ಕಾರ್ಕಳ, ಜೂನ್ 01, 2025: ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಬೈಲೂರು ಚಂದನ್ ವೈನ್ಸ್ ಶಾಪ್‌ನ ಪಕ್ಕದ ಹೊಟೇಲ್ ಕಟ್ಟಡದಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಿದ ಆರೋಪದ ಮೇಲೆ ಆರು ಜನರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 31.05.2025 ರಂದು ರಾತ್ರಿ 9:30 ಗಂಟೆ ಸುಮಾರಿಗೆ, ಆರೋಪಿಗಳಾದ ಸಂತೋಷ್ ಹೆಗ್ಡೆ (42, ಹುಂಡಿಬೈಲು), ಆನಂದ (38, ಎಣ್ಣೆಹೊಳೆ), ಬಾಲಕೃಷ್ಣ (52, ನೀರೆಜೆಡ್ಡು), ಕೃಷ್ಣ (40, ಎರ್ನಾಡಗುತ್ತು), ತುಕ್ರ (70, ನೀರೆ ಕಲ್ಲೊಟ್ಟೆ) ಹಾಗೂ ಚಂದನ್ ವೈನ್ಸ್‌ನ ಮಾಲೀಕ ಭೋಜ ಇವರು ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ದೂರಲಾಗಿದೆ.
ಇದೇ ವೇಳೆ, ಚಂದನ್ ವೈನ್ಸ್‌ನ ಮಾಲೀಕರು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ, ವೈನ್ಸ್ ಶಾಪ್‌ನ ಪಕ್ಕದ ಹೊಟೇಲ್ ಕಟ್ಟಡದ ಒಳಗೆ ಸಾರ್ವಜನಿಕರಿಗೆ ಮದ್ಯ ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 78/2025ರ ಅಡಿಯಲ್ಲಿ ಕಲಂ 15(A) ಮತ್ತು 36(B) KE ಆಕ್ಟ್‌ನಂತೆ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.