Tag: Karkala

  • ಕಾರ್ಕಳ: ಕಲ್ಲುಕೋರೆಯಲ್ಲಿ ಸ್ಪೋಟಕ ಸಿಡಿದು ಕಾರ್ಮಿಕನಿಗೆ ಗಂಭೀರ ಗಾಯ

    ಕಾರ್ಕಳ: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಫ್ರಾನ್ಸಿಸ್ ಡಿಸೋಜ ಎಂಬವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ರಾಯಚೂರಿನ ಶಿವರಾಜ್ (27) ಎಂಬ ಕಾರ್ಮಿಕನಿಗೆ ಸ್ಪೋಟಕ ಸಿಡಿದ ಪರಿಣಾಮ ತಲೆಗೆ ಮಾರಣಾಂತಿಕ ಗಾಯವಾಗಿರುವ ಘಟನೆ ನಡೆದಿದೆ. ಈ ಕುರಿತು ಶಿವರಾಜ್‌ರ ಪತ್ನಿ ಪಲ್ಲವಿ (25) ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆಯ ವಿವರಗಳ ಪ್ರಕಾರ, ದಿನಾಂಕ 08/05/2025 ರಂದು ಮಧ್ಯಾಹ್ನ 1:40 ಗಂಟೆಗೆ ಶಿವರಾಜ್ ಮತ್ತು ಇತರ ಕಾರ್ಮಿಕರು ಕಂಪ್ರೆಸರ್ ಬಳಸಿ ಕಲ್ಲುಕೋರೆಯಲ್ಲಿ ಸಿಡಿಮದ್ದು ಸಿಡಿಸಲು ಡ್ರಿಲಿಂಗ್ ಕಾರ್ಯ ನಡೆಸಿದ್ದರು. ಡ್ರಿಲಿಂಗ್ ಮುಗಿಸಿ ಕಲ್ಲುಕೋರೆಯಿಂದ ಹೊರಬಂದು ಕಂಪ್ರೆಸರ್ ಬಳಿ ಕುಳಿತಿದ್ದ ವೇಳೆ, ಕಲ್ಲು ಸಿಡಿಸಲು ಇಟ್ಟಿದ್ದ ಸ್ಪೋಟಕವು ಸಿಡಿದಿದೆ. ಈ ವೇಳೆ ವೇಗವಾಗಿ ಬಂದ ಕಲ್ಲೊಂದು ಕಂಪ್ರೆಸರ್‌ಗೆ ಬಡಿದು, ಶಿವರಾಜ್‌ರ ತಲೆಯ ಎಡಭಾಗಕ್ಕೆ ತಗುಲಿದ್ದರಿಂದ ಗಂಭೀರ ರಕ್ತಗಾಯವಾಗಿದೆ.

    ದೂರಿನಲ್ಲಿ, ಕಲ್ಲುಕೋರೆಯ ಮಾಲಿಕ ಫ್ರಾನ್ಸಿಸ್ ಡಿಸೋಜ ಮತ್ತು ಸ್ಪೋಟಕ ಸಿಡಿಸಿದ ಜೋಸೆಫ್ ರಿಚರ್ಡ್ ಡಿಸೋಜ ಎಂಬವರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2025ರಡಿಯಲ್ಲಿ ಕಲಂ 288, 125(a), 125(b) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

    ಮುಂದಿನ ತನಿಖೆ ನಡೆಯುತ್ತಿದೆ.

  • ಕಾರ್ಕಳದಲ್ಲಿ ಮತ್ತೆರಡು ಕಲ್ಲು ತೂರಾಟ ಪ್ರಕರಣಗಳು ವರದಿ

    ಕಾರ್ಕಳ, ಮೇ 03: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಕಾರ್ಕಳ ತಾಲೂಕಿನಲ್ಲಿ ಮತ್ತೆರಡು ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿವೆ.

    ಮೊದಲ ಘಟನೆಯಲ್ಲಿ, ಇಬ್ಬರು ಮುಸುಕುಧಾರಿ ವ್ಯಕ್ತಿಗಳು ತಮಿಳುನಾಡು ನೋಂದಾಯಿತ ಮೀನುಗಾರಿಕಾ ಟ್ರಕ್‌ನ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದಾರೆ. ಈ ಟ್ರಕ್ ಮಲ್ಪೆಯಿಂದ ಮೀನು ತುಂಬಿಸಿಕೊಂಡು ತಮಿಳುನಾಡಿಗೆ ತೆರಳುತ್ತಿತ್ತು. ಕೆಮರು ಪರ್ಪಲೆ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 15,000 ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

    ಇನ್ನೊಂದು ಘಟನೆಯಲ್ಲಿ, ಕಾರ್ಕಳದಿಂದ ಬೆಳ್ಮಣ್‌ಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗದ ಗಾಜಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಿ ಹಾನಿಗೊಳಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 45,000 ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ್ಕಳ: ಶ್ರೀ ವೆಂಕಟರಮಣ ದೇವಳದ ರಾಥೋತ್ಸವ ಸಂಬಂಧ ಪರ್ಯಾಯ ಸಂಚಾರ ವ್ಯವಸ್ಥೆ

    ಕಾರ್ಕಳ: ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಾಥೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ದಿನಾಂಕ 02-05-2025 ರಂದು ಸಂಜೆ 4:00 ಗಂಟೆಯಿಂದ ಮರುದಿನ ಬೆಳಿಗ್ಗೆ 6:00 ಗಂಟೆಯವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜುಂಕ್ಷನ್ ರವರೆಗೆ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಸಂಚಾರ ವ್ಯವಸ್ಥೆ ಬಗ್ಗೆ ಈ ಕೆಳಗಿನ ಆದೇಶ ಹೊರಡಿಸಿದ್ದಾರೆ.

    ಪರ್ಯಾಯ ಮಾರ್ಗದ ವಿವರ

    • ಘನವಾಹನಗಳು ಬಂಗ್ಲೆ ಗುಡ್ಡೆ – ಹಿರಿಯಂಗಡಿ – ಪುಲ್ಕೆರಿ ಮಾರ್ಗವಾಗಿ ಸಂಚರಿಸುದು.
    • ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡು ರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜುಂಕ್ಷನ್ ನಿಂದ ಕಲೊಟ್ಟೆ , ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸುವುದು.
    • ಸ್ಟೇಟ್ ಬ್ಯಾಂಕ್ – ಮೂರು ಮಾರ್ಗದಲ್ಲಿ ಸಂಚರಿಸುವ ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಸ್ಟೇಟ್ ಬ್ಯಾಂಕ್ ಜುಂಕ್ಷನ್ ನಿಂದ ಗಾಂಧಿ ಮೈದಾನವಾಗಿ ಅಂಚೆ ಕಚೇರಿ, ಕಾಮಧೇನು ಹೋಟೆಲ್ ಜುಂಕ್ಷನ್ ಮಾರ್ಗವಾಗಿ ಸಂಚರಿಸುದು.

    ಸಾರ್ವಜನಿಕರಲ್ಲಿ ಸಹಕರಿಸಲು ಉಡುಪಿ ಪೊಲೀಸ್ ವಿನಂತಿಸಿದ್ದಾರೆ.