ಕೋಟ, ಜುಲೈ 15, 2025: ತಾನು ಚಾಲೆಂಜಿಗ್ ಪೌಂಡೇಶನ್ ಸಂಸ್ಥೆಯ ಸದಸ್ಯೆಯಾಗಿದ್ದು ಹಾಗೂ ದಲಿತ ಸಂಘ (ಭೀಮ ಘರ್ಜನೆ) ಸಂಘಟನೆಯ ಅಧ್ಯಕ್ಷೆಯಾಗಿದ್ದಾಳೆ ಎಂದು ದಾವೆ ಎತ್ತಿ ಇಬ್ಬರು ಮಹಿಳೆಯರಿಂದ ಹಣ ಮತ್ತು ಚಿನ್ನಾಭರಣ ಪಡೆದು ವಾಪಸ್ ನೀಡದೇ ವಂಚನೆ ಮಾಡಿರುವ ಘಟನೆ ಬ್ರಹ್ಮಾವರದ ಬಿಲ್ಲಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸುಶೀಲ ಎಂಬ ಮಹಿಳೆ, ತನ್ನ ಪಕ್ಕದ ಮನೆಯ ಜಲಜ ಎಂಬವರ ಬಳಿ ತಾನು ಚಾಲೆಂಜಿಗ್ ಪೌಂಡೇಶನ್ ಸದಸ್ಯೆಯಾಗಿದ್ದು ಮತ್ತು ದಲಿತ ಸಂಘದ ಅಧ್ಯಕ್ಷೆಯೂ ಆಗಿದ್ದು, ಹಣದ ಅವಶ್ಯಕತೆ ಇದೆ ಎಂದು ಹೇಳಿ 15 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 10 ಗ್ರಾಂ ತೂಕದ ಒಂದು ಕಿವಿ ಓಲೆ ಮತ್ತು ಮಾಟೆಯನ್ನು ಪಡೆದಿದ್ದಾಳೆ. ಇದಲ್ಲದೇ, 5 ಗ್ರಾಂ ತೂಕದ ಚಿನ್ನದ ಸರವನ್ನು ಶಿರೂರು ಮೂರು ಕೈಯಲ್ಲಿರುವ ಮಲ್ಲಿಕಾರ್ಜುನ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡಮಾನ ಮಾಡಿಸಿ ₹36,000, ಜಲಜರ ವಿಜಯ ಬ್ಯಾಂಕ್ ಖಾತೆಯಿಂದ ₹60,000 ಮತ್ತು ಪೋಸ್ಟ್ ಆಫೀಸ್ ಖಾತೆಯಿಂದ ₹80,000 ಸೇರಿ ಒಟ್ಟು ₹1,76,000 ನಗದು ಹಣವನ್ನು ವಂಚನೆಯ ಮೂಲಕ ಪಡೆದಿದ್ದಾಳೆ. ಮೇ 17, 2024ರಂದು ಜಲಜ ಅವರ ಮಗಾಳು ಜ್ಯೋತಿ ಸುಶೀಲನ ಬಳಿ ತಾಯಿಯ ಒಡವೆ ಮತ್ತು ಹಣ ಕೇಳಿದಾಗ, ಆಕೆ ತನ್ನ ಸ್ನೇಹಿತರ ಹೆಸರಿನಲ್ಲಿ ಬ್ರಹ್ಮಾವರದ ರಾಮಕೃಷ್ಣ ಮತ್ತು ಎಂಸಿಸಿ ಸೊಸೈಟಿಗಳಲ್ಲಿ ಅಡಮಾನ ಮಾಡಿದ್ದು ಎಂದು ಸಮರ್ಥಿಸಿಕೊಂಡು, ದಲಿತ ಮಹಿಳೆ ಎಂದು ಜಾತಿ ನಿಂದನೆಯ ಆರೋಪ ಎತ್ತಿ ಕೇಸ್ ದಾಖಲಿಸುವ ಬೆದರಿಕೆಯಿಂದ ₹1,20,000 ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ವಾಪಸ್ ನೀಡಲು ನಿರಾಕರಿಸಿದ್ದಾಳೆ.
ಇದೇ ರೀತಿ, ಗ್ರಾಮದ ಜಯಲಕ್ಷ್ಮೀ ಎಂಬ ಮಹಿಳೆಯನ್ನು ಗುರಿಯಾಗಿಸಿಕೊಂಡು, ಸೊಸೈಟಿಯಲ್ಲಿ ಹಣ ಡೆಪಾಜಿಟ್ ಮಾಡಿದರೆ ಹೆಚ್ಚು ಲಾಭ ಮತ್ತು ಲೋನ್ ಕೊಡಿಸುವ ಭರವಸೆ ನೀಡಿ ₹1,20,000 ಮತ್ತು ₹2,00,000 ಸೇರಿ ಒಟ್ಟು ₹3,20,000 ನಗದು ಹಣ ಪಡೆದಿದ್ದಾಳೆ. ಇದಲ್ಲದೇ, ₹16,00,000 ಲೋನ್ ಒದಗಿಸುವುದಾಗಿ ನಂಬಿಸಿ 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಒಂದು ಜೋಡಿ ಬೆಂಡೋಲೆ ಮತ್ತು ಮಾಟೆಯನ್ನು (ಅಂದಾಜು ₹1,20,000 ಮೌಲ್ಯ) ಪಡೆದು ವಾಪಸ್ ನೀಡದೇ ವಂಚನೆ ಮಾಡಿದ್ದಾಳೆ. ಹೆಚ್ಚುವರಿ ಹಣ ಕೊಡಿಸುವಂತೆ ಒತ್ತಾಯಿಸಿ, ಚಿನ್ನಾಭರಣಗಳನ್ನು ಅಡಮಾನ ಮಾಡಿಸಿ ಲೋನ್ ಪಡೆದು ಸಂಸ್ಥೆಗೆ ಕಟ್ಟುವುದಾಗಿ ಹೇಳಿ ಬೆದರಿಕೆ ಹಾಕಿದ್ದಾಳೆ. ವಿಚಾರಣೆಯಲ್ಲಿ ಜಾತಿ ನಿಂದನೆಯ ಆರೋಪ ಎತ್ತಿ ಅವಾಚ್ಯ ಶಬ್ದಗಳಿಂದ ಬಗೆದಿದ್ದಾಳೆ.
ಈ ಎರಡೂ ಪ್ರತ್ಯೇಕ ಪ್ರಕರಣಗಳ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.