Category: Uttara Kannada

  • ಭಟ್ಕಳ: ಅಬ್ನಾ-ಎ-ಜಾಮಿಯಾ, ಜಾಮಿಯಾ ಇಸ್ಲಾಮಿಯಾ ಭಟ್ಕಳದ 1447-1448ರ ನೂತನ ಪದಾಧಿಕಾರಿಗಳ ಆಯ್ಕೆ

    ಭಟ್ಕಳ, ಜುಲೈ 21, 2025: ಅಬ್ನಾ-ಎ-ಜಾಮಿಯಾ, ಜಾಮಿಯಾ ಇಸ್ಲಾಮಿಯಾ ಭಟ್ಕಳ ಸಂಘವು ಇಂದು ನಡೆದ ಆಡಳಿತ ಸಭೆಯಲ್ಲಿ 1447 ಮತ್ತು 1448ರ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಮೌಲಾನಾ ರಹಮತುಲ್ಲಾ ರುಕ್ನುದ್ದೀನ್ ನದ್ವಿ ಅಧ್ಯಕ್ಷರಾಗಿ ಮತ್ತು ಮೌಲಾನಾ ಅಬ್ದುಲ್ ಅಹದ್ ಫಿಕ್ರದಯ್ ನದ್ವಿ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಾರೆ.

    ಪದಾಧಿಕಾರಿಗಳ ವಿವರ ಈ ಕೆಳಗೆ:

    • ಅಧ್ಯಕ್ಷ: ಮೌಲಾನಾ ರಹಮತುಲ್ಲಾ ರುಕ್ನುದ್ದೀನ್ ನದ್ವಿ
    • ಪ್ರಥಮ ಉಪಾಧ್ಯಕ್ಷ: ಮೌಲಾನಾ ಉಮೈರ್ ಖಲೀಫಾ ನದ್ವಿ
    • ದ್ವಿತೀಯ ಉಪಾಧ್ಯಕ್ಷ: ಮೌಲಾನಾ ವಾಸಿಉಲ್ಲಾ ದಾಮ್ದಾ ಫಕೀಹ್ ನದ್ವಿ
    • ಜನರಲ್ ಸೆಕ್ರೆಟರಿ: ಮೌಲಾನಾ ಅಬ್ದುಲ್ ಅಹದ್ ಫಿಕ್ರದಯ್ ನದ್ವಿ
    • ಉಪ ಸೆಕ್ರೆಟರಿ: ಮೌಲಾನಾ ಇಬ್ರಾಹೀಮ್ ರುಕ್ನುದ್ದೀನ್ ನದ್ವಿ
    • ಖಜಾಂಚಿ: ಮೌಲಾನಾ ಅಬ್ದುಲ್ ಹಸೀಬ್ ಮುನಾ ನದ್ವಿ
    • ಲೆಕ್ಕಾಧಿಕಾರಿ: ಮೌಲಾನಾ ಬಶೀರ್ ಸಿದ್ದಿ ಬಾಪಾ ನದ್ವಿ

    ಗಮನಾರ್ಹವೆಂದರೆ, ಜುಲೈ 3, 2025ರ ಗುರುವಾರ ರಬೀತಾ ಹಾಲ್‌ನಲ್ಲಿ ನಡೆದ ಸಾಮಾನ್ಯ ಚುನಾವಣಾ ಸಭೆಯಲ್ಲಿ 1447-1448ರ ಎರಡು ವರ್ಷಗಳ ಆಡಳಿತಕ್ಕಾಗಿ 30 ಸ್ಥಳೀಯ ಸದಸ್ಯರನ್ನು ಬಹುಮತ ಮೂಲಕ ಆಯ್ಕೆ ಮಾಡಲಾಗಿತ್ತು. ಇದಾದ ಮೇಲೆ, ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸಲಾದ ಅಬ್ನಾ ಘಟಕಗಳನ್ನು ಪ್ರತಿನಿಧಿಸಲು ಪ್ರತಿನಿಧಿಗಳ ಹೆಸರುಗಳನ್ನು ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಇಂದು ಅಬ್ನಾ ಸಂಘದ ಆಡಳಿತ ಸಭೆ ನಡೆದು ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

