Tag: Brahmavara

  • ಉಡುಪಿ: ರೈತರ ಹಣ ಸಂದಾಯ ಖಾತ್ರಿ; ಡಿಸಿ ಬ್ರಹ್ಮಾವರ ಸಂಶೋಧನಾ ಕೇಂದ್ರಕ್ಕೆ ಭೇಟಿ

    ಉಡುಪಿ, ಜುಲೈ 14, 2025: ಜೂನ್ 20, 2025ರಂದು ನಡೆದ ಮಾನ್ಯ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ, ಬೀಜೋತ್ಪಾದನೆಯಲ್ಲಿ ತೊಡಗಿದ 31 ರೈತರಿಗೆ ಹಣ ಸಂದಾಯವಾಗದೆ ಇರುವ ಬಗ್ಗೆ ಚರ್ಚೆ ನಡೆಯಿತು. ಉಸ್ತುವಾರಿ ಸಚಿವರು ತಕ್ಷಣ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದು, ಇದರ ಪ್ರಕಾರ 23 ರೈತರಿಗೆ ಹಣ ಸಂದಾಯವಾಗಿದೆ. ಉಳಿದ 8 ರೈತರಿಗೆ ಭಾಗಶಃ ಹಣ ಬಿಡುಗಡೆಯಾಗಿರುವಾಗ, ಕೆಲವು ರೈತರು ದೂರವಾಣಿ ಮೂಲಕ ಉಳಿದ ಹಣ ಸಂದಾಯವಾಗದೆ ಇರುವ ಬಗ್ಗೆ ದೂರಿದರು.

    ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಇಂದು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳಿದ 8 ರೈತರಿಗೆ ಭಾಗಶಃ ಹಣ ಬಿಡುಗಡೆಯಾಗುವಂತೆ ಸೂಚಿಸಿದ ಬಳಿಕ, ತಕ್ಷಣವೇ ರೈತರಿಗೆ ಉಳಿದ ಹಣ ಸಂದಾಯವಾಗಿದೆ. ಇದೇ ಸಂದರ್ಭದಲ್ಲಿ, ಭತ್ತದ ಸಸಿಮಡಿಗಳ ತಾಕನ್ನು ಪರೀಕ್ಷಿಸಿ, ಸಂಶೋಧನಾ ಕೇಂದ್ರದಿಂದ ರೈತರಿಗೆ ಒದಗಿಸಲಾಗುವ ತರಬೇತಿ, ಬಿತ್ತನೆ ಬೀಜ, ಯಾಂತ್ರೀಕೃತ ಸೇವೆಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಯಿತು.

    ಅಲ್ಲದೆ, ಬ್ರಹ್ಮಾವರದ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ತರಬೇತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಕಛೇರಿ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಲಾಯಿತು. 2025-26ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೃಷಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂವಾದ ನಡೆಸಿ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಯಿತು.

  • ಅನಿತಾ ಬಾಬು ಪೂಜಾರಿ ಬ್ರಹ್ಮಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ

    ಬ್ರಹ್ಮಾವರ, ಜುಲೈ 10, 2025: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಅನಿತಾ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಮಂಡಳಿಯ ಸದಸ್ಯರು ಅನಿತಾ ಪೂಜಾರಿಗೆ ಶುಭ ಕೋರಿದ್ದಾರೆ.

