Tag: Fishermen

  • ಗಂಗೊಳ್ಳಿ: ಮೀನುಗಾರರ ಕಾಣೆಯಾಗಿರುವ ಪ್ರಕರಣ; ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

    ಗಂಗೊಳ್ಳಿ, ಜುಲೈ 16, 2025: ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಯ ಸಂದರ್ಭದಲ್ಲಿ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಇಂದು ಸ್ಥಳಕ್ಕೆ ಭೇಟಿ ನೀಡಿದರು. ನಿನ್ನೆ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಘಟನೆಯಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಲೋಹಿತ್ ಖಾರ್ವಿ (38) ಎಂಬಾತನ ಮೃತದೇಹ ಕುಂದಾಪುರದ ಕೋಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

    ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಅನಿತಾ ಆರ್‌. ಕೆ., ಸ್ಥಳೀಯಾಡಳಿತದ ಜನಪ್ರತಿನಿಧಿಗಳು, ಮಂಡಲ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರು ಪ್ರಮುಖರು ಉಪಸ್ಥಿತರಿದ್ದರು. ಈ ಹಂತದಲ್ಲಿ ಸಮುದ್ರ ಮತ್ತು ತೀರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ.

  • ಮರಳಿ ಬರಲಿಲ್ಲ…(ಕಡಲಲ್ಲಿ ಕಳೆದು ಹೋದ ಕನಸುಗಳು)

    ಮಳೆಯ ನಡುವೆ ಹೊರಟಿದ್ದರು ದೋಣಿಯಲಿ,

    ನಾಲ್ಕು ಜೀವಗಳು, ನಾಲ್ಕು ಕನಸುಗಳು…

    ಒಬ್ಬನು ದಡ ಸೇರಿದ,

    ಮೂವರು ಮರಳಿ ಬರಲಿಲ್ಲ…

    ಅಮ್ಮನ ಕಣ್ಣಿಗೆ ನಿದ್ರೆ ಬಂದಿಲ್ಲ,

    ಬಾಗಿಲು ಇನ್ನೂ ತೆರೆದೇ ಇದೆ,ಮಕ್ಕಳ ಪ್ರಶ್ನೆಗಳಿಗೆ ಉತ್ತರವೇ ಇಲ್ಲ,

    ಪತ್ನಿಯ ಹೃದಯದಲ್ಲಿ ಪಾಳುಬಿದ್ದ ಆಸೆ –

    ಹೌದು, ಈ ಬಾರಿ ಮರಳಿ ಬರಲಿಲ್ಲ…

    ಆ ದೋಣಿ ಕೇವಲ ಕಡಲಲ್ಲಿ ಅಲ್ಲ,

    ಒಂದು ಊರಿನ ನಂಬಿಕೆಯಲ್ಲಿ ಮುಳುಗಿತು.

    ಅವರ ಕುಟುಂಬದ ಭರವಸೆಯೂ ಮುಳುಗಿತು.

    ಅವರು ಹೋದರು…

    ಹೃದಯಗಳಲ್ಲಿ ನೆನೆಪಾಗಿ ಉಳಿದರು.

    ಕಣ್ಣೀರು ಮಾತ್ರ ದಡ ಸೇರುವಂತೆ ಹರಿದವು,

    ಆದರೆ ಅವರು ಮರಳಿ ಬರಲಿಲ್ಲ…

    • ಅನಾಮಿಕ ಗಂಗೊಳ್ಳಿ
  • ಗಂಗೊಳ್ಳಿ: ಮೀನುಗಾರರ ಕಾಣೆಯಾಗಿರುವ ಪ್ರಕರಣ; ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಭೇಟಿ

    ಗಂಗೊಳ್ಳಿ, ಜುಲೈ 15, 2025: ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಯ ಸಂದರ್ಭದಲ್ಲಿ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರಿರಾಮ್ ಶಂಕರ್ ಇಂದು ಸ್ಥಳಕ್ಕೆ ಭೇಟಿ ನೀಡಿದರು. ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಶೋಧ ಕಾರ್ಯಾಚರಣೆಗೆ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

    ಇಂದು ಎಸ್ಪಿ ಹರಿರಾಮ್ ಶಂಕರ್ ಗಂಗೊಳ್ಳಿಗೆ ಭೇಟಿ ನೀಡಿ ರಕ್ಷಣಾ ತಂಡಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಈ ಹಂತದಲ್ಲಿ ಸಮುದ್ರ ಮತ್ತು ತೀರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ.