  • ಅಂಕೋಲಾ: ಭೀಕರ ಬಸ್ ಅಪಘಾತ: ಹಳ್ಳಕ್ಕೆ ಬಿದ್ದ ಬಸ್, ಓರ್ವ ಸಾವು

    ಅಂಕೋಲ, ಜುಲೈ 21, 2025:  ಇಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಅಂಕೋಲಾ ತಾಲೂಕಿನ ಅಗಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

    ಬೆಳಗಾವಿಯಿಂದ ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ, ಕಿರು ಸೇತುವೆಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಬಿದ್ದಿದೆ.

    ಈ ದುರ್ಘಟನೆಯಲ್ಲಿ 18 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಐವರು ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

    ಈ ಅಪಘಾತದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಅಪಘಾತ ಸಂಭವಿಸುತ್ತಿದ್ದಂತೆ, ದಿನಪತ್ರಿಕೆ ಸಾಗಾಟ ಮಾಡುವ ಚಾಲಕ ಸೈಯದ್ ಜಾಕಿರ್ ಇನಾಮ್‌ದಾರ, ಆಂಬ್ಯುಲೆನ್ಸ್ ವಾಹನಗಳು ಹಾಗೂ ಸ್ಥಳೀಯರು ಮತ್ತು ದಾರಿಹೋಕರು ತಕ್ಷಣವೇ ನೆರವಿಗೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

    ಚಾಲಕನ ನಿರ್ಲಕ್ಷ್ಯ ಮತ್ತು ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಅನೇಕ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಹಳ್ಳಕ್ಕೆ ಬಿದ್ದರೂ ಬಹುತೇಕ ಪ್ರಯಾಣಿಕರು ಅಪಾಯದಿಂದ ಪಾರಾಗಿರುವುದು ನೆಮ್ಮದಿಯ ಸಂಗತಿಯಾಗಿದೆ. ಘಟನೆ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

  • ಪಿಎಸ್‌ಐ ಕೀರಪ್ಪ ಘಟಕಾಂಬ್ಳೆ ಆತ್ಮಹತ್ಯೆ

    ಬಂಟ್ವಾಳ/ಶಿರಸಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ (ಪಿಎಸ್‌ಐ) ಸೇವೆ ಸಲ್ಲಿಸುತ್ತಿದ್ದ ಕೀರಪ್ಪ ಘಟಕಾಂಬ್ಳೆ ಅವರು ತಾವು ತಂಗಿದ್ದ ವಸತಿಗೃಹದ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಅವರ ಈ ದಿಢೀರ್ ನಿರ್ಧಾರಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

    ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರಾದ 45 ವರ್ಷದ ಕೀರಪ್ಪ ಘಟಕಾಂಬ್ಳೆ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಪೊಲೀಸ್ ಇಲಾಖೆಯಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದ ಅವರು, ಈ ಹಿಂದೆ ಮುಂಡಗೋಡ, ಶಿರಸಿ ಗ್ರಾಮೀಣ ಮತ್ತು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಸಹಾಯಕ ಉಪನಿರೀಕ್ಷಕರಾಗಿ (ಎಎಸ್‌ಐ) ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.

    ಕಳೆದ ಎಂಟು ತಿಂಗಳ ಹಿಂದಷ್ಟೇ ಅವರಿಗೆ ಪಿಎಸ್‌ಐ ಆಗಿ ಪದೋನ್ನತಿ ದೊರೆತಿತ್ತು. ಪದೋನ್ನತಿಗೊಂಡ ನಂತರ ಅವರು ಬಂಟ್ವಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಕುಟುಂಬವನ್ನು ಶಿರಸಿಯಲ್ಲಿಯೇ ಬಿಟ್ಟು, ಘಟಕಾಂಬ್ಳೆ ಅವರು ಬಂಟ್ವಾಳದಲ್ಲಿ ವಾಸವಾಗಿದ್ದರು.