  • ಬ್ರಹ್ಮಾವರ:ಕುಂಜಾಲು ದನದ ರುಂಡ ಪತ್ತೆ ಪ್ರಕರಣ ಪೂರ್ವಯೋಜಿತವೇ ಎಂದು ತನಿಖೆಯಾಗಬೇಕು : SDPI

    ಬ್ರಹ್ಮಾವರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದ ದನದ ರುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

    ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಮಾತನಾಡಿ ಕುಂಜಾಲು ಪ್ರಕರಣದ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಇರುವ ಶಂಕೆ ಇದೆ ಏಕೆಂದರೆ ಈ ಘಟನೆ ನಡೆದಂತಹ ಸಂದರ್ಭದಲ್ಲಿ ಪೊಲೀಸರು ತನಿಖೆ ನಡೆಸುವುದಕ್ಕಿಂತ ಮುಂಚೆಯೇ ಇದನ್ನು ಒಂದು ಸಮುದಾಯದವರೇ ಮಾಡಿರುವುದು ಎನ್ನುವಂತಹ ರೀತಿಯಲ್ಲಿ ಉಡುಪಿಯ ಶಾಸಕರು ಅಲ್ಲಿಗೆ ಹೋಗಿ ಹೇಳಿಕೆ ನೀಡಿ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನವನ್ನು ಮಾಡಿದ್ದರು , ಇದಲ್ಲದೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ನಂತರವೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಉಡುಪಿಗೆ ಬಂದು ಇದರ ಹಿಂದೆ ಮುಸ್ಲಿಮರಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡಿದ್ದರು.
    ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಇಂತಹ ಘಟನೆಗಳನ್ನು ನಡೆಸುವ ಮೂಲಕ ಸೌಹಾರ್ದತೆಯನ್ನು ಕೆಡಿಸಿ
    ರಾಜಕೀಯ ಲಾಭವನ್ನು ಪಡೆಯುವ ಷಡ್ಯಂತರವೂ ಈ ಘಟನೆ ಹಿಂದೆ ಇರುವಂತೆ ಕಾಣುತ್ತಿದೆ. ಆದ್ದರಿಂದ ಪೊಲೀಸರು ಈ ಘಟನೆ ಪೂರ್ವ ನಿಯೋಜಿತವೇ ಎಂಬ ಬಗ್ಗೆ
    ಕೂಲಂಕುಶ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮುಳೂರು ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಭಾವ ಹಾಗೂ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಮ್ ಆದಿ ಉಡುಪಿ ಉಪಸ್ಥಿತರಿದ್ದರು

  • ಉಡುಪಿ: ಬ್ರಹ್ಮಾವರ ಘಟನೆಯಲ್ಲಿ ರಾಜಕೀಯ ಲಾಭ ಪಡೆಯಲು ಹೋದ ಶಾಸಕ ಯಶ್ಪಾಲ್ ಸುವರ್ಣಗೆ ಮುಖಭಂಗ

    ಉಡುಪಿ: ಕಳೆದ ಶನಿವಾರ ರಾತ್ರಿ ಕುಂಜಾಲಿನ ರಸ್ತೆಯಲ್ಲಿ ದನದ ರುಂಡ ಪತ್ತೆ ಪ್ರಕರಣದಲ್ಲಿ ತಾನು ರಾಜಕೀಯದ ಲಾಭ ಪಡೆಯುವ ತರಾತುರಿಯಲ್ಲಿ ಬ್ರಹ್ಮಾವರದಲ್ಲಿ ನಿಂತುಕೊಂಡು 24 ಗಂಟೆಯಲ್ಲಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಭಾಷಣ ಬಿಗಿದು ಬಂದ ಶಾಸಕ ಯಷ್ಪಾಲ್ ಸುವರ್ಣರಿಗೆ ತೀವ್ರ ಮುಖಭಂಗವಾಗಿದೆ. ಪ್ರಕರಣದಲ್ಲಿ ಯಾರಿಗೋ ಅಪರಾಧಿಯ ಪಟ್ಟ ಕಟ್ಟಲು ಹೋಗಿ ಪ್ರಕರಣದಲ್ಲಿ ಅವರ ಪಕ್ಷದವರೇ ಒಬ್ಬ ಆರೋಪಿ ಶಾಮೀಲಾಗಿರುವುದು ಕಂಡು ಈಗ ಮೌನಕ್ಕೆ ಜಾರಿದ್ದಾರೆ.

