Tag: Governance

  • ವಿಐಪಿ ಸಂಚಾರಕ್ಕೆ ಸೈರನ್ ನಿಷೇಧ: ಡಿಜಿ-ಐಜಿಪಿ ಆದೇಶ!

    ಬೆಂಗಳೂರು, ಜುಲೈ 21, 2025: ವಾಹನ ಸವಾರರ ಅನುಕೂಲ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಕರ್ನಾಟಕ ರಾಜ್ಯದಲ್ಲಿ ಇನ್ಮುಂದೆ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಡಿ.ಜಿ.-ಐ.ಜಿ.ಪಿ. ಡಾ. ಎಂ.ಎ. ಸಲೀಂ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

    ಸಾರ್ವಜನಿಕರ ಸುರಕ್ಷತೆ ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ, ವಿಐಪಿ ಸಂಚಾರ ಸಮಯದಲ್ಲಿ ಸೈರನ್ ಬಳಕೆಯನ್ನು ನಿಲ್ಲಿಸುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಣ್ಯ ವ್ಯಕ್ತಿಗಳ ಸಂಚಾರದಲ್ಲಿ ಅನಗತ್ಯ ಸೈರನ್ ಬಳಕೆಯಿಂದ ಅವರ ರಸ್ತೆ ಮಾಹಿತಿ ಅನಧಿಕೃತ ವ್ಯಕ್ತಿಗಳಿಗೆ ತಿಳಿಯಬಹುದು ಮತ್ತು ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ, ಇದು ಸಾರ್ವಜನಿಕರಿಗೆ ತೊಂದರೆಯನ್ನೂ ಉಂಟುಮಾಡುತ್ತದೆ.

    ಸೈರನ್‌ನ ಅನಗತ್ಯ ಬಳಕೆಯಿಂದ ಇತರ ಚಾಲಕರಿಗೆ ಗೊಂದಲವಾಗಿ ಅಪಘಾತದ ಸಾಧ್ಯತೆಯೂ ಇದೆ. ಈ ಸಂದರ್ಭದಲ್ಲಿ, ವಾಹನಗಳ ತುರ್ತು ಚಲನೆಗೆ ವೈರ್‌ಲೆಸ್ ಕಮ್ಯುನಿಕೇಶನ್ ವ್ಯವಸ್ಥೆಯನ್ನು ಬಳಸುವುದು ಶಿಸ್ತಿನ ಮತ್ತು ಸುರಕ್ಷಿತ ಮಾರ್ಗ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸೈರನ್ ಬಳಕೆಯನ್ನು ಕೇವಲ ಅಂಬ್ಯುಲೆನ್ಸ್, ಪೊಲೀಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಮಾತ್ರ ಮಿತವಾಗಿ ಅನುಮತಿಸಲಾಗಿದೆ.

    ಈ ಆದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಅಧೀನ ಅಧಿಕಾರಿಗಳಿಗೆ ಜಾರಿ ಮಾಡಬೇಕೆಂದು ಸೂಚಿಸಲಾಗಿದೆ..

  • ಎಲ್ಲಾ ಸಿನಿಮಾ ಥಿಯೇಟರ್‌ಗಳಲ್ಲಿ ಟಿಕೆಟ್ ದರ ₹200ಕ್ಕೆ ಮಿತಿಗೊಳಿಸಲು ಪ್ರಸ್ತಾಪ; ಕರ್ನಾಟಕ ಸರ್ಕಾರ