  • ನಾಪತ್ತೆಯಾದ ಮೀನುಗಾರ ಪತ್ತೆಗೆ ತುರ್ತು ಕ್ರಮದ ಜೊತೆಗೆ ತುರ್ತು ಪರಿಹಾರದ ವ್ಯವಸ್ಥೆ-ಶಾಸಕ ಗುರುರಾಜ್ ಗಂಟಿಹೊಳೆ

    ಬೈಂದೂರು,ಜುಲೈ 15, 2025: ಗಂಗೊಳ್ಳಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ದೋಣಿ ದುರಂತದಲ್ಲಿ ಒರ್ವ ಮೀನುಗಾರ ಅಪಾಯದಿಂದ ಪಾರಾಗಿದ್ದು ಮೂವರು ಮೀನುಗಾರರು ನಾಪತ್ತೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಕಾಣೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ತುರ್ತು ಕ್ರಮಕ್ಕೆ ಈಗಾಗಲೇ ನಿರ್ದೇಶಿಸಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.

    ಮೀನುಗಾರ ಕುಟುಂಬಕ್ಕೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಡಿ ಅಗತ್ಯ ಪರಿಹಾರ ಒದಗಿಸಲು ಶಾಸಕರಾದ ಯಶ್ ಪಾಲ್ ಸುವರ್ಣ ಸಹಿತ ಜಿಲ್ಲೆಯ ಶಾಸಕರ ಮೂಲಕ ಮೀನುಗಾರಿಕೆ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಇಲಾಖೆಯಿಂದ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ತುರ್ತಾಗಿ ಒದಗಿಸುವ ವ್ಯವಸ್ಥೆ ಆಗಿದೆ.

    ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿರುತ್ತದೆ. ಹೀಗಾಗಿ ನಾಡದೋಣಿ, ಟ್ರಾಲ್ ದೋಣಿ ಮೀನುಗಾರರು ವಿಶೇಷ ಎಚ್ಚರಿಕೆ ವಹಿಸಬೇಕು ಮತ್ತು ಲೈಫ್ ಜಾಕೇಟ್ ಬಳಸುವುದನ್ನು ಆದಷ್ಟು ಕಡ್ಡಾಯ ಮಾಡಿಕೊಳ್ಳುವುದು ಉತ್ತಮ. ಲೈಫ್ ಜಾಕೇಟ್ ಬಳಸುವುದರಿಂದ ಜೀವ ಹಾನಿ ತಪ್ಪಿಸಲು ಸಾಧ್ಯವಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

    ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿಯು ಇಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದಿರುವ ಸುದ್ದಿ ಗಮನಕ್ಕೆ ಬಂದಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲು ಸೂಚೊಸಲಾಯಿತು.

    ಅವಘಡದಲ್ಲಿ ಒಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಉಳಿದ ಮೂವರ ರಕ್ಷಣೆಗೆ ಮೀನುಗಾರರು ಸೇರಿದಂತೆ ಜಿಲ್ಲಾಡಳಿತ ಧಾವಿಸಿದ್ದು, ಎಲ್ಲರೂ ಸುರಕ್ಷಿತವಾಗಿ ಮರಳಿ ಬರಲೆಂದು ಪ್ರಾರ್ಥಿಸೋಣ. – ಕಿರಣ್ ಕುಮಾರ್ ಕೊಡ್ಗಿ

    ಗಂಗೊಳ್ಳಿ ಬಂದರಿನಿಂದ ನಾಡ ದೋಣಿ ಮೀನುಗಾರಿಕೆಗೆ ತೆರಳಿದ ದೋಣಿಯು ಇಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದಿರುವ ದುರದೃಷ್ಟಕರ ಘಟನೆ ನಡೆದಿದೆ.

    ಘಟನೆಯ ಬಗ್ಗೆ ಈಗಾಲೇ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಯವರೊಂದಿಗೆ ಸಮಾಲೋಚನೆ ನಡೆಸಿ ಮೀನುಗಾರಿಕಾ ಸಚಿವರಾದ ಮಂಕಲ್ ಎಸ್ ವೈದ್ಯ ರವರಿಗೂ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಕಣ್ಮರೆಯಾಗಿರುವ ಮೀನುಗಾರರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲು, ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ.

    ಅವಘಡದಲ್ಲಿ ಒಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಉಳಿದ ಮೂವರ ರಕ್ಷಣೆಗೆ ಮೀನುಗಾರರು ಸೇರಿದಂತೆ ಜಿಲ್ಲಾಡಳಿತ ಧಾವಿಸಿದ್ದು, ಎಲ್ಲರ ಸುರಕ್ಷತೆಗೆ ಪ್ರಾರ್ಥಿಸೋಣ. – ಯಶ್ ಪಾಲ್ ಸುವರ್ಣ