Tag: HJV

  • ಉಡುಪಿ: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಕಿರುಕುಳ ಆರೋಪಿಸಿ ಹಿಂ.ಜಾ.ವೇ ನೇತೃತ್ವದಲ್ಲಿ ಪ್ರತಿಭಟನೆ

    ಉಡುಪಿ, ಜುಲೈ 7, 2025:  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪೊಲೀಸರ ಅಕ್ರಮ ಕ್ರಮಗಳನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, ಹಿಂದೂ ವಿರೋಧಿ ಎಂದು ಆರೋಪಿಸಿದರು.

    ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖ ಗೋರಕ್ಷಕ ಕಾರ್ಯಕರ್ತ ಸುನಿಲ್ ಕೆ.ಆರ್. ಅವರು, “ರಾಜ್ಯ ಸರ್ಕಾರ ಕರಾವಳಿ ಪ್ರದೇಶವನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿದೆ. ಕರಾವಳಿ ಭಾಗದಲ್ಲಿ ಸ್ಪಷ್ಟವಾದ ಷಡ್ಯಂತ್ರ ನಡೆಯುತ್ತಿದೆ. ಅಲ್ಲಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಮತ್ತು ಅವರನ್ನು ರೌಡಿ ಶೀಟ್‌ಗಳು ಹಾಗೂ ಗೂಂಡಾ ಕಾಯ್ದೆಯ ಅಡಿಯಲ್ಲಿ ಸುಳ್ಳಾಗಿ ಬ್ರಾಂಡ್ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

    “ಒಂದು ಕಾಲದಲ್ಲಿ ಕರಾವಳಿಯನ್ನು ‘ಹಿಂದುತ್ವ ಕಾರ್ಖಾನೆ’ ಎಂದು ಕರೆದಿದ್ದ ಅದೇ ಸಿದ್ದರಾಮಯ್ಯ ಈಗ ಅದರ ವಿನಾಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ಸುಳ್ಳು ಪ್ರಕರಣಗಳನ್ನು ದಾಖಲಿಸುವುದಲ್ಲದೆ, ಹಿಂದೂ ಕಾರ್ಯಕರ್ತರ ಮನೆಗಳು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ. ಹಿಂದೂ ಸಮುದಾಯವು ಜಾಗರೂಕವಾಗಿದೆ ಮತ್ತು ಒಂದಾಗಿದೆ” ಎಂದರು.

    “ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಪೊಲೀಸ್ ಇಲಾಖೆಯು ನಿಷ್ಪಕ್ಷಪಾತ ಮತ್ತು ಕಾನೂನುಬದ್ಧ ತನಿಖೆ ನಡೆಸಲು ಅವಕಾಶ ನೀಡುವಂತೆ ನಾನು ಅವರನ್ನು ಬಲವಾಗಿ ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.

    “ವಿಶೇಷ ತನಿಖಾ ದಳ ರಚನೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಅವರು, ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುವ ಬದಲು, ಅಧಿಕಾರಿಗಳು ನಿಜವಾದ ಅಪರಾಧಿಗಳಾದ ಗೋಹತ್ಯೆ, ಗೋಕಳ್ಳತನ ಮತ್ತು ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ” ಎಂದು ವಾದಿಸಿದರು.

    ಪ್ರತಿಭಟನೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಹೆಚ್‌ಪಿ ಮುಖಂಡರಾದ ವಾಸುದೇವ ಗಂಗೊಳ್ಳಿ, ದಿನೇಶ್ ಮೆಂಡೋನ್, ಮಹೇಶ್ ಬೈಲೂರು, ಉಮೇಶ್ ಕೋಕಲ್, ನಿಖಿಲ್ ಮಂಚಿ, ರೇಷ್ಮಾ ಉದಯ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

  • ಹಿಂಜಾವೇ ನಾಯಕ ಸತೀಶ್ ಪೂಜಾರಿ ಉಡುಪಿ ಜಿಲ್ಲೆ ಪ್ರವೇಶಿಸದಂತೆ ನಿಷೇಧ: ಜಿಲ್ಲಾಧಿಕಾರಿ ಆದೇಶ

    ಉಡುಪಿ, ಜುಲೈ 6, 2025: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ, ರೌಡಿ ಶೀಟರ್ ಸತೀಶ್ ಪೂಜಾರಿ ದಾವಣಗೆರೆ ಎಂಬಾತನಿಗೆ ಜು.7ರಿಂದ ಸೆ.7 ರವರೆಗೆ 2 ತಿಂಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

    ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಜು.7ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗೆ ರೌಡಿ ಶೀಟರ್ ಸತೀಶ್ ಪೂಜಾರಿಯನ್ನು ಪ್ರಮುಖ ಭಾಷಣಕಾರನಾಗಿ ಕರೆಸಿ ಸಮಾಜದ ಸ್ವಾಸ್ತ್ಯ ಕದಡುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

    ಅಲ್ಲದೆ ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಅಲ್ಲಿಯೂ ಸತೀಶ ಪೂಜಾರಿಯನ್ನು ಕರೆಸಿ ಕೋಮು ಪ್ರಚೋಚಕ ಭಾಷಣ ಮಾಡಿಸಿ ಗಲಾಬೆ ಎಬ್ಬಿಸುವ ಹುನ್ನಾರ ಮಾಡಿರುವುದು ತಿಳಿದು ಬಂದಿದೆ.

    ಇವರ ಕೋಮು ಪ್ರಚೋದಕ ಭಾಷಣಗಳಿಂದ ಇನ್ನೊಂದು ಸಮುದಾಯದ ಜನರನ್ನು ಕೆರಳಿಸಿ ಶಾಂತಿ ಕದಡುವ ಸಾಧ್ಯತೆಗಳು ಇರುವುದರಿಂದ ಸತೀಶ್ ಪೂಜಾರಿಗೆ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸುವಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

    ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಎಸ್ಪಿಯ ವರದಿಯನ್ನು ಆಧರಿಸಿ ಮುಂಜಾಗೃತ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.

    ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಂಗಳೂರು: ಹಿಂದೂ ಮುಖಂಡನ ಮೊಬೈಲ್‍ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ!

    ಮಂಗಳೂರು: ಮಂಗಳೂರಿನ ಹಿಂದೂ ಜಾಗರಣಾ ವೇದಿಕೆಯ ದ.ಕ ಜಿಲ್ಲಾ ಸಹ ಸಂಯೋಜಕ ಸಮಿತ್‌ರಾಜ್ ಧರೆಗುಡ್ಡೆ ಎಂಬಾತನ ಮೊಬೈಲ್‌ನಲ್ಲಿ ಭಾರೀ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಪ್ರಕರಣವೊಂದರ ವಿಚಾರಣೆ ವೇಳೆ ಮೊಬೈಲ್ ತನಿಖೆಯಲ್ಲಿ ಹಲವು ಸ್ಪೋಟಕ ವಿಡಿಯೋಗಳು ಪತ್ತೆಯಾಗಿದೆ. ಮೊಬೈಲ್ ಡಾಟಾ Extract ವೇಳೆ ಈ ವಿಡಿಯೋಗಳನ್ನು ಕಂಡು ಮೂಡಬಿದಿರೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

    ಹಿಂದೂ ಜಾಗರಣಾ ವೇದಿಕೆಯ ದ.ಕ ಜಿಲ್ಲಾ ಸಹ ಸಂಯೋಜಕ ಸಮಿತ್‌ರಾಜ್ ಧರೆಗುಡ್ಡೆಯ ಮೊಬೈಲ್‌ನಲ್ಲಿ ಪತ್ತೆಯಾದ ಐವತ್ತಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಲ್ಲಿ ಕರಾವಳಿಯ ಪ್ರಭಾವಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಕೂಡ ಪತ್ತೆಯಾಗಿದೆ ಎಂಬ ಬಗ್ಗೆ ಭಾರೀ ಚರ್ಚೆಯಾಗಿದ್ದು, ಮಂಗಳೂರು ಪೊಲೀಸರ ತನಿಖೆ ವೇಳೆ ಅಶ್ಲೀಲ ವಿಡಿಯೋ ಪತ್ತೆಯಾಗಿದೆ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.