    ಬೆಂಗಳೂರು, ಜುಲೈ 15, 2025: ಸಿನಿಮಾ ವೀಕ್ಷಣೆಯನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡಲು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನದ ಟಿಕೆಟ್ ದರವನ್ನು ₹200ಕ್ಕೆ ಮಿತಿಗೊಳಿಸುವ ಒಂದು ಕರಡು ಅಧಿಸೂಚನೆಯನ್ನು ಮಂಗಳವಾರ (ಜುಲೈ 15) ಜಾರಿಗೊಳಿಸಿದೆ. ಈ ಪ್ರಸ್ತಾವಿತ ನಿಯಮವು ಮಲ್ಟಿಪ್ಲೆಕ್ಸ್‌ಗಳ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಿಗೆ ಮತ್ತು ಎಲ್ಲಾ ಭಾಷೆಯ ಚಿತ್ರಗಳಿಗೆ ಅನ್ವಯವಾಗಲಿದ್ದು, ಈ ದರವು ಮನರಂಜನಾ ತೆರಿಗೆಯನ್ನು ಒಳಗೊಂಡಿರುತ್ತದೆ.

    ಕರಡು ಅಧಿಸೂಚನೆಯು ಕರ್ನಾಟಕ ಸಿನಿಮಾಸ್ (ನಿಯಂತ್ರಣ) ನಿಯಮಗಳು, 2014 ರಲ್ಲಿ ತಿದ್ದುಪಡಿ ಮಾಡಲು ಪ್ರಸ್ತಾಪಿಸಿದ್ದು, ಇದನ್ನು ಕರ್ನಾಟಕ ಸಿನಿಮಾಸ್ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯಲಾಗುತ್ತದೆ.

    ಸಾರ್ವಜನಿಕರಿಂದ ಅಭಿಪ್ರಾಯಗಳು ಮತ್ತು ಆಕ್ಷೇಪಣೆಗಳು

    ಈ ಕರಡು ಅಧಿಸೂಚನೆಯು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಕಾಲ ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸ್ವೀಕರಿಸಲಿದೆ. ಈ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಬೆಂಗಳೂರಿನ ವಿಧಾನ ಸೌಧದಲ್ಲಿರುವ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು.

    ಅಧಿಸೂಚನೆಯಲ್ಲಿ ಹೀಗೆ ತಿಳಿಸಲಾಗಿದೆ: “ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳ ಸೇರಿದಂತೆ, ಎಲ್ಲಾ ಭಾಷೆಯ ಚಿತ್ರಗಳ ಪ್ರತಿ ಪ್ರದರ್ಶನದ ಟಿಕೆಟ್ ದರವು ಮನರಂಜನಾ ತೆರಿಗೆ ಸೇರಿದಂತೆ ₹200ಕ್ಕಿಂತ ಹೆಚ್ಚಿರಬಾರದು.”

    ಹಿನ್ನೆಲೆ ಮತ್ತು ಬಜೆಟ್ ಭರವಸೆ

    ಟಿಕೆಟ್ ದರವನ್ನು ಮಿತಿಗೊಳಿಸುವ ಕಲ್ಪನೆಯು ಹಲವಾರು ವರ್ಷಗಳಿಂದ ಚರ್ಚೆಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 2025-26ರ ಬಜೆಟ್ ಭಾಷಣದಲ್ಲಿ ಈ ಪ್ರಸ್ತಾಪವನ್ನು ಪುನರುಚ್ಚರಿಸಿ, ಮನರಂಜನೆಗೆ ಸಮಾನ ಪ್ರವೇಶವನ್ನು ಉತ್ತೇಜಿಸಲು ₹200ರ ದರದ ಮಿತಿಯನ್ನು ಜಾರಿಗೊಳಿಸುವ ಭರವಸೆ ನೀಡಿದ್ದರು.

    ಇದು ಚಿತ್ರಮಂದಿರದ ಟಿಕೆಟ್ ದರವನ್ನು ನಿಯಂತ್ರಿಸುವ ಮೊದಲ ಪ್ರಯತ್ನವಲ್ಲ. ಕಾಂಗ್ರೆಸ್ ಸರ್ಕಾರವು 2017-18ರ ಬಜೆಟ್‌ನಲ್ಲಿ ಏಕರೂಪದ ದರವನ್ನು ಘೋಷಿಸಿದ ನಂತರ 2018ರಲ್ಲಿ ಇದೇ ರೀತಿಯ ಆದೇಶವನ್ನು ಹೊರಡಿಸಿತ್ತು, ಆದರೆ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅದನ್ನು ಹಿಂಪಡೆಯಲಾಯಿತು.

