ಉಡುಪಿ, ಜುಲೈ 10, 2025: ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಲ್ಲಿ ಆಯ್ದ 71 ಮಂದಿಗೆ ಉತ್ತಮ ಆರೋಗ್ಯವನ್ನು ಹೊಂದಲು ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಲು 30 ದಿನಗಳ ಉಚಿತ ನವಚೇತನ ಶಿಬಿರವೊಂದನ್ನು ಪರ್ಕಳ ಸಮೀಪದಲ್ಲಿರುವ ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ದಲ್ಲಿ ಆಯೋಜಿಸಲಾಗಿದೆ.
ಜಿಲ್ಲೆಯ ಒಟ್ಟು 71 ಮಂದಿ ಪೊಲೀಸರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಇವರಲ್ಲಿ 62 ಮಂದಿ ಪುರುಷರು ಹಾಗೂ 9 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಒಬ್ಬ ಎಸ್‌ಐ, 12 ಮಂದಿ ಎಎಎಸ್‌ಐ, 35 ಮಂದಿ ಹೆಡ್ ಕಾನ್‌ಸ್ಟೇಬರ್‌ಗಳು ಹಾಗೂ 23 ಮಂದಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ಶಿಬಿರದಲ್ಲಿ ದೇಹ ದಂಡನೆಯ ಮೂಲಕ ತಮ್ಮ ಫಿಟ್ನೆಸ್‌ನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ.
ಶಿಬಿರದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಯೋಗ, ಪಿ.ಟಿ., ಝುಂಬಾ, ಜಿಮ್ ಹಾಗೂ ಕರಾಟೆಯನ್ನು ಆಯಾ ಕ್ಷೇತ್ರದ ತಜ್ಞರಿಂದ ಕಲಿಸಿ ಅಭ್ಯಸಿಸಲಾಗು ತ್ತದೆ. ಅಲ್ಲದೇ ಒತ್ತಡ ರಹಿತ ಉತ್ತಮ ಜೀವನ ನಡೆಸಲು ಅಗತ್ಯವಿರುವ ಹಲವು ವಿಷಯಗಳ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಶಿಬಿರಾರ್ಥಿಗಳು ಶಿಬಿರದ ಅವಧಿಯುದ್ದಕ್ಕೂ ಸೌಖ್ಯವನದ ‘ಪಥ್ಯಾಹಾರ’ವನ್ನೇ ಅವಲಂಬಿಸಬೇಕಾಗಿದೆ.
ಜು.1ರಂದು ಉದ್ಘಾಟನೆಗೊಂಡ ಈ ಶಿಬಿರ ಒಂದು ತಿಂಗಳ ಕಾಲ ನಡೆಯಲಿದೆ. ಈ ಶಿಬಿರ ಪೊಲೀಸರ ದೈಹಿಕ ಕ್ಷಮತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಬೇಡುವ ಪೊಲೀಸ್ ವೃತ್ತಿಯಲ್ಲಿರುವವರು ವಿವಿಧ ಕಾರಣಗಳಿಂದ ಕೆಲವೇ ವರ್ಷಗಳಲ್ಲಿ ಬೊಜ್ಜು ಬೆಳೆಸಿಕೊ ಳ್ಳುವುದು, ವಿವಿಧ ಕಾಯಿಲೆಗಳಿಗೆ ತುತ್ತಾಗುವುದು ಸಾಮಾನ್ಯವೆನಿಸಿದೆ. ಇವುಗಳಿಗೆಲ್ಲಾ ಪರೀಕದ ಪ್ರಕೃತಿ ಚಿಕಿತ್ಸಾ ಪದ್ಧತಿ ರಾಮಬಾಣವೆನಿಸಿಕೊಳ್ಳುವ ನಿರೀಕ್ಷೆ ಪೊಲೀಸ್ ಇಲಾಖೆಯದು.
ಇಂದು ಬೆಳಗಿನ ಶಿಬಿರದಲ್ಲಿ ವ್ಯಾಯಾಮ ಹಾಗೂ ಇತರ ಚಟುವಟಿಕೆಯ ಸಂದರ್ಭದಲ್ಲಿ ಪರೀಕದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು, ‘ಇದು ಕೇವಲ ಬೊಜ್ಜು ಕರಗಿಸುವ ಕಾರ್ಯಕ್ರಮವಲ್ಲ. ಪೊಲೀಸ್ ಸಿಬ್ಬಂದಿಗಳ ಸಂಪೂರ್ಣ ಆರೋಗ್ಯ ಹಾಗೂ ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿದೆ’ ಎಂದರು.
