Tag: Karwar

  • ಉತ್ತರ ಕನ್ನಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದೀಪನ್ ನೇಮಕ

    ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಎಂ.ನಾರಾಯಣ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

    ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ 2019ರ ಬ್ಯಾಚಿನ ಐಪಿಎಸ್ ಅಧಿಕಾರಿ ದೀಪನ್ ಎಂ.ಎನ್ ಅವರನ್ನು ನೇಮಿಸಲಾಗಿದೆ. ಸದ್ಯ ಅವರು ರಾಜ್ಯ ಮೀಸಲು ಪೊಲೀಸ್ ಪಡೆಯ 1ನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದರು.

    ಎಂ.ನಾರಾಯಣ ಅವರನ್ನು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡಿಸಿಪಿ ಹುದ್ದೆಗೆ ನಿಯೋಜಿಸಲಾಗಿದೆ.

  • ಕಾರವಾರ: ಕಲಾಚೆ ಭೂಕುಸಿತ ಸಂತ್ರಸ್ತರ ಪುನರ್ವಸತಿ ಕುರಿತು ತುರ್ತು ವರದಿಗೆ ಡಿಸಿ ಲಕ್ಷ್ಮೀ ಪ್ರಿಯಾ ಆದೇಶ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಉಪ ಆಯುಕ್ತ ಕೆ. ಲಕ್ಷ್ಮೀ ಪ್ರಿಯಾ ಯಲ್ಲಾಪುರ ತಾಲೂಕಿನ ಕಲಾಚೆಯಲ್ಲಿ 2021ರ ಭೂಕುಸಿತದಿಂದ ಪೀಡಿತರಾದ ಕುಟುಂಬಗಳ ಪುನರ್ವವಾಸಕ್ಕಾಗಿ ಶಿರ್ಸಿ ಉಪ ವಿಭಾಗಾಧಿಕಾರಿಗಳಿಗೆ ಯಥಾಸ್ಥಿತಿ ಪರಿಶೀಲನೆ ನಡೆಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಮಂಗಳವಾರ ಕಾರವಾರದ ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ದುರಂತ ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಹಶೀಲ್ದಾರ್‌ಗೆ ಪೀಡಿತ ಕುಟುಂಬಗಳ ಮಾಹಿತಿಯನ್ನು ವಿವರವಾಗಿ ಸಂಗ್ರಹಿಸಿ ಸೂಕ್ತ ಪುನರ್ವವಾಸ ಕ್ರಮಗಳಿಗಾಗಿ ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದರು.

    ಅಲ್ಲದೆ, ಭೂಕುಸಿತ ಸಂಭಾವ್ಯ ಪ್ರದೇಶಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಅರಣ್ಯ ಮತ್ತು ಆದಾಯ ಇಲಾಖೆಗಳಿಗೆ ತಡೆಗಟ್ಟುವ ಮತ್ತು ಸಜ್ಜುಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆದೇಶ ನೀಡಿದರು. ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (KPCL) ಅಧಿಕಾರಿಗಳು ಕದ್ರ ಬಾಲೆಮನೆಯಲ್ಲಿ ಭೂಕುಸಿತದಿಂದ ಇಂಧನ ಸಾಗಣೆ ರಸ್ತೆ ತಡೆಯಾಗಿದ್ದು, ತಮ್ಮ ಕಾರ್ಯಾಚರಣೆಗೆ ಪರಿಣಾಮ ಬೀರಿದೆ ಎಂದು ಚಿಂತೆ ವ್ಯಕ್ತಪಡಿಸಿದರು. ಈ ಬಗ್ಗೆ ಡಿಸಿ ಭೂವೈಜ್ಞಾನಿಕ ಸರ್ವೆ ಆಫ್ ಇಂಡಿಯಾ (GSI)ಯ ಸಲಹೆ ಪಡೆಯುವಂತೆ ಮತ್ತು ಅವರ ಸೂಚನೆಯ ಮೇರೆಗೆ KPCL ಒಂದು ತಾಂತ್ರಿಕ ತಂಡ ರಚಿಸಿ ರಸ್ತೆಯ ತ್ಯಾಜ್ಯವನ್ನು ಸುರಕ್ಷಿತವಾಗಿ ತೆಗೆದುಹಾಕುವಂತೆ ಆದೇಶಿಸಿದರು.

