ಕಾರವಾರ, ಮೇ 29, 2025: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯದವರ ಜಿಲ್ಲಾ ಮಟ್ಟದ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಮುದಾಯದ ಕುಂದುಕೊರತೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸಮುದಾಯದ ಸದಸ್ಯರು ತಮ್ಮ ಸಮಸ್ಯೆಗಳು ಮತ್ತು ಆಕಾಂಕ್ಷೆಗಳನ್ನು ಅಧಿಕಾರಿಗಳ ಮುಂದೆ ಮಂಡಿಸಿದರು. ಈ ಸಭೆಯು ಸಮುದಾಯದ ಒಳಿತಿಗಾಗಿ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ಚರ್ಚಿಸಲು ವೇದಿಕೆಯಾಗಿತ್ತು.
ಕಾರವಾರ, ಮೇ 29, 2025: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ 30 ಮತ್ತು 31, 2025ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ಸಿದ್ಧತೆಯಾಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯೊಂದು ನಡೆಯಿತು.
ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದು, ಸಮ್ಮೇಳನದ ಯಶಸ್ವಿಯಾದ ಆಯೋಜನೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು. ಸಮ್ಮೇಳನದಲ್ಲಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಸರ್ಕಾರಿ ಯೋಜನೆಗಳ ಅನುಷ್ಠಾನ, ಮತ್ತು ಆಡಳಿತದ ಸವಾಲುಗಳ ಕುರಿತು ವಿವರವಾದ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ.
ಕಾರವಾರ, ಮೇ 29, 2025: ಭದ್ರತೆ ದೃಷ್ಟಿಯಿಂದ ಹಾಗೂ ಮಾದಕ ದ್ರವ್ಯಗಳ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ, ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಾದ ಗೋಕರ್ಣ, ಬೆಲೆಹಿತ್ಲು, ಬಿಜ್ಜೂರು, ಬೇಲೆಕಾನ್, ಕಹಾನಿ ಪ್ಯಾರಡೈಸ್, ಮತ್ತು ಪ್ಯಾರಡೈಸ್ ಬೀಚ್‌ಗಳಲ್ಲಿ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸಲಾಗಿದೆ.
ಕಾರವಾರದ ಶ್ವಾನ ದಳ ಮತ್ತು ಸ್ಪೋಟಕ ವಿಧ್ವಂಸಕ ತಪಾಸಣಾ ತಂಡ (Anti-Sabotage Check Team) ಜೊತೆಗೆ ಗೋಕರ್ಣ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಈ ತಪಾಸಣೆಯು ಭದ್ರತೆಯನ್ನು ಖಚಿತಪಡಿಸುವ ಜೊತೆಗೆ ಮಾದಕ ದ್ರವ್ಯಗಳ ಸಾಗಾಟ ಮತ್ತು ಬಳಕೆಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿತ್ತು.
ಭಟ್ಕಳ, 28 ಮೇ 2025: ಇಂದು ಬೆಳಿಗ್ಗೆ 3:00 ಗಂಟೆಗೆ, ಬಿಲಾಲಖಂಡ ಗ್ರಾಮದ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ, ದರೋಡೆಗೆ ಸಿದ್ಧತೆ ನಡೆಸುತ್ತಿದ್ದ 3 ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. 2 ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಟೊಯೊಟಾ ಇನ್ನೋವಾ ಕಾರಿನಲ್ಲಿ , ಚಾಕು, ಖಾರಪುಡಿ, ಮಂಕಿ ಕ್ಯಾಪ್, ಬೆಲ್ಟ್, ತಾಡಪತ್ರ ಮುಂತಾದ ದರೋಡೆಗೆ ಬೇಕಾದ ಸಾಮಗ್ರಿಗಳೊಂದಿಗೆ ಗುಳ್ಮೆ ರಸ್ತೆ ಕ್ರಾಸ್ ಬಳಿಯ ಕತ್ತಲೆಯಲ್ಲಿ ಕಾದು ಕುಳಿತಿದ್ದರು.
