Tag: electricity

  • ನಾವುಂದ ಸಬ್‌ಸ್ಟೇಷನ್‌ನ ತಾಂತ್ರಿಕ ದೋಷದಿಂದ ವಿದ್ಯುತ್‌ ಕಡಿತ: ಶೀಘ್ರ ಪರಿಹಾರಕ್ಕೆ ಕ್ರಮ. ಗ್ಯಾರಂಟಿ ಸಭೆಯಲ್ಲಿ ವಿವರಣೆ

    ಬೈಂದೂರು: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಅವರ ನೇತೃತ್ವದಲ್ಲಿ ಜರುಗಿತು.

    ಸಭೆಯ ಅಧ್ಯಕ್ಷತೆ ವಹಿಸಿದ ಮೋಹನ್ ಪೂಜಾರಿ ಮಾತನಾಡಿ, ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಗೆ ಕಾರಣವಾದ ಮೆಸ್ಕಾಂ ಉಪಕೇಂದ್ರದ ತಾಂತ್ರಿಕ ತೊಂದರೆಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸುವ ಕೆಲಸವಾಗಬೇಕು. ಜನರಿಗೆ ತೊಂದರೆಯಾಗದಂತೆ, ನಿಗದಿತ ಸಮಯದೊಳಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು. ಇದರಿಂದ ಸರ್ಕಾರದ ಬಗ್ಗೆ ತಪ್ಪು ಗ್ರಹಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಿ. ಜೊತೆಗೆ, ಜನಪ್ರತಿನಿಧಿಗಳು ವಾಸ್ತವಿಕತೆಯನ್ನು ಅರಿಯದೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.

    ಈ ವಿಷಯದ ಬಗ್ಗೆ ಸಭೆಯಲ್ಲಿ ಸ್ಪಷ್ಟನೆ ನೀಡಿದ ಬೈಂದೂರು ಮೆಸ್ಕಾಂ ಉಪಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರೀಶ್, ಬೈಂದೂರು ಮತ್ತು ಕೊಲ್ಲೂರು ಮೆಸ್ಕಾಂ ಉಪಕೇಂದ್ರಗಳಿಗೆ ವಿದ್ಯುತ್‌ ಪೂರೈಸುವ ನಾವುಂದದ 110 ಕೆ.ವಿ. ಸಬ್‌ಸ್ಟೇಷನ್‌ನ 20 ಎಂವಿಎ ಟ್ರಾನ್ಸ್‌ಫಾರ್ಮರ್‌ನಲ್ಲಿ ಕಳೆದ ವಾರ ತಾಂತ್ರಿಕ ದೋಷ ಕಂಡುಬಂದಿತು. ಈ ಕಾರಣದಿಂದ ಕುಂದಾಪುರ ಸಬ್‌ಸ್ಟೇಷನ್‌ನಿಂದ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ಲೋಡ್‌ನಿಂದ ಟ್ರಿಪ್ಪಿಂಗ್ ಸಮಸ್ಯೆ ಉಂಟಾಗಿದ್ದು, ಬೈಂದೂರು ಮತ್ತು ಕೊಲ್ಲೂರು ಪ್ರದೇಶಗಳಲ್ಲಿ ಕೆಲ ದಿನಗಳಿಂದ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಈಗಾಗಲೇ ಟ್ರಾನ್ಸ್‌ಫಾರ್ಮರ್ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಒಂದೆರಡು ದಿನಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವ ಸಂಭವವಿದೆ ಎಂದರು.

    ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಉಳಿದ ಕೆಲಸವನ್ನು ಪೂರ್ಣಗೊಳಿಸಿ, ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ, ಗ್ರಾಮೀಣ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

    ಬೈಂದೂರು ತಾಲೂಕಿನಲ್ಲಿ ಪಂಚ ಗ್ಯಾರಂಟಿಗೆ 182.43 ಕೋಟಿ ರೂ. ವೆಚ್ಚ

    ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಡಿ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 182.43 ಕೋಟಿ ರೂ. ವೆಚ್ಚವಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಜನವರಿವರೆಗೆ 96.61 ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. 48 ಫಲಾನುಭವಿಗಳಿಗೆ ಆಧಾರ್ ಬ್ಯಾಂಕಿಂಗ್ ಮ್ಯಾಪಿಂಗ್ ಬಾಕಿಯಿದ್ದು, ತಾಂತ್ರಿಕ ಕಾರಣಗಳಿಂದ 479 ಮತ್ತು 71 ಹೊಸ ನೋಂದಣಿಗಳು ಸೇರಿ ಒಟ್ಟು 616 ಫಲಾನುಭವಿಗಳಿಗೆ ಬಾಕಿಯಿದೆ.

    ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ವ್ಯಾಪ್ತಿಯ 27,942 ಕುಟುಂಬಗಳಿಗೆ 34.54 ಕೋಟಿ ರೂ., ತಲ್ಲೂರು ಮೆಸ್ಕಾಂ ವ್ಯಾಪ್ತಿಯ 1,935 ಕುಟುಂಬಗಳಿಗೆ 2.23 ಕೋಟಿ ರೂ. ಸೇರಿ ಒಟ್ಟು 36.78 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182 ಪಡಿತರ ಚೀಟಿಗಳಿಗೆ 1,89,26,610 ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾವಾಗಿದೆ. ಯುವ ನಿಧಿ ಯೋಜನೆಯಡಿ 340 ಫಲಾನುಭವಿಗಳಿಗೆ 59.34 ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ 1.36 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, 48.44 ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.

    ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ಗುಲಾಬಿ, ಸೂರ್ಯಕಾಂತಿ ಡಿ, ಗಣೇಶ ಗಾಣಿಗ, ಅಣ್ಣಪ್ಪ ಶೆಟ್ಟಿ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.