Tag: DJ

  • ಮೆಹಂದಿ, ಮೆರವಣಿಗೆಗಳನ್ನು ಸಂಭ್ರಮಿಸೋಣ, ಆದರೆ ಡಿಜೆ ಸದ್ದನ್ನು ಮಿತಿಯಲ್ಲಿಡುವುದನ್ನೂ ಕಲಿಯೋಣ..

    ಕಿರುತೆರಯ ಹಾಸ್ಯ ಕಲಾವಿದ ಅತ್ಯಂತ ಪ್ರತಿಭಾವಂತ ರಾಕೇಶ್ ಪೂಜಾರಿ ನಿನ್ನೆ ರಾತ್ರಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೀಗೆ ಯುವಕರು ಹೃದಯಾಘಾತದಿಂದ ಸಾಯುವುದು, ಕುಸಿದು ಬಿದ್ದು ಸಾಯುವುದು ಅತ್ಯಂತ ಸಾಮಾನ್ಯವಾಗುತ್ತಿದೆ. ಈ ಸರಣಿ ಸಾವುಗಳಿಗೆ ಈಗ ಹೊಸ ಸೇರ್ಪಡೆ ರಾಕೇಶ್ ಪೂಜಾರಿ ಅವರ ಸಾವು. ಗೆಳೆಯ Rajaram Tallur ಇಂತಹ ಸಾವುಗಳ ಬಗ್ಗೆ ನಿತ್ಯವೂ ಎಂಬಂತೆ ಬರೆಯುತ್ತಿದ್ದಾರೆ, ಎಚ್ಚರಿಸುತ್ತಿದ್ದಾರೆ. ಸರ್ಕಾರಕ್ಕೂ ಈ ಸಾವುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪತ್ರವನೂ ಬರೆದಿದ್ದಾರೆ. ಫೇಸ್‌ಬುಕ್ ಗೆಳೆಯ, ಪತ್ರಕರ್ತ Ashik Mulki ದುಬೈಯಲ್ಲಿ ತಮ್ಮ ಗೆಳೆಯ 25 ವರ್ಷದ ಯುವಕ ಸಫ್ವಾನ್ ಸಾವಿನ ಬಗ್ಗೆ ನಿನ್ನೆಯಷ್ಟೇ ಬರೆದಿದ್ದಾರೆ. ಗೆಳೆಯ Om Ganesh Uppunda ಕೂಡ ತಮ್ಮ ಪರಿಚಯದ 32 ವರ್ಷ ಪ್ರಾಯದ ಯುವಕ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಿತಿನ್ ಮಹಾಲೆ ಲೋ ಬಿಪಿಯ ಕಾರಣ ಮೃತಪಟ್ಟ ಬಗ್ಗೆ ನೋವಿನಿಂದ ಬರೆದಿದ್ದಾರೆ. 

    ಈ ಸಾವುಗಳಿಗೆ ಜೀವನಶೈಲಿ, ಆಹಾರಶೈಲಿ ಅಥವಾ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಕಾರಣವಿರಬಹುದು. ಕೊರೋನಾ ಲಸಿಕೆಗಳ ಪರಿಣಾಮ ಇಂತಹ ಸಾವುಗಳು ಸಂಭವಿಸುತ್ತಿದೆಯೆ ಎಂಬುದೂ ಸಹ ಇನ್ನೊಂದು ಆತಂಕದ ವಿಚಾರ. ಈ ಸಾವುಗಳನ್ನು ತಡೆಗಟ್ಟಲು ಸಾಧ್ಯವಿತ್ತೆ? ಹಾಗಾದರೆ ನಾವು ಏನು ಮಾಡಬೇಕಿತ್ತು? ಸರ್ಕಾರಗಳ ಜವಾಬ್ದಾರಿ ಏನು? ನಾಗರಿಕ ಸಮಾಜದ ಹೊಣೆಗಾರಿಕೆ ಏನು? ಸ್ವತಃ ಸಾವಿಗೀಡಾದವರು ಇಂತಹ ಸಾವು ಬರದಂತೆ ತಡೆಯಲು ಏನು ಮಾಡಬಹುದಿತ್ತು? ಇವೆಲ್ಲ ಅಸ್ಪಷ್ಟವಾಗಿವೆ. ಇನ್ನೆಷ್ಟು ಯುವ ಜೀವಗಳು ಹೀಗೆ ಅಕಾಲಿಕವಾಗಿ ಸಾವಿಗೀಡಾಬೇಕೊ ಎಂಬ ಆತಂಕವಂತೂ ಕಾಡುತ್ತಿದೆ.

