Tag: Hebri

  • ಗೃಹ ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ

    ಉಡುಪಿ, ಜುಲೈ 8 , 2025: ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಭದ್ರ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿದ್ದ ಮನೋರೋಗಿ ಮಹಿಳೆಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ವಿಶು ಶೆಟ್ಟಿ ಅಂಬಲಪಾಡಿ ಸಖಿ ಸೆಂಟರಿನ ಸಿಬ್ಬಂದಿ ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಬೇಬಿ(38) ಅಮಾನವೀಯ ಗೃಹ ಬಂಧನದಿಂದ ರಕ್ಷಿಸಲ್ಪಟ್ಟ ಮಹಿಳೆ. ಇವರು ವಿವಾಹಿತರಾಗಿದ್ದು ಸಣ್ಣ ಇಬ್ಬರು ಮಕ್ಕಳಿದ್ದಾರೆ. ಮನೋರೋಗಿಯಾದ ಮಹಿಳೆಯನ್ನು ವರುಷದಿಂದ ಗೃಹಬಂಧನದಲ್ಲಿ ಇಟ್ಟಿದ್ದು, ಇದರಿಂದ ಅವರು ಸರಿಯಾದ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ.

    ‘ಘಟನಾ ಸ್ಥಳಕ್ಕೆ ತೆರಳಿದಾಗ ಕಿಟಕಿಯಲ್ಲಿ ಮಹಿಳೆ ತನ್ನನ್ನು ರಕ್ಷಿಸಿ ಬದುಕಲು ಆಗುತ್ತಿಲ್ಲ ಹಿಂಸೆಯಿಂದ ಕಂಗಾಲಾಗಿದ್ದೇನೆ. ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನನ್ನನ್ನು ಪಾರು ಮಾಡಿ ಎಂದು ಅಂಗ ಲಾಚಿ ಬೊಬ್ಬಿಡುತ್ತಿದ್ದರು. ಭದ್ರವಾದ ಬಾಗಿಲು ಹಾಗೂ ಬೀಗ ಇದ್ದು ಸಣ್ಣ ಕಿಟಕಿಯಿಂದ ಆಹಾರ ನೀಡುತ್ತಿ ದ್ದರು. ಮಳೆ ಗಾಳಿಗೆ ನನ್ನ ಮೇಲೆ ದಯೆ ತೋರದೆ ನಾಯಿಯ ಬದುಕಿಗಿಂತ ಕಡೆಯಾಗಿದೆ ರಕ್ಷಿಸಿ ಎಂದು ಗೋಗರೆಯುತ್ತಿದ್ದರು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

    ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಬಂಧ ಮುಕ್ತಗೊಳಿಸಿ, ಮಹಿಳೆಯನ್ನು ಸಂತೈಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಹೆಬ್ರಿ: ಹೂಡಿಕೆ ಆಮಿಷಕ್ಕೆ ಬಲಿಯಾದ ವೃದ್ಧ, 31 ಲಕ್ಷಕ್ಕೂ ಹೆಚ್ಚು ರೂ.ಗೆ ಮೋಸ

    ಹೆಬ್ರಿ, ಜೂನ್ 11, 2025: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ವಾಸುದೇವ ಪುತ್ತಿ (65) ಎಂಬ ವೃದ್ಧರಿಗೆ ಹೂಡಿಕೆಯ ಆಮಿಷ ತೋರಿಸಿ 31,58,452 ರೂ. ಮೊತ್ತಕ್ಕೆ ಮೋಸ ಮಾಡಿರುವ ಆರೋಪದಡಿ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಾಸುದೇವ ಪುತ್ತಿ ಅವರು 1995 ರಿಂದ 2020 ರವರೆಗೆ ಬೆಂಗಳೂರಿನ ಜಿಗಣಿಯ ಎ.ಎಫ್.ಡಿ.ಸಿ ಕಂಪೆನಿಯಲ್ಲಿ ಮೆಟೀರಿಯಲ್ ಮ್ಯಾನೇಜರ್ ಆಗಿ ಕೆಲಸ ಮಾಡಿ 2020 ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ, ಬೆಂಗಳೂರಿನ ಮೈಲಾರಿ ಆಗ್ರೋ ಪ್ರೊಡಕ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಕೆ. ಎಂಬಾತನ ಪರಿಚಯದ ಮೇರೆಗೆ 14/09/2021 ರಿಂದ 28/01/2022 ರವರೆಗೆ 5.5 ಲಕ್ಷ ರೂ. ಹೂಡಿಕೆ ಮಾಡಿದ್ದರು. ಈ ಹೂಡಿಕೆಗೆ 2.5 ಲಕ್ಷ ರೂ. ಬಡ್ಡಿಯನ್ನು ಪಡೆದಿದ್ದರೂ, ಕಂಪೆನಿ ಮುಚ್ಚಿಹೋಗಿತ್ತು.