    ಪೋಲೀಸ್ ಇಲಾಖೆ ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ತನಿಖೆಯಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬೀಫ್ ತಿನ್ನುವವರು ಕೇವಲ ಅಲ್ಪಸಂಖ್ಯಾತರು ಮಾತ್ರ ಅಲ್ಲ ಬೇರೆಯವರು ಸಹ ತಿನ್ನುತ್ತಾರೆ ಎಂದು ಸಾಬೀತಾಗಿದೆ. ಆರೋಪಿಗಳು ತಿನ್ನಲಿಕ್ಕೆ ಮತ್ತು ವ್ಯಾಪಾರಕ್ಕಾಗಿ ಈ ದಂಧೆ ಮಾಡುತ್ತಿದ್ದರು ಎಂದು ಪೊಲೀಸರ ಎದುರು ಆರೋಪಿಗಳೇ ಒಪ್ಪಿಕೊಂಡಿದ್ದಾರೆ. ಈಗ ಆರೋಪಿಗಳು ಯಾರು ಎಂದು ಬಹಿರಂಗವಾಗಿದೆ ಉಡುಪಿ ಶಾಸಕ ಯಷ್ಪಾಲ್ ಸುವರ್ಣ ಈಗ ಏನನ್ನುತ್ತಾರೆ? ಎಂದು ಪ್ರಶ್ನಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಡುಪಿ ಜಿಲ್ಲಾಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರು ಈ ಸಂದರ್ಭದಲ್ಲಿ ಪೋಲೀಸ್ ವರಿಷ್ಟಾಧಿಕಾರಿಯವರಿಗೆ ಮತ್ತು ಅವರ ಸಿಬ್ಬಂದಿಗಳಿಗೆ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.

  • ಬ್ರಹ್ಮಾವರ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

    ಬ್ರಹ್ಮಾವರ, ಜೂನ್ 30, 2025: ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಎಂಬಲ್ಲಿ ದನದ ತಲೆ ಬುರುಡೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚುವ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ ಶಂಕರ್ ಅವರು ಮಾಹಿತಿ ನೀಡಿದರು.

    ಬಂಧಿತ ಆರೋಪಿಗಳಾದ ರಾಮ (49), ಪ್ರಸಾದ್ (21), ನವೀನ್ (35), ಕೇಶವ ನಾಯ್ಕ್ (50), ಸಂದೇಶ (35), ಮತ್ತು ರಾಜೇಶ್ (28) ಎಲ್ಲರೂ ಕುಂಜಾಲು ಗ್ರಾಮದ ನಿವಾಸಿಗಳಾಗಿದ್ದಾರೆ. ಇವರು ದನವನ್ನು ಖರೀದಿಸಿ ಮಾಂಸ ಮಾಡಿ, ಅದರ ಕಳೆಬರವನ್ನು ವಿಲೇವಾರಿ ಮಾಡಲು ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದಾಗ ದನದ ತಲೆ ಬುರುಡೆ ಮತ್ತು ಇತರ ಭಾಗಗಳು ರಸ್ತೆಗೆ ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ.

    ತನಿಖೆಯಲ್ಲಿ, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಲು ಯಶಸ್ವೀಯಾಗಿದ್ದಾರೆ.

  • ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಿಂದ ಯುವಕ ಸಾವು; ಪೋಷಕರಿಗೆ 58.94 ಲಕ್ಷ ರೂ. ಪರಿಹಾರ

