Tag: Karwar

  • ಕಾರವಾರ: ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಕುಖ್ಯಾತ ಅಂತರ ರಾಜ್ಯ ಕಳ್ಳರ ಬಂಧನ

    ಕಾರವಾರ, ಜೂನ್ 06, 2025: ಕಾರವಾರ ನಗರದ ಕೋಡಿಬಾಗ ನಾಯಿಕಟ್ಟಾದ ಶ್ರೀ ಸಾಯಿಮಂದಿರದಲ್ಲಿ ದಿನಾಂಕ 15.04.2025 ರಂದು ರಾತ್ರಿ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿ, ಮೂರ್ತಿಯ ಮೇಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳ್ಳರು ಕದ್ದ ಘಟನೆಗೆ ಸಂಬಂಧಿಸಿದಂತೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಶ್ರೀ ಸಂತೋಷ ರಾಘೋಬಾ ನಾಯ್ಕ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

    ಕಾರವಾರ ಶಹರ ಪೊಲೀಸ್ ಠಾಣೆಯ ತನಿಖಾ ತಂಡವು ತಕ್ಷಣ ಕಾರ್ಯಪ್ರವೃತ್ತವಾಗಿ, ಈ ಗಂಭೀರ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಯಿತು. ಶಹರ ಪೊಲೀಸ್ ಠಾಣೆಯ ಆಗೀನ ಪ್ರಭಾರಿ ಪೊಲೀಸ್ ನಿರೀಕ್ಷಕ ಶ್ರೀ ಯು.ಹೆಚ್. ಸಾತೇನಹಳ್ಳಿ, ಉಪ-ನಿರೀಕ್ಷಕ ಶ್ರೀ ರವೀಂದ್ರ ಬಿರಾದರ ನೇತೃತ್ವದ ತಂಡವು ಕಾರವಾರ, ಗೋವಾ, ಮಧ್ಯಪ್ರದೇಶದ ಖೊಂಡವಾ, ದೆಹರಾದೂನ್, ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಆರೋಪಿಗಳನ್ನು ಪತ್ತೆಹಚ್ಚಿತು.

    ಬಂಧಿತ ಆರೋಪಿಗಳ ವಿವರ:

    1. ಕುಲವಂತ ಸಿಂಗ್ @ ರಾಜು, 40 ವರ್ಷ, ಆಟೋ ಚಾಲಕ, ಸ್ಥಳ: ಪತ್ತೆಗಂಜ್, ಗದರಪುರ (ಉದಯಸಿಂಗ್ ನಗರ, ಉತ್ತರಾಖಂಡ).
    2. ರೇಶಮ ಸಿಂಗ್ @ ರಿಂಕೂ, 34 ವರ್ಷ, ಕೃಷಿಕ, ಸ್ಥಳ: ಗೋಟಾ, ಸಿತಾರಗಂಜ್ (ಉದಂಸಿಂಗ್ ನಗರ, ಉತ್ತರಾಖಂಡ).
    3. ತ್ರಿಲೊಕ ಸಿಂಗ್, 32 ವರ್ಷ, ಆಟೋ ಚಾಲಕ, ಸ್ಥಳ: ಲತಿಶುರ, ಪಸ್ಥಿನಾಮರ, ಮೀರತ್ (ಉತ್ತರ ಪ್ರದೇಶ).

    ಈ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ವಸ್ತುಗಳು ಮತ್ತು ಕದ್ದ 6 ಕೆ.ಜಿ. ಬೆಳ್ಳಿಯ ಛತ್ರಿ (ಅಂದಾಜು ಮೌಲ್ಯ 5,50,000 ರೂ.) ಸೇರಿದಂತೆ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಕುಖ್ಯಾತ ಅಂತರರಾಜ್ಯ ಕಳ್ಳರ ತಂಡ: ಬಂಧಿತ ಆರೋಪಿಗಳು ಹರಿಯಾಣ, ಪಂಜಾಬ್, ದೆಹರಾದೂನ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಚಂಡೀಗಡ, ಉತ್ತರ ಪ್ರದೇಶ, ಮತ್ತು ಕರ್ನಾಟಕದ ಪ್ರಮುಖ ನಗರಗಳ ದೇವಸ್ಥಾನಗಳು, ಮನೆಗಳು, ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುವ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡದ ಸದಸ್ಯರಾಗಿದ್ದಾರೆ.

