Tag: Health

  • ಉಡುಪಿಯ ಗಾಂಧಿ ಆಸ್ಪತ್ರೆಗೆ 30ರ ಸಡಗರ; ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಗಾಂಧಿ ಆಸ್ಪತ್ರೆಗೆ 30ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಅಜ್ಜರಕಾಡು​ಜಿಲ್ಲಾ ಸರಕಾರಿ ಆಸ್ಪತ್ರೆಯ ​ಜಿಲ್ಲಾ  ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

    ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂ​ಜಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಿಂದ​ ಪಡೆದುದನ್ನು  ಸಮಾಜಕ್ಕೆ ​ಹಂಚುವ ಕೆಲಸವನ್ನು ​ಗಾಂಧಿ ಆಸ್ಪತ್ರೆ ಮಾಡುತ್ತಿದೆ . ನಗರಸಭೆ ಜತೆ ಗಾಂಧಿ ಆಸ್ಪತ್ರೆ ಕೈ​ಜೋಡಿಸಿದ್ದು​, ಎಂ.ಹರಿಶ್ಚಂದ್ರರ​ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.

    ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ, ಆದಾಯದ ಆಧಾರದಲ್ಲಿ ಮಾನವ ಅಭಿವೃದ್ಧಿ ಅಳತೆಗೋಲಾಗಿದ್ದು ಮಡಾಮಕ್ಕಿಯಂತಹ ಕುಗ್ರಾಮದಿಂದ ಬಂದ ಎಂ.ಹರಿಶ್ಚಂದ್ರರ ಸಾಧನೆ  ಅನ್ಯರಿಗೆ ಮಾದರಿ ಎಂದು ಹೇಳಿದರು.

    30ವರ್ಷಗಳ ಹಿಂದೆ ಗೆಳೆಯನ ಜತೆ 25 ಬೆಡ್‍ಗಳಿಂದ ​ಎಂ ಹರಿಶ್ಚಂದ್ರರು ಆರಂಭಿಸಿದ ಆಸ್ಪತ್ರೆ  2002ರಲ್ಲಿ ಸ್ವಂತ ಕಟ್ಟಡ ಹೊಂದಿ, ಐದು ಡಯಾಲಿಸಿಸ್ ಯಂತ್ರ ಅಳವಡಿಸಿದೆ.​  25  ವರುಷಗಳಿಂದ  ಪಂಚಮಿ ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆ, ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ತನಕದ ಮುಖ್ಯರಸ್ತೆಯನ್ನು  ​ಹತ್ತು ವರ್ಷದಿಂದ  ಪ್ರತಿ ಭಾನುವಾರ ಸ್ವಚ್ಚತೆ ಕಾರ್ಯ, ಗಾರ್ಡನ್ ನಿರ್ವಹಣೆ ಮಾಡಲಾಗುತ್ತಿದೆ  ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಡಾ. ವ್ಯಾಸರಾಜ ತಂತ್ರಿ ಹೇಳಿದರು.

    ಉಡುಪಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ​ ಗಾಂಧಿ ಆಸ್ಪತ್ರೆ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ, ನಾನಾ ಕ್ಷೇತ್ರದ ಸಾಧಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಗೌರವಿಸಲಾಯಿತು.

    ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ  ಎಜಿಎಂ ವಾದಿರಾಜ ಭ​ಟ್,  ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ​, ಡಾ. ವಿದ್ಯಾ ವಿ ತಂತ್ರಿ ಉಪಸ್ಥಿತರಿದ್ದರು. ​ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.