    ಬೆಂಗಳೂರು,ಜೂನ್ 28, 2025: ಉಡುಪಿಯ ಹಾರಾಡಿಯ ಸೈಯದ್ ನಹೀಮ್ ಎಂಬ 31 ವರ್ಷದ ಯುವಕನ ಸಾವಿಗೆ ಕಾರಣವಾದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ನ್ಯಾಯಾಲಯವು ಮೃತನ ಪೋಷಕರಾದ ಸೈಯದ್ ಅಬೂ ಮೊಹಮ್ಮದ್ ಸಾಹೇಬ್ (67) ಮತ್ತು ಕುರೇಶಾ (62) ಅವರಿಗೆ 58.94 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದೆ. ಈ ತೀರ್ಪನ್ನು ಜೂನ್ 28, 2024 ರಂದು XI ಅಡಿಷನಲ್ ಸ್ಮಾಲ್ ಕೆಸೆಸ್ ಜಡ್ಜ್ ಮತ್ತು ಎಸಿಎಂಎಂ ವಿದ್ಯಾಲಕ್ಷ್ಮಿ ಭಟ್ ಪ್ರಕಟಿಸಿದ್ದಾರೆ.

    2018ರ ಮಾರ್ಚ್ 1 ರಂದು ರಾತ್ರಿ 10:15ಕ್ಕೆ, ಸೈಯದ್ ನಹೀಮ್ ಇಂದಿರಾನಗರದಿಂದ ಕೆ.ಆರ್. ಪುರಂ ಕಡೆಗೆ ಮೋಟಾರ್ ಸೈಕಲ್‌ನಲ್ಲಿ (KA-05-HG-1083) ಪಿಲಿಯನ್ ರೈಡರ್ ಆಗಿ ಪ್ರಯಾಣಿಸುತ್ತಿದ್ದಾಗ, ಕಲ್ಪಳ್ಳಿ ಜಂಕ್ಷನ್ ಬಳಿ ಚಾಲಕ ಚಿನ್ಮಯ್ ಗಾಡಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿ ನಿಯಂತ್ರಣ ತಪ್ಪಿದ್ದಾರೆ. ಇದರಿಂದ ಬೈಕ್ ರಸ್ತೆಯಲ್ಲಿ ಉರುಳಿಬಿದ್ದಿದ್ದು, ಆ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ (KA-40-F-877) ಚಾಲಕನ ಅಜಾಗರೂಕ ಚಾಲನೆಯಿಂದ ಬಸ್‌ನ ಹಿಂಬದಿಯ ಚಕ್ರವು ನಹೀಮ್‌ರ ತಲೆಯ ಮೇಲೆ ಹರಿದು ಸಾವಿಗೆ ಕಾರಣವಾಯಿತು. ಗಾಯಗೊಂಡವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲೇ ನಹೀಮ್ ಮೃತಪಟ್ಟಿದ್ದಾರೆ.

    ನಹೀಮ್‌ರ ಪೋಷಕರು ತಮ್ಮ ಏಕೈಕ ಮಗನ ಸಾವಿನಿಂದ ಆರ್ಥಿಕ ಮತ್ತು ಭಾವನಾತ್ಮಕ ನಷ್ಟವನ್ನು ಎದುರಿಸಿದ್ದಾರೆ. ಸೈಯದ್ ನಹೀಮ್ ಇನ್‌ಫ್ಲೋ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್‌ನಲ್ಲಿ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 64,448 ರೂ. ಸಂಬಳ ಪಡೆಯುತ್ತಿದ್ದರು. ಆದರೆ, ನ್ಯಾಯಾಲಯವು ಆದಾಯ ತೆರಿಗೆ ಕಡಿತದ ನಂತರ ತಿಂಗಳಿಗೆ 40,000 ರೂ. ಆದಾಯವನ್ನು ಲೆಕ್ಕಾಚಾರಕ್ಕೆ ಪರಿಗಣಿಸಿದೆ.

