶ್ರೀ ಕ್ರೀ. ನಾಗಪ್ಪ, ತನಿಖಾ ಪಿಎಸ್‌ಐ ಶ್ರೀ ನಾರಾಯಣ ರಾಥೋಡ್, ಎಎಸ್‌ಐ ಶ್ರೀ ನೇಲ್ಬನ್‌ಆರ್ ಮೆಂತೇರೋ, ಎಎಸ್‌ಐ ಶ್ರೀ ಹೊನ್ನಪ್ಪ ಆಗೇರ್, ಶ್ರೀ ವಿಶ್ವನಾಥ ಭಂಡಾರಿ ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಶಂಸೆ:
    ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ‘ಸರ್ಕಾರಿ ಕೆಲಸ’ಕ್ಕಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಂಚಿಸಿದ್ದ ವ್ಯಕ್ತಿ ಸೆರೆ

    ಬೈಂದೂರು: ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ 30 ವರ್ಷಗಳ ಹಿಂದೆ 200 ರೂ. ಪಡೆದು ಮೋಸ ಮಾಡಿದ್ದ ಆರೋಪಿ ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್‌ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಶಿರಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ ನೌಕರಿ ಕೊಡಿಸುವುದಾಗಿ 200 ರೂ. ಪಡೆದು ಕೆಲಸ ಕೊಡಿಸದೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.

    ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 30 ವರ್ಷದಿಂದ ತಲೆಮರೆಸಿಕೊಂಡಿದ್ದ. ಡಿಎಸ್ಪಿ ಗೀತಾ ಪಾಟೀಲ್‌ ಹಾಗೂ ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ್‌ ಎಂ., ಪಿಎಸ್‌ಐ ಸಂತೋಷ ಕುಮಾರ್‌ ಎಂ., ಅಶೋಕ್‌ ರಾಠೊಡ್‌ ಮಾರ್ಗದರ್ಶನದಂತೆ ಠಾಣೆಯ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಬೆಂಗಳೂರಿನ ಬಳೆಪೇಟೆಯಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕರೆ ತಂದಿದ್ದಾರೆ.

  • ಭಟ್ಕಳ: ನೀರಗದ್ದೆ ಗುಡ್ಡದ ಮೇಲೆ ದನದ ತಲೆ ಪತ್ತೆ; ದೂರು ದಾಖಲು

    ಭಟ್ಕಳ, ಜುಲೈ 01, 2025: ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ನೀರಗದ್ದೆ ಗುಡ್ಡದ ಮೇಲೆ ದುಷ್ಕರ್ಮಿಗಳು ಗೋವೊಂದನ್ನು ಕಳ್ಳತನ ಮಾಡಿ ವಧಿಸಿ, ತಲೆಯನ್ನು ಕತ್ತರಿಸಿ ಬಿಸಾಡಿದ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.

    ಮುಂಡಳ್ಳಿಯ ಸತ್ಯನಾರಾಯಣ ನಗರದ ನಿವಾಸಿ ಹೊನ್ನಪ್ಪ ಈರಯ್ಯ ನಾಯ್ಕರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಗೋವನ್ನು ಜೂನ್ 29ರಂದು ದುಷ್ಕರ್ಮಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆ ಗೋವನ್ನು ನೀರಗದ್ದೆಯ ಮಾರಕಲ್ಲ ಗದ್ದೆಯ ಖಾಲಿ ಜಮೀನಿನಲ್ಲಿ ವಧಿಸಿ, ತಲೆಯನ್ನು ಕತ್ತರಿಸಿ ಬಿಸಾಡಿ ಪರಾರಿಯಾಗಿದ್ದಾರೆ.

    ಈ ಘಟನೆ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ರನ್ನಗೌಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ. ಪೊಲೀಸ್ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ಅವರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.

    ಈ ಘಟನೆಯಿಂದ ಕೋಪಗೊಂಡ ಹಿಂದೂ ಸಂಘಟನೆಗಳ ಪ್ರಮುಖರು ಗ್ರಾಮೀಣ ಠಾಣೆಗೆ ತೆರಳಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.

