ಬೈಂದೂರು, ಜುಲೈ 14, 2025: ಯಡ್ತರೆ ಗ್ರಾಮದ ನಿವಾಸಿ ಅಬ್ದುಲ್ ರಹೀಮ್ (49) ಅವರ 12 ವರ್ಷದ ಮಗನಾದ ಆಯಾನ್ ರಝಾ ದಿನಾಂಕ 13/07/2025ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06:45 ಗಂಟೆಯವರೆಗಿನ ಸಮಯ ಮಧ್ಯ ಜಾಮೀಯಾ ಮಸೀದಿಯ ಕೆರೆಯಲ್ಲಿ ಕಾಲು ತೊಳೆಯಲು ಹೋಗಿ, ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 31/2025ರಡಿ ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Tag: Accident
-
ಹಳಿಯಾಳ: ಬಸ್- ಬೈಕ್ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು
ಹಳಿಯಾಳ, ಜುಲೈ 14, 2025: ದೊಡ್ಡಕೊಪ್ಪ ಗ್ರಾಮದ ಬಳಿ ರವಿವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತರನ್ನು ನಿಂಗಪ್ಪ ಸುರೇಶ ಗಾಡೇಕರ (39) ದೊಡ್ಡಕೊಪ್ಪ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ದೊಡ್ಡಕೊಪ್ಪದಿಂದ ಬಂಟರಗಾಳಿ ಕಡೆಗೆ ಹೋಗುವ ರಸ್ತೆಯಲ್ಲಿ, ಗುಂಡಪ್ಪ ಈಶ್ವರ ಸಿಂಧೆ ಅವರ ಹೊಲದ ಬಳಿಯ ತಿರುವಿನಲ್ಲಿ ರವಿವಾರ ಸಂಜೆ ಈ ಘಟನೆ ಸಂಭವಿಸಿದೆ.
ನಿಂಗಪ್ಪ ಗಾಡೇಕರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಬಸ್ ನ ಮುಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ತೀವ್ರತೆಗೆ ನಿಂಗಪ್ಪ ಗಾಡೇಕರ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ತಮಿಳುನಾಡು: ಶಾಲಾ ವಾಹನಕ್ಕೆ ರೈಲು ಢಿಕ್ಕಿ; ಮೂವರು ವಿದ್ಯಾರ್ಥಿಗಳು ಸಾವು
ಚೆನ್ನೈ, ಜುಲೈ 8, 2025: ತಮಿಳುನಾಡಿನ ಕಡಲೂರು ಬಳಿ ಸೆಮ್ಮಂಕುಪ್ಪಂನಲ್ಲಿ ಭಾನುವಾರ, ಜುಲೈ 8 ರಂದು ಮಧ್ಯಾಹ್ನ 12:04 ಗಂಟೆಯ ಸುಮಾರಿಗೆ ಶಾಲಾ ವಾಹನಕ್ಕೆ ರೈಲು ಢಿಕ್ಕಿ ಹೊಡೆದ ದುರ್ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಸಂತಾಪ ಮೂಡಿಸಿದೆ.
ವರದಿಗಳ ಪ್ರಕಾರ, ತೆರೆದ ರೈಲ್ವೆ ಗೇಟ್ ದಾಟುತ್ತಿದ್ದಾಗ ಶಾಲಾ ವ್ಯಾನ್‌ಗೆ ರೈಲು ಢಿಕ್ಕಿ ಹೊಡೆದು, ವಾಹನವನ್ನು ಸುಮಾರು 50 ಮೀಟರ್ ದೂರಕ್ಕೆ ಎಳೆದೊಯ್ದಿದೆ. ಘಟನೆ ಸಮಯದಲ್ಲಿ ವಾಹನದಲ್ಲಿ ಐವರು ವಿದ್ಯಾರ್ಥಿಗಳು ಮತ್ತು ಚಾಲಕ ಇದ್ದರು. ಇಬ್ಬರು ವಿದ್ಯಾರ್ಥಿಗಳ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ಒಬ್ಬ ವಿದ್ಯಾರ್ಥಿ ಚಿಕಿತ್ಸೆ ಆರಂಭವಾದ ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡ ಇತರ ವಿದ್ಯಾರ್ಥಿಗಳನ್ನು ಕಡಲೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ದುರ್ಘಟನೆಯ ಬಗ್ಗೆ ಜಂಟಿ ತನಿಖೆಯನ್ನು ಆರಂಭಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲು ಸಮೀಪಿಸುತ್ತಿದ್ದಂತೆ ಗೇಟ್ ಕೀಪರ್ ಗೇಟ್ ಮುಚ್ಚಲು ಯತ್ನಿಸಿದಾಗ, ವ್ಯಾನ್ ಚಾಲಕ ದಿಢೀರ್ ರೈಲ್ವೆ ಹಳಿಯನ್ನು ದಾಟಲು ಮುಂದಾಗಿದ್ದು, ಇದು ಅಪಘಾತಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ.