    ನ್ಯಾಯಾಲಯವು ಅಪಘಾತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ಮೋಟಾರ್ ಸೈಕಲ್ ಚಾಲಕ ಚಿನ್ಮಯ್ ಇಬ್ಬರೂ 50% ಜವಾಬ್ದಾರರೆಂದು ತೀರ್ಪು ನೀಡಿದೆ. ಒಟ್ಟು 58.94 ಲಕ್ಷ ರೂ. ಪರಿಹಾರವನ್ನು ಕೆಎಸ್‌ಆರ್‌ಟಿಸಿ ಮತ್ತು ಮೋಟಾರ್ ಸೈಕಲ್‌ನ ವಿಮಾ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯು 50-50% ರಷ್ಟು ಭಾಗಿಸಿಕೊಂಡು ಪಾವತಿಸಬೇಕೆಂದು ಆದೇಶಿಸಲಾಗಿದೆ. ಪರಿಹಾರವನ್ನು ಪೋಷಕರಾದ ಸೈಯದ್ ಅಬೂ ಮೊಹಮ್ಮದ್ ಸಾಹೇಬ್ ಮತ್ತು ಕುರೇಶಾ ಅವರಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು, 50% ಮೊತ್ತವನ್ನು 3 ವರ್ಷಗಳ ಕಾಲ ಸ್ಥಿರ ಠೇವಣಿಯಲ್ಲಿ ಇಡಲು ಆದೇಶಿಸಲಾಗಿದೆ.

    ಈ ಪ್ರಕರಣದಲ್ಲಿ ಪೋಷಕರ ದೃಢನಿಶ್ಚಯವು ಗಮನಾರ್ಹವಾಗಿದ್ದು, 67 ಮತ್ತು 62 ವಯಸ್ಸಿನ ಈ ದಂಪತಿಗಳು ತಮ್ಮ ಮಗನ ಸಾವಿನ ನಂತರ ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ. ಈ ತೀರ್ಪು ಅವರಿಗೆ ಕಾನೂನು ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಿದೆ.

  • ಬ್ರಹ್ಮಾವರ: ಶಾಲಾ ಬಸ್‌ಗೆ ಲಾರಿ ಢಿಕ್ಕಿ- ಹಲವು ವಿದ್ಯಾರ್ಥಿಗಳಿಗೆ ಗಾಯ

    ಬ್ರಹ್ಮಾವರ, ಜೂನ್ 18, 2025: ಶಾಲಾ ಬಸ್ಸಿಗೆ ಹಿಂದಿನಿಂದ ಲಾರಿಯೊಂದು ಗುದ್ದಿದ ಪರಿಣಾಮ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ನಡೆದಿದೆ.

    ಜಿ.ಎಂ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿದ್ದ ವಾಹನಕ್ಕೆ ಕುಂದಾಪುರದಿಂದ ಬಂದಿದ್ದ ಈಚಾರ್ ಲಾರಿಯೊಂದು ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ಯೂಟರ್ನ್ ಮಾಡುವ ಸಂದರ್ಭ ಗುದ್ದಿದೆ.

    ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಅಪಘಾತಕ್ಕೆ ಶಾಲಾ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು ಬ್ರಹ್ಮಾವರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಕುಂದಾಪುರ: ಆನ್‌ಲೈನ್ ಟಾಸ್ಕ್ ಹಗರಣ; ಸಾಫ್ಟ್‌ವೇರ್ ಇಂಜಿನಿಯರ್‌ಗೆ 28 ಲ.ರೂ ವಂಚನೆ

    ಕುಂದಾಪುರ, ಜೂ. 17: ಶಿರಿಯಾರ ಗ್ರಾಮದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆನ್‌ಲೈನ್ ಉದ್ಯೋಗ ಹಗರಣದಲ್ಲಿ ಒಟ್ಟು 28,01,095 ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ನಿವಾಸಿ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶಶಿಧರ್ (31) ಎಂಬುವರು ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮೇ 29 ರಂದು, ಅವರಿಗೆ ತಮ್ಮ ಮೊಬೈಲ್ ಫೋನ್‌ಗೆ ಗೂಗಲ್‌ನಲ್ಲಿ ರೆಸ್ಯೂಮ್ ಸಲ್ಲಿಸುವ ಬಗ್ಗೆ ಸಂದೇಶವೊಂದು ಬಂದಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅವರಿಗೆ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ಮರುನಿರ್ದೇಶಿಸಲಾಯಿತು. ಅಲ್ಲಿ ಶರ್ಮಾಯ್ ರಾಣಿ ಎಂಬ ವ್ಯಕ್ತಿ ಅವರನ್ನು ಸಂಪರ್ಕಿಸಿದ್ದಾರೆ.