ಪಿಎಸ್‌ಐ ಶ್ರೀ ರನ್ನಗೌಡ ಪಾಟೀಲ್ ಅವರು ತಪಾಸಣೆಗೆ ತೆರಳಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಕಾರನ್ನು ಹಿಂದಕ್ಕೆ ಚಲಾಯಿಸಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದರು. “ಗರುಡ ಗ್ಯಾಂಗ್”ನ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ: 56/2025, BNS-2023ರ ಸೆಕ್ಷನ್ 310(4), 310(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ವಿವರ:
ಜಲೀಲ್ ಹುಸೇನ್, ತಂದೆ: ಪಿ.ಕೆ. ಮೈಯದ್, ವಯಸ್ಸು: 39, ವೃತ್ತಿ: ಚಾಲಕ, ವಿಳಾಸ: ಮಂಗಳೂರು. ಈತನ ವಿರುದ್ಧ ಈಗಾಗಲೇ 11 ಪ್ರಕರಣಗಳು ದಾಖಲಾಗಿವೆ. ಜಿಲ್ಲಾಂತರ ಕುಖ್ಯಾತ ಕಳ್ಳನಾಗಿದ್ದು
ನಾಸಿರ್ ಹಕೀಂ, ತಂದೆ: ಮೊಹಿದ್ದೀನ್ ಅಬುಲ್ ಖಾದರ್, ವಯಸ್ಸು: 26, ವೃತ್ತಿ: ಚಾಲಕ, ವಿಳಾಸ: ಗಾಂಧಿನಗರ, ಹೆಬಲೆ, ಭಟ್ಕಳ. ಈತನ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಜಿಲ್ಲಾಂತರ ಕುಖ್ಯಾತ ಕಳ್ಳ.
ಕಾನೂನಿಗೆ ಸಂಘರ್ಷಕ್ಕೆ ಒಳಗಾದ ಬಾಲಕ, ಈತನ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ.
ಪರಾರಿಯಾದ ಆರೋಪಿಗಳು:
ಜಿಶಾನ್, ಮುಗ್ಧುಂ ಕಾಲೋನಿ, ಭಟ್ಕಳ.
ನಬೀಲ್, ಬಟ್ಟಾಗಾಂವ್ , ಭಟ್ಕಳ.
ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ.
ವಶಪಡಿಸಿಕೊಂಡ ವಸ್ತುಗಳು:
ನೋಕಿಯಾ ಕೀಪ್ಯಾಡ್ ಮೊಬೈಲ್-1
ನಥಿಂಗ್ 2A ಮೊಬೈಲ್-1
ನಗದು ರೂ. 1500/-
ಚಾಕುಗಳು-2
ಖಾರಪುಡಿ
ಮಂಕಿ ಕ್ಯಾಪ್
ಸೊಂಟದ ಬೆಲ್ಟ್
ನೀಲಿ ತಾಡಪತ್ರ-1
ಬಿಳಿ ಪಾಲಿಥೀನ್ ಬ್ಯಾಗ್-1
ಟೊಯೊಟಾ ಇನ್ನೋವಾ ಕಾರು
ಕಾರ್ಯಾಚರಣೆಯ ಮಾರ್ಗದರ್ಶನ: ಈ ಕಾರ್ಯಾಚರಣೆಯನ್ನು ಶ್ರೀ ಎಂ. ನಾರಾಯಣ್, ಪೊಲೀಸ್ ಅಧೀಕ್ಷಕರು, ಯು.ಕೆ. ಕಾರವಾರ, ಶ್ರೀ ಕೃಷ್ಣಮೂರ್ತಿ ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶ್ರೀ ಜಗದೀಶ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ಮಹೇಶ್ ಎಂ.ಕೆ., ಉಪ ವಿಭಾಗಾಧಿಕಾರಿ, ಭಟ್ಕಳ, ಹಾಗೂ ಶ್ರೀ ದಿವಾಕರ್ ಪಿ.ಎಂ., ಪೊಲೀಸ್ ಇನ್ಸ್‌ಪೆಕ್ಟರ್, ಭಟ್ಕಳ ನಗರ ಠಾಣೆ, ಪಿಎಸ್‌ಐ ರನ್ನಗೌಡ ಪಾಟೀಲ್, ಭಟ್ಕಳ ಗ್ರಾಮೀಣ ಠಾಣೆ, ಮತ್ತು ಇತರ ಸಿಬ್ಬಂದಿಗಳಾದ ವಿನಾಯಕ್ ಪಾಟೀಲ್, ಅಂಬರೀಶ ಕುಂಬಾರಿ, ವಿನೋದ್ ಜಿ.ಬಿ., ಲೋಕೇಶ ಕಟ್ಟಿ, ನಿಂಗನಗೌಡ ಪಾಟೀಲ್, ಜಗದೀಶ ನಾಯಕ್, ವಿಜಯ ಜಾಧವ್, ದುರ್ಗೇಶ ನಾಯಕ್, ದೇವರಾಜ ಮೊಗೇರ ಅವರು ಪಾಲ್ಗೊಂಡಿದ್ದರು.