    ಇತರ ರಾಜ್ಯಗಳ ಉದಾಹರಣೆ

    ಈ ನಿಯಮ ಜಾರಿಗೆ ಬಂದರೆ, ಕರ್ನಾಟಕವು ಈಗಾಗಲೇ ಚಿತ್ರಮಂದಿರದ ಟಿಕೆಟ್ ದರವನ್ನು ನಿಯಂತ್ರಿಸಿರುವ ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಸಾಲಿಗೆ ಸೇರಲಿದೆ.

    ಇಂಡಸ್ಟ್ರಿ ಮತ್ತು ಸಾರ್ವಜನಿಕರಿಂದ ಪ್ರತಿಕ್ರಿಯೆ

    ಕರಡು ಅಧಿಸೂಚನೆಯು ಈಗ ಚಿತ್ರಮಂದಿರ ಮಾಲೀಕರು, ಉದ್ಯಮದ ಒಡದಾಳಿಗಳು ಮತ್ತು ಸಾರ್ವಜನಿಕರಿಂದ ಪ್ರತಿಕ್ರಿಯೆಗೆ ತೆರೆದಿದೆ. 15 ದಿನಗಳ ಸಮಾಲೋಚನಾ ಅವಧಿಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

  • ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇದೆ: ಡಾ.ಜಿ.ಪರಮೇಶ್ವರ್ 

    ಕಾರ್ಕಳ: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವುದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್  ಆರೋಪಿಸಿದ್ದಾರೆ.

    ಕಾರ್ಕಳದ ಬೆಳ್ಮಣ್ಣಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಸಕಾಲದಲ್ಲಿ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಈಗ 18 ಸಾವಿರ ಹುದ್ದೆಗಳು ಖಾಲಿ ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಉಂಟಾಗಿದೆ. ನಿವೃತ್ತರಾದವರ ಜಾಗಕ್ಕೆ ನೇಮಕಾತಿ ಮಾಡಿಕೊಳ್ಳಬೇಕಿತ್ತು, ಆದರೆ ಹಾಗೆ ಆಗಿಲ್ಲ. ಈಗ ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ ಎಂದು ಗೃಹ ಸಚಿವರು ತಿಳಿಸಿದರು.

    ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬದ ಬಗ್ಗೆ ಮಾತನಾಡಿದ ಅವರು, “ಒಳಮೀಸಲಾತಿ ವಿಚಾರದಿಂದಾಗಿ ಎರಡು-ಮೂರು ತಿಂಗಳು ವಿಳಂಬವಾಗಿದೆ. ಈಗ ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

    ಪಿಎಸ್‌ಐ ಹಗರಣದಿಂದಾದ ವಿಳಂಬ:
    ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು. “545 ಪಿಎಸ್‌ಐ ಹುದ್ದೆಗಳ ನೇಮಕಾತಿ ವೇಳೆ ಹಗರಣ ನಡೆದಿತ್ತು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಯೇ ನಿಲ್ಲುವಂತಾಗಿತ್ತು. ಈಗ ನಾವು ಈಗಾಗಲೇ 545 ಮಂದಿಗೆ ನೇಮಕಾತಿ ಆದೇಶ ನೀಡಿದ್ದೇವೆ. ಇನ್ನು 402 ಮಂದಿಗೆ ಒಂದು ವಾರದಿಂದ ಹದಿನೈದು ದಿನಗಳಲ್ಲಿ ಆದೇಶ ನೀಡುತ್ತೇವೆ,” ಎಂದು ಪರಮೇಶ್ವರ್ ಭರವಸೆ ನೀಡಿದರು.