    ಇನ್ನು, ಕಾರವಾರ ಸಿಟಿ ಮುನಿಸಿಪಲ್ ಕೌನ್ಸಿಲ್‌ಗೆ ಗುಡುಗು ನೀರು ತಡೆಗಟ್ಟುವುದನ್ನು ತಡೆಯಲು ಡ್ರೈನೇಜ್ ವ್ಯವಸ್ಥೆಯ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸುವಂತೆ ಮತ್ತು ಮುಂಗಾರು ಅವಧಿಯಲ್ಲಿ ಅಪಾಯ ತಪ್ಪಿಸಲು ನಗರದ ಒಳಚರಂಡಿ ಮತ್ತು ಅಪಾಯಕಾರಿ ಮರಗಳನ್ನು ತೆಗೆದುಹಾಕುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿಕಾಂತ್, ಉಪ ಆಯುಕ್ತ ಸಜೀದ್ ಮುಲ್ಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಮತ್ತು ಯೋಗೇಶ್, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಮತ್ತು ವಿವಿಧ ಜಿಲ್ಲಾ-ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಕಾರವಾರ: ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಆರೋಪಿ ಹರ್ದೀಪ್ ಸಿಂಗ್ ಬಂಧನ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರ್ದೀಪ್ ಸಿಂಗ್ (39) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡ ಭಾಗವಹಿಸಿತು.

    ಆರೋಪಿಗಳು ದಿನಾಂಕ 23-10-2024ರಂದು ರಾಫೇಲ್ ತಂದೆ ಮ್ಯಾಥ್ಯೂವ್ಸ್ ಫರ್ನಾಂಡಿಸ್ ಅವರ ಸಹೋದರ ವಿಲ್ಸನ್ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ, ಡಿ.ಎಚ್‌.ಎಲ್ ಕೋರಿಯರ್ ಸರ್ವಿಸ್ ಪ್ರತಿನಿಧಿಯಾಗಿ ಮಾತನಾಡಿ, ಅವರ ಹೆಸರಿನಲ್ಲಿ ಪಾರ್ಸಲ್‌ನಲ್ಲಿ ಮಾದಕ ದ್ರವ್ಯ (1.4 ಕೆ.ಜಿ), 7 ಪಾಸ್‌ಪೋರ್ಟ್‌ಗಳು, 5 ಕ್ರೆಡಿಟ್ ಕಾರ್ಡ್‌ಗಳು ಮತ್ತು 3.5 ಕೆ.ಜಿ ಬಟ್ಟೆ ಇರುವುದಾಗಿ ಹೇಳಿ ಆನ್‌ಲೈನ್ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು. ಇದೀಗ ಮುಂಬಯಿ ಪೊಲೀಸರ ಭಾಷ್ಯದಲ್ಲಿ ವಾಟ್ಸ್‌ಅಪ್ ವಿಡಿಯೋ ಕಾಲ್ ಮೂಲಕ ಭಯಭೀತರನ್ನಾಗಿ ಮಾಡಿ ₹35,80,100 ರಷ್ಟು ಹಣ ವಂಚಿಸಿದ್ದರು. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 35/2024 ದಾಖಲಾಗಿ ತನಿಖೆ ಆರಂಭವಾಗಿತ್ತು.

    ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ.ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಐ. ಅಶ್ವಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಜುಲೈ 12, 2025ರಂದು ಹರ್ದೀಪ್ ಸಿಂಗ್ ಅವನನ್ನ ಪಾಟ್ನಾ, ಬಿಹಾರದಿಂದ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ. ತನಿಖೆಯಲ್ಲಿ ಆರೋಪಿ ಮೇಲೆ ದೇಶಾದ್ಯಂತ 29 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದ್ದು, ಇದರಲ್ಲಿ ತಮಿಳುನಾಡು (₹2,02,17,100), ಆಂಧ್ರಪ್ರದೇಶ (₹2,47,15,500), ಬೆಂಗಳೂರು (₹80,00,000 ಮತ್ತು ₹74,60,047) ಸೇರಿ ಒಟ್ಟು ₹40,28,71,710 ರಷ್ಟು ಹಣ ವಂಚನೆ ಮಾಡಿರುವುದು ಗೊತ್ತಾಗಿದೆ. ಆರೋಪಿ 8 ಉಳಿತಾಯ ಖಾತೆ ಮತ್ತು 2 ಚಾಲ್ತ ಖಾತೆಗಳನ್ನು ಹೊಂದಿರುವುದೂ ತಿಳಿದುಬಂದಿದೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಸಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದ್ದಪ್ಪ ಧರೆಪ್ಪ, ಸಿಬ್ಬಂದಿ ನಾಮದೇವ ನಾಂದ್ರೆ, ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಭಾಗವಹಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

  • ಕಾರವಾರದಲ್ಲಿ 1.30 ಕೋಟಿ ಫಲಾನುಭವಿಗಳಿಗೆ ಶಕ್ತಿ ಯೋಜನೆ ಪ್ರಯೋಜನ – ರಾಜೇಂದ್ರ ಎಚ್ ರಾಣೆ

    ಕಾರವಾರ, ಜುಲೈ 14, 2025:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಾರವಾರ ವ್ಯಾಪ್ತಿಯಲ್ಲಿ ಇದುವರೆಗೆ 1.30 ಕೋಟಿ ಗೂ ಅಧಿಕ ಫಲಾನುಭವಿಗಳು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು ಇದರ ಟಿಕೆಟ್ ಮೌಲ್ಯ ರೂ. 41.81 ಕೋಟಿಗಳಾಗಿದೆ ಎಂದು ಕಾರವಾರ ತಾಲೂಕು ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ರಾಜೇಂದ್ರ ಎಚ್ ರಾಣೆ ಹೇಳಿದರು.

    ಅವರು ಸೋಮವಾರ ಕಾರವಾರ ಬಸ್ ನಿಲ್ದಾಣದಲ್ಲಿ , ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿರುವ ಕುರಿತ ಆಚರಿಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಸಾರಿಗೆ ಬಸ್ಗೆ ಪೂಜೆ ಸಲ್ಲಿಸಿ ಮಾತನಾಡಿದರು.

    ರಾಜ್ಯ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರುವುದರ ಮೂಲಕ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯನ್ನು ಜೂನ್ 2023 ರಿಂದ ಜಾರಿಗೊಳಿಸಿದೆ. ರಾಜ್ಯದಲ್ಲಿ ಶಕ್ತಿ ಯೋಜನೆಯ ಫಲಾನುಭವಿ ಪ್ರಯಾಣಿಕರ ಸಂಖ್ಯೆ ಈಗ 500 ಕೋಟಿ ಗಡಿಯನ್ನು ದಾಟಿದ್ದು, ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

    ರಾಜ್ಯ ಸರ್ಕಾರ ಪ್ರಪಂಚದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಇಂತಹ ಯೋಜನೆಯನ್ನು ಜಾರಿಗೆ ತಂದಿದ್ದು, ಶಕ್ತಿ ಯೋಜನೆಯ ಯಶಸ್ವಿಯಂತೆ ಅನ್ಯಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯು ಕೂಡ ಯಶಸ್ವಿಗೊಂಡಿದೆ ಎಂದರು.

    ಈ ಸಂದರ್ಭದಲ್ಲಿ ಶಕ್ತಿ ಯೋಜನೆ ಯಶಸ್ವಿಗೆ ಪ್ರಮುಖ ಕಾರಣಕರ್ತರಾದ ವಾಹನ ಚಾಲಕರು ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ಹಂಚಿ, ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ಧನ್ಯವಾದ ಅರ್ಪಿಸಲಾಯಿತು.