    ರಾಕೇಶ್ ಪೂಜಾರಿ ಅವರು ನಿನ್ನೆ ರಾತ್ರಿ ಮೆಹಂದಿ ಸಮಾರಂಭವೊಂದಕ್ಕೆ ಹಾಜರಾಗಿದ್ದರು. ಅವರ ಕೊನೆಯ ವಿಡಿಯೊ ಎಂಬ ಕೆಲವೊಂದು ವಿಡಿಯೊ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಾನು ಗಮನಿಸಿದೆ. ರಾಕೇಶ್ ಡಿಜೆ ಸದ್ದಿಗೆ ಗೆಳಯರ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಆ ವಿಡಿಯೊಗಳಲ್ಲಿ ನಾನು ಗಮನಿಸಿದ್ದು  ಕಿವಿಗಡಚ್ಚಿಕ್ಕುವ ಡಿಜೆ ಸೌಂಡ್. ಎದೆಬಿರಿಯುವ, ಸೌಂಡ್ ಬಾಕ್ಸ್‌ಗಳು ತಾವೇ ಹರಿದುಹೋಗುತ್ತವೋ ಎಂಬಂತಹ ಸೌಂಡ್. 

    ಇತ್ತೀಚೆಗೆ ಮದುವೆಗಳಿಗೆ ಮುನ್ನ ಮೆಹಂದಿ ಸಂಭ್ರಮ, ಡಿಜೆ, ಡ್ಯಾನ್ಸು ಕರಾವಳಿಯ ಎಲ್ಲ ಮದುವೆ ಸಮಾರಂಭಗಳ ಭಾಗ. ಯುವಕ ಯುವತಿಯರು, ವರನ-ವಧುವಿನ ಮನೆಯ ಯುವಜನರು, ಅವರ ಸ್ನೇಹಿತರು ಮದುವೆಯ ನೆವದಲ್ಲಿ ಖುಷಿಪಡುವ ಕ್ಷಣಗಳಿವು. ಈ ಸಂಭ್ರಮದಲ್ಲಿ ತಪ್ಪೇನೂ ಇಲ್ಲ. ಆದರೆ ತಪ್ಪಾಗುತ್ತಿರುವುದು ಈ ಮೆಹಂದಿ ಸಮಾರಂಭಗಳಲ್ಲಿ ಬಳಸುವ ಎದೆನಡುಗುವಷ್ಟು ಶಕ್ತಿಶಾಲಿ ಸೌಂಡ್ ಬಾಕ್ಸ್‌ಗಳನ್ನು ಅಳವಡಿಸುವುದು. ಇವುಗಳಿಂದ ಬರುವ ಧ್ವನಿ ನಿಜಕ್ಕೂ ಎದೆಯೊಳಗೆ ಕಂಪನ ಸೃಷ್ಟಿಸುವಷ್ಟು ಜೋರಾಗಿರುತ್ತದೆ.

    ಸಾಮಾನ್ಯವಾಗಿ ಇಂತಹ ಮೆಹಂದಿ ಸಮಾರಂಭಗಳು ನಡೆಯುವುದು ಮನೆಯ ಅಂಗಳಗಳಲ್ಲಿ, ಮನೆಗೆ ಸಮೀಪವಿರುವ ಖಾಲಿ ಹಿತ್ತಲುಗಳಲ್ಲಿ. ಇಂತಹ ಸಣ್ಣ ವಿಸ್ತೀರ್ಣದ ಜಾಗಕ್ಕೆ ಅಷ್ಟೊಂದು ಸದ್ದು ಮಾಡುವ ಸೌಂಡ್‌ ಬಾಕ್ಸ್‌ಗಳು ನಿಜಕ್ಕೂ ಅಗತ್ಯವಿದೆಯೆ? ಖಂಡಿತ ಇಲ್ಲ. ಸಾಮಾನ್ಯ ಸೌಂಡ್ ಬಾಕ್ಸ್‌ಗಳನ್ನು ಬಳಸಿಯೇ ಮೆಹಂದಿ ಸಮಾರಂಭದ ಸಂಪೂರ್ಣ ಸಂಭ್ರಮವನ್ನು ಸವಿಯಲು ಸಾಧ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಮೆಹಂದಿ ಸಮಾರಂಭಗಳಲ್ಲಿ ಸೌಂಡ್ ಬಾಕ್ಸ್‌ಗಳನ್ನು ಒಂದರ ಮೇಲೊಂದು ಪೇರಿಸಿ ಇಟ್ಟಿರುವುದನ್ನು ನೋಡಿದರೇನೆ ಭಯವಾಗುತ್ತದೆ. 

