ಕುಂದಾಪುರ: ಬಿಗ್ ಬಾಸ್ ಕನ್ನಡ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಶ್ರೀಕಾಂತ್ ಕಶ್ಯಪ್ ಅವರೊಂದಿಗೆ ಇತ್ತೀಚೆಗೆ ಸರಳ ವಿವಾಹವಾದ ಕೆಲವೇ ದಿನಗಳಲ್ಲಿ, ಅವರ ತಂದೆ ಬಾಲಕೃಷ್ಣ ನಾಯಕ್ ಅವರು ತಮ್ಮ ಮಗಳು ಮತ್ತು ಗಂಡನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಸುದ್ದಿಯಾಗಿ ವಿವಾದಕ್ಕೆ ಕಾರಣವಾಗಿವೆ.
ತಮ್ಮ ವಿವಾಹಕ್ಕೆ ಚೈತ್ರಾ ತನಗೆ ಸರಿಯಾದ ಆಮಂತ್ರಣ ನೀಡಲಿಲ್ಲ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ ನಾಯಕ್, “ನಾನು ಈ ವಿವಾಹವನ್ನು ಒಪ್ಪುವುದಿಲ್ಲ. ಚೈತ್ರಾ ಮತ್ತು ಅವಳ ಗಂಡ ಇಬ್ಬರೂ ಕಳ್ಳರು,” ಎಂದು ಆರೋಪಿಸಿದ್ದಾರೆ.
ಅವರು ಮುಂದುವರೆದು, “ನನ್ನ ಪತ್ನಿಯೂ ಚೈತ್ರಾಳನ್ನು ಬೆಂಬಲಿಸುತ್ತಿದ್ದಾಳೆ. ಹಣದ ಆಸೆಗೆ ಇವರೆಲ್ಲರೂ ನನ್ನನ್ನು ಕೈಬಿಟ್ಟಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಇವರು ಹಣವನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ. ಕೇವಲ ನನ್ನ ಹಿರಿಯ ಮಗಳು ಮಾತ್ರ ನನ್ನೊಂದಿಗಿದ್ದಾಳೆ,” ಎಂದರು.
ವಿವಾಹದ ಸಂದರ್ಭದಲ್ಲಿ ಚೈತ್ರಾ ತನ್ನಿಂದ ಹಣ ಕೇಳಿದ್ದಾಗಿ ನೆನಪಿಸಿಕೊಂಡ ನಾಯಕ್, “ನಾನೊಬ್ಬ ಸಾಮಾನ್ಯ ಹೋಟೆಲ್ ಕೆಲಸಗಾರ. ಚೈತ್ರಾ ಮತ್ತು ಅವಳ ತಾಯಿ ಹಣಕ್ಕಾಗಿ ನನ್ನಿಂದ ದೂರವಾಗಿದ್ದಾರೆ. ಚೈತ್ರಾಳ ಗಂಡ ನಮ್ಮ ಮನೆಯಲ್ಲೇ ಇದ್ದ. ಅವನೂ ಕಳ್ಳ, ಇವರಿಗೆ ಗೌರವ, ಮಾನ-ಮರ್ಯಾದೆ ಇಲ್ಲ. ಈಗ ಇವರು ಕುಟುಂಬದ ಗೌರವವನ್ನೇ ನಾಶಪಡಿಸಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೈತ್ರಾಳಿಂದ ತಿರುಗೇಟು


ಈ ಆರೋಪಗಳು ಮಾಧ್ಯಮಗಳಲ್ಲಿ ಗಮನ ಸೆಳೆದಾಗ, ಚೈತ್ರಾ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು: “ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾರ್ಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ.” ಬರೆದಿದ್ದಾರೆ.
“ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸ್ ಕಟ್ಟಿ ಓದಿಸಲಿಲ್ಲ , ಹೆಣ್ಣು ಮಕ್ಕಳ ಜವಾವ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ … ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ಟರೆ ಬೇರೆ ಏನೋ ಇಲ್ಲ … ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು…. ವಾವ್” ಎಂದು ತಿರುಗೇಟು ಕೊಟ್ಟಿದ್ದಾರೆ.