    ಈ ಸಂದರ್ಭದಲ್ಲಿ ವಾ.ಕ.ರ.ಸಾ ಸಂಸ್ಥೆಯ ಕಾರವಾರ ಘಟಕದ ವ್ಯವಸ್ಥಾಪಕಿ ಸೌಮ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏಣಗೌಡರ , ತಾಲ್ಲೂಕು ಗ್ಯಾರಂಟಿ ಅಭಿವೃದ್ಧಿ ಸಮಿತಿಯ ಸದಸ್ಯರು, ಸಾರಿಗೆ ಬಸ್ ನ ಚಾಲಕರು, ನಿರ್ವಾಹಕರು, ಸಾರ್ವಜನಿಕರು, ಪ್ರಯಾಣಿಕರು, ಮತ್ತಿತರರು ಉಪಸ್ಥಿತರಿದ್ದರು.

  • ಪೊಲೀಸರಿಂದ ಫೈರಿಂಗ್: 16 ಪ್ರಕರಣಗಳಲ್ಲಿ ಆರೋಪಿತನಾಗಿರುವ ಆರೋಪಿ ಬಂಧನ

    ಕಾರವಾರ, ಜುಲೈ 14, 2025: ಹದಿನಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಂತರ ಜಿಲ್ಲಾ ರೌಡಿಶೀಟರ್ ಪ್ರವೀಣ ಮನೋಹರ ಸುಧೀರ್ (37) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಯಲ್ಲಾಪುರದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಮ್ಮ ರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    ರಾಮನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಸೇರಿದಂತೆ, ಕೊಲೆ ಯತ್ನ, ಸುಲಿಗೆ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿ ಒಟ್ಟು 16 ಪ್ರಕರಣಗಳು ಆರೋಪಿ ಮೇಲೆ ದಾಖಲಾಗಿದ್ದವು.

    ರೌಡಿಶೀಟರ್ ಪ್ರವೀಣ ಮನೋಹರ ಸುಧೀರ್

    ದಾಂಡೇಲಿ ಉಪ ವಿಭಾಗದ ಡಿವೈಎಸ್‌ಪಿ ಶ್ರೀ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಸಿ.ಪಿ.ಐ-ಜೋಯಿಡಾ ಚಂದ್ರಶೇಖರ ಹರಿಹರ ನೇತೃತ್ವದಲ್ಲಿ ಪಿ.ಎಸ್.ಐ ಮಹಾಂತೇಶ ನಾಯಕ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಈತನನ್ನು ಬಂದಿಸಲಾಗಿದೆ.

    ಯಲ್ಲಾಪುರ ಠಾಣಾ ವ್ಯಾಪ್ತಿಯ ಕಣ್ಣಿಗೇರಿ ಬಳಿ ಅರಣ್ಯದಲ್ಲಿ ಪ್ರವೀಣ ಅವಿತುಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಆರೋಪಿಯು ಚಾಕು ಮತ್ತು ಕಲ್ಲುಗಳಿಂದ ಪಿ.ಎಸ್.ಐ ಮಹಾಂತೇಶ ನಾಯಕ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವೇಳೆ ಪಿ.ಎಸ್.ಐ ಮಹಾಂತೇಶ ನಾಯಕ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ 2 ಬಾರಿ ಗಾಳಿಯಲ್ಲಿ ಫೈರ್ ಮಾಡಿ, ನಂತರ ಆರೋಪಿ ಪ್ರವೀಣ ನ ಬಲಗಾಲಿನ ಮಂಡಿಯ ಕೆಳಭಾಗಕ್ಕೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.

