Blog

  • ಹೊನ್ನಾವರ, ಕುಮಟಾ ಮತ್ತು ಗೋಕರ್ಣ ಭಾಗಗಳಲ್ಲಿ ಜುಲೈ 16 ರಂದು ವಿದ್ಯುತ್ ವ್ಯತ್ಯಯ!

    ಹೊನ್ನಾವರ: ಜುಲೈ 16,2025: ಬುಧವಾರರಂದು ಹೊನ್ನಾವರ, ಕುಮಟಾ ಮತ್ತು ಗೋಕರ್ಣ ತಾಲೂಕಿನ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ವಿವಿಧ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ಕಡಿತ ಅನಿವಾರ್ಯ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

    ಯಾವೆಲ್ಲಾ ಪ್ರದೇಶಗಳಲ್ಲಿ ವ್ಯತ್ಯಯ?

    ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ:

    • ಹೊನ್ನಾವರ ಪಟ್ಟಣ ಶಾಖೆ: ಬಂದರು, ಕೆ.ಎಚ್.ಬಿ ಕಾಲೋನಿ, ಎಲ್.ಐ.ಸಿ ಮತ್ತು ಕರ್ಕಿ ಫೀಡರ್‌ಗಳ ವ್ಯಾಪ್ತಿಯ ಪ್ರದೇಶಗಳು.
    • ಕಾಸರಕೋಡ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ: ಕೆಳಗಿನೂರು, ಟೊಂಕಾ, ಬಳ್ಳೂರು, ದೇವರಗದ್ದೆ ಹಾಗೂ ಇಡಗುಂಜಿ ಫೀಡರ್‌ಗಳ ವ್ಯಾಪ್ತಿಯ ಪ್ರದೇಶಗಳು.
    • ಕುಮಟಾ ಗ್ರಾಮೀಣ ಶಾಖೆ (ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ): ಕತಗಾಲ,ಮಿರ್ಜಾನ್,ಹೆಗಡೆ ಭಾಗಗಳು
    • ಕುಮಟಾ ನಗರ ಶಾಖೆ ಮತ್ತು ಗ್ರಾಮೀಣ ಶಾಖೆ (ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ):
    • ಇಂಡಸ್ಟ್ರಿಯಲ್ ಫೀಡರ್ ಮತ್ತು ವಾಲ್ಗಳ್ಳಿ ಫೀಡರ್
    • ಗೋಕರ್ಣ ಶಾಖೆ (ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ):
    • ಮಾದನಗೇರಿ, ಗೋಕರ್ಣ,ತದಡಿ,ಬಂಕಿಕೊಡ್ಲ,ಬಿಜೂರ, ಗಂಗಾವಳಿ, ಓಂ ಬೀಚ್ ಫೀಡರ್ ವ್ಯಾಪ್ತಿಯ ಎಲ್ಲಾ ಭಾಗಗಳು.

    33 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಇರುವುದರಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತವಾಗಲಿದೆ.

    ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

  • ಉತ್ತರ ಕನ್ನಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದೀಪನ್ ನೇಮಕ

    ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಎಂ.ನಾರಾಯಣ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

    ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ 2019ರ ಬ್ಯಾಚಿನ ಐಪಿಎಸ್ ಅಧಿಕಾರಿ ದೀಪನ್ ಎಂ.ಎನ್ ಅವರನ್ನು ನೇಮಿಸಲಾಗಿದೆ. ಸದ್ಯ ಅವರು ರಾಜ್ಯ ಮೀಸಲು ಪೊಲೀಸ್ ಪಡೆಯ 1ನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದರು.

    ಎಂ.ನಾರಾಯಣ ಅವರನ್ನು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡಿಸಿಪಿ ಹುದ್ದೆಗೆ ನಿಯೋಜಿಸಲಾಗಿದೆ.

  • ಪಿಕಪ್ ಹಾಗೂ KSRTC ಬಸ್ ನಡುವೆ ಭಾರಿ ಅಪಘಾತ: ಓರ್ವನಿಗೆ ಗಾಯ

    ಕುಮಟಾ, ಜುಲೈ 15, 2025: ತಾಲೂಕಿನ ಅಳ್ವಿಕೋಡಿ ಸಮೀಪ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ, ಪಿಕಪ್ ವಾಹನ ಮತ್ತು KSRTC ಬಸ್ ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.