‘ಕೊಲೆಸ್ಟ್ರಾಲ್, ಹೈ ಬ್ಲಡ್ ಶುಗರ್ ಸಮಸ್ಯೆ ಇರುವವರಿಗೆ ಇದು ಬಹಳ ಉಪಯುಕ್ತವಾಗುತ್ತದೆ. ಇಲ್ಲಿನ ಕಟ್ಟುನಿಟ್ಟಿನ ಡಯಟ್ ಹಾಗೂ ವ್ಯಾಯಾಮದಿಂದ ಖಂಡಿತ ಉಪಯೋಗವಾಗುವ ನಿರೀಕ್ಷೆ ಇದೆ. ಇದು ‘ರಿಲಾಕ್ಸ್’ ಆಗುವ ಶಿಬಿರ ಅಲ್ಲ. ದೈಹಿಕ ಕ್ಷಮತೆಗಾಗಿ ತರಬೇತಿ ಕಾರ್ಯಕ್ರಮ ಗಳು ಬೆಳಗ್ಗೆ 7:00ರಿಂದ ಸಂಜೆ 6:00ಗಂಟೆಯವರೆಗೆ ಆರು ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತವೆ ಎಂದು ಅವರು ವಿವರಿಸಿದರು.
ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಯಲ್ಲಿ ಪುನಶ್ಚೇತನಕ್ಕಾಗಿ ಬರುವ ಶಿಬಿರಾರ್ಥಿಗಳಿಗೆ ನೀಡುವ ತರಬೇತಿ, ವಿವಿಧ ಚಿಕಿತ್ಸೆ, ಆಹಾರ ಹಾಗೂ ಪಾನೀಯಗಳನ್ನು ಪೊಲೀಸರಿಗೂ ನೀಡಲಾಗುತ್ತಿದೆ. ಯೋಗ ತರಬೇತಿಯನ್ನು ಎಸ್‌ಡಿಎಂ ಆಸ್ಪತ್ರೆಯ ಯೋಗ ಶಿಕ್ಷಕರು ನೀಡಿದರೆ, ಪೊಲೀಸ್ ಡ್ರಿಲ್, ಪೆರೇಡ್‌ನ್ನು ನಮ್ಮದೇ ಸಿಬ್ಬಂದಿಗಳು ನಡೆಸುತಿದ್ದಾರೆ. ಪ್ರತಿದಿನ ಇವರಿಂದ ಕನಿಷ್ಠ 10 ಕಿ.ಮೀ.ಗಳ ವಾಕಿಂಗ್ ಮಾಡಿಸಲಾಗುತ್ತದೆ. ಕರಾಟೆ ಹಾಗೂ ಝುಂಬಾ ತರಬೇತಿಯನ್ನು ಹೊರಗಿನ ಎಜೆನ್ಸಿಯಿಂದ ನೀಡಲಾಗುತ್ತಿದೆ ಎಂದು ಹರಿರಾಮ್ ಶಂಕರ್ ವಿವರಿಸಿದರು.
ಪೊಲೀಸ್ ಇಲಾಖೆಗೆ ಸೇರುವ ಸಮಯದಲ್ಲಿ ನಮ್ಮ ಯುವಕರು ದೈಹಿಕವಾಗಿ ಅತ್ಯಂತ ಸದೃಢರಾಗಿರು ತ್ತಾರೆ. ಆದರೆ ಕೆಲಸದ ಒತ್ತಡ ಹಾಗೂ ಇತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿ ಸಲು ಸಾಧ್ಯವಾಗದೇ ಅವರಲ್ಲಿ ದೈಹಿಕವಾಗಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಲಾಖೆಯ ಕೆಲಸದಿಂದಾಗಿ ಅವರಿಗೆ ಈ ಸಮಸ್ಯೆಯಾಗಿರುವುದರಿಂದ ಇಲಾಖೆಯೇ ಅದರ ಪರಿಹಾರ ತೋರಿಸಬೇಕೆನ್ನುವ ಕಾರಣಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಕೊನೆಯಲ್ಲಿ ಉತ್ತಮ ಪಲಿತಾಂಶ ಬರಲಿದೆ ಎಂಬುದು ನಮ್ಮ ವಿಶ್ವಾಸ ಎಂದು ಹರಿರಾಮ್ ಶಂಕರ್ ನುಡಿದರು.
“ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ 71 ಮಂದಿ ಆಯ್ದ ಪೊಲೀಸ್ ಸಿಬ್ಬಂದಿಗಳಿಗೆ ಪರೀಕದಲ್ಲಿ ಆಯೋಜಿಸಿರುವ ಒಂದು ತಿಂಗಳ ‘ನವಚೇತನ ಶಿಬಿರ’ ಬೊಜ್ಜು ಕರಗಿಸುವ ಕಾರ್ಯಕ್ರಮವಲ್ಲ. ಇದು ಪೊಲೀಸರ ಆರೋಗ್ಯವನ್ನು ಸುಧಾರಿಸುವ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ತರಬೇತಿ ಕಾರ್ಯಕ್ರಮ” – -ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
“ಬಿಎಂಐ ಹೆಚ್ಚಿರುವವರಿಗೆ ಅದನ್ನು ಇಳಿಸಲು ಪರೀಕದಲ್ಲಿ ನವಚೇತನ ಶಿಬಿರವನ್ನು ಏರ್ಪಡಿಸುವ ಮೂಲಕ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆಶಯವನ್ನು ಒಂದು ತಿಂಗಳ ಅವಧಿಯಲ್ಲಿ ಶೇ.100ರಷ್ಟು ಈಡೇರಿಸುವ ವಿಶ್ವಾಸ ನಮಗಿದೆ. ಮೊದಲು ಕಷ್ಟವಾದರೂ ಈಗ ತರಬೇತಿಗೆ ಸಂಪೂರ್ಣವಾಗಿ ಹೊಂದಿಕೊಂಡು ಆನಂದಿಸುತಿದ್ದೇವೆ. ನಮ್ಮಗಳ ಚಟುವಟಿಕೆಯಿಂದ ನಮ್ಮ ಮನೆಯವರಿಗೂ ಖುಷಿಯಾಗಿದೆ. ಅವರೂ ಎಸ್ಪಿ ಸಾಹೇಬರಿಗೆ ಧನ್ಯವಾದ ತಿಳಿಸಿದ್ದಾರೆ”. – -ರಾಜೇಂದ್ರ ಮಣಿಯಾಣಿ, ಎಎಸ್‌ಐ ಶಂಕರನಾರಾಯಣ ಠಾಣೆ.
ಮಂಗಳೂರು, ಜುಲೈ 10, 2025: ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ, ದೂರುದಾರರಿಂದ 5,000 ರೂ. ಲಂಚ ಪಡೆದ ಆರೋಪದ ಮೇಲೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಮೂಲ ದೂರುದಾರರ ತಂದೆಯ ಸವಾರಿ ವಾಹನವೊಂದು ನಂತೂರ ಸರ್ಕಲ್ ಸಮೀಪ ಸ್ಕೂಟರ್‌ನೊಂದಿಗೆ ಅಪಘಾತಕ್ಕೀಡಾಗಿತ್ತು. ಈ ಸಂಬಂಧ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನ್ಸ್ಟಬಲ್ ತಸ್ಲಿಮ್ (CHC 322) ದೂರಿದಾರರಿಂದ ವಾಹನ ದಾಖಲೆಗಳನ್ನು ಠಾಣೆಗೆ ತರಬೇಕೆಂದು ಕೇಳಿದ್ದರು. ದೂರಿದಾರರು ಇದಕ್ಕೆ ಒಪ್ಪಿ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಆದರೆ ದೂರುದಾರರ ಆರೋಪಿಸಿದಂತೆ, ತಸ್ಲಿಮ್ ವಾಹನ ಬಿಡುಗಡೆಗೆ ರೂ. 50,000 ಲಂಚ ಕೇಳಿದ್ದಾರೆ. ತಮ್ಮ ವಕೀಲರ ಸಲಹೆಯ ಮೇರೆಗೆ ದೂರುದಾರರ ಮತ್ತೆ ಠಾಣೆಗೆ ತೆರಳಿ, ವಾಹನ ಬಿಡುಗಡೆಯಾಗಿದೆ ಎಂದು ಒಂದು ದಾಖಲೆಯಲ್ಲಿ ಸಹಿ ಮಾಡಿಸಲಾಗಿದ್ದರೂ, ವಾಹನವನ್ನು ಇನ್ನೂ ವಾಪಸ್ ಕೊಡಲಾಗಿಲ್ಲ. ನಂತರ ತಸ್ಲಿಮ್ ದೂರುದಾರರ ಮೊಬೈಲ್ ಫೋನ್‌ನನ್ನು ಒಪ್ಪಿಸುವಂತೆ ಒತ್ತಾಯಿಸಿ, ಫೋನ್ ಪಡೆದು ವಾಹನ ಬಿಡುಗಡೆ ಮಾಡಿದ್ದಾರೆ.
