Tag: Matka

  • ಕೋಟೇಶ್ವರ: ಮಟ್ಕಾ ಜುಗಾರಿ ಪ್ರಕರಣ; ಒಬ್ಬನ ಬಂಧನ, ಹಲವರ ವಿರುದ್ಧ ಪ್ರಕರಣ

    ಕುಂದಾಪುರ, ಮೇ 06, 2025: ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಎಂ ಕೋಡಿಯಿಂದ ಹಳೆ ಅಳಿವೆಗೆ ಹೋಗುವ ರಸ್ತೆಯ ಕೊಂಬಾರ ರೆಸಾರ್ಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಜುಗಾರಿ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ, ಒಬ್ಬ ವ್ಯಕ್ತಿಯನ್ನು ಬಂಧಿಸಿ, ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮೇ 05, 2025 ರಂದು ರಾತ್ರಿ 10:00 ಗಂಟೆಗೆ, ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಎನ್. ನಂಜಾನಾಯ್ಕ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕೋಟೇಶ್ವರ ಗ್ರಾಮದ ಬೀಟ್ ಸಿಬ್ಬಂದಿ ಆಲಿಂಗರಾಯ ಕಾಟೆರ ಅವರು ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯನ್ನು ಆಧರಿಸಿ, ಎನ್. ನಂಜಾನಾಯ್ಕ ಸಿಬ್ಬಂದಿಯೊಂದಿಗೆ ರಾತ್ರಿ 10:40 ಗಂಟೆಗೆ ಸ್ಥಳಕ್ಕೆ ತೆರಳಿ, ಮರೆಯಲ್ಲಿ ನಿಂತು ಪರಿಶೀಲನೆ ನಡೆಸಿದರು. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ, ಮಟ್ಕಾ ಸಂಖ್ಯೆ ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡರು.

    ರಾತ್ರಿ 10:45 ಗಂಟೆಗೆ ದಾಳಿ ನಡೆಸಿದ ಪೊಲೀಸರು, ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸುರೇಶ ಎಂಬಾತನನ್ನು ವಶಕ್ಕೆ ಪಡೆದರು. ವಿಚಾರಣೆಯಲ್ಲಿ, ಸುರೇಶ ತನ್ನ ತಪ್ಪನ್ನು ಒಪ್ಪಿಕೊಂಡು, ಸಂದೇಶ ಎಂಬಾತ ಜುಗಾರಿಯ ಸಂಗ್ರಹ ಮೊತ್ತವನ್ನು ಪಡೆದುಕೊಂಡು ಕಮಿಷನ್ ನೀಡುತ್ತಿದ್ದನೆಂದು ತಿಳಿಸಿದ. ಜುಗಾರಿಯಲ್ಲಿ 00 ರಿಂದ 99 ರವರೆಗಿನ ಸಂಖ್ಯೆಗಳಿಗೆ ಹಣವನ್ನು ಪಣವಾಗಿಟ್ಟು ಆಟ ನಡೆಸಲಾಗುತ್ತಿತ್ತು.

    ಪೊಲೀಸರು ದಾಳಿಯ ವೇಳೆ ರೂ. 4,640 ನಗದು, 8 ಮಟ್ಕಾ ಚೀಟಿಗಳು, 1 ಬಾಲ್‌ಪೆನ್, ಒಟ್ಟು ರೂ. 10,000 ಮೌಲ್ಯದ 2 ಒಪ್ಪೋ ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್‌ನಲ್ಲಿ ಸ್ಕ್ರೀನ್‌ಶಾಟ್ ರೂಪದಲ್ಲಿ ದೊರೆತ 8 ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸುರೇಶ (ತೆಕ್ಕಟ್ಟೆ), ಸಂದೇಶ, ಶಂಕರ (ಕುಂಭಾಶಿ), ಜಯರಾಮ್ (ತೆಕ್ಕಟ್ಟೆ), ಶ್ರೀನಿವಾಸ (ಕುಂಭಾಶಿ), ವಿನಾಯಕ (ಕುಂಭಾಶಿ), ಗಣೇಶ್ (ಸಾಲಿಗ್ರಾಮ), ರಾಜು (ಕೋಟ), ಸಿಓ ರಾಜು (ಕುಂಭಾಶಿ) ಮತ್ತು ಬಾಬು (ತೆಕ್ಕಟ್ಟೆ) ಇವರ ವಿರುದ್ಧ ಅಪರಾಧ ಕ್ರಮಾಂಕ 57/2025, ಕಲಂ 112 BNS ಮತ್ತು 78(I)(III) KP ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಕುಂದಾಪುರ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.