    2024 ರ ಸೆಪ್ಟೆಂಬರ್‌ನಲ್ಲಿ ರೋಹಿತ್ ಮತ್ತೆ ವಾಸುದೇವ ಅವರನ್ನು ಸಂಪರ್ಕಿಸಿ, ಕಂಪೆನಿಯಿಂದ ಹೂಡಿಕೆದಾರರಿಗೆ ಹಣ ವಾಪಸ್ ನೀಡಲು ದೊಡ್ಡ ಮೊತ್ತದ ಹಣ ಸಿಕ್ಕಿದೆ ಎಂದು ಆಮಿಷ ತೋರಿಸಿದ್ದಾನೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಮತ್ತು ಇತರ ಖರ್ಚುಗಳಿಗೆ ಹಣ ಬೇಕೆಂದು ತಿಳಿಸಿ, ತನ್ನ ಚಾಲಕರಾದ ನಾಗರಾಜ ಮತ್ತು ಜಗದೀಶ, ಹಾಗೂ ತಮ್ಮನಾದ ಪ್ರದೀಪನ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಕೇಳಿದ್ದಾನೆ. ಈ ರೀತಿಯಾಗಿ 17/09/2024 ರಿಂದ 05/06/2025 ರವರೆಗೆ ಹಂತಹಂತವಾಗಿ ಫೋನ್‌ಪೇ, ಗೂಗಲ್‌ ಪೇ, ಮತ್ತು NEFT ಬ್ಯಾಂಕಿಂಗ್ ಮೂಲಕ 31,58,452 ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ, ಹಣ ವಾಪಸ್ ಕೇಳಿದಾಗ ರೋಹಿತ್ ಬೆದರಿಕೆ ಹಾಕಿ, ನಂತರ ಸಂಪರ್ಕಕ್ಕೆ ಸಿಗದೆ ಮೋಸ ಮಾಡಿದ್ದಾನೆ.