    ತನಿಖಾ ತಂಡದ ಮಾರ್ಗದರ್ಶನ: ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲು ಶ್ರೀ ನಾರಾಯಣ ಎಂ., ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ, ಕಾರವಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ, ಶ್ರೀ ಜಗದೀಶ ಎಂ., ಡಿವೈ.ಎಸ್.ಪಿ. ಶ್ರೀ ಎಸ್.ವಿ. ಗಿರೀಶ, ಪೊಲೀಸ್ ನಿರೀಕ್ಷಕರಾದ ಶ್ರೀ ರಮೇಶ ಶಂ. ಹೂಗಾರ, ಶ್ರೀ ಯು.ಹೆಚ್. ಸಾತೇನಹಳ್ಳಿ, ವೈರ್‌ಲೆಸ್ ವಿಭಾಗದ ಪೊಲೀಸ್ ನಿರೀಕ್ಷಕ ಶ್ರೀ ಸತೀಶ ಕುಮಾರ ಕೆ.ವಿ., ಬೆರಳಚ್ಚು ಘಟಕದ ಶ್ರೀ ರಾಘವೇಂದ್ರ ನಾಯ್ಕ್, ಮತ್ತು ಇತರ ಸಿಬ್ಬಂದಿಗಳಾದ ಶ್ರೀ ಸುಬ್ರಮಣ್ಯ, ಅಂಗಜ್ಜ ಡಿ., ರವೀಂದ್ರ ಬಿರಾದರ, ಮಂಜುನಾಥ ಪಾಟೀಲ, ಕುಮಾರ ಕಾಂಬಳೆ, ಸೂರಣ ಕೊಠಾರಕರ, ಹಸನ ಕುಟ್ಟಿ, ಗಿರಿಶಯ್ಯ ಎಂ.ಎಸ್., ರಾಜೇಶ ನಾಯಕ, ಅರ್ಜುನ ದೇಸಾಯಿ, ಮಕ್ತುಮಸಾಬ್ ಫತ್ತೇಖಾನ್, ಪ್ರಕಾಶ ದಂಡಪ್ಪನವರ, ಪ್ರತಾಪಕುಮಾರ ಎಂ., ಸಿ.ಡಿ.ಆರ್. ವಿಭಾಗದ ಶ್ರೀ ಬಬನ್ ಕದಂ, ಮತ್ತು ಉದಯ ಗುಣಗಾ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಪೊಲೀಸ್ ಅಧೀಕ್ಷಕರಿಂದ ಶ್ಲಾಘನೆ: ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಉಡುಪಿ ಮತ್ತು ಕಾರವಾರದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ

    ಉಡುಪಿ, ಜೂನ್ 01, 2025: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ “ವಿಶ್ವ ಬೈಸಿಕಲ್ ದಿನಾಚರಣೆ”ಯನ್ನು ಆಚರಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೋಡುಕಟ್ಟೆಯಿಂದ ಬ್ರಹ್ಮಗಿರಿ, ಕರಾವಳಿ ಮಾರ್ಗವಾಗಿ ಕೋಟೆವರೆಗೆ ಸೈಕಲ್ ಜಾಥವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮವು ಆರೋಗ್ಯ, ಫಿಟ್‌ನೆಸ್ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

    ಕಾರವಾರ, ಜೂನ್ 01, 2025: ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಖೇಲೋ ಇಂಡಿಯಾ ಯೋಜನೆಯ “ಫಿಟ್ ಇಂಡಿಯಾ” ಉಪಕ್ರಮದ ಅಡಿಯಲ್ಲಿ, ಸಿಟಿ ಬೈಸಿಕಲ್ ಕ್ಲಬ್ ಕಾರವಾರದ ಸಹಕಾರದೊಂದಿಗೆ “ವಿಶ್ವ ಬೈಸಿಕಲ್ ದಿನ”ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಿನಾಂಕ 01-06-2025 ರಂದು ಬೈಸಿಕಲ್ ಅಭಿಯಾನವನ್ನು ಆಯೋಜಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಗುರುತಿಸಲಾಯಿತು. ಈ ಕಾರ್ಯಕ್ರಮವು ದೈಹಿಕ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಸೈಕಲ್ ಬಳಕೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿತ್ತು.