    ಹೊನ್ನಾವರದಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಪಿಕಪ್ ವಾಹನ, ಎದುರಿನಿಂದ ಬರುವ ಬಸ್‌ಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣ ಜಖಂ ಗೊಂಡಿದೆ.

    ಅಪಘಾತದಲ್ಲಿ ಬಸ್ ಚಾಲಕ ಶಾಂತಾ ಗೌಡ ಹೊನ್ನೂರು ಇತನಿಗೆ ತಲೆ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ,ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಘಟನೆ ನಡೆದ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಸುರಕ್ಷಿತ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.ಈ ಕುರಿತು ಕುಮಟಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಂಡ್ಸೆ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆ

    ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಶ್ವಿನ್ ಮೇಲ್ಮನೆ ಆಯ್ಕೆಯಾಗಿದ್ದಾರೆ.

    ಗೌರವಾಧ್ಯಕ್ಷರಾಗಿ ಗಿರೀಶ ಎನ್.ನಾಯ್ಕ್ ಸಪ್ತಗಿರಿ ವಂಡ್ಸೆ, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ, ಖಜಾಂಚಿಯಾಗಿ ವಿ.ಕೆ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಸದಾನಂದ ಆಚಾರ್ಯ, ಪ್ರತಾಪಕುಮಾರ ಶೆಟ್ಟಿ, ಮಣಿಕಂಠ ಪೂಜಾರಿ, ಜಯರಾಮ ಶೆಟ್ಟಿ ಬೆಳ್ವಾಣ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಠಲ್ ಆಚಾರ್ಯ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಷೇಕ ಮೇಲ್ಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಗುರುರಾಜ ಗಾಣಿಗ, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ಶಿವಪ್ರಸಾದ್ ಜಡ್ಡು, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ ಆರ್.ಚಂದನ್, ದಿವಾಕರ (ಸುಜಿ), ಮಹೇಶ ಗಾಣಿಗ, ಸುಶಾಂತ ಎನ್, ಶಶಿಧರ ಆಚಾರ್ಯ, ಶಂಕರ ಆಚಾರ್ಯ ನಾಡಗಡಿ, ಸುಧೀಂದ್ರ ಆಚಾರ್ಯ, ರಮೇಶ ಪೂಜಾರಿ ಬಳಿಹಿತ್ಲು, ಲೆಕ್ಕಪರಿಶೋಧಕರು-ಶಂಕರ ಆಚಾರ್ಯ ಆತ್ರಾಡಿ, ಗೌರವ ಸಲಹೆಗಾರರು-ಸಂಜೀವ ಪೂಜಾರಿ, ಶಶಿಧರ ಶೆಟ್ಟಿ ಪಠೇಲರಮನೆ, ಉದಯಕುಮಾರ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ವಿ.ಎಂ ಸುಧಾಕರ, ಗುಂಡು ಪೂಜಾರಿ, ಕರುಣಾಕರ ಶೆಟ್ಟಿ, ಉದಯ ಕೆ.ನಾಯ್ಕ್, ಆನಂದ ನಾಯ್ಕ್ ನ್ಯಾಗಳಮನೆ, ರುದ್ರಯ್ಯ ಆಚಾರ್ಯ, ಪ್ರಕಾಶ್ ಪೂಜಾರಿ ಜಡ್ಡು, ಶಶಿಧರ ಶೆಟ್ಟಿ ಕೊರಾಡಿಮನೆ, ಲಕ್ಷ್ಮೀನಾರಾಯಣ ಆಚಾರ್ಯ, ಸಮಿತಿ ಸದಸ್ಯರಾಗಿ ಕೃಷ್ಣ ಪೂಜಾರಿ ವಂಡ್ಸೆ, ಶ್ರೀಕಾಂತ ಲಿಂಗಿಮನೆ, ಮಣಿಂಧರ ಗಾಣಿಗ, ಭಾಗ್ಯರಾಜ ಆಚಾರ್ಯ, ಪ್ರಸಾದ್ ಆಚಾರ್ಯ ಆತ್ರಾಡಿ, ಅನಿಲ್ ಹರವರಿ, ದಿನೇಶ ಬಳಗೇರಿ, ಪ್ರಜೇತ್ ಆತ್ರಾಡಿ ಆಯ್ಕೆಯಾಗಿದ್ದಾರೆ.

