ಕೋಝಿಕೋಡ್, ಜುಲೈ 14, 2025: ನಿಮಿಷಾ ಪ್ರಿಯಾ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಯೆಮೆನ್‌ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಪ್ರಸಿದ್ಧ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಯೆಮೆನ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಕೊಲೆಯಾದ ತಲಾಲ್ ಅವರ ಸಹೋದರ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಾತುಕತೆ ಬಳಿಕ ಶೇಖ್ ಹಬೀಬ್ ಉಮರ್ ಈ ವಿಷಯದಲ್ಲಿ ಮಧ್ಯಸ್ಥಿಕೆಗೆ ಮುಂದಾದರು ಎಂದು ವರದಿಯಾಗಿದೆ.
ನಿಮಿಷಾ ಪ್ರಿಯಾ ಅವರು ತಮ್ಮ ವ್ಯವಹಾರ ಪಾಲುದಾರರಾದ ತಲಾಲ್ ಅಬ್ದೋ ಮಹ್ದಿ ಅವರ ಕೊಲೆಗೆ ಸಂಬಂಧಿಸಿ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. 2017ರ ಜುಲೈನಲ್ಲಿ ನಿಮಿಷಾ ಪ್ರಿಯಾಳನ್ನು ಬಂಧಿಸಲಾಗಿತ್ತು. 2020ರಲ್ಲಿ ಯೆಮನ್ ನ್ಯಾಯಾಲಯ ಆಕೆಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಜುಲೈ 16ರಂದು ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಯೆಮೆನ್‌ನ ಜೈಲು ಅಧಿಕಾರಿಗಳು ತಿಳಿಸಿದ್ದರು. ನಿಮಿಷಾ ಪ್ರಿಯಾ ಅವರ ತಡೆಯಲು ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಸೋಮವಾರ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.