    ಎಸ್‌ಐಗಳ ನೇಮಕ್ಕೆ ಕ್ರಮ:
    ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 600 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. “ಒಂದೂವರೆ ಸಾವಿರ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಖಾಲಿ ಇಟ್ಟುಕೊಂಡರೆ ಸಮಸ್ಯೆಯಾಗದೆ ಇರುತ್ತಾ?” ಎಂದು ಪ್ರಶ್ನಿಸುವ ಮೂಲಕ ಹಿಂದಿನ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

  • 13 ಐಎಎಸ್ ಅಧಿಕಾರಿಗಳ ವರ್ಗಾವಣೆ; ಎರಡು ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳ ನೇಮಕ

    ಬೆಂಗಳೂರು, ಜೂಲೈ 8, 2025: ಕರ್ನಾಟಕ ಸರ್ಕಾರವು ಸೋಮವಾರ (ಜೂಲೈ 8, 2025) ಗಣನೀಯ ಆಡಳಿತಾತ್ಮಕ ಬದಲಾವಣೆಯನ್ನು ಜಾರಿಗೊಳಿಸಿ, 13 ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳನ್ನು ವಿವಿಧ ಇಲಾಖೆಗಳು ಮತ್ತು ಜಿಲ್ಲೆಗಳಿಗೆ ವರ್ಗಾಯಿಸಿ ನೇಮಕ ಮಾಡಿದೆ. ವಿಶೇಷವಾಗಿ, ವಿಜಯಪುರ ಮತ್ತು ಯಾದಗಿರಿ ಎಂಬ ಎರಡು ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ.

    ಅಧಿಕಾರಿಗಳ ಹೆಸರು ಮತ್ತು ಅವರ ನೇಮಕಾತಿಗಳ ವಿವರ ಈ ಕೆಳಗಿನಂತಿದೆ:

    • ಜೆಹೆರಾ ನಸೀಮ್ (ಐಎಎಸ್:2013:ಕೆಎನ್), ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು, ಇವರನ್ನು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ, ಕಲಬುರಗಿಗೆ ವರ್ಗಾಯಿಸಲಾಗಿದೆ.
    • ಭೂಬಲನ್ ಟಿ (ಐಎಎಸ್:2015:ಕೆಎನ್), ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಇ-ಗವರ್ನೆನ್ಸ್ ಇಲಾಖೆಯ ಇ-ಗವರ್ನೆನ್ಸ್ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಬೆಂಗಳೂರಿಗೆ ವರ್ಗಾಯಿಸಲಾಗಿದೆ.
    • ಡಾ. ಸುಶೀಲಾ ಬಿ (ಐಎಎಸ್:2015:ಕೆಎನ್), ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ, ಕಲಬುರಗಿಗೆ ವರ್ಗಾಯಿಸಲಾಗಿದೆ.
    • ಡಾ. ಆನಂದ್ ಕೆ (ಐಎಎಸ್:2016:ಕೆಎನ್), ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಇವರನ್ನು ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
    • ಪಾಂಡ್ವೆ ರಾಹುಲ್ ತುಕಾರಾಮ್ (ಐಎಎಸ್:2016:ಕೆಎನ್), ರಾಯಚೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಇವರನ್ನು ಕಲಬುರಗಿಯ ಸಾರ್ವಜನಿಕ ಶಿಕ್ಷಣಕ್ಕಾಗಿ ಹೆಚ್ಚುವರಿ ಆಯುಕ್ತರಾಗಿ ವರ್ಗಾಯಿಸಲಾಗಿದೆ.
    • ಭೋಯರ್ ಹರ್ಷಲ್ ನಾರಾಯಣರಾವ್ (ಐಎಎಸ್:2016:ಕೆಎನ್), ಅಟಲ್ ಜನ ಸ್ನೇಹಿ ಕೇಂದ್ರದ ನಿರ್ದೇಶಕರಾಗಿದ್ದ ಇವರನ್ನು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
    • ಡಾ. ದಿಲೀಶ್ ಸಾಸಿ (ಐಎಎಸ್:2017:ಕೆಎನ್), ಇ-ಗವರ್ನೆನ್ಸ್ ಇಲಾಖೆಯ ಇ-ಗವರ್ನೆನ್ಸ್ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಇವರನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಕಾರವಾರಕ್ಕೆ ವರ್ಗಾಯಿಸಲಾಗಿದೆ.
    • ಈಶ್ವರ್ ಕುಮಾರ್ ಕಾಂಡೂ (ಐಎಎಸ್:2018:ಕೆಎನ್), ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಇವರನ್ನು ರಾಯಚೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ.
    • ಶಶಿಧರ್ ಕುರೇರ (ಐಎಎಸ್:2018:ಕೆಎನ್), ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಇವರನ್ನು ಕೆಯುಐಡಿಎಫ್‌ಸಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ, ಬೆಂಗಳೂರಿಗೆ ವರ್ಗಾಯಿಸಲಾಗಿದೆ.
    • ಆಕಾಶ್ ಎಸ್ (ಐಎಎಸ್:2019:ಕೆಎನ್), ಕಲಬುರಗಿಯ ಸಾರ್ವಜನಿಕ ಶಿಕ್ಷಣಕ್ಕಾಗಿ ಹೆಚ್ಚುವರಿ ಆಯುಕ್ತರಾಗಿದ್ದ ಇವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ.
    • ಅಪರ್ಣಾ ರಮೇಶ್ (ಐಎಎಸ್:2021:ಕೆಎನ್), ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದ ಇವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಗವರ್ನೆನ್ಸ್) ಯ ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವೀಸಸ್‌ನ ನಿರ್ದೇಶಕರಾಗಿ, ಬೆಂಗಳೂರಿಗೆ ನೇಮಿಸಲಾಗಿದೆ. ಇವರು ಹಣಕಾಸು ಇಲಾಖೆಯ ಎಚ್‌ಆರ್‌ಎಂಎಸ್ 2.0 ಯ ಉಪ ಯೋಜನಾ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊಂದಿದ್ದಾರೆ.
    • ನರವಾಡೆ ವಿನಾಯಕ್ ಕರ್ಭಾರಿ (ಐಎಎಸ್:2021:ಕೆಎನ್), ಮಡಿಕೇರಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿದ್ದ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಮಂಗಳೂರಿಗೆ ವರ್ಗಾಯಿಸಲಾಗಿದೆ.
    • ಯತೀಶ್ ಆರ್ (ಐಎಎಸ್:2021:ಕೆಎನ್), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಗವರ್ನೆನ್ಸ್) ಯ ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವೀಸಸ್‌ನ ನಿರ್ದೇಶಕರಾಗಿದ್ದ ಇವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ.
  • ‘ಸರ್​​ಪ್ರೈಸ್ ರೀತಿಯ ಚೆಕ್​ ಬೇಡ’: ಅವೈಜ್ಞಾನಿಕ ತಪಾಸಣೆ ತಡೆಗೆ ಬೆಂಗಳೂರು ಪೊಲೀಸರು ಕೈಗೊಂಡ ಕ್ರಮಗಳೇನು?

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಎಲ್ಲೆಂದರಲ್ಲಿ ನಿಂತು ಅವೈಜ್ಞಾನಿಕವಾಗಿ ತಪಾಸಣೆ ಮಾಡದಂತೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದ ರೀತಿ ಕಾರ್ಯಾಚರಣೆ ನಡೆಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

    ಜನಾಕ್ರೋಶಕ್ಕೆ ಕಾರಣವಾದ ಮಂಡ್ಯದ ಘಟನೆ: ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ಸವಾರರನ್ನು ಸಂಚಾರ ಪೊಲೀಸರು ತಡೆದಿದ್ದ ವೇಳೆ ಸವಾರನ ಜೊತೆಗಿದ್ದ ಮೂರು ವರ್ಷದ ಮಗು ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಮಂಡ್ಯದಲ್ಲಿ ನಡೆದಿತ್ತು. ಅವೈಜ್ಞಾನಿಕ ತಪಾಸಣೆ ನಡೆಸಿದ್ದ ಬಗ್ಗೆ ಸಂಚಾರ ಪೊಲೀಸರ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

    ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ನಗರ ಸಂಚಾರ ವಿಭಾಗವು ವಾಹನ ಸವಾರರಿಗೆ ತೊಂದರೆಯಾಗದ ರೀತಿ ಹಾಗೂ ತೆರೆಮರೆಯಲ್ಲಿ ನಿಂತು ದಿಢೀರ್ ವಾಹನಗಳನ್ನು ಅಡ್ಡಗಟ್ಟದಂತೆ ಸಂಚಾರ ಪೊಲೀಸರಿಗೆ ಮೌಖಿಕವಾಗಿ ತಾಕೀತು ಮಾಡಿದೆ.

    ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಿ, ಸವಾರರಿಗೆ ದಂಡ ವಿಧಿಸುವ ಜೊತೆಗೆ ಟ್ರಾಫಿಕ್ ಟ್ರಾಫಿಕ್ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವುದು ಟ್ರಾಫಿಕ್ ಪೊಲೀಸರ ಕರ್ತವ್ಯ. ಉಲ್ಲಂಘನೆಗಳ ಪತ್ತೆ ನೆಪದಲ್ಲಿ ಪೊಲೀಸರು ರಸ್ತೆ ತಿರುವಿನಲ್ಲಿ ನಿಲ್ಲುವುದು, ಗೋಡೆ ಬದಿ ಬಚ್ಚಿಟ್ಟುಕೊಂಡು ಏಕಾಏಕಿ ವಾಹನಗಳನ್ನು ಅಡ್ಡಗಟ್ಟುವುದು ಸರಿಯಾದ ಕ್ರಮವಲ್ಲ. ವೇಗವಾಗಿ ಬರುವ ಸವಾರರಿಗೆ ದಿಢೀರ್ ಆಗಿ ಕೈ ಹಾಕಿ ನಿಲ್ಲಿಸುವಂತೆ ಸೂಚಿಸುವುದರಿಂದ ನಿಯಂತ್ರಣ ತಪ್ಪಿ, ಅಪಘಾತಕ್ಕೂ ಕಾರಣವಾಗಲಿದೆ. ಸಿಡ್ಕ್​ ಆಗಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿರುವ ನಿದರ್ಶನಗಳಿವೆ. ತಿರುವಿನಲ್ಲಿ ನಿಂತು ಏಕಾಏಕಿ ವಾಹನಗಳನ್ನು ತಡೆಯಬಾರದೆಂಬ ನಿಯಮವಿದ್ದರೂ, ಸಂಚಾರ ಪೊಲೀಸರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಂತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ದರ್ಪ ತೋರಿಸುತ್ತಾರೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳುವುದೇನು?:

    • ಸರ್​​ಪ್ರೈಸ್ ರೀತಿ ತಪಾಸಣೆ ಮಾಡಿ ಸವಾರರಿಗೆ ತೊಂದರೆ ಮಾಡಬೇಡಿ.
    • ಮಂಡ್ಯದಲ್ಲಿ ನಡೆದ ದುರಂತ ಮರುಕಳಿಸದಿರಲು ಹಾಗೂ ವೈಜ್ಞಾನಿವಾಗಿ ವಾಹನಗಳ ತಪಾಸಣೆ ಮಾಡಬೇಕು.
    • ಅನಗತ್ಯ ಸಂದರ್ಭಗಳಲ್ಲಿ ತೆರೆಮರೆಯಲ್ಲಿ ನಿಲ್ಲದೆ, ಏಕಾಏಕಿ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ಕೈಗೊಳ್ಳಬೇಕು.
    • ಸಿಗ್ನಲ್ ಬದಿಯಲ್ಲಿ, ರಸ್ತೆ ತಿರುವಿನಲ್ಲಿ ಸೇರಿದಂತೆ ಅನಪೇಕ್ಷಿತವಾಗಿ ವಾಹನಗಳನ್ನು ಅಡ್ಡಗಟ್ಟದಿರಿ.
    • ಪೀಕ್ ಅವರ್​​ನಲ್ಲಿ ತಪಾಸಣೆ ಕೈಗೊಳ್ಳಬೇಡಿ.
    • ತಪಾಸಣೆ/ದಂಡ ವಿಧಿಸುವಾಗ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು ಜಂಟಿ ಪೊಲೀಸ್ ಆಯುಕ್ತರು ತಾಕೀತು ಮಾಡಿದ್ದಾರೆ.