    ಘಟನೆಯಲ್ಲಿ ಪಿ.ಎಸ್.ಐ ಮಹಾಂತೇಶ ಮತ್ತು ಸಿಬ್ಬಂದಿಗಳು ಗಾಯಗೊಂಡಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತ ಆರೋಪಿ ಪ್ರವೀಣನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಅಣ್ಣನ ಹೆಸರಿನಲ್ಲಿ ಪರೀಕ್ಷೆ ಬರೆಯಲು ಕೂತ ತಮ್ಮ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಕಾರವಾರ: ಅಣ್ಣನ ಹೆಸರಿನಲ್ಲಿ 3 ವರ್ಷ ಕಾಲ ಕಾಲೇಜಿನಲ್ಲಿ ಪದವಿ ಓದಿ ಪರೀಕ್ಷೆ ವೇಳೆ ಸಿಕ್ಕಿಬಿದ್ದ ಯುವಕ ಪೊಲೀಸರ ಅಥಿತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.

    ಭಟ್ಕಳದ ಖಾಸಗಿ ಉದ್ಯೋಗದಲ್ಲಿ ನಿರತರಾಗಿರುವ ರೋಹಿತ್ ಕುಮಾರ್ ಅವರ ಹೆಸರು ಹಾಗೂ ಶೈಕ್ಷಣಿಕ ದಾಖಲೆಗಳನ್ನು ಬಳಸಿ, ಅವರ ತಮ್ಮ ರಂಜಿತ್ ಕುಮಾರ್ ದುರ್ಗಪ್ಪ ನಾಯ್ಕ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022 ರಿಂದ ತರಗತಿಗಳಿಗೆ ಹಾಜರಾಗಿದ್ದರು. ಅವರು ತಮ್ಮನ್ನು ರೋಹಿತ್ ಕುಮಾರ್ ಎಂದು ಪರಿಚಯಿಸಿ ಮೂರು ವರ್ಷಗಳ ಕಾಲ ಪದವಿ ಓದಿದ್ದಾರೆ.

    ಈ ವಿಷಯವು ಬುಧವಾರ ನಡೆದ ಪರೀಕ್ಷೆಯ ವೇಳೆ ವಿಶ್ವವಿದ್ಯಾಲಯದ ವಿಚಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸುವ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಈ ಪ್ರಕರಣದ ಬಗ್ಗೆ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಗಣಪತಿ ಶೆಟ್ಟಿ ಅವರು ಭಟ್ಕಳ ಶಹರ ಠಾಣೆಗೆ ದೂರು ನೀಡಿದ್ದಾರೆ.ಪ್ರಾಂಶುಪಾಲರ ಪ್ರಕಾರ, ರಂಜಿತ್ ಕುಮಾರ್ ಎಂ.ಬಿ.ಎ ಪದವೀಧರರಾಗಿದ್ದು, ಪದವಿ ತರಗತಿಯಲ್ಲಿ ಹೆಚ್ಚು ಗಮನ ಸೆಳೆಯುವಷ್ಟು ಉತ್ತಮವಾಗಿ ಓದುತ್ತಿದ್ದರು.ಆದರೆ, ಇಂತಹ ವಿದ್ಯಾರ್ಥಿಯೊಬ್ಬನು ಮತ್ತೊಬ್ಬರ ಹೆಸರಿನಲ್ಲಿ ಮತ್ತೆ ಪದವಿ ಓದಿದ್ದೇಕೆ ಎಂಬುದು ಪ್ರಶ್ನೆಯಾಗಿದೆ.ಭಟ್ಕಳ ಪೊಲೀಸರು ಈಗಾಗಲೇ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

  • ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ; ರಷ್ಯಾ ಮೂಲದ ವಿದೇಶಿ ಮಹಿಳೆಯ ರಕ್ಷಣೆ..!

    ಕಾರವಾರ: ರಷ್ಯಾ ಮೂಲದ ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸವಿದ್ದು ಇವರನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದಲ್ಲಿ ನಡೆದಿದೆ.

    ಮೋಹಿ (40), ಅವರ ಪುಟ್ಟ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ರಕ್ಷಣೆಗೊಳಗಾದ ರಷ್ಯಾ ಮೂಲದ ಪ್ರಜೆಗಳು.

