Tag: Kedarnath

  • ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ- ಪೈಲೆಟ್, ಮಗು ಸೇರಿ 7 ಮಂದಿ ಮೃತ್ಯು

    ಕೇದಾರನಾಥ, ಜೂ. 15: ಕೇದಾರನಾಥಕ್ಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಗೌರಿಕುಂಡ್ ಪ್ರದೇಶದ ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ.

    ಹವಾಮಾನ ವೈಪರೀತ್ಯದಿಂದಾಗಿ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯ ಬೆನ್ನಲ್ಲೇ ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಕೆಟ್ಟ ಹವಾಮಾನದಿಂದಾಗಿ, ರಕ್ಷಣಾ ಕಾರ್ಯವು ತೊಂದರೆಗಳನ್ನು ಎದುರಿಸುತ್ತಿದೆ. ಹೆಲಿಕಾಪ್ಟರ್‌ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ.

    ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ 7 ಜನರಿದ್ದರು ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಆರ್ಯನ್ ಏವಿಯೇಷನ್‌ನದು ಎಂದು ಹೇಳಲಾಗುತ್ತಿದೆ. ಈ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ಹೋಗುತ್ತಿದ್ದಾಗ ತ್ರಿಜುಗಿನಾರಾಯಣ ಮತ್ತು ಗೌರಿಕುಂಡ್ ನಡುವೆ ಸಂಪರ್ಕ ಕಡಿತಗೊಂಡಿದೆ.

    ಮೃತಪಟ್ಟವರಲ್ಲಿ 23 ತಿಂಗಳ ಮಗು ಕೂಡ ಇತ್ತು ಎಂದು ತಿಳಿದುಬಂದಿದೆ. ಬೆಳಿಗ್ಗೆ 5.30 ಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಟ್ಟ ಹವಾಮಾನವೇ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

    ಹೆಲಿಕಾಪ್ಟರ್ ಪತನವಾಗಿರುವುದನ್ನು ಹೆಲಿಕಾಪ್ಟರ್ ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ದೃಢಪಡಿಸಿದ್ದಾರೆ. ಗೌರಿಕುಂಡ್ ಮೇಲೆ ಹುಲ್ಲು ಕಡಿಯುತ್ತಿದ್ದ ನೇಪಾಳಿ ಮೂಲದ ಮಹಿಳೆಯರು ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೃತರೆಲ್ಲರೂ ಮಹಾರಾಷ್ಟ್ರದ ಜೈಸ್ವಾಲ್ ಕುಟುಂಬಕ್ಕೆ ಸೇರಿದವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.