ಫೋನ್ ವಾಪಸ್ ಕೇಳಿದಾಗ ತಸ್ಲಿಮ್ ಮತ್ತೆ ರೂ. 50,000 ಲಂಚ ಮತ್ತು ಮೂಲ ಚಾಲನಾ ಪರವಾನಿಕೆ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ. ದೂರುದಾರರ ಪರವಾನಿಕೆಯನ್ನು ಹಸ್ತಾಂತರಿಸಿದ್ದಾರೆ. ಇದಾದ ಬಳಿಕ ತಸ್ಲಿಮ್ ಮತ್ತೊಬ್ಬ ಕಾನ್ಸ್ಟಬಲ್ ವಿನೋದ್ (CHC 451) ಅವರಿಗೆ ಲಂಚವಾಗಿ ರೂ. 30,000 ಸಂಗ್ರಹಿಸಿ ಪರವಾನಿಕೆಯನ್ನು ವಾಪಸ್ ನೀಡುವಂತೆ ಸೂಚಿಸಿದ್ದಾರೆ.
ಜುಲೈ 9ರಂದು ದೂರಿದಾರರು ಮತ್ತೆ ತಸ್ಲಿಮ್‌ರನ್ನು ಭೇಟಿಯಾದಾಗ, ರೂ. 10,000 ಪಾವತಿಸುವಂತೆ ಒತ್ತಾಯವಾಯಿತು. ದೂರುದಾರರು ಕೈಯಲ್ಲಿ ರೂ. 500 ಮಾತ್ರ ಇದೆ ಎಂದಾಗ, ರೂ. 5,000 ಇಲ್ಲದೆ ಬರಬೇಡ ಎಂದು ತಸ್ಲಿಮ್ ಹೇಳಿದ್ದಾರೆ.
ಸರ್ಕಾರಿ ಪ್ರಕ್ರಿಯೆಗೆ ಲಂಚ ಕೊಡಲು ನಿರಾಕರಿಸಿದ ದೂರುದಾರರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಒಂದು ಜಾಲವನ್ನು ಹಾಕಲಾಯಿತು. ಜುಲೈ 10ರಂದು ತಸ್ಲಿಮ್ ರೂ. 5,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ.
ಲೋಕಾಯುಕ್ತ ಪೊಲೀಸರು ಆರೋಪಿಯಾದ ಅಧಿಕಾರಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಈ ಜಾಲ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಎಸ್‌ಪಿ (ಚಾರ್ಜ್) ಕುಮಾರಚಂದ್ರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಡಿವೈಎಸ್‌ಪಿ ಡಾ. ಗಣ್ ಪಿ ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಸುರೇಶ್ ಕುಮಾರ್ ಪಿ, ಭಾರತಿ ಜಿ ಮತ್ತು ಚಂದ್ರಶೇಖರ್ ಕೆ ಎನ್, ಸಹಿತ ಇತರ ಲೋಕಾಯುಕ್ತ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಕಾರ್ಕಳ: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವುದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆರೋಪಿಸಿದ್ದಾರೆ.
ಕಾರ್ಕಳದ ಬೆಳ್ಮಣ್ಣಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಸಕಾಲದಲ್ಲಿ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಈಗ 18 ಸಾವಿರ ಹುದ್ದೆಗಳು ಖಾಲಿ ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಉಂಟಾಗಿದೆ. ನಿವೃತ್ತರಾದವರ ಜಾಗಕ್ಕೆ ನೇಮಕಾತಿ ಮಾಡಿಕೊಳ್ಳಬೇಕಿತ್ತು, ಆದರೆ ಹಾಗೆ ಆಗಿಲ್ಲ. ಈಗ ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ ಎಂದು ಗೃಹ ಸಚಿವರು ತಿಳಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬದ ಬಗ್ಗೆ ಮಾತನಾಡಿದ ಅವರು, “ಒಳಮೀಸಲಾತಿ ವಿಚಾರದಿಂದಾಗಿ ಎರಡು-ಮೂರು ತಿಂಗಳು ವಿಳಂಬವಾಗಿದೆ. ಈಗ ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ಪಿಎಸ್‌ಐ ಹಗರಣದಿಂದಾದ ವಿಳಂಬ: ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು. “545 ಪಿಎಸ್‌ಐ ಹುದ್ದೆಗಳ ನೇಮಕಾತಿ ವೇಳೆ ಹಗರಣ ನಡೆದಿತ್ತು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಯೇ ನಿಲ್ಲುವಂತಾಗಿತ್ತು. ಈಗ ನಾವು ಈಗಾಗಲೇ 545 ಮಂದಿಗೆ ನೇಮಕಾತಿ ಆದೇಶ ನೀಡಿದ್ದೇವೆ. ಇನ್ನು 402 ಮಂದಿಗೆ ಒಂದು ವಾರದಿಂದ ಹದಿನೈದು ದಿನಗಳಲ್ಲಿ ಆದೇಶ ನೀಡುತ್ತೇವೆ,” ಎಂದು ಪರಮೇಶ್ವರ್ ಭರವಸೆ ನೀಡಿದರು.