    ಹೃದಯದ ಸಮಸ್ಯೆ ಇರುವವರು ಬಿಡಿ, ಗಟ್ಟುಮುಟ್ಟಿನ ಆರೋಗ್ಯದವರಿಗೂ ಈ ಸೌಂಡ್ ಬಾಕ್ಸ್‌ಗಳು ಎದೆ ನಡುಗಿಸುತ್ತವೆ, ಎದೆಯಲ್ಲೆಲ್ಲ ಒಂದು ತರಹದ discomfort ಉಂಟುಮಾಡುತ್ತದೆ. ರಾಕೇಶ್ ಸಾವಿಗೂ ಇಂತಹ ಎದೆಬಿರಿಯುವ ಡಿಜೆ ಸೌಂಡ್ ಏನಾದರೂ ಕಾರಣವಾಗಿರಬಹುದೆ ಎಂಬ ಶಂಕೆಯೊಂದು ಈಗ ಹಲವರಲ್ಲಿ ಮೂಡಿದೆ.

    ಇಂತಹ ಎದೆಬಿರಿಯುವ ಡಿಜೆ ಸೌಂಡ್‌ಗಳನ್ನು ಬಳಸಲಾಗುವ ಇನ್ನೊಂದು ಸಂದರ್ಭವೆಂದರೆ ನಮ್ಮೂರುಗಳಲ್ಲಿ ನಡೆಯುವ ಗಣೇಶೋತ್ಸವ ಮತ್ತು ಶಾರದೋತ್ಸವದ ಮೆರವಣಿಗೆಗಳು. ಈ ಮೆರವಣಿಗೆಗೆಳಲ್ಲಿ ಒಂದು ದೊಡ್ಡ ಗಾತ್ರದ ವಾಹನ ತುಂಬಾ ಸೌಂಡ್‌ಬಾಕ್ಸ್‌ಗಳನ್ನು ಹೇರಿರುತ್ತಾರೆ. ಜೊತೆಗೆ ಅತ್ಯಂತ ಜೋರಾದ ದನಿಯ ಡ್ಯಾನ್ಸ್‌ಗೆ ಹೇಳಿ ಮಾಡಿಸಿರುವ ಪಬ್, ಡಿಸ್ಕೊಗಳಲ್ಲಿ ಹಾಕುವ ತರಹದ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ಇಲ್ಲಿ ಉಂಟಾಗುವ ಸದ್ದು ಎಷ್ಟೆಂದರೆ ಅಕ್ಷರಶಃ ಎದೆನಡುಗುತ್ತದೆ. 

    ಈ ಮೆರವಣಿಗೆಗಳು ಹಾದುಹೋಗುವ ಹಾದಿಯುದ್ದಕ್ಕೂ ಅನೇಕರು ಈ ಸದ್ದು ಕೇಳಿ ಎದೆಯ ಮೇಲೆ ಕೈ ಇಟ್ಟುಕೊಂಡು ಪಕ್ಕಕ್ಕೆ ಸರಿಯುವುದನ್ನು ನಾನು ನೋಡಿದ್ದೇನೆ. ಇಂತಹ ಜೋರಾದ ಸದ್ದಿನ ಡಿಜೆ ವಾಹನಗಳು ಆಸ್ಪತ್ರೆಗಳ ಬಳಿ ಸಾಗುವಾಗಲೂ ಅದೇ ಎದೆ ಬಿರಿಯುವ ಸದ್ದು ಮಾಡುತ್ತಿರುತ್ತದೆ ವಿನಃ ಆ ಸದ್ದನ್ನು ಕಡಿಮೆ ಮಾಡುವ ಹೊಣೆಗಾರಿಕೆ ಯಾರಿಗೂ ಇಲ್ಲ. ಈ ಹಿಂದೆ ಇಂತಹ ಡಿಜೆ ಸೌಂಡ್‌ಗಳ ಬಗ್ಗೆ ನಾನು ಬರೆದಾಗ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ನನ್ನ ಮೇಲೆ ಮುಗಿಬಿದ್ದಿದ್ದರು. 