  • ಕಾರವಾರ: ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆ

    ಕಾರವಾರ, ಜೂನ್ 01, 2025: ಕಾರವಾರ ತಾಲೂಕಿನ ಸಂಚಾರ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಇಂದು ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ತಾಲೂಕಿನ ಪ್ರಮುಖ ಧಾರ್ಮಿಕ ಮುಖಂಡರನ್ನು ಕರೆಯಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು.

    ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶ್ರೀ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಠ ಜಾತಿ ಮತ್ತು ಪಂಗಡ ಸಮುದಾಯದ ಜಿಲ್ಲಾ ಮಟ್ಟದ ಸಭೆ

    ಕಾರವಾರ, ಮೇ 29, 2025: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯದವರ ಜಿಲ್ಲಾ ಮಟ್ಟದ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಮುದಾಯದ ಕುಂದುಕೊರತೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಲಾಯಿತು.

    ಸಭೆಯಲ್ಲಿ ಸಮುದಾಯದ ಸದಸ್ಯರು ತಮ್ಮ ಸಮಸ್ಯೆಗಳು ಮತ್ತು ಆಕಾಂಕ್ಷೆಗಳನ್ನು ಅಧಿಕಾರಿಗಳ ಮುಂದೆ ಮಂಡಿಸಿದರು. ಈ ಸಭೆಯು ಸಮುದಾಯದ ಒಳಿತಿಗಾಗಿ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ಚರ್ಚಿಸಲು ವೇದಿಕೆಯಾಗಿತ್ತು.

  • ಕಾರವಾರ: ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ಸಿದ್ಧತೆ; ಪೂರ್ವಭಾವಿ ಸಭೆ

    ಕಾರವಾರ, ಮೇ 29, 2025: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ 30 ಮತ್ತು 31, 2025ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ಸಿದ್ಧತೆಯಾಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯೊಂದು ನಡೆಯಿತು.

    ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದು, ಸಮ್ಮೇಳನದ ಯಶಸ್ವಿಯಾದ ಆಯೋಜನೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು. ಸಮ್ಮೇಳನದಲ್ಲಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಸರ್ಕಾರಿ ಯೋಜನೆಗಳ ಅನುಷ್ಠಾನ, ಮತ್ತು ಆಡಳಿತದ ಸವಾಲುಗಳ ಕುರಿತು ವಿವರವಾದ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ.

  • ಕಾರವಾರ: ಗೋಕರ್ಣದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ – ಶ್ವಾನ ದಳದೊಂದಿಗೆ ತಪಾಸಣೆ

    ಕಾರವಾರ, ಮೇ 29, 2025: ಭದ್ರತೆ ದೃಷ್ಟಿಯಿಂದ ಹಾಗೂ ಮಾದಕ ದ್ರವ್ಯಗಳ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ, ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಾದ ಗೋಕರ್ಣ, ಬೆಲೆಹಿತ್ಲು, ಬಿಜ್ಜೂರು, ಬೇಲೆಕಾನ್, ಕಹಾನಿ ಪ್ಯಾರಡೈಸ್, ಮತ್ತು ಪ್ಯಾರಡೈಸ್ ಬೀಚ್‌ಗಳಲ್ಲಿ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸಲಾಗಿದೆ.

    ಕಾರವಾರದ ಶ್ವಾನ ದಳ ಮತ್ತು ಸ್ಪೋಟಕ ವಿಧ್ವಂಸಕ ತಪಾಸಣಾ ತಂಡ (Anti-Sabotage Check Team) ಜೊತೆಗೆ ಗೋಕರ್ಣ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಈ ತಪಾಸಣೆಯು ಭದ್ರತೆಯನ್ನು ಖಚಿತಪಡಿಸುವ ಜೊತೆಗೆ ಮಾದಕ ದ್ರವ್ಯಗಳ ಸಾಗಾಟ ಮತ್ತು ಬಳಕೆಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿತ್ತು.