  • ಇಬ್ರಾಹೀಂ ಗಂಗೊಳ್ಳಿಯಿಂದ ಉಚಿತ ಆ್ಯಂಬುಲೆನ್ಸ್‌ ಸೇವೆ

    ಕುಂದಾಪುರ, ನ.16: ಖಾಸಗಿ ವೈದ್ಯರ ಮುಷ್ಕರದಿಂದ ಬಡ ರೋಗಿಗಳು ಆರೋಗ್ಯ ಸೇವೆಯಿಂದ ವಂಚಿತರಾಗಿ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಗಂಗೊಳ್ಳಿಯ ಸಮಾಜ ಸೇವಕ ಇಬ್ರಾಹಿಂ ಕುಂದಾಪುರ ಸರಕಾರಿ ಆಸ್ಪತ್ರೆಯ ಮುಂದೆ ತನ್ನ ಎರಡು ಆ್ಯಂಬುಲೆನ್ಸ್‌ಗಳಲ್ಲಿ ಉಚಿತ ಸೇವೆ ಗಳನ್ನು ನೀಡುತ್ತಿದ್ದಾರೆ.

    ಇಬ್ರಾಹೀಂ ಗಂಗೊಳ್ಳಿ ತನ್ನ ‘ಆಪತ್ಬಾಂಧವ’ ಮತ್ತು ‘ಜೀವರಕ್ಷ’ ಎಂಬ ಎರಡು ಆ್ಯಂಬುಲೆನ್ಸ್‌ಗಳನ್ನು ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಉಚಿತ ಸೇವೆಗಾಗಿ ನಿಲ್ಲಿಸಿದ್ದು, ಅದರ ಮೂಲಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆ ಅಥವಾ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

    ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗುವ ಮೂಲಕ  ಇಬ್ರಾಹೀಂ ಹಾಗೂ ಅವರ ತಂಡ ಮಾನವೀಯತೆ ಮೆರೆಯುತ್ತಿದ್ದಾರೆ. ಇವರ ಸೇವೆಯಲ್ಲಿ ಗಂಗೊಳ್ಳಿಯ ಅದಿಲ್, ಅಕ್ಷಯ್ ಖಾರ್ವಿ ಕೈಜೋಡಿಸಿದ್ದಾರೆ. ಒಟ್ಟು ಮೂರು ಬಾರಿ ನಡೆದ ಮುಷ್ಕರದ ಸಂದರ್ಭದಲ್ಲಿ ಅವರು ಒಟ್ಟು 14 ರೋಗಿಗಳನ್ನು ಉಡುಪಿಗೆ ಕರೆತಂದು ಅಗತ್ಯ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ.

    ‘ಇಂದು ಸೇರಿ ಮೂರನೆ ಬಾರಿಗೆ ಖಾಸಗಿ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ಮೊದಲ ದಿನ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಈ ಎರಡು ಆ್ಯಂಬುಲೆನ್ಸ್‌ಗಳನ್ನು ಉಚಿತ ಸೇವೆಗೆಂದು ನಿಲ್ಲಿಸಿ ಏಳು ಜನ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆ ಮತ್ತು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಸೋಮವಾರದ ಮುಷ್ಕರ ಸಂದರ್ಭ ಆರು ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ವರ್ಗಾಯಿಸಿದ್ದೇವೆ ಎಂದು ಇಬ್ರಾಹೀಂ ಗಂಗೊಳ್ಳಿ ತಿಳಿಸಿದರು.

    ಇಂದು ಕೂಡ ಖಾಸಗಿ ವೈದ್ಯರು ಮುಷ್ಕರ ನಡೆಸಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಪಕ್ಷಪಾತಕ್ಕೆ ಒಳಗಾದ ವೃದ್ಧರೊಬ್ಬರನ್ನು ಅಜ್ಜರ ಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಇನ್ನು ರಾತ್ರಿ 12ಗಂಟೆಯವರೆಗೆ ಕುಂದಾಪುರದಲ್ಲಿ ಉಚಿತ ಸೇವೆಗಾಗಿ ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ. ಖಾಸಗಿ ವೈದ್ಯರ ಮುಷ್ಕರ ಮುಂದುವರೆದರೆ ನಮ್ಮ ಉಚಿತ ಆ್ಯಂಬುಲೆನ್ಸ್ ಸೇವೆ ಕೂಡ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.