    ಹಠಾತ್ ಸಾವಿಗೆ ಅನೇಕ ಕಾರಣಗಳು ಇರುತ್ತವೆ. ರಾಕೇಶ್ ಸಾವಿಗೆ ಏನು ಕಾರಣ ಅದು ನಮಗೂ ತಿಳಿದಿಲ್ಲ. ಆದರೆ ನಮ್ಮಸುತ್ತಮುತ್ತ ಇರುವ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಿಗೆ, ವಯಸ್ಸಾದವರಿಗೆ, ಆರೋಗ್ಯದ ಸನಸ್ಯೆಗಳಿರುವವರಿಗೆ ಈ ಡಿಜೆ ಸೌಂಡ್‌ ತುಂಬಾ ತೊಂದರೆ, discomfort ಉಂಟುಮಾಡುತ್ತದೆ ಎಂಬುದಂತೂ ಸತ್ಯ. ಮದುವೆ, ಮೆಹಂದಿ, ಉತ್ಸವಗಳು, ಮೆರವಣಿಗೆಗಳು ಎಲ್ಲದರ ಸಂಭ್ರಮವನ್ನು ಸಂಪೂರ್ಣವಾಗಿ ಸವಿಯೋಣ. ಆದರೆ ನಮ್ಮ ಡಿಜೆ ಸೌಂಡ್‌ಗಳನ್ನೂ ಇತಿಮಿತಿಯಲ್ಲಿ ಇಡುವುದರಲ್ಲೂ ಸಹ ನಾವು ಎಚ್ಚರವಹಿಸೋಣ. ನಮ್ಮ ಸಂಭ್ರಮ ಇತರರಿಗೆ ಕಿರಿಕಿರಿ ಆಗಕೂಡದು, ಅಲ್ಲವೆ?

    ರಾಕೇಶ್ ಅವರನ್ನು ಹಲವು ಬಾರಿ ಟಿವಿಯಲ್ಲಿ ನೋಡಿದ್ದೆ. ಅವರ ಮುಖದಲ್ಲಿ ಮೊದಲ ನೋಟಕ್ಕೆ ಎದ್ದು ಕಾಣುತ್ತಿದ್ದದ್ದು ಅವರ ಮುಗ್ದತೆ. ಬಹುದೂರ ಸಾಗಬೇಕಾಗಿದ್ದ ಪಯಣವನ್ನು ಬಲುಬೇಗನೆ ನಿಲ್ಲಿಸಿ ಹೊರಟು ಬಿಟ್ಟಿದ್ದಾರೆ ರಾಕೇಶ್. 

    ರಾಕೇಶ್, ನಿಮಗೆ ನಮನಗಳು ಮತ್ತು ಶ್ರದ್ಧಾಂಜಲಿ.

    ಲೇಖಕ: ಶಶಿಧರ ಹೆಮ್ಮಾಡಿ 

    ಶಶಿಧರ್ ಹೆಮ್ಮಾಡಿ ಅವರು ಕರಾವಳಿ ಕರ್ನಾಟಕ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ. ಅವರು ಕರಾವಳಿಯ ಸಾಮಾಜಿಕ-ರಾಜಕೀಯ ಸ್ಥಿತಿಗತಿಯ ಬಗ್ಗೆ ಗಹನ ತಿಳುವಳಿಕೆಯನ್ನು ಹೊಂದಿರುವ ಅನುಭವೀ ಪತ್ರಕರ್ತರು. ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಅನುಮತಿಯಿಂದ ಪ್ರಕಟಿಸಲಾಗಿದೆ.