-
ಗಂಗೊಳ್ಳಿ: ಮರವಂತೆ ಬೀಚ್ ಬಳಿ ಭೀಕರ ಅಪಘಾತ; ಸ್ಕೂಟರ್ ಸವಾರ ಸಾವು
ಗಂಗೊಳ್ಳಿ, ಜುಲೈ 01, 2025: ಪಿಕ್‌ಅಪ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮರವಂತೆ ಬಸ್ ನಿಲ್ದಾಣದ ಸಮೀಪ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಮರವಂತೆಯ ಬೆಟ್ಟಿನಮನೆ ನಿವಾಸಿ ಲಕ್ಷ್ಮಣ ಪೂಜಾರಿ (45) ಮೃತಪಟ್ಟವರು. ಅವರು ಸ್ಕೂಟರ್‌ನಲ್ಲಿ ತ್ರಾಸಿ ಕಡೆಯಿಂದ ಮರವಂತೆಗೆ ಬಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮರವಂತೆ ಬಸ್ ನಿಲ್ದಾಣದ ಸಮೀಪ ಯೂಟರ್ನ್ ತೆಗೆದುಕೊಳ್ಳುತ್ತಿರುವಾಗ ಬೈಂದೂರು ಕಡೆಯಿಂದ ಬರುತ್ತಿದ್ದ ಪಿಕ್‌ಅಪ್ ವಾಹನ ಢಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಘಟನೆಯ ಕುರಿತು ಮಾಹಿತಿ ಪಡೆದ 24×7 ಹೆಲ್ಪ್‌ಲೈನ್ ಆಂಬುಲೆನ್ಸ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ಸಹಕಾರ ನೀಡಿತು. ಗಂಗೊಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
-
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಿಂದ ಯುವಕ ಸಾವು; ಪೋಷಕರಿಗೆ 58.94 ಲಕ್ಷ ರೂ. ಪರಿಹಾರ
ಬೆಂಗಳೂರು,ಜೂನ್ 28, 2025: ಉಡುಪಿಯ ಹಾರಾಡಿಯ ಸೈಯದ್ ನಹೀಮ್ ಎಂಬ 31 ವರ್ಷದ ಯುವಕನ ಸಾವಿಗೆ ಕಾರಣವಾದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ನ್ಯಾಯಾಲಯವು ಮೃತನ ಪೋಷಕರಾದ ಸೈಯದ್ ಅಬೂ ಮೊಹಮ್ಮದ್ ಸಾಹೇಬ್ (67) ಮತ್ತು ಕುರೇಶಾ (62) ಅವರಿಗೆ 58.94 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದೆ. ಈ ತೀರ್ಪನ್ನು ಜೂನ್ 28, 2024 ರಂದು XI ಅಡಿಷನಲ್ ಸ್ಮಾಲ್ ಕೆಸೆಸ್ ಜಡ್ಜ್ ಮತ್ತು ಎಸಿಎಂಎಂ ವಿದ್ಯಾಲಕ್ಷ್ಮಿ ಭಟ್ ಪ್ರಕಟಿಸಿದ್ದಾರೆ.
