ಉಡುಪಿ, ಮೇ 29, 2025: ಕೇಂದ್ರ ಸರ್ಕಾರದ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮೇ 30, 2025ಕ್ಕೆ ಆಯೋಜಿಸಲಾಗಿದ್ದ “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಬೃಹತ್ ಪ್ರತಿಭಟನಾ ಸಮಾವೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇತ್ತೀಚಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಮಾಯಕನ ಕೊಲೆಯ ಹಿನ್ನೆಲೆಯಲ್ಲಿ ಉಂಟಾದ ಪ್ರತಿಕೂಲ ವಾತಾವರಣದಿಂದಾಗಿ ಈ ನಿರ್ಧಾರವನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಕೈಗೊಂಡಿದೆ.
ಈ ಸಂದರ್ಭದಲ್ಲಿ, ಸಮಿತಿಯು ಎಲ್ಲ ಸಂಘಟನೆಗಳು, ಮಸೀದಿಗಳು, ಸಂಘ-ಸಂಸ್ಥೆಗಳು ಸಹಕರಿಸಿ ಈ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕೆಂದು ವಿನಂತಿಸಿದೆ. ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ಈ ಹಿಂದೆ, ಮೇ 13ರಂದು ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಕಾಶ್ಮೀರದ ಪೆಹಲ್ಗಾಮಿನ ಉಗ್ರವಾದಿ ದಾಳಿಯ ನಂತರ ಭಾರತೀಯ ಸೇನೆಯ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ವರ್ಚಸ್ಸನ್ನು ಕಾಪಾಡಲು ಮುಂದೂಡಲಾಗಿತ್ತು. ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸಲು ಒತ್ತಾಯಿಸಲಾಗಿತ್ತು.