ಕಾಪು, ಮೇ 12, 2025: ಮೇ 11, ಭಾನುವಾರ ನಡೆದ ಮದುವೆ ಸಮಾರಂಭದಲ್ಲಿ ನಂದಿಕೂರಿನ ದೇವಸ್ಥಾನದ ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ
ಮೃತ ಬಾಲಕ ಕಾಪು ತಾಲೂಕಿನ ಕುರ್ಕಾಲುವಿನ ಸತ್ಯನಾರಾಯಣ ಮತ್ತು ಸೌಮ್ಯ ದಂಪತಿಯ ಪುತ್ರ ವಾಸುದೇವ (4). ಕುಟುಂಬವು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮದುವೆ ಸಮಾರಂಭಕ್ಕೆ ತೆರಳಿತ್ತು. ಸೌಮ್ಯ ತಮ್ಮ ಒಂದು ವರ್ಷದ ಕಿರಿಯ ಮಗುವಿಗೆ ಊಟ ಹಾಕುವಾಗ ವಾಸುದೇವ ಸಹ ಅವರ ಪಕ್ಕದಲ್ಲೇ ಇದ್ದ. ಆದರೆ, ಸೌಮ್ಯ ಕೈ ತೊಳೆಯಲು ಹೋಗಿ ವಾಪಸ್ ಬಂದಾಗ ವಾಸುದೇವ ಕಾಣೆಯಾಗಿದ್ದಾನೆ ಎಂದು ತಿಳಿದು ಕುಟುಂಬಸ್ಥರು ಆತಂಕದಿಂದ ಹುಡುಕಾಟ ಆರಂಭಿಸಿದರು. ನಂತರ ಬಾಲಕನ ದೇಹ ದೇವಸ್ಥಾನದ ಕೆರೆಯಲ್ಲಿ ತೇಲುತ್ತಿರುವುದು ಕಂಡುಬಂದಿತು. ಕೂಡಲೇ ಮಗುವನ್ನು ಕೆರೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಾಲಕನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.