2018ರ ಮಾರ್ಚ್ 1 ರಂದು ರಾತ್ರಿ 10:15ಕ್ಕೆ, ಸೈಯದ್ ನಹೀಮ್ ಇಂದಿರಾನಗರದಿಂದ ಕೆ.ಆರ್. ಪುರಂ ಕಡೆಗೆ ಮೋಟಾರ್ ಸೈಕಲ್‌ನಲ್ಲಿ (KA-05-HG-1083) ಪಿಲಿಯನ್ ರೈಡರ್ ಆಗಿ ಪ್ರಯಾಣಿಸುತ್ತಿದ್ದಾಗ, ಕಲ್ಪಳ್ಳಿ ಜಂಕ್ಷನ್ ಬಳಿ ಚಾಲಕ ಚಿನ್ಮಯ್ ಗಾಡಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿ ನಿಯಂತ್ರಣ ತಪ್ಪಿದ್ದಾರೆ. ಇದರಿಂದ ಬೈಕ್ ರಸ್ತೆಯಲ್ಲಿ ಉರುಳಿಬಿದ್ದಿದ್ದು, ಆ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ (KA-40-F-877) ಚಾಲಕನ ಅಜಾಗರೂಕ ಚಾಲನೆಯಿಂದ ಬಸ್‌ನ ಹಿಂಬದಿಯ ಚಕ್ರವು ನಹೀಮ್‌ರ ತಲೆಯ ಮೇಲೆ ಹರಿದು ಸಾವಿಗೆ ಕಾರಣವಾಯಿತು. ಗಾಯಗೊಂಡವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲೇ ನಹೀಮ್ ಮೃತಪಟ್ಟಿದ್ದಾರೆ.
ನಹೀಮ್‌ರ ಪೋಷಕರು ತಮ್ಮ ಏಕೈಕ ಮಗನ ಸಾವಿನಿಂದ ಆರ್ಥಿಕ ಮತ್ತು ಭಾವನಾತ್ಮಕ ನಷ್ಟವನ್ನು ಎದುರಿಸಿದ್ದಾರೆ. ಸೈಯದ್ ನಹೀಮ್ ಇನ್‌ಫ್ಲೋ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್‌ನಲ್ಲಿ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 64,448 ರೂ. ಸಂಬಳ ಪಡೆಯುತ್ತಿದ್ದರು. ಆದರೆ, ನ್ಯಾಯಾಲಯವು ಆದಾಯ ತೆರಿಗೆ ಕಡಿತದ ನಂತರ ತಿಂಗಳಿಗೆ 40,000 ರೂ. ಆದಾಯವನ್ನು ಲೆಕ್ಕಾಚಾರಕ್ಕೆ ಪರಿಗಣಿಸಿದೆ.
ನ್ಯಾಯಾಲಯವು ಅಪಘಾತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ಮೋಟಾರ್ ಸೈಕಲ್ ಚಾಲಕ ಚಿನ್ಮಯ್ ಇಬ್ಬರೂ 50% ಜವಾಬ್ದಾರರೆಂದು ತೀರ್ಪು ನೀಡಿದೆ. ಒಟ್ಟು 58.94 ಲಕ್ಷ ರೂ. ಪರಿಹಾರವನ್ನು ಕೆಎಸ್‌ಆರ್‌ಟಿಸಿ ಮತ್ತು ಮೋಟಾರ್ ಸೈಕಲ್‌ನ ವಿಮಾ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯು 50-50% ರಷ್ಟು ಭಾಗಿಸಿಕೊಂಡು ಪಾವತಿಸಬೇಕೆಂದು ಆದೇಶಿಸಲಾಗಿದೆ. ಪರಿಹಾರವನ್ನು ಪೋಷಕರಾದ ಸೈಯದ್ ಅಬೂ ಮೊಹಮ್ಮದ್ ಸಾಹೇಬ್ ಮತ್ತು ಕುರೇಶಾ ಅವರಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು, 50% ಮೊತ್ತವನ್ನು 3 ವರ್ಷಗಳ ಕಾಲ ಸ್ಥಿರ ಠೇವಣಿಯಲ್ಲಿ ಇಡಲು ಆದೇಶಿಸಲಾಗಿದೆ.