    ರಷ್ಯಾದಿಂದ ಬಿಸಿನೆಸ್ ವಿಸಾ ದಡಿ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಸಿಪಿಐ ಶ್ರೀಧರ್ ನೇತ್ರತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾದ್ದರಿಂದ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ಪತ್ತೆ ಮಾಡಿ ವಿದೇಶಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

    ರಷ್ಯಾದ ಮೋಹಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು. ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು. ಎಸ್.ಪಿ ಎಂ ನಾರಾಯಣ್ ಸಲಹೆಯಂತೆ ಆಕೆಗೆ ಸ್ಥಳೀಯ ಎನ್‌ಜಿಓ ಮೂಲಕ ಆಪ್ತ ಸಮಾಲೋಚನೆ ನಡೆಸಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು, ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದ್ದು ಆಕೆಯನ್ನು ಆಕೆಯ ದೇಶಕ್ಕೆ ಪುನಃ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.

  • ಕಾರವಾರ ಜಿಲ್ಲಾ ಆಸ್ಪತ್ರೆಯ ಸರ್ಜನ್ ಶಿವಾನಂದ ಕುಡ್ತಲಕರ್ ಲೋಕಾಯುಕ್ತ ಬಲೆಗೆ

    ಕಾರವಾರ : ಆಸ್ಪತ್ರೆಗೆ ಹಾಸಿಗೆ ಸಪ್ಲೈ ಮಾಡುವ ಗುತ್ತಿಗೆದಾರರೊಬ್ಬರಿಂದ ಲಂಚ‌ ಪಡೆಯುತ್ತಿದ್ದ ವೇಳೆ ಕಾರವಾರ ಮೆಡಿಕಲ್ ಕಾಲೇಜು ಅಧೀನ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿ, ಹೆರಿಗೆ ಡಾಕ್ಟರ್ ಶಿವಾನಂದ ಕುಡ್ತಲಕರ್ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.

    ಕಾರವಾರ ಲೋಕಾಯುಕ್ತರ ಬಲೆ ಬಿದ್ದಿರುವ ಶಿವಾನಂದ ಕುಡ್ತಲಕರ್ ಗುತ್ತಿಗೆದಾರರೊಬ್ಬರ ಬಳಿ 50,000 ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಆಸ್ಪತ್ರೆಯ ರೋಗಿಗಳ ಹಾಸಿಗೆ ಟೆಂಡರ್ 3.5 ಲಕ್ಷದ ಬಿಲ್ ಪಾವತಿಸಲು 75000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಿನ್ನೆ 20000 ಲಂಚ ಪಡೆದಿದ್ದರು. ಇಂದು 30 ಸಾವಿರ ಲಂಚದ (ಕಮಿಷನ್ ) ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್ ಪಿ ಧನ್ಯಾ ನಾಯ್ಕ ಹಾಗೂ ತಂಡ ದಾಳಿ ಮಾಡಿ ಕುಡ್ತಲಕರ್ ಅವರನ್ನು ಹಿಡಿದಿದ್ದಾರೆ‌.

    ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಖ್ ಎಂಬುವವರು ಲೋಕಾಯುಕ್ತಕ್ಕೆ ಈ ಸಂಬಂಧ ದೂರು‌ ನೀಡಿದ್ದರು. ನಿನ್ನೆ ರಾತ್ರಿ 20,ಸಾವಿರ ಹಣ ನೀಡಲಾಗಿತ್ತು. ಇಂದು 30 ಸಾವಿರ ರೂಪಾಯಿ ಕೇಳಿದ್ದು, ಈ‌‌ ವೇಳೆ‌ ವೈದ್ಯನ ಕಾಟ ತಾಳಲಾರದೆ, ಉಳಿದ 30 ಸಾವಿರ ರೂಪಾಯಿ ಹಣವನ್ನು ಭ್ರಷ್ಟ ವೈದ್ಯ , ಕುಡ್ತಲಕರ್ ಗೆ ನೀಡಿದರು‌. ಲಂಚದ ಹಣ ಸ್ವಿಕರಿಸುವಾಗ ರೆಡ್ ಹ್ಯಾಂಡ್ ಆಗಿ ಡಾ. ಶಿವಾನಂದ ಕುಡಲ್ತಕರ್ ಸಿಕ್ಕಿಬಿದ್ದಿದ್ದಾರೆ.
    ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ , ಅವರ ಸಿಬ್ಬಂದಿ ಈ‌ ದಾಳಿ ನಡೆಸಿದರು‌ .
    ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ‌.