  • ಭಟ್ಕಳ: ಮನೆ ಕಳ್ಳತನ ಯತ್ನ ವಿಫಲ, ಆರೋಪಿಯ ಬಂಧನ

    ಭಟ್ಕಳ, ಜೂನ್ 29, 2025: ಭಟ್ಕಳ ತಾಲೂಕಿನ ವೆಂಕಟಾಪುರದ ಐಸ್ ಫ್ಯಾಕ್ಟರಿ ಮೀನಾ ರಸ್ತೆಯಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಶಂಕಿತ ಚಲನವಲನ ಕಂಡು ತಕ್ಷಣ ಬೆನ್ನಟ್ಟಿ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಉಡುಪಿಯ ಆಕೀಫ್ ಮೊಹ್ಮದ್ ಅಬ್ದುಲ್ ಅಜೀಮ್ ಬುಡಾನ್ ಬಾಷಾ (19) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಬೈಂದೂರು ಮತ್ತು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೈಂದೂರಿನ ಕಾರು ಕಳ್ಳತನ ಪ್ರಕರಣವೊಂದರಲ್ಲಿ ಈತ ಬಂಧಿತನಾಗಿ ಕೇವಲ ಎರಡು ದಿನಗಳ ಹಿಂದೆ ಬಿಡುಗಡೆಗೊಂಡಿದ್ದ ಎಂದು ತಿಳಿದುಬಂದಿದೆ.

    ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಪಿಐ ಮಂಜುನಾಥ ಮತ್ತು ಎಸ್‌ಐ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಆರೋಪಿಯ ಹಿನ್ನೆಲೆಯಲ್ಲಿ ಇತರ ಯಾವ ಪ್ರಕರಣಗಳ ಸಂಬಂಧವಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉತ್ತರ ಕನ್ನಡದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ: ಪೊಲೀಸರಿಂದ ವಿವಿಧ ಕಡೆ ಅರಿವು ಕಾರ್ಯಕ್ರಮ

    ಕಾರವಾರ, ಜೂನ್ 24, 2025: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

    ಮಂಕಿ: ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನ ಕಟ್ಟದ ಗ್ರಾಮದ ಜನರಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

    ಹೊನ್ನಾವರ: ಕಾಸರಕೊಡದ ಟೊಂಕ ಬಂದರಿನಲ್ಲಿ ಸಾರ್ವಜನಿಕರಿಗೆ 112 ಸಹಾಯವಾಣಿಯ ಮಾಹಿತಿಯೊಂದಿಗೆ ಮಾದಕ ದ್ರವ್ಯ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

    ಹೊನ್ನಾವರ

    ಸಿದ್ದಾಪುರ: ಹಾಳದಕಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಚೇತನ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳು, ಸಂಚಾರ ನಿಯಮಗಳು ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಾಯಿತು.

    ಸಿದ್ದಾಪುರ

    ಚಿತ್ತಾಕುಲ: ಅಸ್ನೋಟಿಯ ಶಿವಾಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಚಿತ್ತಾಕುಲ

    ಭಟ್ಕಳ: ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಯಿತು.

    ಭಟ್ಕಳ

    ಕಾರವಾರ: ಸಿದ್ದರ ಮಲ್ಲಿಕಾರ್ಜುನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಈ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಯುವಕರು ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಹೆಚ್ಚಿಸುವ ಗುರಿಯನ್ನು ಹೊಂದಿದ್ದವು.