ಈ ಪ್ರಕರಣದಲ್ಲಿ ಪೋಷಕರ ದೃಢನಿಶ್ಚಯವು ಗಮನಾರ್ಹವಾಗಿದ್ದು, 67 ಮತ್ತು 62 ವಯಸ್ಸಿನ ಈ ದಂಪತಿಗಳು ತಮ್ಮ ಮಗನ ಸಾವಿನ ನಂತರ ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ. ಈ ತೀರ್ಪು ಅವರಿಗೆ ಕಾನೂನು ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಿದೆ.
-
ಉಡುಪಿ: ಖಾಸಗಿ ಬಸ್ ಅಜಾಗರೂಕ ಚಾಲನೆ ವಿಡಿಯೋ ವೈರಲ್; ಚಾಲಕ ಬಂಧನ
ಉಡುಪಿ, ಜೂ. 18: ಬಸ್ ಚಾಲಕನೊಬ್ಬ ಅಪಾಯಕಾರಿ ಅಜಾಗರೂಕತೆಯ ಚಾಲನೆಯಿಂದ ವಾಹನ ಚಲಾಯಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿರುವ ವಿಡಿಯೋ ಜೂನ್ 17ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಉಡುಪಿ ಸಂಚಾರ ಪೊಲೀಸರು ತನಿಖೆ ನಡೆಸಿ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.
ಆರೋಪಿ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದೆ. ಇವರು ಶ್ರೀ ದುರ್ಗಾಂಬಾ ಬಸ್ ಅನ್ನು ಎನ್‌ಎಚ್ 169ಎ ಸಾರ್ವಜನಿಕ ರಸ್ತೆಯ ಮೂಲಕ ಉಡುಪಿ ಮಾರ್ಗದಲ್ಲಿ ಚಲಾಯಿಸುತ್ತಿದ್ದರು. ಕರಾವಳಿ ಕಡೆಯಿಂದ ಉಡುಪಿಯ ಕಡೆಗೆ ಚಲಿಸುವಾಗ, ಇವರು ಅಜಾಗರೂಕ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಸ್ ನಿಯಂತ್ರಣ ಕಳೆದುಕೊಂಡು ಬನ್ನಂಜೆಯ ಬಳಿ ದಿಢೀರನೆ ಪಕ್ಕಕ್ಕೆ ಸರಿದು ಅಪಾಯಕಾರಿ ರೀತಿಯಲ್ಲಿ ನಿಂತಿದೆ ಎಂದು ವರದಿಯಾಗಿದೆ. ನಂತರ, ಚಾಲಕ ಬಸ್ ಅನ್ನು ಉಡುಪಿಯ ಕಡೆಗೆ ತಪ್ಪಾದ ದಿಕ್ಕಿನಲ್ಲಿ ಚಲಾಯಿಸಿದ್ದಾನೆ ಎನ್ನಲಾಗಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಈ ಸಂಬಂಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ದೇವರಾಜ್‌ನನ್ನು ಬಂಧಿಸಲಾಗಿದ್ದು, ಬಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
-
ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಸವಾರನ ಸಾವು, ಹೊತ್ತಿ ಉರಿದ ಬೈಕ್
ಕುಂದಾಪುರ,ಜೂ.16: ತಾಲೂಕಿನ ಹೆಮ್ಮಾಡಿ – ಕೊಲ್ಲೂರು ಮಾರ್ಗದಲ್ಲಿ ಬಸ್ಸಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಅಪಘಾತದ ಸಂದರ್ಭ ಬೈಕಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಮೃತ ಬೈಕ್ ಸವಾರನನ್ನು ಸಿಗಂದೂರಿನ ಶರತ್ (25) ಎಂದು ಗುರುತಿಸಲಾಗಿದೆ.
ಸಿಗಂದೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೆಂಚನೂರು ಮಲ್ಲಾರಿ ರಸ್ತೆಯ ತಿರುವಿನಲ್ಲಿ ಸವಾರ ನಿಯಂತ್ರಣ ತಪ್ಪಿ ಹೆಮ್ಮಾಡಿ ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸಂಪೂರ್ಣ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿದೆ.