    ಅವರ ಆತ್ಮಹ*ತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಸೇರಿದಂತೆ ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಮತ್ತು ಹಳಿಯಾಳ ಹಾಗೂ ಶಿರಸಿಯಲ್ಲಿರುವ ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ಮತ್ತು ಶೋಕ ಮನೆ ಮಾಡಿದೆ. ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

    ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ

  • ಉತ್ತರ ಕನ್ನಡಕ್ಕೆ ನೂತನ ಎಸ್‌ಪಿ ದೀಪನ್ ಎಂ.ಎನ್. ಅಧಿಕಾರ ಸ್ವೀಕಾರ

    ಕಾರವಾರ: ದೀಪನ್ ಎಂ.ಎನ್. (ಐಪಿಎಸ್) ಅವರು ದಿನಾಂಕ 15-07-2025 ರಂದು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಗೌರವ ವಂದನೆಯನ್ನು ಸ್ವೀಕರಿಸಿ, ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.

  • ಉತ್ತರ ಕನ್ನಡ ಜಿಲ್ಲೆಗೆ ಎಸ್‌ಪಿ ನಾರಾಯಣ ರಿಂದ ಭಾವಪೂರ್ಣ ವಿದಾಯ

    ಕಾರವಾರ, ಜುಲೈ 16, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಂ. ನಾರಾಯಣ್ (ಐಪಿಎಸ್) ಅವರು ಸರ್ಕಾರದ ವರ್ಗಾವಣೆ ಆದೇಶದಂತೆ ಇಂದು ಕರ್ತವ್ಯದಿಂದ ನಿರ್ಗಮಿಸಿದ್ದಾರೆ.

    ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ತಮ್ಮ ಸೌಭಾಗ್ಯ ಎಂದು ಬಣ್ಣಿಸಿದ ಅವರು, ಕರ್ತವ್ಯ ನಿರ್ವಹಣೆಯಲ್ಲಿ ಸಹಕರಿಸಿದ ಅಧಿಕಾರಿ ಸಿಬ್ಬಂದಿ, ಮಾಧ್ಯಮ ಮಿತ್ರರು ಮತ್ತು ಪ್ರೀತಿಯ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ದೀಪನ್ ಎಂ.ಎನ್.

    ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದೀಪನ್ ಎಂ.ಎನ್. ಅವರಿಗೆ ಶುಭ ಹಾರೈಸಿದ ನಾರಾಯಣ, ಜಿಲ್ಲೆಯ ಜನರ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸಿದ್ದಾರೆ.

  • ಉತ್ತರ ಕನ್ನಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದೀಪನ್ ನೇಮಕ

    ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಎಂ.ನಾರಾಯಣ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

    ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ 2019ರ ಬ್ಯಾಚಿನ ಐಪಿಎಸ್ ಅಧಿಕಾರಿ ದೀಪನ್ ಎಂ.ಎನ್ ಅವರನ್ನು ನೇಮಿಸಲಾಗಿದೆ. ಸದ್ಯ ಅವರು ರಾಜ್ಯ ಮೀಸಲು ಪೊಲೀಸ್ ಪಡೆಯ 1ನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದರು.

    ಎಂ.ನಾರಾಯಣ ಅವರನ್ನು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡಿಸಿಪಿ ಹುದ್ದೆಗೆ ನಿಯೋಜಿಸಲಾಗಿದೆ.

  • ಪಿಕಪ್ ಹಾಗೂ KSRTC ಬಸ್ ನಡುವೆ ಭಾರಿ ಅಪಘಾತ: ಓರ್ವನಿಗೆ ಗಾಯ

    ಕುಮಟಾ, ಜುಲೈ 15, 2025: ತಾಲೂಕಿನ ಅಳ್ವಿಕೋಡಿ ಸಮೀಪ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ, ಪಿಕಪ್ ವಾಹನ ಮತ್ತು KSRTC ಬಸ್ ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.

    ಹೊನ್ನಾವರದಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಪಿಕಪ್ ವಾಹನ, ಎದುರಿನಿಂದ ಬರುವ ಬಸ್‌ಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣ ಜಖಂ ಗೊಂಡಿದೆ.