    ಶರ್ಮಾಯ್ ರಾಣಿ ಅವರು ಶಶಿಧರ್ ಅವರನ್ನು ‘ಕಿಂಗ್ಸ್ ಡಿಜಿಲಕ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಟೆಲಿಗ್ರಾಮ್ ಗುಂಪಿಗೆ ಸೇರಿಸಿದರು. ಅಲ್ಲಿ ಅವರಿಗೆ ಆನ್‌ಲೈನ್ ಕಾರ್ಯಗಳನ್ನು ನೀಡಲಾಯಿತು. ಆರಂಭದಲ್ಲಿ, ದೂರುದಾರರು ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಿ ಹಣವನ್ನು ಪಡೆದರು. ಇದು ಗುಂಪಿನ ಬಗ್ಗೆ ಅವರ ನಂಬಿಕೆಯನ್ನು ಹೆಚ್ಚಿಸಿತು.

    ನಂತರ, ಆರೋಪಿಗಳು ಹಲವಾರು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ, ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಮತ್ತು ಪಾವತಿಗಳನ್ನು ಮಾಡಲು ಸೂಚಿಸಿದರು. ಆರೋಪಿಗಳು ಸೂಚನೆಗಳನ್ನು ನಂಬಿದ ಶಶಿಧರ್ ಮೇ 30 ರಿಂದ ಜೂನ್ 12 ರವರೆಗೆ ಹಲವು ಬಾರಿ ಪಾವತಿ ಮಾಡಿದರು. ಅವರು UPI ಮೂಲಕ 7,93,095 ರೂ. ಮತ್ತು IMPS ಹಾಗೂ ITGRS ಮೂಲಕ 20,08,000 ರೂ. ವರ್ಗಾಯಿಸಿದ್ದಾರೆ. ಈ ಮೂಲಕ ಶಶಿಧರ್ ಒಟ್ಟು 28,01,095 ರೂ. ವರ್ಗಾಯಿಸಿದ್ದಾರೆ.

    ಕಾರ್ಯ ಪೂರ್ಣಗೊಂಡ ನಂತರ ದ್ವಿಗುಣ ಲಾಭ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ ಶಶಿಧರ್ ಹಣ ಪಾವತಿಸಿದ ನಂತರ ಆರೋಪಿಗಳು ಅವರನ್ನು ಸಂಪರ್ಕಿಸದೆ ವಂಚಿಸಿದ್ದಾರೆ.

    ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

  • ಬ್ರಹ್ಮಾವರ : ಜಿ ಎಮ್ ಶಾಲಾ ಮಕ್ಕಳಿಂದ ಭತ್ತದ ನಾಟಿ

    ಬ್ರಹ್ಮಾವರ : ಇಲ್ಲಿನ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಮಕ್ಕಳಲ್ಲಿ ಕೃಷಿಯ ಕುರಿತ ಆಸಕ್ತಿಯನ್ನು ಮೂಡಿಸಲು ಭತ್ತ ಬೆಳೆಯುವತ್ತ ಮಕ್ಕಳ ಚಿತ್ತ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉಡುಪಿ ಉದ್ಯಾವರದ ಕುತ್ಪಾಡಿಯ ಕೃಷಿ ಭೂಮಿಯಲ್ಲಿ ಭತ್ತದ ನಾಟಿಯನ್ನು ಮಾಡಿದರು.

