ಉಡುಪಿ, ಜೂನ್ 05, 2025: ಶಿವಳ್ಳಿ ಗ್ರಾಮದ ಪಿ.ಪಿ.ಸಿ ಕಾಲೇಜು ಸಮೀಪದ ಶಕ್ತಿಶೀ ಎಂಬಲ್ಲಿ ಎಂ. ರಾವ್ ಎಂಬವರ ಬಾಡಿಗೆ ಮನೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ತನಿಖೆಯಲ್ಲಿ, ಅನಂತ ಪಿ. ಎಂಬಾತ ತನ್ನ Oppo F27 Pro Plus 5G ಫೋನ್ ಮೂಲಕ LORD***** ಎಂಬ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಂಜಾಬ್ ಕಿಂಗ್ಸ್ (PBKS) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವಿನ IPL T20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಅನಂತ ಪಿ., ಸಿದ್ದಾರ್ಥ ಎಂಟರ್‌ಪ್ರೈಸಸ್‌ನಿಂದ LORD***** ವೆಬ್‌ಸೈಟ್‌ಗೆ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಪಡೆದು, ನಂತರ ಪಾಸ್‌ವರ್ಡ್ ಅನ್ನು ಬದಲಾಯಿಸಿಕೊಂಡು, ವಾಟ್ಸ್‌ಆಪ್ ಚಾಟ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ. ಈ ಹಣವನ್ನು ಸಿದ್ದಾರ್ಥ ಎಂಟರ್‌ಪ್ರೈಸಸ್‌ನ ಬ್ಯಾಂಕ್ ಖಾತೆ ಮತ್ತು ಫೋನ್‌ಪೇ ಮೂಲಕ ಪಣವಾಗಿಟ್ಟುಕೊಂಡಿದ್ದ. ಇದಕ್ಕಾಗಿ ತನ್ನ ಉಡುಪಿ ಮೈತ್ರಿ ಕಾಂಪ್ಲೇಕ್ಸ್ ಬ್ರಾಂಚ್‌ನ ಎಸ್‌ಬಿಐ ಬ್ಯಾಂಕ್ ಖಾತೆಯನ್ನು ಬಳಸಿದ್ದಾನೆ. ಜೊತೆಗೆ, ಬೆಟ್ಟಿಂಗ್‌ನಿಂದ ಬರಬೇಕಾದ ಲಾಭಾಂಶವನ್ನು ಆತನ ಪತ್ನಿ ವಾಣಿಶ್ರೀ ಅವರ ಎಸ್‌ಬಿಐ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಪೊಲೀಸರು ಅನಂತ ಮತ್ತು ವಾಣಿಶ್ರೀ ಅವರ ಒಟ್ಟು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆನ್ ಅಪರಾಧ ಠಾಣೆಯಲ್ಲಿ ಕ್ರಮಾಂಕ 24/2025, ಕಲಂ 78 KP ACT ಮತ್ತು 112 BNS ರಂತೆ ಪ್ರಕರಣ ದಾಖಲಾಗಿದೆ.