  • ಉತ್ತರ ಕನ್ನಡ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಸಮಸ್ಯೆಗಳ ಕುರಿತು ಸಭೆ

    ಉತ್ತರ ಕನ್ನಡ, 28 ಮೇ,2025: ಜಿಲ್ಲಾ ಪೊಲೀಸ್ ಇಲಾಖೆಯಿಂದ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಸಭೆಯೊಂದನ್ನು ಆಯೋಜಿಸಲಾಗಿದೆ. ಈ ಸಭೆಯು ಮೇ 29, 2025ರಂದು ಬೆಳಿಗ್ಗೆ 11:00 ಗಂಟೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ.

    ಸಮುದಾಯದ ಸದಸ್ಯರು ತಮ್ಮ ಕುಂದುಕೊರತೆಗಳು ಮತ್ತು ಸಮಸ್ಯೆಗಳೊಂದಿಗೆ ಸಭೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿನಮ್ರ ಆಹ್ವಾನಿಸಲಾಗಿದೆ. ಈ ಸಭೆಯ ಮೂಲಕ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಇಲಾಖೆ ಹೊಂದಿದೆ.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಚೇರಿಯನ್ನು ಸಂಪರ್ಕಿಸಬಹುದು.

  • ಮಂಗಳೂರು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಐಪಿಎಸ್ ಕಾರವಾರ ಜಿಲ್ಲಾ ಪೊಲೀಸ್ ಕಚೇರಿಯ ತಪಾಸಣೆ

    ಕಾರವಾರ, ಮೇ 26,2025: ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಅಮಿತ್ ಸಿಂಗ್ ಐಪಿಎಸ್ ಅವರು ಕಾರವಾರ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಕಚೇರಿಯ ಕಡತಗಳನ್ನು ಪರಿಶೀಲಿಸಿದರು ಮತ್ತು ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಸಲಹೆಗಳನ್ನು ನೀಡಿದರು.

  • ಮಿರ್ಜನ್-ಕಟಗಾಲ್ ರಸ್ತೆ ಭೂಕುಸಿತದ ಆತಂಕದಿಂದ ತಾತ್ಕಾಲಿಕವಾಗಿ ಬಂದ್

    ಕಾರವಾರ: ಕುಮಟಾ ತಾಲೂಕಿನ ಮಿರ್ಜನ್-ಕಟಗಾಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕಿಸುವ ರಸ್ತೆಯ ಕೈರೆ ಸಮೀಪ ಭೂಕುಸಿತದ ಸಂಭಾವನೀಯ ಚಿಹ್ನೆಗಳಿಂದಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರಸ್ತೆಯ ಪಕ್ಕದ ಬೆಟ್ಟದ ಭಾಗವು ಹಂತಹಂತವಾಗಿ ಕೊರೆಯಲಾರಂಭಿಸಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ, ಇದರಿಂದಾಗಿ ಇಡೀ ಇಳಿಜಾರು ರಸ್ತೆಯೊಂದಿಗೆ ಕುಸಿಯುವ ಭಯವಿದೆ.

    ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿರುವುದರಿಂದ, ಭೂಕುಸಿತ ಸಂಭವಿಸಿದರೆ ಗಂಭೀರ ಸಾವು-ನೋವು ಸಂಭವಿಸಬಹುದೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಮತ್ತು ಯಾವುದೇ ಅಪಾಯಕಾರಿ ಘಟನೆಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಅವರು, ಮಿರ್ಜನ್-ಕಟಗಾಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ಕೈರೆವರೆಗಿನ ಭಾಗದಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.

    ಪರ್ಯಾಯವಾಗಿ, ಕಟಗಾಲ್‌ಗೆ ತೆರಳುವ ಪ್ರಯಾಣಿಕರು ಕಟಗಾಲ್-ದಿವಗಿ-ಮಿರ್ಜನ್ ಮಾರ್ಗವನ್ನು ಬಳಸಬಹುದು, ಆದರೆ ಮಿರ್ಜನ್‌ನಿಂದ ಬರುವವರು ಮಿರ್ಜನ್-ದಿವಗಿ-ಕಟಗಾಲ್ ಮಾರ್ಗವನ್ನು ಬಳಸಬೇಕೆಂದು ಸೂಚಿಸಲಾಗಿದೆ.