    ಸಂಪ್ರದಾಯ ಶೈಲಿಯಲ್ಲಿ ಕಂಬಳದ ಕೋಣಗಳಿಂದ ಗದ್ದೆಯನ್ನು ಉಳುಮೆ ಮಾಡಿ ನಾಟಿಯನ್ನು ಪ್ರಾರಂಭಿಸಲಾಯಿತು. ಮಕ್ಕಳು ಸ್ಥಳೀಯ ರೈತರೊಂದಿಗೆ ನೇಜಿಯನ್ನು ನಾಟಿ ಮಾಡುವುದರ ಮೂಲಕ ಕೃಷಿಯ ಅನುಭವ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸ್ಥಳೀಯ ರೈತರನ್ನು ಸನ್ಮಾಯಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಪೂರ್ತಿ ತುಂಬಿದರು. ಮಕ್ಕಳು ಮಧ್ಯಾಹ್ನ ಚಟ್ನಿಯ ಜೊತೆ ಗಂಜಿ ಊಟವನ್ನು ಮಾಡಿ ಹಳ್ಳಿಯ ಸೊಗಡನ್ನು ಅನುಭವಿಸಿದರು.

  • ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ; ಇಬ್ಬರು ವಶಕ್ಕೆ, ಪ್ರಕರಣ ದಾಖಲು

    ಬ್ರಹ್ಮಾವರ, ಜೂನ್ 07, 2025: ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುದರ್ಶನ್ ದೊಡಮನಿ ರವರು ದಿನಾಂಕ 06-06-2025 ರಂದು ರಾತ್ರಿ 8:30 ಗಂಟೆಗೆ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ, ನೀಲಾವರ ಗ್ರಾಮದ ಎಳ್ಳಂಪಳ್ಳಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಕ್ರಮವಾಗಿ ಮದ್ಯಪಾನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.

    ಮಾಹಿತಿಯ ಆಧಾರದ ಮೇಲೆ, ರಾತ್ರಿ 8:50 ಗಂಟೆಗೆ ಸದರಿ ಸ್ಥಳಕ್ಕೆ ದಾಳಿ ನಡೆಸಿದಾಗ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ರಾತ್ರಿ ಸಮಯವಾದ್ದರಿಂದ ಪಂಚರು ಲಭ್ಯವಿರದಿದ್ದು, ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದ ಕಾರಣ, ತಕ್ಷಣವೇ ದಾಳಿ ನಡೆಸಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆಯಲ್ಲಿ ಅವರು ಮದ್ಯ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

    ಪೊಲೀಸರು ಆರೋಪಿಗಳಿಂದ DSP Black ಕಂಪನಿಯ 180 ML ಡಿಲಕ್ಸ್ ವಿಸ್ಕಿ ಖಾಲಿ ಪ್ಲಾಸ್ಟಿಕ್ ಬಾಟಲಿ-01, DSP Black ಕಂಪನಿಯ 90 ML ಡಿಲಕ್ಸ್ ವಿಸ್ಕಿ ತುಂಬಿದ ಟೆಟ್ರಾ ಪ್ಯಾಕ್-02, ಮದ್ಯ ಸೇವನೆಗೆ ಬಳಸಿದ ಪ್ಲಾಸ್ಟಿಕ್ ಗ್ಲಾಸ್-02, ಆಕ್ವಾ ಫಾರ್ಚೂನ್ ಎಂಬ 1 ಲೀಟರ್ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿ-01, ಆಕ್ವಾ ಫಾರ್ಚೂನ್ ಎಂಬ ½ ಲೀಟರ್ ನೀರು ತುಂಬಿದ ಪ್ಲಾಸ್ಟಿಕ್ ಬಾಟಲಿ-01, ಮತ್ತು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ನ್ನು ವಶಪಡಿಸಿಕೊಂಡಿದ್ದಾರೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಎಕ್ಸೈಸ್ ಕಾಯಿದೆಯ ಕಲಂ 15 A ರ ಅಡಿಯಲ್ಲಿ ಅಪರಾಧ ಕ್ರಮಾಂಕ 126/2025 ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.