  • ಭಟ್ಕಳ: ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸುರಕ್ಷತೆಯ ಬಗ್ಗೆ ಅರಿವು

    ಭಟ್ಕಳ, ಜೂನ್ 24, 2025: ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜುಮನ್ ಗರ್ಲ್ಸ್ ಹೈಸ್ಕೂಲ್‌ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಮಹಿಳಾ ಮತ್ತು ಮಕ್ಕಳ ಕಾನೂನುಗಳು, ರಸ್ತೆ ಸುರಕ್ಷತೆ, ಮಾದಕ ದ್ರವ್ಯದ ದುಷ್ಪರಿಣಾಮಗಳು, ಸೈಬರ್ ಕ್ರೈಂ ಮತ್ತು ಶರಾವತಿ ಪಡೆಯ ಬಗ್ಗೆ ಅರಿವು ಮೂಡಿಸಿದರು.

    ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ, ಸುರಕ್ಷಿತ ಜೀವನಶೈಲಿ ಮತ್ತು ಸಮಾಜದಲ್ಲಿ ಜಾಗೃತರಾಗಿರುವ ಮಹತ್ವವನ್ನು ತಿಳಿಸಲಾಯಿತು. ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

  • ಶಿರಸಿ: ಗಾಂಜಾ ಮಾರಾಟ ಭೇದಿಸಿದ ಪೊಲೀಸರು: ಇಬ್ಬರ ಬಂಧನ

    ಶಿರಸಿ, ಜೂನ್ 24, 2025: ಶಿರಸಿಯ ಯಲ್ಲಾಪುರ ನಾಕಾದಲ್ಲಿ ಅಕ್ರಮ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ತಂಡವು ಮಂಗಳವಾರ ರಾತ್ರಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ.

    ಬಂಧಿತ ಆರೋಪಿಗಳು ಇಕ್ಬಾಲ್ ಷೇಖ್ (27, ಮುಸ್ಲಿಂಗಲ್ಲಿ, ಶಿರಸಿ) ಮತ್ತು ಇಮ್ರಾನ್ ಬಿಣ್ಣಿ (20, ರಾಜೀವ ನಗರ, ಶಿರಸಿ) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳಿಂದ 286 ಗ್ರಾಂ ಗಾಂಜಾ (ಮೌಲ್ಯ 14,300 ರೂ.), ಸ್ಯಾಮ್‌ಸಂಗ್ ಮತ್ತು ರಿಯಲ್‌ಮಿ ಕಂಪನಿಯ ಎರಡು ಮೊಬೈಲ್ ಫೋನ್‌ಗಳು (ಮೌಲ್ಯ 4,500 ರೂ.) ಹಾಗೂ 750 ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಈ ಪ್ರಕರಣವನ್ನು ಸಂಖ್ಯೆ 700/2025ರಡಿ ಎನ್‌ಡಿಪಿಎಸ್ ಆಕ್ಟ್ ಕಲಂ 8(c), 20(b)(ii)(A) ಪ್ರಕಾರ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

    ಕಾರ್ಯಾಚರಣೆಯು ಪೊಲೀಸ್ ಅಧೀಕ್ಷಕ ಶ್ರೀ ನಾರಾಯಣ (ಐಎಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕೃಷ್ಣಮೂರ್ತಿ ಜೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಜಗದೀಶ ಎನ್., ಪೊಲೀಸ್ ಉಪಾಧೀಕ್ಷಕ ಶ್ರೀಮತಿ ಗೀತಾ ಪಾಟೀಲ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಶ್ರೀ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ನಡೆಯಿತು.

    ತಂಡದಲ್ಲಿ ಪಿಎಸ್‌ಐ ಕು. ರತ್ನಾ ಕುರಿ, ಎಎಸ್‌ಐ ಶ್ರೀ ಪಿ.ಜೆ. ಕಟ್ಟಿ, ಸಿಬ್ಬಂದಿಗಳಾದ ಮಹಾಂತೇಶ ಖಾರಕೇರ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಮಾರುತಿ ಮಾಳಗಿ, ಮಂಜುನಾಥ ವಾಳ ಮತ್ತು ಚಾಲಕ ಕೃಷ್ಣ ರೇವಣಕರ ಭಾಗವಹಿಸಿದ್ದರು.

    ಪೊಲೀಸ್ ಅಧೀಕ್ಷಕ ಶ್ರೀ ನಾರಾಯಣ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.