    ಗಣೇಶೋತ್ಸವ ಆಗಸ್ಟ್ 27 ಬುಧವಾರ ಮತ್ತು 28 ಗುರುವಾರ ನಡೆಯಲಿದೆ.

  • ಕಾರವಾರ: ಕಲಾಚೆ ಭೂಕುಸಿತ ಸಂತ್ರಸ್ತರ ಪುನರ್ವಸತಿ ಕುರಿತು ತುರ್ತು ವರದಿಗೆ ಡಿಸಿ ಲಕ್ಷ್ಮೀ ಪ್ರಿಯಾ ಆದೇಶ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಉಪ ಆಯುಕ್ತ ಕೆ. ಲಕ್ಷ್ಮೀ ಪ್ರಿಯಾ ಯಲ್ಲಾಪುರ ತಾಲೂಕಿನ ಕಲಾಚೆಯಲ್ಲಿ 2021ರ ಭೂಕುಸಿತದಿಂದ ಪೀಡಿತರಾದ ಕುಟುಂಬಗಳ ಪುನರ್ವವಾಸಕ್ಕಾಗಿ ಶಿರ್ಸಿ ಉಪ ವಿಭಾಗಾಧಿಕಾರಿಗಳಿಗೆ ಯಥಾಸ್ಥಿತಿ ಪರಿಶೀಲನೆ ನಡೆಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಮಂಗಳವಾರ ಕಾರವಾರದ ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ದುರಂತ ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಹಶೀಲ್ದಾರ್‌ಗೆ ಪೀಡಿತ ಕುಟುಂಬಗಳ ಮಾಹಿತಿಯನ್ನು ವಿವರವಾಗಿ ಸಂಗ್ರಹಿಸಿ ಸೂಕ್ತ ಪುನರ್ವವಾಸ ಕ್ರಮಗಳಿಗಾಗಿ ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದರು.

    ಅಲ್ಲದೆ, ಭೂಕುಸಿತ ಸಂಭಾವ್ಯ ಪ್ರದೇಶಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಅರಣ್ಯ ಮತ್ತು ಆದಾಯ ಇಲಾಖೆಗಳಿಗೆ ತಡೆಗಟ್ಟುವ ಮತ್ತು ಸಜ್ಜುಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆದೇಶ ನೀಡಿದರು. ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (KPCL) ಅಧಿಕಾರಿಗಳು ಕದ್ರ ಬಾಲೆಮನೆಯಲ್ಲಿ ಭೂಕುಸಿತದಿಂದ ಇಂಧನ ಸಾಗಣೆ ರಸ್ತೆ ತಡೆಯಾಗಿದ್ದು, ತಮ್ಮ ಕಾರ್ಯಾಚರಣೆಗೆ ಪರಿಣಾಮ ಬೀರಿದೆ ಎಂದು ಚಿಂತೆ ವ್ಯಕ್ತಪಡಿಸಿದರು. ಈ ಬಗ್ಗೆ ಡಿಸಿ ಭೂವೈಜ್ಞಾನಿಕ ಸರ್ವೆ ಆಫ್ ಇಂಡಿಯಾ (GSI)ಯ ಸಲಹೆ ಪಡೆಯುವಂತೆ ಮತ್ತು ಅವರ ಸೂಚನೆಯ ಮೇರೆಗೆ KPCL ಒಂದು ತಾಂತ್ರಿಕ ತಂಡ ರಚಿಸಿ ರಸ್ತೆಯ ತ್ಯಾಜ್ಯವನ್ನು ಸುರಕ್ಷಿತವಾಗಿ ತೆಗೆದುಹಾಕುವಂತೆ ಆದೇಶಿಸಿದರು.

