Tag: LOC

  • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ : ಹತ್ತು ಮಂದಿ ಭಾರತೀಯ ನಾಗರಿಕರು ಸಾವು, 40 ಮಂದಿಗೆ ಗಾಯ !

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯ ಪರಿಣಾಮದಿಂದಾಗಿ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಹತ್ತು ಮಂದಿ ಸಾವನ್ನಪ್ಪಿದ್ದಾರೆ ಹಾಗೂ 40 ಜನ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿಗಳಿಂದ ತಿಳಿದು ಬಂದಿದೆ.

    ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಇಂದು(ಬುಧವಾರ) ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್​ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.

    ಭಾರತ ಒಂಬತ್ತು ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಇದಕ್ಕೆ ಭಾರತೀಯ ಸೇನೆ ಶೆಲ್ ದಾಳಿ ಮೂಲಕ ಪ್ರತ್ಯುತ್ತರ ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಪೂಂಚ್ ಜಿಲ್ಲೆಯಲ್ಲಿ ಏಳು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಇನ್ನೂ 25 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಹತ್ತು ಜನ ಗಾಯಗೊಂಡರೆ, ರಾಜೌರಿ ಜಿಲ್ಲೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    “2025 ರ ಮೇ 06-07 ರ ರಾತ್ರಿ, ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯಾದ್ಯಂತ ಪೋಸ್ಟ್‌ಗಳಿಂದ ಶೆಲ್ ದಾಳಿ ಸೇರಿದಂತೆ ಅನಿಯಂತ್ರಿತ ಗುಂಡಿನ ದಾಳಿ ನಡೆಸುತ್ತಿದೆ” ಎಂದು ಸೇನೆ ತಿಳಿಸಿದೆ.