ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಚೋರಾಡಿಯಲ್ಲಿ ದುರ್ಘಟನೆಯೊಂದರಲ್ಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ದಿನಾಂಕ 30-05-2025ರಂದು ನಡೆದಿದೆ. ಬಿಹಾರ ರಾಜ್ಯದ ನಿವಾಸಿಯಾದ ಎಂ.ಡಿ. ಇಸ್ರೈಲ್ (37) ಎಂಬುವವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ವಿವರಗಳ ಪ್ರಕಾರ, ಚೋರಾಡಿಯಲ್ಲಿ ಕಳೆದ 2-3 ವರ್ಷಗಳಿಂದ ಎಸ್‌ಎನ್‌ಸಿ ಕಂಪನಿಯ ವಾಟರ್ ಸಪ್ಲೈ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ದೂರುದಾರರ ಸಹೋದ್ಯೋಗಿ ಸಫರಾಜ್ ಆಲಂ ಎಂಬ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟನೆಯ ದಿನ ಬೆಳಿಗ್ಗೆ 9:30ರ ಸುಮಾರಿಗೆ ಸಫರಾಜ್ ಆಲಂ ಅವರು 6 ಅಡಿ ಎತ್ತರದ ಏಣಿಯ ಮೇಲೆ ನಿಂತು ಫಿಲ್ಟರ್ ಹೌಸ್‌ನ ಗೋಡೆಯ ಲಿಕೇಜ್ ಪ್ಯಾಚ್ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದ ಇಂಜಿನಿಯರ್ ಶಿವರಾಜ್ ಹಾಗೂ ಇತರ ಕೆಲಸಗಾರರು ಸೇರಿ ಸಫರಾಜ್ ಅವರನ್ನು ಎತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ವಾಹನದಲ್ಲಿ ಹಾಲಾಡಿಯ ದುರ್ಗಾ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯಾಧಿಕಾರಿಗಳು ಪರೀಕ್ಷಿಸಿ ಸಫರಾಜ್ ಆಲಂ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 21/2025ರ ಅಡಿಯಲ್ಲಿ ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.