ಎಸ್‌ಐಗಳ ನೇಮಕ್ಕೆ ಕ್ರಮ: ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 600 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. “ಒಂದೂವರೆ ಸಾವಿರ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಖಾಲಿ ಇಟ್ಟುಕೊಂಡರೆ ಸಮಸ್ಯೆಯಾಗದೆ ಇರುತ್ತಾ?” ಎಂದು ಪ್ರಶ್ನಿಸುವ ಮೂಲಕ ಹಿಂದಿನ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು, ಜುಲೈ 8, 2025: ಮಳೆಗಾಲದಲ್ಲಿ ಕಳ್ಳತನದ ಸಂಭಾವ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೈಂದೂರು ಪೊಲೀಸ್ ಠಾಣೆಯು ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಪೊಲೀಸರು ನೀಡಿರುವ ಮಾರ್ಗಸೂಚಿಗಳು ಈ ಕೆಳಗಿನಂತಿವೆ:
ಮನೆಯ ಮುಖ್ಯ ಬಾಗಿಲಿಗೆ ಸೆಂಟರ್ ಲಾಕ್ ಅಳವಡಿಸಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಿ.
ಮನೆಯ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳಿಗೆ ಒಳಗಡೆಯಿಂದ ಕಬ್ಬಿಣದ ಅಡ್ಡ ಪಟ್ಟಿಗಳನ್ನು ಅಳವಡಿಸಿ.
ಕಾರ್ಯಕ್ರಮ ಅಥವಾ ಜಾತ್ರೆಗೆ ಹೋಗುವಾಗ ಮನೆಯಲ್ಲಿ ಕನಿಷ್ಠ ಒಬ್ಬರನ್ನಾದರೂ ಉಳಿಸಿಕೊಳ್ಳಿ.
ಗುಜರಿ, ಹಾಸಿಗೆ, ಬೆಡ್ ಸೆಟ್, ಸ್ಟವ್ ರಿಪೇರಿ ಸೇರಿದಂತೆ ಮನೆಗೆ ಬರುವವರಿಂದ ಆಧಾರ ಕಾರ್ಡ್‌ನ ಫೋಟೋ ಮತ್ತು ಅವರ ಫೋಟೋವನ್ನು ಮೊಬೈಲ್‌ನಲ್ಲಿ ತೆಗೆದಿಡಿ.
ಗ್ಯಾಸ್ ಸಿಲಿಂಡರ್ ಬದಲಾಯಿಸುವಾಗ ರಸ್ತೆ ಬದಿಯಲ್ಲಿ ಬಿಟ್ಟು ಹೋಗಬೇಡಿ.
ಹಗಲು ಅಥವಾ ರಾತ್ರಿ ಸಂದರ್ಭದಲ್ಲಿ ಸಂಶಯಾಸ್ಪದ ವಾಹನಗಳು ನಿಂತಿದ್ದರೆ, ನೋಂದಣಿ ಸಂಖ್ಯೆಯು ಕಾಣಿಸುವಂತೆ ಫೋಟೋ ತೆಗೆದಿಡಿ.
ರಸ್ತೆಗೆ ಕಾಣುವಂತೆ ಬಾಗಿಲು ಅಥವಾ ಗೇಟ್‌ಗೆ ಬೀಗ ಹಾಕಬೇಡಿ.
ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲನ್ನು ಲಾಕ್ ಮಾಡಿಕೊಂಡು ಕೆಲಸ ಮಾಡಿ.
ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳಿಗೆ ಸಮಾನ ಗಮನ ನೀಡಿ.
ಬಾಗಿಲು ತಟ್ಟಿದಾಗ ಅಥವಾ ಬೆಲ್ ಮೊದಲಿದಾಗ ತಕ್ಷಣ ತೆರೆಯದೆ, ಕಿಟಕಿಯಿಂದ ಖಚಿತಪಡಿಸಿಕೊಂಡು ವ್ಯವಹರಿಸಿ.
ಅಪರಿಚಿತರು ನೀರು ಅಥವಾ ವಿಳಾಸ ಕೇಳಲು ಬಂದಾಗ ಜಾಗ್ರತೆಯಿಂದ ವರ್ತಿಸಿ.
ನೆರೆಹೊರೆಯವರೊಂದಿಗೆ ಮಾತನಾಡಲು ಹೋಗುವಾಗ ಮನೆ ಮತ್ತು ಗೇಟ್‌ಗೆ ಬೀಗ ಹಾಕುವುದನ್ನು ಮರೆಯಬೇಡಿ.