ಕಾರವಾರ, ಮೇ 28,2025: ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 28, 2025ರ ಮಧ್ಯಾಹ್ನ 1:00 ಗಂಟೆಯಿಂದ ಮೇ 29, 2025ರ ಬೆಳಗ್ಗೆ 8:30 ಗಂಟೆಯವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಕ್ಕಳ ಹಿತದೃಷ್ಟಿಯಿಂದ ಮತ್ತು ಯಾವುದೇ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಮೇ 29, 2025ರಂದು (ನಾಳೆ) ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ.
𝕏 |Devaraj Bhatkal
ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಈಗಾಗಲೇ ರಜೆಯಲ್ಲಿರುವುದರಿಂದ ಅವುಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಆದರೆ, ಅಂಗನವಾಡಿಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಡುಗಡೆಯಾದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರು ಮಳೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.
ಉತ್ತರ ಕನ್ನಡ, 28 ಮೇ,2025: ಜಿಲ್ಲಾ ಪೊಲೀಸ್ ಇಲಾಖೆಯಿಂದ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಸಭೆಯೊಂದನ್ನು ಆಯೋಜಿಸಲಾಗಿದೆ. ಈ ಸಭೆಯು ಮೇ 29, 2025ರಂದು ಬೆಳಿಗ್ಗೆ 11:00 ಗಂಟೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ.
ಸಮುದಾಯದ ಸದಸ್ಯರು ತಮ್ಮ ಕುಂದುಕೊರತೆಗಳು ಮತ್ತು ಸಮಸ್ಯೆಗಳೊಂದಿಗೆ ಸಭೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿನಮ್ರ ಆಹ್ವಾನಿಸಲಾಗಿದೆ. ಈ ಸಭೆಯ ಮೂಲಕ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಇಲಾಖೆ ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಚೇರಿಯನ್ನು ಸಂಪರ್ಕಿಸಬಹುದು.