    ಈ ಘಟನೆಗೆ ಸಂಬಂಧಿಸಿದಂತೆ ರೋಹಿತ್, ಪ್ರದೀಪ, ಲಕ್ಷ್ಮೀ, ನಾಗರಾಜ, ಮತ್ತು ಜಗದೀಶ ಎಂಬ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025 ರಡಿಯಲ್ಲಿ ಕಲಂ 316(2), 318(4), 351(2), 351(3), 190 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಹೆಬ್ರಿ: ಅನಿಲ ಜಾಡಿ ವರ್ಗಾವಣೆ ಘಟನೆಯಲ್ಲಿ ವ್ಯಕ್ತಿಯ ಮರಣ, ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಹೆಬ್ರಿ, ಜೂನ್ 8, 2025: ಕೋಟ ನಿವಾಸಿಯಾದ ರೇಶ್ಮಾ (31) ತಮ್ಮ ಪತಿ ಅನೂಪ್‌ರವರೊಂದಿಗೆ ವಿವಾಹವಾಗಿದ್ದು, ಅರುಷ್‌ ಎಂಬ ನಾಲ್ಕು ವರ್ಷದ ಮಗನನ್ನು ಹೊಂದಿದ್ದಾರೆ. ಆರೋಪಿಗಳಾದ ಅನಂತ ಮತ್ತು ಆಶಾ, ರೇಶ್ಮಾ ಮತ್ತು ಅನೂಪ್‌ರವರೊಂದಿಗಿನ ವೈಮನಸ್ಸಿನ ನಡುವೆ, ಅಕ್ರಮವಾಗಿ ಗೃಹಬಳಕೆಯ ಅನಿಲ ಜಾಡಿಗಳನ್ನು ಅಪಾಯಕಾರಿ ರೀತಿಯಲ್ಲಿ ಮನೆಯಲ್ಲಿ ಸಂಗ್ರಹಿಸಿ, ವಾಣಿಜ್ಯ ಬಳಕೆಯ ಅನಿಲ ಜಾಡಿಗಳಿಗೆ ವರ್ಗಾವಣೆ ಮಾಡುತ್ತಿದ್ದರು. ದಿನಾಂಕ 11/04/2025ರಂದು ಸಂಜೆ 5:00 ಗಂಟೆಗೆ, ಆರೋಪಿಗಳು ಅನಧಿಕೃತವಾಗಿ ಗೃಹಬಳಕೆಯ ಅನಿಲ ಜಾಡಿಗಳಿಂದ ವಾಣಿಜ್ಯ ಜಾಡಿಗಳಿಗೆ ಅನಿಲ ವರ್ಗಾವಣೆ ಮಾಡುವಾಗ, ಆರೋಪಿತ ಆಶಾ ಬೇಜವಾಬ್ದಾರಿಯಿಂದ ಲೈಟರ್‌ ಬಳಸಿದ್ದರಿಂದ ಬೆಂಕಿ ಹೊತ್ತಿಕೊಂಡಿತು.

    ಈ ಘಟನೆಯಲ್ಲಿ ಅಲ್ಲೇ ಇದ್ದ ಅನೂಪ್‌ರವರಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾದವು. ಗಾಯಗೊಂಡ ಅನೂಪ್‌ರವರನ್ನು ತಕ್ಷಣ ಹೆಬ್ರಿಯ ಖಾಸಗಿ ಕ್ಲಿನಿಕ್‌ಗೆ ಕರೆತರಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅನೂಪ್‌ರವರು ದಿನಾಂಕ 17/04/2025ರಂದು ರಾತ್ರಿ 11:45 ಗಂಟೆಗೆ ಮೃತಪಟ್ಟರು.

    ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಘಟನಾ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ನಿರ್ಲಕ್ಷ್ಯದಿಂದ ಅನೂಪ್‌ರವರ ಮರಣ ಸಂಭವಿಸಿದೆ ಎಂದು ರೇಶ್ಮಾ ಅವರ ದೂರಿನ ಆಧಾರದ ಮೇಲೆ, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2025, ಕಲಂ 106, 238, 3(5) BNS ರಂತೆ ಪ್ರಕರಣ ದಾಖಲಾಗಿದೆ.

  • ಹೆಬ್ರಿ: ಸಹಕಾರಿ ಸಂಘದಲ್ಲಿ ಆರ್ಥಿಕ ದುರುಪಯೋಗ: ಪ್ರಕರಣ ದಾಖಲು

    ಹೆಬ್ರಿ, ಜೂನ್ 07, 2025: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿನ್ ದಾಖಲಿಸಿದ ದೂರಿನ ಆಧಾರದ ಮೇಲೆ, ಸಂಘದ ಸಿಬ್ಬಂದಿಯಾದ ಶಂಕರ್ ವಿರುದ್ಧ ಆರ್ಥಿಕ ದುರುಪಯೋಗ ಮತ್ತು ವಿಶ್ವಾಸ ದ್ರೋಹದ ಆರೋಪದಡಿ ಪ್ರಕರಣ ದಾಖಲಾಗಿದೆ.