ಮನೆಯಲ್ಲಿ ಅಪ್ರಾಪ್ತ ವಯಸ್ಸಿನವರನ್ನು ಅಥವಾ ವಯೋವೃದ್ಧರನ್ನು ಒಣಗುವಂತೆ ಬಿಡಬೇಡಿ.
ಅಂಚೆ, ಕೊರಿಯರ್, ಪಾರ್ಸೆಲ್ ಅಥವಾ ಉಡುಗೊರೆ ಪಡೆಯುವಾಗ ಖಚಿತಪಡಿಸಿಕೊಂಡು ವ್ಯವಹರಿಸಿ.
ಕಿಟಕಿಗೆ ಹತ್ತಿರದಲ್ಲಿ ಮೊಬೈಲ್ ಫೋನ್‌ಗಳು ಅಥವಾ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ.
ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಉತ್ತಮ.
ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್‌ಗಳಂತಹ ಸುರಕ್ಷಾ ಸಾಧನಗಳನ್ನು ಅಳವಡಿಸಿ.
ಮಲಗುವ ಸಮಯದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಲಾಕ್ ಮಾಡಿರುವುದನ್ನು ಪರೀಕ್ಷಿಸಿ.
ಮನೆ ಬೀಗ ಹಾಕಿ ಪ್ರಯಾಣಿಸುವಾಗ ಅಕ್ಕಪಕ್ಕದವರಿಗೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಬಾಡಿಗೆಗೆ ಇರುವವರ ಅಥವಾ ಮನೆ ಕೆಲಸದವರ ಬಗ್ಗೆ ಆಧಾರ ಕಾರ್ಡ್, ಫೋಟೋ, ರಕ್ತ ಸಂಬಂಧಿಗಳ ಮೊಬೈಲ್ ಸಂಖ್ಯೆಗಳನ್ನು ದಾಖಲಿಸಿ.
ಸಂಶಯಾಸ್ಪದ ವ್ಯಕ್ತಿ ಅಥವಾ ವಾಹನ ಕಂಡರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ.
ಚಿನ್ನದ ಒಡವೆಗಳನ್ನು ಪಾಲಿಶ್ ಮಾಡುತ್ತೇವೆ ಎಂದು ಮನೆ ಬಳಿ ಬರುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.
ಜನರಿಲ್ಲದ ಪ್ರದೇಶದಲ್ಲಿ ಮಹಿಳೆಯರು ಒಣಗಿ ಓಡಾಡಬೇಕು ಎಂದು ತಪ್ಪಿಸಿ.
ಒಣಗಿ ಓಡಾಡುವಾಗ ಅಪರಿಚಿತರು ವಿಳಾಸ ಕೇಳಿದಾಗ ಎಚ್ಚರಿಕೆಯಿಂದ ವರ್ತಿಸಿ.
ಬ್ಯಾಂಕ್, ಅಂಗಡಿ, ಪೋಸ್ಟ್ ಆಫಿಸ್ ಬಳಿ ಅಪರಿಚಿತರು ಹಣ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಹಣದ ಸುರಕ್ಷತೆ ಖಚಿತಪಡಿಸಿ.
ಮೋಹಕ್ಕೆ ಒಳಗಾಗಿ ಸುಲಿಗೆಗೆ ಒಳಗಾಗದಿರಲು ಎಚ್ಚರಿಕೆ ತೆಗೆದುಕೊಳ್ಳಿ; ದ್ವಿಚಕ್ರ ವಾಹನದಲ್ಲಿ ಸಮೀಪಿಸುವವರಿಂದ ದೂರ ಇರಿ.
ಜನನಿಬಿಡ ಪ್ರದೇಶದಲ್ಲಿ ಪಾರ್ಕ್ ಮಾಡಿ ಕುಳಿತುಕೊಳ್ಳುವ ಅಥವಾ ಕತ್ತಲೆಯಲ್ಲಿ ಇರುವ ಹವ್ಯಾಸ ತಪ್ಪಿಸಿ.
ಅಪರಿಚಿತರು ಅತೀಂದ್ರ ಶಕ್ತಿಗಳು ಅಥವಾ ಮಹಾನ್ ಪುರುಷರ ಬಗ್ಗೆ ಹೇಳಿ ಮೋಸ ಮಾಡುವ ಪ್ರಯತ್ನ ಮಾಡಿದಾಗ ಎಚ್ಚರಿಕೆ ಇರಿಸಿ.