-
ಕುಂದಾಪುರ: ಏಣಿಯಿಂದ ಬಿದ್ದು ಕಾರ್ಮಿಕ ಸಾವು
ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಚೋರಾಡಿಯಲ್ಲಿ ದುರ್ಘಟನೆಯೊಂದರಲ್ಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ದಿನಾಂಕ 30-05-2025ರಂದು ನಡೆದಿದೆ. ಬಿಹಾರ ರಾಜ್ಯದ ನಿವಾಸಿಯಾದ ಎಂ.ಡಿ. ಇಸ್ರೈಲ್ (37) ಎಂಬುವವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ವಿವರಗಳ ಪ್ರಕಾರ, ಚೋರಾಡಿಯಲ್ಲಿ ಕಳೆದ 2-3 ವರ್ಷಗಳಿಂದ ಎಸ್‌ಎನ್‌ಸಿ ಕಂಪನಿಯ ವಾಟರ್ ಸಪ್ಲೈ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ದೂರುದಾರರ ಸಹೋದ್ಯೋಗಿ ಸಫರಾಜ್ ಆಲಂ ಎಂಬ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟನೆಯ ದಿನ ಬೆಳಿಗ್ಗೆ 9:30ರ ಸುಮಾರಿಗೆ ಸಫರಾಜ್ ಆಲಂ ಅವರು 6 ಅಡಿ ಎತ್ತರದ ಏಣಿಯ ಮೇಲೆ ನಿಂತು ಫಿಲ್ಟರ್ ಹೌಸ್‌ನ ಗೋಡೆಯ ಲಿಕೇಜ್ ಪ್ಯಾಚ್ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದ ಇಂಜಿನಿಯರ್ ಶಿವರಾಜ್ ಹಾಗೂ ಇತರ ಕೆಲಸಗಾರರು ಸೇರಿ ಸಫರಾಜ್ ಅವರನ್ನು ಎತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ವಾಹನದಲ್ಲಿ ಹಾಲಾಡಿಯ ದುರ್ಗಾ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯಾಧಿಕಾರಿಗಳು ಪರೀಕ್ಷಿಸಿ ಸಫರಾಜ್ ಆಲಂ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 21/2025ರ ಅಡಿಯಲ್ಲಿ ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
-
ಕೋಟದಲ್ಲಿ ಭೀಕರ ರಸ್ತೆ ಅಪಘಾತ: ತಂದೆ ಮತ್ತು ಇಬ್ಬರು ಮಕ್ಕಳಿಗೆ ಗಂಭೀರ ಗಾಯ
ಕೋಟ, ಮೇ 30, 2025: ಉಡುಪಿ ಜಿಲ್ಲೆಯ ಕೋಟದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಾಳ್ಕುದ್ರು ಗ್ರಾಮದ ಮಾಬುಕಳ ಸೇತುವೆಯ ಮೇಲೆ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಮೇ 27, 2025ರಂದು ಬೆಳಗ್ಗೆ 10:30ರ ಸುಮಾರಿಗೆ ನಡೆದಿದೆ.