    ಅಪಘಾತದಲ್ಲಿ ಬಸ್ ಚಾಲಕ ಶಾಂತಾ ಗೌಡ ಹೊನ್ನೂರು ಇತನಿಗೆ ತಲೆ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ,ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಘಟನೆ ನಡೆದ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಸುರಕ್ಷಿತ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.ಈ ಕುರಿತು ಕುಮಟಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರವಾರ: ಕಲಾಚೆ ಭೂಕುಸಿತ ಸಂತ್ರಸ್ತರ ಪುನರ್ವಸತಿ ಕುರಿತು ತುರ್ತು ವರದಿಗೆ ಡಿಸಿ ಲಕ್ಷ್ಮೀ ಪ್ರಿಯಾ ಆದೇಶ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಉಪ ಆಯುಕ್ತ ಕೆ. ಲಕ್ಷ್ಮೀ ಪ್ರಿಯಾ ಯಲ್ಲಾಪುರ ತಾಲೂಕಿನ ಕಲಾಚೆಯಲ್ಲಿ 2021ರ ಭೂಕುಸಿತದಿಂದ ಪೀಡಿತರಾದ ಕುಟುಂಬಗಳ ಪುನರ್ವವಾಸಕ್ಕಾಗಿ ಶಿರ್ಸಿ ಉಪ ವಿಭಾಗಾಧಿಕಾರಿಗಳಿಗೆ ಯಥಾಸ್ಥಿತಿ ಪರಿಶೀಲನೆ ನಡೆಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಮಂಗಳವಾರ ಕಾರವಾರದ ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ದುರಂತ ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಹಶೀಲ್ದಾರ್‌ಗೆ ಪೀಡಿತ ಕುಟುಂಬಗಳ ಮಾಹಿತಿಯನ್ನು ವಿವರವಾಗಿ ಸಂಗ್ರಹಿಸಿ ಸೂಕ್ತ ಪುನರ್ವವಾಸ ಕ್ರಮಗಳಿಗಾಗಿ ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದರು.

    ಅಲ್ಲದೆ, ಭೂಕುಸಿತ ಸಂಭಾವ್ಯ ಪ್ರದೇಶಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಅರಣ್ಯ ಮತ್ತು ಆದಾಯ ಇಲಾಖೆಗಳಿಗೆ ತಡೆಗಟ್ಟುವ ಮತ್ತು ಸಜ್ಜುಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆದೇಶ ನೀಡಿದರು. ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (KPCL) ಅಧಿಕಾರಿಗಳು ಕದ್ರ ಬಾಲೆಮನೆಯಲ್ಲಿ ಭೂಕುಸಿತದಿಂದ ಇಂಧನ ಸಾಗಣೆ ರಸ್ತೆ ತಡೆಯಾಗಿದ್ದು, ತಮ್ಮ ಕಾರ್ಯಾಚರಣೆಗೆ ಪರಿಣಾಮ ಬೀರಿದೆ ಎಂದು ಚಿಂತೆ ವ್ಯಕ್ತಪಡಿಸಿದರು. ಈ ಬಗ್ಗೆ ಡಿಸಿ ಭೂವೈಜ್ಞಾನಿಕ ಸರ್ವೆ ಆಫ್ ಇಂಡಿಯಾ (GSI)ಯ ಸಲಹೆ ಪಡೆಯುವಂತೆ ಮತ್ತು ಅವರ ಸೂಚನೆಯ ಮೇರೆಗೆ KPCL ಒಂದು ತಾಂತ್ರಿಕ ತಂಡ ರಚಿಸಿ ರಸ್ತೆಯ ತ್ಯಾಜ್ಯವನ್ನು ಸುರಕ್ಷಿತವಾಗಿ ತೆಗೆದುಹಾಕುವಂತೆ ಆದೇಶಿಸಿದರು.

