Tag: Gangolli

  • ಮರಳಿ ಬರಲಿಲ್ಲ…(ಕಡಲಲ್ಲಿ ಕಳೆದು ಹೋದ ಕನಸುಗಳು)

    ಮಳೆಯ ನಡುವೆ ಹೊರಟಿದ್ದರು ದೋಣಿಯಲಿ,

    ನಾಲ್ಕು ಜೀವಗಳು, ನಾಲ್ಕು ಕನಸುಗಳು…

    ಒಬ್ಬನು ದಡ ಸೇರಿದ,

    ಮೂವರು ಮರಳಿ ಬರಲಿಲ್ಲ…

    ಅಮ್ಮನ ಕಣ್ಣಿಗೆ ನಿದ್ರೆ ಬಂದಿಲ್ಲ,

    ಬಾಗಿಲು ಇನ್ನೂ ತೆರೆದೇ ಇದೆ,ಮಕ್ಕಳ ಪ್ರಶ್ನೆಗಳಿಗೆ ಉತ್ತರವೇ ಇಲ್ಲ,

    ಪತ್ನಿಯ ಹೃದಯದಲ್ಲಿ ಪಾಳುಬಿದ್ದ ಆಸೆ –

    ಹೌದು, ಈ ಬಾರಿ ಮರಳಿ ಬರಲಿಲ್ಲ…

    ಆ ದೋಣಿ ಕೇವಲ ಕಡಲಲ್ಲಿ ಅಲ್ಲ,

    ಒಂದು ಊರಿನ ನಂಬಿಕೆಯಲ್ಲಿ ಮುಳುಗಿತು.

    ಅವರ ಕುಟುಂಬದ ಭರವಸೆಯೂ ಮುಳುಗಿತು.

    ಅವರು ಹೋದರು…

    ಹೃದಯಗಳಲ್ಲಿ ನೆನೆಪಾಗಿ ಉಳಿದರು.

    ಕಣ್ಣೀರು ಮಾತ್ರ ದಡ ಸೇರುವಂತೆ ಹರಿದವು,

    ಆದರೆ ಅವರು ಮರಳಿ ಬರಲಿಲ್ಲ…

    • ಅನಾಮಿಕ ಗಂಗೊಳ್ಳಿ
  • ಉಡುಪಿ-ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ ಡಿ ಪಿ ಐ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ ಸಭೆ

    ಬೈಂದೂರು, 14 ಜುಲೈ 2025: ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ERM ರಾಜ್ಯ ಉಸ್ತುವಾರಿ ಅಬ್ರಾರ್ ಅಹ್ಮದ್ ರವರ ಸಮ್ಮುಖದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ (ERM) ಸಭೆಯು ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ ಅವರು “ಪಕ್ಷದ ರಾಜಕೀಯ ಶಕ್ತಿ ಮತ್ತು ಸಾರ್ವತ್ರಿಕ ಪ್ರಭಾವವನ್ನು ಮತ್ತಷ್ಟು ಬಲಪಡಿಸಲು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಮುಖ ಹಂತವಾಗಿವೆ. ಈ ಹಿನ್ನಲೆಯಲ್ಲಿ, ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳ ಜವಾಬ್ದಾರಿ ಬಹಳ ಹೆಚ್ಚಾಗಿದೆ. ರಾಜಕೀಯ ಬದ್ಧತೆ ಮತ್ತು ಕಾರ್ಯಕ್ಷಮತೆ ಮೂಲಕ, ಪಕ್ಷವನ್ನು ‘Emerging to Power’ ದಿಕ್ಕಿಗೆ ನಯವಾಗಿ ಮುನ್ನಡೆಸುವ ಮಹತ್ವದ ಪಾತ್ರ ಇವರು ನಿಭಾಯಿಸಬೇಕಿದೆ,” ಎಂದು ಸಲಹೆ ನೀಡಿದರು.

    ಸಭೆಯಲ್ಲಿ ಮಾತನಾಡಿದ ಅಬ್ರಾರ್ ಅಹ್ಮದ್ ಅವರು, “ಪಕ್ಷದ ಪರವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಕಾಲಕಾಲಕ್ಕೆ ತಕ್ಕಂತೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತಿದ್ದು, ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಸಭೆಯಲ್ಲಿ ಪಾಲ್ಗೊಂಡಿದ್ದ ಕಾವ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೌಶೀನ್, ಗಂಗೊಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ತಬ್ರೇಜ್ ಹಾಗೂ ವಿವಿಧ ಪಂಚಾಯಿತಿ ಸದಸ್ಯರುಗಳು ತಮ್ಮ ಅನುಭವವನ್ನು ಹಂಚಿಕೊಂಡರು.
    ಅವರು ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು, ಸರಕಾರದ ಯೋಜನೆಗಳ ಅನುಷ್ಠಾನ, ಮತ್ತು ಜನರ ಪೈಕಿ ಪಕ್ಷದ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

    ಪಕ್ಷದ ಜನಪರ ರಾಜಕೀಯ ಭದ್ರತೆಯ ರೂಪರೇಖೆಗಾಗಿ ಈ ಸಭೆ ಒಂದು ದಿಕ್ಕು ತೋರುವ ಹೆಜ್ಜೆಯಾಗಿದೆ.
    ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜಾಕ್ ವೈ. ಎಸ್, ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಹನೀಫ್, ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಮೀರ್ ಉಪಸ್ಥಿತರಿದ್ದರು.

  • ಮುಂದವರಿದ ಮಳೆ – ಜೂ.17ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ

    ಉಡುಪಿ,ಜೂ.16: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಪಿಯುಸಿ ಹಾಗೂ ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ.

    ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

    ಕಳೆದ ಆರು ದಿನಗಳಿಂದ ರೆಡ್‌ ಅಲರ್ಟ್‌ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶನಿವಾರ ಮಳೆ ಕಡಿಮೆಯಿದ್ದುದರಿಂದ ಎಂದಿನಂತೆ ತರಗತಿಗಳು ನಡೆದಿದ್ದವು. ಸೋಮವಾರ ಆರೆಂಜ್‌ ಅಲರ್ಟ್‌ ಇದ್ದುದರಿಂದ ಜಿಲ್ಲಾಡಳಿತ ನೇರವಾಗಿ ರಜೆ ಘೋಷಿಸದೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ನಿರ್ಧಾರವನ್ನು ಶಾಲಾಡಳಿತಕ್ಕೆ ಬಿಟ್ಟಿದ್ದು, ಕೆಲವು ಶಾಲೆಗಳು ಅದಾಗಲೇ ರಜೆಯನ್ನೂ ಘೋಷಿಸಿಕೊಂಡಿದ್ದವು. ಆದರೆ ಅಂತಿಮವಾಗಿ ಜಿಲ್ಲಾಡಳಿತವೇ ರಜೆ ನೀಡಿತ್ತು. ಮಂಗಳವಾರವೂ ಅಧಿಕ ಮಳೆ ಮುನ್ಸೂಚನೆ ಇರುವುದರಿಂದ ರಜೆ ಘೋಷಿಸಲಾಗಿದೆ.