ಗಂಗೊಳ್ಳಿ, ಜುಲೈ 15, 2025: ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಸುರೇಶ್ ಖಾರ್ವಿ (45), ಲೋಹಿತ್ ಖಾರ್ವಿ (38), ಜಗ್ಗು ಯಾನೆ ಜಗದೀಶ್ ಖಾರ್ವಿ (36) ನಾಪತ್ತೆಯಾದ ಮೀನುಗಾರರು. ಸುರೇಶ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆ ಹೊರಟಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಸಂತೋಷ್ ಖಾರ್ವಿ ಈಜಿ ಬೇರೊಂದು ದೋಣಿ ತಲುಪಿದ್ದರೆ, ಉಳಿದ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ.

ದೋಣಿ ಮಗುಚಿದ ವೇಳೆ ಓರ್ವ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಇನ್ನಿಬ್ಬರು ಕೂಡ ನೀರುಪಾಲಾಗಿದ್ದಾರೆ. ಸದ್ಯ ನಾಪತ್ತೆಯಾದ ಮೀನುಗಾರರಿಗೆ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಶೋಧ ಕಾರ್ಯ:
ನಾಪತ್ತೆಯಾಗಿರುವ ಮೂವರು ಮೀನುಗಾರರ ರಕ್ಷಣೆಗೆ ಶೋಧಕಾರ್ಯ ನಡೆಸಲಾಗುತ್ತಿದೆ. ಕರಾವಳಿ ಕಾವಲು ಪಡೆ ಗಂಗೊಳ್ಳಿ ಠಾಣೆಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಗಾಳಿಮಳೆ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಿದೆ.
Leave a Reply