ಆರೂರು ಗ್ರಾಮದ ನಿವಾಸಿ ಚಂದ್ರಕಾಂತ (46) ಎಂಬವರು ತಮ್ಮ ಕೆಲಸದಿಂದ ರಜೆ ಪಡೆದು ಚಿಕಿತ್ಸೆಗಾಗಿ ತಮ್ಮ ಮಕ್ಕಳಾದ ವಿಹಾನ್ (11) ಮತ್ತು ಲಿಹಾನ್ (6) ರವರೊಂದಿಗೆ ಜುಪಿಟರ್ ಸ್ಕೂಟಿ (KA-20-EQ-1961)ಯಲ್ಲಿ ಬ್ರಹ್ಮಾವರದಿಂದ ಸಾಲಿಗ್ರಾಮ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕಾರೊಂದು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಚಂದ್ರಕಾಂತ ಮತ್ತು ಅವರ ಮಕ್ಕಳು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಚಂದ್ರಕಾಂತ ಅವರಿಗೆ ಎಡಗೈಯಲ್ಲಿ ಮಾಂಸ ಹೊರಬಂದು ಮೂಳೆ ಮುರಿತವಾಗಿದ್ದು, ಹೊಟ್ಟೆ ಮತ್ತು ಎದೆಗೆ ಒಳಗಾಯಗಳಾಗಿವೆ. ಮಗು ವಿಹಾನ್‌ಗೆ ತೊಡೆ, ಕಾಲು ಮತ್ತು ಕೈಗೆ ಗಾಯಗಳಾಗಿದ್ದು, ಲಿಹಾನ್‌ಗೆ ಹೊಟ್ಟೆಗೆ ತೀವ್ರ ಗಾಯವಾಗಿದೆ. ಅಪಘಾತದ ಸ್ಥಳದಲ್ಲಿ ಸೇರಿದ್ದ ಸ್ಥಳೀಯ ಜನರು ಮತ್ತು ಚಂದ್ರಕಾಂತ ಅವರ ಪರಿಚಯದ ವೆಡಿಯಪ್ಪ ಎಂಬವರು ಗಾಯಾಳುಗಳನ್ನು ತಕ್ಷಣ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪ್ರಸ್ತುತ, ಚಂದ್ರಕಾಂತ ಅವರು ತೀವ್ರ ಗಾಯಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಳಿಕೆ ನೀಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ಮತ್ತು ಪರಿಚಯದ ವೆಡಿಯಪ್ಪ ಎಂಬವರು ಕೆಲಸದ ನಿಮಿತ್ತ ತೆರಳಿರುವುದರಿಂದ ದೂರು ದಾಖಲಿಸಲು ವಿಳಂಬವಾಗಿದೆ. ಈ ಘಟನೆಯ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2025ರ ಅಡಿಯಲ್ಲಿ ಕಲಂ 281, 125(a), 125(b) BNS ರಂತೆ ಪ್ರಕರಣ ದಾಖಲಾಗಿದೆ.
-
ಕುಂದಾಪುರ: ಬಾವಿ ಕೆಲಸದ ವೇಳೆ ದುರಂತ – ವ್ಯಕ್ತಿಯೊಬ್ಬರು ಮುಳುಗಿ ಸಾವು
ಕುಂದಾಪುರ, ಮೇ 29, 2025: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಸುಭಾಷ್ (50) ಎಂಬ ವ್ಯಕ್ತಿಯು ಬಾವಿ ಕೆಲಸದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ನಡೆದಿದೆ. ದೂರುದಾರರಾದ ಅವರ ಪುತ್ರ ಅಭಿಷೇಕ್ (20) ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುಭಾಷ್ ಅವರು ತಮ್ಮ ಅಣ್ಣ ಸುರೇಂದ್ರ ಜೊತೆಗೆ ಕಳೆದ ಮೂರು ತಿಂಗಳಿಂದ ಗೋಪಾಡಿ ಗ್ರಾಮದ ಕರುಣಾಕರ ಎಂಬುವವರ ಜಾಗದಲ್ಲಿ ಬಾವಿ ತೋಡುವ ಕೆಲಸದಲ್ಲಿ ತೊಡಗಿದ್ದರು. ದಿನಾಂಕ 28/05/2025ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಸುಭಾಷ್, ಮಧ್ಯಾಹ್ನ 1:45 ಗಂಟೆ ಸುಮಾರಿಗೆ ಬಾವಿಯ ರಿಂಗ್ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲು ಅಳವಡಿಸಿದ್ದ ಪಿವಿಸಿ ಪೈಪ್ ಬಾವಿಯೊಳಗೆ ಬಿದ್ದಿತ್ತು. ಇದನ್ನು ತೆಗೆಯಲು ಬಾವಿಗೆ ಇಳಿದಿದ್ದ ವೇಳೆ, ಪೈಪ್ ಸಿಗದೇ, ಪುನಃ ಮೇಲೆ ಬರಲು ಹಗ್ಗದ ಸಹಾಯದಿಂದ ಹತ್ತುತ್ತಿರುವಾಗ ಆಕಸ್ಮಿಕವಾಗಿ ಹಗ್ಗವು ಕೈಯಿಂದ ಜಾರಿ ಬಾವಿಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.
ಈ ಘಟನೆಯ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 30/2025ರಡಿ, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.