ಗಂಗೊಳ್ಳಿ, ಜುಲೈ 7, 2025: ಗುಜ್ಜಾಡಿ ಕಂಚುಗೋಡಿನ ಗ್ರಾಮಸ್ಥರಿಗೆ ಕಂಚುಗೋಡು ಸನ್ಯಾಸಿಬಲ್ಲೆ ಬಳಿ ಸ್ಮಶಾನಕ್ಕೆ ಹೋಗಲು ಅನೇಕ ವರ್ಷಗಳಿಂದ ಇದ್ದ ರಸ್ತೆಗೆ ಖಾಸಗಿ ವ್ಯಕ್ತಿ ತಡೆಗೋಡೆ ನಿರ್ಮಿಸಿದ್ದು ತಡೆಗೋಡೆಯನ್ನು ತೆರವು ಮಾಡಬೇಕೆಂದು ಜು.7 ರಂದು ಗುಜ್ಜಾಡಿ ಗ್ರಾಮ ಪಂಚಾಯತ್ ಎದುರು ಇಡೀ ದಿನ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಮುಚ್ಚಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಣಕು ಶವವನ್ನು ಕಂಚುಗೋಡಿನಿಂದ ಮೆರವಣಿಗೆಯಲ್ಲಿ ಹೊತ್ತು ತಂದು ಪಂಚಾಯತ್ ಎದುರು ಇರಿಸಿಕೊಂಡು ಪ್ರತಿಭಟನೆ ನಡೆಸಿದರು. ‘ಗುಜ್ಜಾಡಿ ಗ್ರಾಮ ಪಂಚಾಯತ್ ಕಣ್ಣಿದ್ದು ಕುರುಡಾಗಿದೆ’, ‘ಪ್ರತಿನಿಧಿಗಳು ಎಂಜಲು ಕಾಸಿಗೆ ಕೈ ಚಾಚಿದ್ದಾರೆ’, ‘ಮುಕ್ತಿಧಾಮಕ್ಕೆ ಬೇಕಿದೆ ಸಂಪರ್ಕ ರಸ್ತೆ’ ಎಂಬಿತ್ಯಾದಿ ನಾಮಫಲಕಗಳನ್ನು ಹಿಡಿದುಕೊಂಡು ಪಂಚಾಯತ್ ಎದುರು ಅಣಕು ಶವದ ಮೆರವಣಿಗೆ ಬಂದು ಪ್ರತಿಭಟನೆ ನಡೆಸಿದರೂ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ ಯಾವುದೇ ಸದಸ್ಯರಾಗಲಿ ೪ ಗಂಟೆಯವರೆಗೂ ಪಂಚಾಯತ್‌ಗೆ ಆಗಮಿಸದೆ ಉಳಿದರು. ರೆವಿನ್ಯೂ ಇನ್ಸಪೆಕ್ಟರ್ ಆಗಮಿಸಿ ಮನವೊಲಿಸಲು ಯತ್ನಿಸಿದಾಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು.

ಈ ಸಂದರ್ಭ ಪ್ರದೀಪ್ ಖಾರ್ವಿ ಮಾತನಾಡಿ ನೂರಾರು ವರ್ಷಗಳಿಂದ ಇಲ್ಲಿರುವ ದಾರಿಯಲ್ಲಿ ನಾವು ತಿರುಗಾಡಿಕೊಂಡಿದ್ದು ಆ ದಾರಿಯನ್ನು ನಿರ್ಬಂಧಿಸಿ ಎತ್ತರದ ಪಾಗಾರ ನಿರ್ಮಿಸಿದ್ದಾರೆ. ಇಲ್ಲಿರುವ ದುರ್ಗಾಪರಮೇಶ್ವರೀ, ರಾಮನಾಥ ಹಾಗೂ ನಾಗ ದೇವಸ್ಥಾನಗಳಿಗೆ ಹೋಗುವ ದಾರಿ ಬಂದ್ ಮಾಡಿದ್ದಾರೆ. ಅಧಿಕಾರಿಗಳು ಇದನ್ನು ತೆರವು ಮಾಡಬೇಕು. ಅಲ್ಲಿಯೇ ಸ್ಮಶಾನ ಮುಂದುವರಿಯಬೇಕು. ನಮಗೆ ಅಲ್ಲಿಗೆ ಹೋಗಲು ಹಿಂದಿನಂತೆಯೇ ಮಾರ್ಗದ ವ್ಯವಸ್ಥೆ ಆಗಬೇಕು ಎಂದರು.

ಪಿಡಿಓ ಶ್ರೀಮತಿ ಅನಿತಾ ಪ್ರತಿಭಟನಾ ನಿರತರನ್ನುದ್ದೇಶಿ ಮಾತನಾಡಿ ಕಾನೂನು ಬಾಹಿರ ಎಂದು ತಿಳಿದು ನಾವು ಹಿಂದೆ ಕೊಟ್ಟ ಲೈಸನ್ಸ್‌ನ್ನು ಕ್ಯಾನ್ಸಲ್ ಮಾಡಿದ್ದೇವೆ. ಖಾಸಗಿ ಜಾಗವಾದ್ದರಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು. ಈ ಸಂದರ್ಭ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಖಾರ್ವಿ ಮಾತನಾಡಿ ಪಂಚಾಯತ್ ಕಾನೂನಿನಲ್ಲಿ ತೆರವು ಮಾಡಲು ಅವಕಾಶವಿದ್ದರೂ ನೀವು ಆ ಕೆಲಸ ಮಾಡಿಲ್ಲ ಎಂದರು.

ಸಂಜೆಯವರೆಗೂ ಪ್ರತಿಭಟನೆ ನಡೆಸಿ ಸಂಜೆ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಗಮಿಸಿ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಖಾರ್ವಿ, ನಾಗೇಶ್ ಪಟೇಲ್, ಕೃಷ್ಣ ಪಟೇಲ್, ಪ್ರದೀಪ್ ಪಟೇಲ್, ಪ್ರಶಾಂತ್ ಪೂಜಾರಿ, ರಾಘವೇಂದ್ರ ಖಾರ್ವಿ, ವಿನೋದ್ ಖಾರ್ವಿ, ಸಂತೋಷ್ ಪೂಜಾರಿ, ಶರತ್ ಖಾರ್ವಿ, ನಾಗೇಶ್ ಖಾರ್ವಿ, ಅರುಣ್ ಖಾರ್ವಿ, ಮಿಥುನ್ ಪಟೇಲ್, ಸಂದೀಪ್ ಖಾರ್ವಿ, ಜಗದೀಶ್ ಪಟೇಲ್, ರಾಜ ಖಾರ್ವಿ, ಹರೀಶ್ ಪಟೇಲ್, ಮೋಹನ್ ಖಾರ್ವಿ, ಶಂಕರ್ ಪಟೇಲ್, ರಮೇಶ್ ಖಾರ್ವಿ ಹಾಗೂ ಕಂಚುಗೋಡು ಗ್ರಾಮಸ್ಥರು ಭಾಗವಹಿಸಿದ್ದರು.