    ಇನ್ನು, ಕಾರವಾರ ಸಿಟಿ ಮುನಿಸಿಪಲ್ ಕೌನ್ಸಿಲ್‌ಗೆ ಗುಡುಗು ನೀರು ತಡೆಗಟ್ಟುವುದನ್ನು ತಡೆಯಲು ಡ್ರೈನೇಜ್ ವ್ಯವಸ್ಥೆಯ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸುವಂತೆ ಮತ್ತು ಮುಂಗಾರು ಅವಧಿಯಲ್ಲಿ ಅಪಾಯ ತಪ್ಪಿಸಲು ನಗರದ ಒಳಚರಂಡಿ ಮತ್ತು ಅಪಾಯಕಾರಿ ಮರಗಳನ್ನು ತೆಗೆದುಹಾಕುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿಕಾಂತ್, ಉಪ ಆಯುಕ್ತ ಸಜೀದ್ ಮುಲ್ಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಮತ್ತು ಯೋಗೇಶ್, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಮತ್ತು ವಿವಿಧ ಜಿಲ್ಲಾ-ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • KSRTC ಲಗೇಜ್ ನಿಯಮಗಳಲ್ಲಿ ಸುಧಾರಣೆ: ಪ್ರಯಾಣಿಕರಿಗೆ ಹೊಸ ಮಾರ್ಗದರ್ಶಿ

    ಬೆಂಗಳೂರು, ಜುಲೈ 15, 2025: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಲಗೇಜ್ ನಿಯಮಗಳಲ್ಲಿ ಸುಧಾರಣೆ ತಂದಿದ್ದು, ಪ್ರಯಾಣಿಕರಿಗೆ ಏನನ್ನು ಒಯ್ಯಬಹುದು ಎಂಬ ಬಗ್ಗೆ ಹೊಸ ಮಾರ್ಗದರ್ಶಿಗಳನ್ನು ಪ್ರಕಟಿಸಿದೆ.

    ಪ್ರಯಾಣಿಕರು ಏನನ್ನು ಒಯ್ಯಬಹುದು?

    ಹೊಸ ನೀತಿಯಡಿ, ಪ್ರಯಾಣಿಕರು ಖಾಸಗಿ ಲಗೇಜ್‌ಗಳಲ್ಲಿ, ದೊಡ್ಡ ಮನೆಯ ಸಾಮಾನುಗಳಾದ ಫ್ರಿಡ್ಜ್‌, ವಾಷಿಂಗ್ ಮಶೀನ್‌, ಐರನ್ ಮತ್ತು ಅಲ್ಯೂಮಿನಿಯಂ ಪೈಪ್‌ಗಳು, ಟಯರ್‌ಗಳು, ಮತ್ತು ಸಾಂದ್ರಿಕ ಪ್ರಾಣಿ-ಪಕ್ಷಿಗಳನ್ನು ಸಹ ಒಯ್ಯಲು ಅನುಮತಿ ಇದೆ, ಆದರೆ ನಿರ್ದಿಷ್ಟ ಷರತ್ತುಗಳ ಅನ್ವಯ.

    ಹೊಸ ಲಗೇಜ್ ಮಿತಿ ಮತ್ತು ಶುಲ್ಕ

    ನವೀಕರಣಗೊಂಡ ನಿಯಮಗಳ ಪ್ರಕಾರ, ಪ್ರತಿ ವಯಸ್ಕ ಪ್ರಯಾಣಿಕ ಉಚಿತವಾಗಿ 30 ಕೆ.ಜಿ. ಖಾಸಗಿ ಲಗೇಜ್‌ ಒಯ್ಯಬಹುದು, ಇನ್ನು ಮಕ್ಕಳಿಗೆ 15 ಕೆ.ಜಿ. ಲಗೇಜ್ ಅನುಮತಿ ಇದೆ. ಖಾಸಗಿ ಲಗೇಜ್‌ನಲ್ಲಿ ಉಡುಪು, ಪುಸ್ತಕಗಳು, ಪ್ರಯಾಣಕಾಲದ ಆಹಾರ, ಮತ್ತು ಅಗತ್ಯ ವಸ್ತುಗಳು ಸೇರಿವೆ.
    ಆದಾಗ್ಯೂ, ಉಚಿತ ಮಿತಿಗಿಂತ ಹೆಚ್ಚು ಲಗೇಜ್‌, ವಾಣಿಜ್ಯ ಸಾಮಾನುಗಳು, ಮತ್ತು ಫ್ರಿಡ್ಜ್‌, ವಾಷಿಂಗ್ ಮಶೀನ್‌, ಟಯರ್‌, ಐರನ್ ಪೈಪ್‌, ಅಲ್ಯೂಮಿನಿಯಂ ಪೈಪ್‌, ಖಾಲಿ ಟ್ಯಾಂಕ್‌ಗಳಂತಹ ಭಾರಿ ವಸ್ತುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