    ಟಾರ್ಗೆಟ್ ನೀಡಿಲ್ಲ- ಸಂಚಾರ ಡಿಸಿಪಿ: “ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸುವ ಹಾಗೂ ಸುಗಮ ಸಂಚಾರಕ್ಕೆ ಧಕ್ಕೆ ತರುವವರ ವಿರುದ್ಧ ನಿರಂತರವಾಗಿ ಅಭಿಯಾನ ಕೈಗೊಂಡು ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲಾಗುತ್ತಿದೆ. ಎಲ್ಲಾ ಮಾದರಿಯ ಉಲ್ಲಂಘನೆಗಳನ್ನು ಏಕಾಏಕಿ ಒಂದೇ ದಿನದಲ್ಲಿ ತಪಾಸಣೆ ಮಾಡದೆ, ಹೆಚ್ಚು ಉಲ್ಲಂಘನೆ ಕಂಡುಬರುವ ಸಂಚಾರ ಅಪರಾಧಗಳನ್ನು ನಿರ್ದಿಷ್ಟ ದಿನದಂದು ನಿಗಡಿಪಡಿಸಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಎಫ್​ಟಿವಿಆರ್ (ಫೀಲ್ಡ್ ಟ್ರಾಫಿಕ್ ವೈಯಲೇಷನ್ ರಿಪೋರ್ಟ್) ಪ್ರತಿನಿತ್ಯ 15-20 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಪಾಸಣೆ ನಡೆಸುವ ಸಿಬ್ಬಂದಿಗೆ ದಾಖಲಿಸುವಂತೆ ಸೂಚಿಸಲಾಗಿದೆಯೇ ಹೊರತು ಬೇರೆ ಯಾವ ಪ್ರಕರಣಗಳಿಗೂ ಇಂತಿಷ್ಟೇ ಸಂಖ್ಯೆಯಲ್ಲಿ ಕೇಸ್ ದಾಖಲಿಸಬೇಕೆಂದು ಟಾರ್ಗೆಟ್ ನಿಗದಿಪಡಿಸಿಲ್ಲ” ಎಂದು ಉತ್ತರ ವಿಭಾಗದ ಸಂಚಾರ ಡಿಸಿಪಿ ಸಿರಿಗೌರಿ ಅವರು ‘ಈಟಿವಿ ಭಾರತ’ಕ್ಕೆ ತಿಳಿಸಿದ್ದಾರೆ.

    ಸಂಚಾರ ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯಬಾರದು. ವ್ಯವಸ್ಥಿತ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು. ಈ ಕುರಿತು ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದೇನೆ – ಜಿ.ಪರಮೇಶ್ವರ್, ಗೃಹ ಸಚಿವ

    ವಾಹನ ತಪಾಸಣೆ ಮಾಡುವಾಗ ಸಂಚಾರ ಪೊಲೀಸರು ಅನುಸರಿಸಬೇಕಾದ ನಿಯಮಗಳು:

    • ರಸ್ತೆ ಬದಿ ವಾಹನ ತಪಾಸಣೆ ಮಾಡುವಾಗ ಸೂಕ್ಷ್ಮ ಹಾಗೂ ಸಂವೇದನೆಯಿಂದ ವರ್ತಿಸಿ.
    • ಏಕಾಏಕಿ ವಾಹನಗಳನ್ನು ಅಡ್ಡಗಟ್ಟಿ ವಾಹನ ಸವಾರರನ್ನು ಗಾಬರಿಗೊಳಿಸಬೇಡಿ.
    • ರಸ್ತೆ ತಿರುವು, ಜಂಕ್ಷನ್ ಹಾಗೂ ತೆರೆಮರೆಯಲ್ಲಿ ನಿಂತು ತಪಾಸಣೆ ಮಾಡಬೇಡಿ.
    • ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಉಲ್ಲಂಘಿಸಿದ ವಾಹನಗಳ ಫೋಟೊ ಸೆರೆಹಿಡಿದು, ಸವಾರರ ಮನೆಗೆ ನೋಟಿಸ್ ಜಾರಿಗೆ ಆದ್ಯತೆ ನೀಡಿ.
    • ಸುರಕ್ಷಿತ ಹಾಗೂ ನಿರ್ದಿಷ್ಟ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿ.
  • ಸಾರ್ವಜನಿಕರೇ ಗಮನಿಸಿ: ಇನ್ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಗೆ ಇ-ಸಹಿ ಕಡ್ಡಾಯ

    ಬೆಂಗಳೂರು: ಇನ್ನು ಮುಂದೆ ಆಸ್ತಿ ನೋಂದಾಣಿಗೆ ಇ-ಸಿಗ್ನೇಚರ್ ಕಡ್ಡಾಯವಾಗಿರಲಿದೆ.‌ ನಾಳೆಯಿಂದ (ಮೇ 26) ಆಸ್ತಿ ಅಥವಾ ಇತರ ನೋಂದಣಿ ಪ್ರಕ್ರಿಯೆಗಳಿಗೆ ವಿದ್ಯುನ್ಮಾನ ಸಹಿ ಕಡ್ಡಾಯವಾಗಿದೆ.

    ಈ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪು ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ ಯಾವುದೇ ನೋಂದಣಿ ಪ್ರಕ್ರಿಯೆಗಳು ಡಿಜಿಟಲೀಕರಣವಾಗಲಿವೆ. ಸೇಲ್ ಡೀಡ್ ಸೇರಿ ಎಲ್ಲ ಮಾದರಿಯ ಡೀಡ್‌ಗಳನ್ನು ಆರಂಭದಿಂದ ಅಂತ್ಯದ ಪ್ರಕ್ರಿಯೆವರೆಗೂ ಡಿಜಿಟಲೈಸ್ ಮಾಡಲು ಈ ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿದೆ.

    ಡಿಜಿಟಲ್ ಇ-ಸ್ಟಾಂಪುಗಳು ಕಡ್ಡಾಯವಾಗಿರಲಿದೆ. ಇದರಿಂದ ಸ್ಟಾಂಪುಗಳ ದುರುಪಯೋಗ ಮತ್ತು ಸೋರಿಕೆ ತಡೆಯಲು ಅನುಕೂಲವಾಗಲಿದೆ. ಬ್ಯಾಂಕ್ ಚಲನ್‌‌ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ಇದು ಸಹಕಾರಿಯಾಗಲಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲಾಗಿದೆ. ವಿದ್ಯನ್ಮಾನ ವಿಧಾನಗಳ ಮೂಲಕ ಸ್ಟಾಂಪ್ ಶುಲ್ಕ ಪಾವತಿಸಬೇಕಾಗಿದೆ.

    ಸಿಬ್ಬಂದಿ ಮೂಲಕ ಸ್ಟಾಂಪ್‌ ವಿತರಣೆಗೆ ಸಂಪೂರ್ಣ ತಡೆ ಬೀಳಲಿದೆ. ಡಿಜಿಟಲ್‌ ಸಹಿ ದುರ್ಬಳಕೆಯಾಗದಂತೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್‌ ಸಹಿಯಲ್ಲಿ ಬಯೊಮೆಟ್ರಿಕ್‌ ಕೂಡ ಇರಲಿದೆ.