    ಇನ್ನು, ಕಾರವಾರ ಸಿಟಿ ಮುನಿಸಿಪಲ್ ಕೌನ್ಸಿಲ್‌ಗೆ ಗುಡುಗು ನೀರು ತಡೆಗಟ್ಟುವುದನ್ನು ತಡೆಯಲು ಡ್ರೈನೇಜ್ ವ್ಯವಸ್ಥೆಯ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸುವಂತೆ ಮತ್ತು ಮುಂಗಾರು ಅವಧಿಯಲ್ಲಿ ಅಪಾಯ ತಪ್ಪಿಸಲು ನಗರದ ಒಳಚರಂಡಿ ಮತ್ತು ಅಪಾಯಕಾರಿ ಮರಗಳನ್ನು ತೆಗೆದುಹಾಕುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿಕಾಂತ್, ಉಪ ಆಯುಕ್ತ ಸಜೀದ್ ಮುಲ್ಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಮತ್ತು ಯೋಗೇಶ್, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಮತ್ತು ವಿವಿಧ ಜಿಲ್ಲಾ-ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಕಾರವಾರ: ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಆರೋಪಿ ಹರ್ದೀಪ್ ಸಿಂಗ್ ಬಂಧನ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರ್ದೀಪ್ ಸಿಂಗ್ (39) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡ ಭಾಗವಹಿಸಿತು.

    ಆರೋಪಿಗಳು ದಿನಾಂಕ 23-10-2024ರಂದು ರಾಫೇಲ್ ತಂದೆ ಮ್ಯಾಥ್ಯೂವ್ಸ್ ಫರ್ನಾಂಡಿಸ್ ಅವರ ಸಹೋದರ ವಿಲ್ಸನ್ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ, ಡಿ.ಎಚ್‌.ಎಲ್ ಕೋರಿಯರ್ ಸರ್ವಿಸ್ ಪ್ರತಿನಿಧಿಯಾಗಿ ಮಾತನಾಡಿ, ಅವರ ಹೆಸರಿನಲ್ಲಿ ಪಾರ್ಸಲ್‌ನಲ್ಲಿ ಮಾದಕ ದ್ರವ್ಯ (1.4 ಕೆ.ಜಿ), 7 ಪಾಸ್‌ಪೋರ್ಟ್‌ಗಳು, 5 ಕ್ರೆಡಿಟ್ ಕಾರ್ಡ್‌ಗಳು ಮತ್ತು 3.5 ಕೆ.ಜಿ ಬಟ್ಟೆ ಇರುವುದಾಗಿ ಹೇಳಿ ಆನ್‌ಲೈನ್ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು. ಇದೀಗ ಮುಂಬಯಿ ಪೊಲೀಸರ ಭಾಷ್ಯದಲ್ಲಿ ವಾಟ್ಸ್‌ಅಪ್ ವಿಡಿಯೋ ಕಾಲ್ ಮೂಲಕ ಭಯಭೀತರನ್ನಾಗಿ ಮಾಡಿ ₹35,80,100 ರಷ್ಟು ಹಣ ವಂಚಿಸಿದ್ದರು. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 35/2024 ದಾಖಲಾಗಿ ತನಿಖೆ ಆರಂಭವಾಗಿತ್ತು.

    ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ.ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಐ. ಅಶ್ವಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಜುಲೈ 12, 2025ರಂದು ಹರ್ದೀಪ್ ಸಿಂಗ್ ಅವನನ್ನ ಪಾಟ್ನಾ, ಬಿಹಾರದಿಂದ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ. ತನಿಖೆಯಲ್ಲಿ ಆರೋಪಿ ಮೇಲೆ ದೇಶಾದ್ಯಂತ 29 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದ್ದು, ಇದರಲ್ಲಿ ತಮಿಳುನಾಡು (₹2,02,17,100), ಆಂಧ್ರಪ್ರದೇಶ (₹2,47,15,500), ಬೆಂಗಳೂರು (₹80,00,000 ಮತ್ತು ₹74,60,047) ಸೇರಿ ಒಟ್ಟು ₹40,28,71,710 ರಷ್ಟು ಹಣ ವಂಚನೆ ಮಾಡಿರುವುದು ಗೊತ್ತಾಗಿದೆ. ಆರೋಪಿ 8 ಉಳಿತಾಯ ಖಾತೆ ಮತ್ತು 2 ಚಾಲ್ತ ಖಾತೆಗಳನ್ನು ಹೊಂದಿರುವುದೂ ತಿಳಿದುಬಂದಿದೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಸಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದ್ದಪ್ಪ ಧರೆಪ್ಪ, ಸಿಬ್ಬಂದಿ ನಾಮದೇವ ನಾಂದ್ರೆ, ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಭಾಗವಹಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