    ಪ್ರಾಣಿ-ಪಕ್ಷಿಗಳಿಗೆ ಆಯ್ಕೆಯ ಸೇವೆ, ಷರತ್ತುಗಳೊಂದಿಗೆ

    ನಗರ, ಉಪನಗರ, ಸಾಮಾನ್ಯ, ಮತ್ತು ಮೊಫಸ್ಸಿಲ್ ಬಸ್ ಸೇವೆಗಳಲ್ಲಿ ಎರಡು, ಕಿಟ್‌, ಮರಿಗಳು, ಮತ್ತು ಪಕ್ಷಿಗಳಂತಹ ಸಾಂದ್ರಿಕ ಪ್ರಾಣಿಗಳನ್ನು ಒಯ್ಯಲು ಅನುಮತಿ ಇದ್ದು, ಇದಕ್ಕೆ ಮಗುವಿನ ಟಿಕೆಟ್ ದರದಷ್ಟು ಶುಲ್ಕ ವಿಧಿಸಲಾಗುತ್ತದೆ. ಆದರೆ ಕರ್ನಾಟಕ ವೈಭವ, ರಾಜಹಂಸ, ನಾನ್-ಎಸಿ ಸ್ಲೀಪರ್, ಮತ್ತು ಎಲ್ಲಾ ಏರ್‌ಕಂಡೀಷನ್‌ ಬಸ್ ಸೇವೆಗಳಲ್ಲಿ ಪ್ರಾಣಿ ಸಾಗಣೆ ನಿಷೇಧಿಸಲಾಗಿದೆ.

    ದೊಡ್ಡ ಅಥವಾ ವಿಶೇಷ ಸಾಮಾನುಗಳೊಂದಿಗೆ ಪ್ರಯಾಣಿಸುವ ಮುನ್ನ KSRTC ಸಿಬ್ಬಂದಿಗಳೊಂದಿಗೆ ಪರಾಮರ್ಶಿಸಿ ಅಥವಾ KSRTC ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.

  • ನಿರುಪಯುಕ್ತ ಆಂಬುಲೆನ್ಸ್ ವಾಹನ ವಿಲೇವಾರಿ

    ಉಡುಪಿ, ಜುಲೈ 15, 2025: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿ ವ್ಯಾಪ್ತಿಯ 108 ಆಂಬುಲೆನ್ಸ್ ವಾಹನಗಳನ್ನು ನಿರುಪಯುಕ್ತಗೊಳಿಸಿ, ವಿಲೇವಾರಿ ಮಾಡುವ ಬಗ್ಗೆ ಜುಲೈ 25 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ನಗರದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿಯವರ ಕಚೇರಿ ಆವರಣದಲ್ಲಿ ಬಹಿರಂಗ ಹರಾಜು ನಡೆಯಲಿದ್ದು, ಆಸಕ್ತರು ಭಾಗವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಛೇರಿ ಪ್ರಕಟಣೆ ತಿಳಿಸಿದೆ. 

    • ಮೇಲಿನ ಚಿತ್ರವು ಉಲ್ಲೇಖಕ್ಕಾಗಿ ಮಾತ್ರ ಮತ್ತು ಹರಾಜಿನಲ್ಲಿ ಉಲ್ಲೇಖಿಸಲಾದ ಚಿತ್ರವಲ್ಲ.
  • ಕಾರವಾರ: ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಆರೋಪಿ ಹರ್ದೀಪ್ ಸಿಂಗ್ ಬಂಧನ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರ್ದೀಪ್ ಸಿಂಗ್ (39) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡ ಭಾಗವಹಿಸಿತು.