    ದೂರಿನ ಪ್ರಕಾರ, ಶಂಕರ್ ರವರು ಸಂಘದ 88,150 ರೂಪಾಯಿಗಳನ್ನು ಸುಂದರ ಕುಲಾಲ ಎಂಬವರಿಗೆ ಕೂಲಿ ಬಾಬ್ತು ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ, ಆ ಮೊತ್ತವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯದಿಂದ ಸಂಘಕ್ಕೆ ಮೋಸ ಮತ್ತು ವಿಶ್ವಾಸಭಂಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 409 ಮತ್ತು 420ರ ಅಡಿಯಲ್ಲಿ ಅಪರಾಧ ಕ್ರಮಾಂಕ 37/2025 ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಹೆಬ್ರಿಯಲ್ಲಿ ಗಂಡಸು ಕಾಣೆ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    ಹೆಬ್ರಿ: ಗಿಲ್ಲಾಳಿ ಗ್ರಾಮದ ವಸಂತಿ (40) ಎಂಬುವವರು ತಮ್ಮ ಗಂಡ ಪ್ರಭಾಕರ (46) ಕಾಣೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಭಾಕರ ಕೂಲಿ ಕೆಲಸ ಮಾಡುತ್ತಿದ್ದು, ಮಧ್ಯಪಾನದ ಚಟ ಹೊಂದಿದ್ದರು. ಇವರು ಈ ಹಿಂದೆ 5-6 ಬಾರಿ ಕೆಲಸಕ್ಕೆಂದು ಮನೆಯಿಂದ ಹೊರಟು 2-3 ತಿಂಗಳು ಬಿಟ್ಟು ಮರಳಿದ್ದರು.

    ಆದರೆ, 2023ರ ಡಿಸೆಂಬರ್‌ನಲ್ಲಿ ಮನೆಯಿಂದ ಹೊರಟ ಪ್ರಭಾಕರ ಈವರೆಗೆ ವಾಪಸ್ ಬಂದಿಲ್ಲ. ಸಂಬಂಧಿಕರು ಮತ್ತು ಗ್ರಾಮದ ಸುತ್ತಮುತ್ತಲಿನ ವಿಚಾರಣೆಯಲ್ಲೂ ಯಾವುದೇ ಪತ್ತೆಯಾಗಿಲ್ಲ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2025ರಂತೆ ಕಾಣೆಯಾದ ವ್ಯಕ್ತಿಯ ಪ್ರಕರಣ ದಾಖಲಾಗಿದೆ.

  • ಹೆಬ್ರಿ: ಗಾಂಜಾ ಮಾರಾಟ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ; ದಾಳಿ

    ಹೆಬ್ರಿ, ಮೇ 20, 2025: ದಿನಾಂಕ 19-05-2025ರ ರಾತ್ರಿ, ಹೆಬ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು (ತನಿಖೆ) ಅಶೋಕ ಮಾಳಬಾಗಿ ಅವರಿಗೆ ಬೆಳ್ಳಂಜೆ ಗ್ರಾಮದ ತುಂಬೆಜಡ್ಡು ಎಂಬಲ್ಲಿ ಮೋಹನ್ ದಾಸ್ ಎಂಬವರ ಮನೆ ಪಕ್ಕದ ಕಟ್ಟಡದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಇದರಂತೆ ಸಿಬ್ಬಂದಿಗಳ ಸಹಾಯದೊಂದಿಗೆ ಬೆಳಿಗ್ಗೆ ಜಾವದಲ್ಲಿ ದಾಳಿ ನಡೆಸಲಾಗಿದೆ.

    ದಾಳಿಯಲ್ಲಿ ಕಟ್ಟಡದಲ್ಲಿ ತೇಜಸ್, ಪ್ರಜ್ವಲ್ ಮತ್ತು ಪ್ರವೀಣ್ ಎಂಬವರು ಲಾಭದ ಉದ್ದೇಶದಿಂದ ಗಾಂಜಾ ಮಾರಾಟ ಹಾಗೂ ಸಂಘಟಿತವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಸ್ಥಳದಲ್ಲಿ 89,000 ರೂಪಾಯಿ ನಗದು, 8 ಮೊಬೈಲ್ ಫೋನ್‌ಗಳು, 7 ಎಟಿಎಂ ಕಾರ್ಡ್‌ಗಳು, 3 ಸಿಮ್ ಕಾರ್ಡ್‌ಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾ ಸಿಕ್ಕಿದೆ.

    ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2025, ಕಲಂ 112 BNS, ಕಲಂ 78 ಕೆಪಿ ಕಾಯ್ದೆ ಮತ್ತು 8(c), 20(b) NDPS ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.