ಭಟ್ಕಳ, ಮೇ 28, 2025: ಕಾಯ್ಕಿಣಿ ಪಂಚಾಯತ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೃದ್ಧೆಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಗಾಯಗೊಂಡವರು ಮುರ್ಡೇಶ್ವರದ ಕಾಯ್ಕಿಣಿಯ ಬಸ್ತಿ ಮಾಳುಗದ್ದೆಯ ನಿವಾಸಿ ರಾಜೀವಿ ಜನಾರ್ಧನ ನಾಯ್ಕ (75). ಇವರ ತಲೆಯ ಹಿಂಭಾಗ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಮುರ್ಡೇಶ್ವರದಿಂದ ಭಟ್ಕಳ ಕಡೆಗೆ ವೇಗವಾಗಿ ಬರುತ್ತಿದ್ದ ಬಸ್ ವೃದ್ಧೆಗೆ ಡಿಕ್ಕಿ ಹೊಡೆದಿದೆ. ಬಸ್‌ನ ಚಾಲಕ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹನುಮಂತ ಕೆಂಚಪ್ಪ ಕಡಪಟ್ಟಿ (39) ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆಯ ಪುತ್ರ ರಜನೀಕಾಂತ, ಮುರ್ಡೇಶ್ವರದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಟೆಂಡರ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ಕಾರವಾರ, ಮೇ 26,2025: ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಅಮಿತ್ ಸಿಂಗ್ ಐಪಿಎಸ್ ಅವರು ಕಾರವಾರ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಕಚೇರಿಯ ಕಡತಗಳನ್ನು ಪರಿಶೀಲಿಸಿದರು ಮತ್ತು ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಸಲಹೆಗಳನ್ನು ನೀಡಿದರು.
ಕುಮಟಾ, ಮೇ 26, 2025: ಕುಮಟಾ ತಾಲೂಕಿನ ಮೂರೂರು-ಮುಸುಗುಪ್ಪ ರಸ್ತೆಯಲ್ಲಿ ಕಲ್ಲು ಬಂಡೆ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ, ಜನರಿಗೆ ಪರ್ಯಾಯವಾಗಿ ಮೂರೂರು-ಕುಮಟಾ ಹೆದ್ದಾರಿ ಮತ್ತು ಹರ್ಕಡೆ-ಬಳಕೂರು ರಸ್ತೆಯ ಮೂಲಕ ವಾಹನಗಳಿಗೆ ಪ್ರಯಾಣ ಮಾಡುವಂತೆ ದಾರಿ ಮಾಡಿಕೊಡಲಾಗಿತ್ತು.
ಪರಿಸ್ಥಿತಿಯನ್ನು ಸರಿಪಡಿಸಲು, ಆಡಳಿತ ತಂಡ ಕಲ್ಲು ಬಂಡೆಯನ್ನು ಯಶಸ್ವೀರಾಗಿ ತೆರವುಗೊಳಿಸಿದ್ದು, ಈಗ ರಸ್ತೆ ಸಂಚಾರ ಚಾಲ್ತಿಗೆ ಮರಳಿದೆ. ಪ್ರಯಾಣಿಕರಿಗೆ ಸಾಮಾನ್ಯ ಸೇವೆ ಆರಂಭವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡುವಂತೆ ಆಡಳಿತ ತಾಕೀತು ಮಾಡಿದೆ.
ಹೊನ್ನಾವರ, ಮೇ 25, 2025: ಶನಿವಾರ ಬೆಳಗಿನ ಜಾವದಲ್ಲಿ ಹೊನ್ನಾವರದಿಂದ ಭಟ್ಕಳದ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಭರಮಪ್ಪ ಬೆಳಗಲಿ ನೇತೃತ್ವದ ತಂಡವು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಸುಮಾರು 5.70 ಲಕ್ಷ ರೂಪಾಯಿ ಮೌಲ್ಯದ 19 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಾಗಾಟಕ್ಕೆ ಬಳಸಿದ ವಾಹನವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳು ಹಾವೇರಿಯ ಚೇತನ ನಂದೀಶ ಕಡ್ಲಿ (26), ಸಂತೋಷ ದ್ಯಾನಪ್ಪ ಬೋರದ (25) ಮತ್ತು ಗದಗ ನಿವಾಸಿ ದುರ್ಗಪ್ಪ ಫಕ್ಕೀರಪ್ಪ ಛಲವಾದಿ (50). ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ಅಣ್ಣಪ್ಪ ನಾಯ್ಕ, ರಾಮಯ್ಯ ನಾಯ್ಕ, ಬಸವನಗೌಡ ಪಾಟೀಲ ಮತ್ತು ಚಾಲಕ ದೇವರಾಜ ಮೊಗೇರ ಪಾಲ್ಗೊಂಡಿದ್ದರು.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.