    ಆರೋಪಿಗಳು ದಿನಾಂಕ 23-10-2024ರಂದು ರಾಫೇಲ್ ತಂದೆ ಮ್ಯಾಥ್ಯೂವ್ಸ್ ಫರ್ನಾಂಡಿಸ್ ಅವರ ಸಹೋದರ ವಿಲ್ಸನ್ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ, ಡಿ.ಎಚ್‌.ಎಲ್ ಕೋರಿಯರ್ ಸರ್ವಿಸ್ ಪ್ರತಿನಿಧಿಯಾಗಿ ಮಾತನಾಡಿ, ಅವರ ಹೆಸರಿನಲ್ಲಿ ಪಾರ್ಸಲ್‌ನಲ್ಲಿ ಮಾದಕ ದ್ರವ್ಯ (1.4 ಕೆ.ಜಿ), 7 ಪಾಸ್‌ಪೋರ್ಟ್‌ಗಳು, 5 ಕ್ರೆಡಿಟ್ ಕಾರ್ಡ್‌ಗಳು ಮತ್ತು 3.5 ಕೆ.ಜಿ ಬಟ್ಟೆ ಇರುವುದಾಗಿ ಹೇಳಿ ಆನ್‌ಲೈನ್ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು. ಇದೀಗ ಮುಂಬಯಿ ಪೊಲೀಸರ ಭಾಷ್ಯದಲ್ಲಿ ವಾಟ್ಸ್‌ಅಪ್ ವಿಡಿಯೋ ಕಾಲ್ ಮೂಲಕ ಭಯಭೀತರನ್ನಾಗಿ ಮಾಡಿ ₹35,80,100 ರಷ್ಟು ಹಣ ವಂಚಿಸಿದ್ದರು. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 35/2024 ದಾಖಲಾಗಿ ತನಿಖೆ ಆರಂಭವಾಗಿತ್ತು.

    ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ.ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಐ. ಅಶ್ವಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಜುಲೈ 12, 2025ರಂದು ಹರ್ದೀಪ್ ಸಿಂಗ್ ಅವನನ್ನ ಪಾಟ್ನಾ, ಬಿಹಾರದಿಂದ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ. ತನಿಖೆಯಲ್ಲಿ ಆರೋಪಿ ಮೇಲೆ ದೇಶಾದ್ಯಂತ 29 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದ್ದು, ಇದರಲ್ಲಿ ತಮಿಳುನಾಡು (₹2,02,17,100), ಆಂಧ್ರಪ್ರದೇಶ (₹2,47,15,500), ಬೆಂಗಳೂರು (₹80,00,000 ಮತ್ತು ₹74,60,047) ಸೇರಿ ಒಟ್ಟು ₹40,28,71,710 ರಷ್ಟು ಹಣ ವಂಚನೆ ಮಾಡಿರುವುದು ಗೊತ್ತಾಗಿದೆ. ಆರೋಪಿ 8 ಉಳಿತಾಯ ಖಾತೆ ಮತ್ತು 2 ಚಾಲ್ತ ಖಾತೆಗಳನ್ನು ಹೊಂದಿರುವುದೂ ತಿಳಿದುಬಂದಿದೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಸಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದ್ದಪ್ಪ ಧರೆಪ್ಪ, ಸಿಬ್ಬಂದಿ ನಾಮದೇವ ನಾಂದ್ರೆ, ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಭಾಗವಹಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

  • 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವ ಅನನ್ಯ ಭಟ್ ತಾಯಿ‌ಯಿಂದ ಜಿಲ್ಲಾ ಎಸ್ಪಿಗೆ ದೂರು

    ಮಂಗಳೂರು, ಜುಲೈ 15, 2025: ಇಪ್ಪತ್ತೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಾಯಿ ಇಂದು ಸಂಜೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾದರು.

    ಅನನ್ಯ ಭಟ್ ತಾಯಿ ಸುಜಾತ ಭಟ್ ಅವರು ತಮ್ಮ ವಕೀಲರೊಂದಿಗೆ ಎಸ್ಪಿ ಅವರನ್ನು ಭೇಟಿಯಾಗಿ, ಮಗಳ ನಾಪತ್ತೆ ಪ್ರಕರಣದ ಬಗ್ಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

    ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಧರ್ಮಸ್ಥಳದಲ್ಲಿ ಒತ್ತಡದಿಂದ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ. ಪತ್ರ ಬರೆದ ಕೆಲವೇ ದಿನಗಳ ಬಳಿಕ ಅದೇ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನೂ ನೀಡಿದ್ದ. ಬರುವಾಗ ತನ್ನ ಜೊತೆ ಅಸ್ತಿಪಂಜರವೊಂದನ್ನು ತಂದಿದ್ದು, ಅದನ್ನು ಪೊಲೀಸರು ವಿಧಿ ವಿಜ್ಞಾನ ತನಿಖೆಗೆ ಒಳಪಡಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಬಹಳಷ್ಟು ಕಡೆಗಳಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಾಗಿಯು, ಪೊಲೀಸರು ತನಿಖೆ ನಡೆಸುವುದಾದರೆ ಆ ಸ್ಥಳಗಳನ್ನು ತೋರಿಸುವುದಾಗಿ ಆ ವ್ಯಕ್ತಿ ತಿಳಿಸಿದ್ದ. ಈಗ ಆ ವ್ಯಕ್ತಿಯನ್ನು ಪ್ರತಿನಿಧಿಸುವ ಇಬ್ಬರು ನ್ಯಾಯವಾದಿಗಳು ಎಸ್ ಐ ಟಿ ರಚನೆ ಬಗ್ಗೆ ಬೇಡಿಕೆ ಮುಂದಿಟ್ಟಿದ್ದಾರೆ.

    ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆಗಳು ಹಾಗು ಅವುಗಳನ್ನು ಒತ್ತಡದಿಂದಾಗಿ ತಾನೇ ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿರುವುದು ಈಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಅದೇ ಹೊತ್ತಿಗೆ ಸುಜಾತಾ ಭಟ್ ಅವರು ತಮ್ಮ ಮಗಳೂ ಅಲ್ಲೇ ಕಾಣೆಯಾಗಿದ್ದಾಳೆ ಎಂದು ದೂರು ಸಲ್ಲಿಸಲು ಬಂದಿದ್ದಾರೆ.

  • ಗಂಗೊಳ್ಳಿ : ದನ ಕಳವು ಯತ್ನ; ಇಬ್ಬರ ಬಂಧನ

    ಗಂಗೊಳ್ಳಿ, ಜುಲೈ 15, 2025: ಜುಲೈ 6 ರಂದು ಬೆಳಿಗ್ಗೆ 04 ಗಂಟೆಯ ಸುಮಾರಿಗೆ ನಾಡಾ ಗ್ರಾಮ ಪಂಚಾಯತ್‌ ಸಮೀಪ ಒಂದು ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ಬಂದು ಗಂಗೊಳ್ಳಿ ಠಾಣಾ ವ್ಯಾಪ್ತಿಯ ನಾಡಾ ಶಾನ್‌ ಮೆಡಿಕಲ್‌ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುವ ದಾರಿಯಲ್ಲಿನ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದರು.

    ಬ್ರಹ್ಮಾವರದ ಬೈಕಾಡಿಯ ನೌಫಲ (23) , ಕುಂದಾಪುರದ ಗುಲ್ವಾಡಿಯ ನಿಶಾದ್‌ (23) ಬಂಧಿತ ಆರೋಪಿಗಳು. 

    ಅರೋಪಿತರು ಶಾನ್‌ ಮೆಡಿಕಲ್‌ ಸಮೀಪ ಮಲಗಿರುವ ದನಗಳನ್ನು ಕಳವು ಮಾಡುವ ಉದ್ದೇಶದಿಂದ ಬಂದಿದ್ದು ದನವನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ದೂರಿಗೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025 ಕಲಂ 303(2), 62 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚಿಸಿ ದಿನಾಂಕ 14/07/2025 ರಂದು ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿ ದಿನಾಂಕ 15/07/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಕೃತ್ಯಕ್ಕೆ ಬಳಸಿದ KA20ME9173 ನಂಬ್ರದ ಬಿಳಿ ಬಣ್ಣದ ಸ್ವೀಪ್ಟ್‌ ಕಾರ್‌ ( ಅಂದಾಜು ಮೌಲ್ಯ 5 ಲಕ್ಷ ರೂಪಾಯಿ) ಹಾಗೂ 2 ಮೊಬೈಲ್‌ ಪೋನ್ ಗಳನ್ನು (ಅಂದಾಜು ಮೌಲ್ಯ 9 ಸಾವಿರ) ಸ್ವಾದೀನಪಡಿಸಿಕೊಳ್ಳಲಾಗಿದೆ.