  • ಕಾರವಾರ: ಅಕ್ರಮ ಗೋಮಾಂಸ ಸಾಗಾಟ: ಆರೋಪಿಗಳ ಬಂಧನ, 3930 ಕೆಜಿ ಗೋಮಾಂಸ ವಶ

    ಕಾರವಾರ, ಜೂಲೈ 8, 2025: ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 4(ಎ) ಕುಸಿತಗೊಂಡಿರುವ ಕಾರಣ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ, ದಿನಾಂಕ 07-07-2025ರಂದು ರಾಮನಗರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಮಹಂತೇಶ ಉದಯ ನಾಯಕ್ ಅವರು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ, ರಾಮನಗರದ ಶಿವಾಜಿ ಸರ್ಕಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಶ್ರೀ ರಾಜಪ್ಪ ದೊಡ್ಡಮನಿ ಅವರು ಬೆಳಗಾವಿಯಿಂದ ಬಂದ ಟಾಟಾ ಯೋಧಾ ವಾಹನ (ನಂ: ಕೆಎ-25/ಎಬಿ-6640)ವನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ, ಚಾಲಕ ವಾಹನವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಅನಮೋಡ ಕಡೆಗೆ ತೆರಳಿದ್ದಾನೆ.

    ಚಾಲಕನ ಸಂಶಯಾಸ್ಪದ ನಡವಳಿಕೆಯ ಬಗ್ಗೆ ಪಿಎಸ್‌ಐಗೆ ಮಾಹಿತಿ ನೀಡಿದಾಗ, ರಾಮನಗರದ ಜಾಮೀಯಾ ಮಸೀದಿ ಬಳಿ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ವಾಹನದಲ್ಲಿದ್ದ ಆರೋಪಿತರಾದ ಚಾಲಕ ಸಿದ್ದಪ್ಪ ಬಾಳಪ್ಪ ಬೂದ್ದೂರ ಮತ್ತು ಕ್ಲೀನರ್ ರಾಜು ಬಾಳು ನಾಯ್ಕ ಇವರು ವಾಹನದಲ್ಲಿ ದನದ ಮಾಂಸವಿದೆ ಎಂದು ತಿಳಿಸಿದರು. ಪಂಚರ ಸಮಕ್ಷಮದಲ್ಲಿ ವಾಹನವನ್ನು ಪರಿಶೀಲಿಸಿದಾಗ 3,930 ಕೆ.ಜಿ. ದನದ ಮಾಂಸ ಕಂಡುಬಂದಿದ್ದು, ಇದರ ಅಂದಾಜು ಮೌಲ್ಯ 6,75,500 ರೂ. ಆಗಿದೆ. ಆರೋಪಿತರನ್ನು ವಿಚಾರಿಸಿದಾಗ, ಈ ಸ್ವತ್ತು ಬೆಳಗಾವಿಯ ಅಮೋಲ ಮೋಹನದಾಸ್‌ಗೆ ಸೇರಿದ್ದು, ದನದ ಮಾಂಸವನ್ನು ಬೆಳಗಾವಿಯಿಂದ ಗೋವಾಕ್ಕೆ ಸಾಗಿಸಿ ಮಾರಾಟ ಮಾಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ.

    ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿ, 3,930 ಕೆ.ಜಿ. ದನದ ಮಾಂಸ (ಮೌಲ್ಯ 6,75,500 ರೂ.) ಮತ್ತು ಟಾಟಾ ಯೋಧಾ ವಾಹನ (ನಂ: ಕೆಎ-25/ಎಬಿ-6640, ಮೌಲ್ಯ 8,00,000 ರೂ.)ವನ್ನು ಜಪ್ತು ಮಾಡಿಕೊಂಡಿದ್ದಾರೆ. ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 68/2025ರ ಅಡಿಯಲ್ಲಿ ಕರ್ನಾಟಕ ಗೋವುಗಳ ಕಡಿತ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 7, 12 , ಕಲಂ 325 ಭಾರತೀಯ ನ್ಯಾಯ ಸಂಹಿತೆ, IMV 192 (a)ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿತರಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

  • ಶಿರಸಿ: 41 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ಶಿರಸಿ ಪೊಲೀಸರು

    ಶಿರಸಿ, ಜೂಲೈ 8, 2025: ದಕ್ಷಿಣ ಕನ್ನಡ ಜಿಲ್ಲೆಯ ಬೆಲ್ತಂಗಡಿ ತಾಲೂಕಿನ ಮಂಡೂರು ನಿವಾಸಿ ಆರೋಪಿ ಪಾಸ್ಕಲ್‌ನ ವಿರುದ್ಧ 1984ರಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/1984ರ ಅಡಿಯಲ್ಲಿ ಐಪಿಸಿ ಕಲಂ 279, 337, 427 ಹಾಗೂ 116 ಐಎಂವಿ ಕಾಯ್ದೆಯಡಿ ಅಪಘಾತ ಪ್ರಕರಣ ದಾಖಲಾಗಿತ್ತು. ಶಿರಸಿ ನಗರ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಆದರೆ, ಬೇರೆ ಜಿಲ್ಲೆಯವನಾಗಿದ್ದ ಆರೋಪಿ ಪಾಸ್ಕಲ್, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಣ್ತಪ್ಪಿಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಶಿರಸಿ ನ್ಯಾಯಾಲಯವು 1987ರಲ್ಲಿ ಎಲ್‌ಪಿಸಿ 13/1987ರಂತೆ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು.

    ಶಿರಸಿ ನಗರ ಪೊಲೀಸರು ಆರೋಪಿಯ ಪತ್ತೆಗಾಗಿ ಬೆಲ್ತಂಗಡಿ, ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ತಿರುಗಾಡಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿ ಪಾಸ್ಕಲ್‌ನ ತಂದೆ ಮಾರ್ಟಿನ್ ರೊಡ್ರಿಗಸ್ ನೀಡಿದ್ದ ವಿಳಾಸವನ್ನು ಬದಲಾಯಿಸಿ, ಬೆಂಗಳೂರಿನ ಬಾಗಲಗುಂಟೆಯಲ್ಲಿ ತಲೆಮರೆಸಿಕೊಂಡಿದ್ದನು. ನಂತರ ಆತ ಮೃತಪಟ್ಟಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ, ಆರೋಪಿಯ ಬೆನ್ನುಹತ್ತಿದ ಶಿರಸಿ ನಗರ ಪೊಲೀಸರು ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳು:
    ಈ ಪ್ರಕರಣದ ಯಶಸ್ವಿ ಪತ್ತೆಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಜೆ. ಮತ್ತು ಶ್ರೀ ಜಗದೀಶ್ ನಾಯ್ಕ್, ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್, ಶಿರಸಿ ವೃತ್ತ ನಿರೀಕ್ಷಕರಾದ ಶ್ರೀ ಶಶಿಕಾಂತ್ ವರ್ಮಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರಸಿ ನಗರ ಠಾಣೆಯ ಪಿಎಸ್‌ಐ ಶ್ರೀ ಕ್ರೀ. ನಾಗಪ್ಪ, ತನಿಖಾ ಪಿಎಸ್‌ಐ ಶ್ರೀ ನಾರಾಯಣ ರಾಥೋಡ್, ಎಎಸ್‌ಐ ಶ್ರೀ ನೇಲ್ಬನ್‌ಆರ್ ಮೆಂತೇರೋ, ಎಎಸ್‌ಐ ಶ್ರೀ ಹೊನ್ನಪ್ಪ ಆಗೇರ್, ಶ್ರೀ ವಿಶ್ವನಾಥ ಭಂಡಾರಿ ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಶಂಸೆ:
    ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.