  • ಕಾರವಾರದಲ್ಲಿ 1.30 ಕೋಟಿ ಫಲಾನುಭವಿಗಳಿಗೆ ಶಕ್ತಿ ಯೋಜನೆ ಪ್ರಯೋಜನ – ರಾಜೇಂದ್ರ ಎಚ್ ರಾಣೆ

    ಕಾರವಾರ, ಜುಲೈ 14, 2025:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಾರವಾರ ವ್ಯಾಪ್ತಿಯಲ್ಲಿ ಇದುವರೆಗೆ 1.30 ಕೋಟಿ ಗೂ ಅಧಿಕ ಫಲಾನುಭವಿಗಳು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು ಇದರ ಟಿಕೆಟ್ ಮೌಲ್ಯ ರೂ. 41.81 ಕೋಟಿಗಳಾಗಿದೆ ಎಂದು ಕಾರವಾರ ತಾಲೂಕು ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ರಾಜೇಂದ್ರ ಎಚ್ ರಾಣೆ ಹೇಳಿದರು.

    ಅವರು ಸೋಮವಾರ ಕಾರವಾರ ಬಸ್ ನಿಲ್ದಾಣದಲ್ಲಿ , ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿರುವ ಕುರಿತ ಆಚರಿಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಸಾರಿಗೆ ಬಸ್ಗೆ ಪೂಜೆ ಸಲ್ಲಿಸಿ ಮಾತನಾಡಿದರು.

    ರಾಜ್ಯ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರುವುದರ ಮೂಲಕ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯನ್ನು ಜೂನ್ 2023 ರಿಂದ ಜಾರಿಗೊಳಿಸಿದೆ. ರಾಜ್ಯದಲ್ಲಿ ಶಕ್ತಿ ಯೋಜನೆಯ ಫಲಾನುಭವಿ ಪ್ರಯಾಣಿಕರ ಸಂಖ್ಯೆ ಈಗ 500 ಕೋಟಿ ಗಡಿಯನ್ನು ದಾಟಿದ್ದು, ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

    ರಾಜ್ಯ ಸರ್ಕಾರ ಪ್ರಪಂಚದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಇಂತಹ ಯೋಜನೆಯನ್ನು ಜಾರಿಗೆ ತಂದಿದ್ದು, ಶಕ್ತಿ ಯೋಜನೆಯ ಯಶಸ್ವಿಯಂತೆ ಅನ್ಯಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯು ಕೂಡ ಯಶಸ್ವಿಗೊಂಡಿದೆ ಎಂದರು.

    ಈ ಸಂದರ್ಭದಲ್ಲಿ ಶಕ್ತಿ ಯೋಜನೆ ಯಶಸ್ವಿಗೆ ಪ್ರಮುಖ ಕಾರಣಕರ್ತರಾದ ವಾಹನ ಚಾಲಕರು ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ಹಂಚಿ, ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ಧನ್ಯವಾದ ಅರ್ಪಿಸಲಾಯಿತು.

    ಈ ಸಂದರ್ಭದಲ್ಲಿ ವಾ.ಕ.ರ.ಸಾ ಸಂಸ್ಥೆಯ ಕಾರವಾರ ಘಟಕದ ವ್ಯವಸ್ಥಾಪಕಿ ಸೌಮ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಣಗೌಡರ , ತಾಲ್ಲೂಕು ಗ್ಯಾರಂಟಿ ಅಭಿವೃದ್ಧಿ ಸಮಿತಿಯ ಸದಸ್ಯರು, ಸಾರಿಗೆ ಬಸ್ ನ ಚಾಲಕರು, ನಿರ್ವಾಹಕರು, ಸಾರ್ವಜನಿಕರು, ಪ್ರಯಾಣಿಕರು, ಮತ್ತಿತರರು ಉಪಸ್ಥಿತರಿದ್ದರು.