ಸಂಶಯಾಸ್ಪದ ವ್ಯಕ್ತಿ ಕಂಡರೆ ಜೋರಾಗಿ ಕೂಗಿ ಅಕ್ಕಪಕ್ಕದವರನ್ನು ಕರೆಯಿರಿ.
ವಾಯುವಿಹಾರಕ್ಕೆ ಹೋಗುವಾಗ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.
ಅಗತ್ಯವಿಲ್ಲದೆ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ.
ಆನ್‌ಲೈನ್ ವಂಚನೆಯಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆ ಇರಿಸಿ.
ಅವಶ್ಯಕತೆಯಿದ್ದಾಗ 112 ಗೆ ಕರೆ ಮಾಡಿ ಸಹಾಯ ಆರಾಯಿಸಿ.
ಪೊಲೀಸರು ಜನರ ಸಹಕಾರದೊಂದಿಗೆ ಮಳೆಗಾಲದಲ್ಲಿ ಸುರಕ್ಷತೆಯನ್ನು ಕಾಪಾಡಲು ಆರಾಮದಿಂದ ಇರಲು ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ.
ಗಂಗೊಳ್ಳಿ, ಜೂನ್ 18, 2025: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋವಾಡಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ತ್ರಾಸಿ ಬೀಟ್ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಕುರಿತು ಮತ್ತು ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ 112 ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ನೀರಿನ ಪ್ರದೇಶಗಳಲ್ಲಿ ಜಾಗರೂಕರಾಗಿರುವಂತೆ ಹಾಗೂ ವಿದ್ಯುತ್ ಸಂಪರ್ಕವಿರುವ ಕಂಬಗಳ ಬಳಿ ಸುರಕ್ಷಿತವಾಗಿರುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಉಡುಪಿ, ಜೂನ್ 12, 2025: ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಬಾಲ ಕಾರ್ಮಿಕರ ಸೇವೆಯನ್ನು ಪಡೆಯದಿರುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಈ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆಯಿತು.
ಪೊಲೀಸ್ ಠಾಣೆಗಳಲ್ಲಿ ಈ ಸಂದರ್ಭದಲ್ಲಿ ಬಾಲ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟುವ ಮತ್ತು ಅವರ ಶಿಕ್ಷಣ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವ ಬಗ್ಗೆ ಒತ್ತು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದ ಪ್ರಮುಖರು ಭಾಗವಹಿಸಿದ್ದರು.
ಬೆಂಗಳೂರು: ಇತ್ತೀಚೆಗೆ ಮಂಡ್ಯದಲ್ಲಿ ಸಂಚಾರ ಪೊಲೀಸರ ಅಮಾನವೀಯ ವರ್ತನೆಯಿಂದ ಮಗು ಬಿದ್ದು ಸಾವನ್ನಪ್ಪಿರುವ ದುರಂತ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆಯು ವಾಹನ ತಪಾಸಣೆ ಮಾಡುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.
ವಾಹನ ತಪಾಸಣೆ ವೇಳೆ ಮಂಡ್ಯದಲ್ಲಿ ಮೂರು ವರ್ಷದ ಮಗು ಸಾವನ್ನಪ್ಪಿದೆ. ಹೀಗಾಗಿ ಭವಿಷ್ಯದಲ್ಲಿ ಇಂತಹ ದುರ್ಘಟನೆ ಮರುಕಳಿಸದಿರಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎನ್. ಸಲೀಂ ಅವರು ತಪಾಸಣೆ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದಾರೆ.
ಹೀಗಿವೆ ಮಾರ್ಗಸೂಚಿಗಳು:
ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪರೀಕ್ಷಿಸಲು ಸಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬಾರದು. ಕಣ್ಣಿಗೆ ಕಾಣುವ (Visible violations) ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸಬೇಕು. ಪ್ರಕರಣಗಳನ್ನು ದಾಖಲಿಸುವಾಗ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.
ದ್ವಿಚಕ್ರ ವಾಹನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿಕೈ ತೆಗೆದುಕೊಳ್ಳುವುದನ್ನು ಮಾಡಬಾರದು.
ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಹಿಡಿಯಲು ಅವರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡು ಜಿಲ್ಲಾ ಪೊಲೀಸ್ ಠಾಣಾ ಸರಹದ್ದುಗಳ ವಿವಿಧ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸಿ, ಸದರಿ ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಭೌತಿಕವಾಗಿ ಪ್ರಕರಣ ದಾಖಲಿಸುವಾಗ ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ತಮ್ಮ ಸುರಕ್ಷತೆಗಾಗಿ Reflective Jacket ಗಳನ್ನು ಧರಿಸಬೇಕು. ಸಂಜೆ ವೇಳೆಯಲ್ಲಿ ಕಡ್ಡಾಯವಾಗಿ ಎಲ್ಇಡಿ ಬಟನ್ಗಳನ್ನು ಉಪಯೋಗಿಸಬೇಕು ಹಾಗೂ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು.
ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ (ಟಿಎಂಸಿ) ಅಥವಾ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ (ಐಟಿಎಂಎಸ್) ಹೊಂದಿರುವ ಘಟಕಗಳಲ್ಲಿ ಆದಷ್ಟು ಸಂಪರ್ಕ ರಹಿತ ಪ್ರಕರಣಗಳನ್ನು ದಾಖಲಿಸಬೇಕು.
ಅನಾಹುತಗಳನ್ನು ತಪ್ಪಿಸಲು ಎಲ್ಲಾ ಘಟಕಗಳಲ್ಲೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ಸಲೀಂ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ ದಾಖಲಿಸಲು ತಂತ್ರಜ್ಞಾನ ಅನುಸರಿಸಬೇಕು.
ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100 ರಿಂದ 150 ಮೀಟರ್ ಮೊದಲೇ ರಿಫೆಕ್ಟಿವ್ ರಬ್ಬರ್ ಕೋನ್‌ಗಳನ್ನು ಹಾಗೂ ಸುರಕ್ಷತಾ ಸಲಕರಣಿಗಳನ್ನು ಅಳವಡಿಕೆ, ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕೆಂದು ಆದೇಶದಲ್ಲಿ ನಮೂದಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಇಂತ ಕಾನೂನು ಸುವ್ಯವಸ್ಥೆ ಪೊಲೀಸರ ನೆರವು ಪಡೆಯಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಪೊಲೀಸರಿಗೆ ಡಿಜಿಪಿ ಸಲೀಂ ತಾಕೀತು ಮಾಡಿದ್ದಾರೆ.
ಉಡುಪಿ: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು (ಮೇ 31, 2025) ವಯೋನಿವೃತ್ತಿ ಹೊಂದಿರುವ ಬೈಂದೂರು ಪೊಲೀಸ್ ಠಾಣೆಯ ಎಎಸ್‌ಐ ಶ್ರೀ ತನಿಯ ಮತ್ತು ಕುಂದಾಪುರ ನಗರ ಠಾಣೆಯ ಎಎಸ್‌ಐ ಶ್ರೀ ರಾಘವೇಂದ್ರ ರವರನ್ನು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಲಾಯಿತು.
ಉಡುಪಿ, ಮೇ 30, 2025: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ಅರುಣ್ ಕೆ. ಐ.ಪಿ.ಎಸ್. ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ. ಇಂದು, ಅವರು ತಮ್ಮ ಜವಾಬ್ದಾರಿಯನ್ನು ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ಎಸ್. ನಾಯಕ್ ಅವರಿಗೆ ಹಸ್ತಾಂತರಿಸಿದ್ದಾರೆ. ಅದೇ ರೀತಿ, ಉಡುಪಿ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಹರಿರಾಮ್ ಶಂಕರ್ ಐ.ಪಿ.ಎಸ್. ಅವರು ಇಂದು ಸುಧಾಕರ್ ಎಸ್. ನಾಯಕ್ ಅವರಿಂದ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಡಾ. ಅರುಣ್ ಕೆ. ಐ.ಪಿ.ಎಸ್. ಅವರು ಉಡುಪಿ ಜಿಲ್ಲೆಯಲ್ಲಿ ತಮ್ಮ ಕರ್ತವ್ಯದ ಅವಧಿಯಲ್ಲಿ ಅಪರಾಧ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರ ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ. ಇತ್ತ, ಉಡುಪಿಯ ಹೊಸ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುವ ಹರಿರಾಮ್ ಶಂಕರ್ ಐ.ಪಿ.ಎಸ್. ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಬೈಂದೂರು, ಮೇ 29, 2025: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸೆಂಟ್ ಥಾಮಸ್ ಶಾಲೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಶಾಲಾ ಬಸ್ ಚಾಲಕರಿಗೆ ರಸ್ತೆ ಸಂಚಾರ ನಿಯಮಗಳು, ಶಾಲಾ ಬಸ್‌ಗಳ ವೇಗಮಿತಿ, ಮತ್ತು ವಾಹನದ ದಾಖಲೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಚಾಲಕರಿಗೆ ರಸ್ತೆ ಸುರಕ್ಷತೆಯ ಮಹತ್ವವನ್ನು ತಿಳಿಸಲಾಯಿತು ಹಾಗೂ ವಾಹನ ಚಾಲನೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಒಯ್ಯುವಂತೆ ಸೂಚಿಸಲಾಯಿತು.