Tag: Protest

  • ಬಂಟ್ವಾಳ: ರೆಹಮಾನ್, ಅಶ್ರಫ್ ಕೊಲೆ ಪ್ರಕರಣಗಳ ಪ್ರಮುಖ ಆರೋಪಿಗಳ ಬಂಧನ ವಿಳಂಬ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

    ಬಂಟ್ವಾಳ, ಜುಲೈ 8, 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಇಂದು ಮಂಗಳವಾರ ಸಂಜೆ ಕೈಕಂಬ-ಪೋಲಾಲಿ ಗೇಟ್ ಬಳಿ ದೊಡ್ಡ ಪ್ರತಿಭಟನೆಯೊಂದನ್ನು ಆಯೋಜಿಸಿತು. ಈ ಪ್ರತಿಭಟನೆಯಲ್ಲಿ ಅಬ್ದುಲ್ ರೆಹಮಾನ್ ಮತ್ತು ಅಶ್ರಫ್ ವಯನಾಡ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನದಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಲಾಯಿತು. “ನ್ಯಾಯ ಮರೀಚಿಕೆ, ಹುಸಿಯಾದ ಭರವಸೆ” ಎಂಬ ಘೋಷಣೆಯಡಿಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸರ್ಕಾರದ ಪರಿಹಾರ ಪ್ರಕ್ರಿಯೆಯ ಕುರಿತೂ ಆಕ್ರೋಶ ವ್ಯಕ್ತವಾಯಿತು.

    ಪ್ರತಿಭಟನೆಯಲ್ಲಿ ಮಾತನಾಡಿದ SDPI ಗ್ರಾಮೀಣ ಜಿಲ್ಲಾ ಕಾರ್ಯದರ್ಶಿ ನವಾಜ್ ಶರೀಫ್ ಕಟ್ಟೆ, “ಸರ್ಕಾರ ಪರಿಹಾರ ಪ್ರಕಟಿಸುವುದು ಮತ್ತು ಪ್ರಮುಖ ಆರೋಪಿಗಳ ಬಂಧನದಲ್ಲಿ ವಿಳಂಬಯಾಗಿರುವುದರಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಬಜ್ಪೆಯಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಬಳಿಕ ಪ್ರದೇಶದಲ್ಲಿ ಹಲವು ಚಾಕು ಇರಿತ ಪ್ರಕರಣಗಳು ಸಂಭವಿಸಿದವು, ಆದರೆ ಆ ಆರೋಪಿಗಳನ್ನು ಬಂಧಿಸಲಾಗಿಲ್ಲ. ಉದಾಹರಣೆಗೆ, ನಿರ್ದೋಷಿ ಅಬ್ದುಲ್ ರೆಹಮಾನ್ ಕೊಲೆಯಾದರು” ಎಂದು ಆರೋಪಿಸಿದರು.

    ಅವರು ಭರತ್ ಕುಮ್ಮೆಲು ಅವರ ಬಗ್ಗೆ ಪ್ರಶ್ನೆ ಎತ್ತಿ, “ಅವರು ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದು, ದುಬಾರಿ ಕಾರುಗಳಲ್ಲಿ ಸವಾರಿ ಮಾಡುತ್ತಿದ್ದಾರೆ. ಈ ಐಷಾರಾಮಿಕ ಜೀವನಕ್ಕೆ ಆದಾಯದ ಮೂಲವೇನು? ಯಾರು ಆತನಿಗೆ ವಾಹನವನ್ನು ಕೊಟ್ಟಿದ್ದಾರೆ? ಭಾರತ್ ಚಂದಾದಾರಿಕೆ ಮೂಲಕ ಜೀವನ ನಡೆಸುತ್ತಿದ್ದು, ಕೊಲೆಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪ ಇದೆ. ಆತನನ್ನು ಬಂಧಿಸಿ ತೀವ್ರ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.

    “ನ್ಯಾಯವಿಲ್ಲದ ದುರ್ಮರಣದಿಂದ ಕಳೆದ ಜೀವಕ್ಕೆ ಹಣ ಶಾಂತಿ ತಂದುಕೊಡುವುದಿಲ್ಲ. ಕೊಲೆಯಲ್ಲಿ ಸಹಾಯ ಮಾಡಿದ ಎಲ್ಲರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಇದೇ ನಿಜವಾದ ನ್ಯಾಯ” ಎಂದು ಅವರು ಹೇಳಿದರು.

    ನವಾಜ್ ಶರೀಫ್ ಎರಡೂ ಕೊಲೆ ಪ್ರಕರಣಗಳ ಬಳಿಕ ಪ್ರತಿಭಟನೆಗಳು ಮುಂದುವರಿದ್ದು, SDPI ಇತರ ಪಕ್ಷಗಳ ಒಕ್ಕೂಟದೊಂದಿಗೆ ಸಹ ಒಗ್ಗೂಡಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು. “ನ್ಯಾಯ ಆಗುವವರೆಗೆ ಮತ್ತು ದೋಷಿಗಳಿಗೆ ಶಿಕ್ಷೆ ಆಗುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಘೋಷಿಸಿದರು.

    “SDPI ಎಲ್ಲಿಯೂ ಸಹ ಒಂದು ಧರ್ಮಕ್ಕೆ ಸೀಮಿತವಾಗಿ ಹೋರಾಡುವ ಪಕ್ಷವಲ್ಲ. ಪುತ್ತೂರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಹ ನಾವು ನ್ಯಾಯಕ್ಕಾಗಿ ಲಢಿಸಿದೆವು. ಆ ಸಂದರ್ಭದಲ್ಲಿ ಸಂಬಂಧಪಟ್ಟ ಮಹಿಳೆಗೆ ನ್ಯಾಯ ಒದಗಿಸಲು SDPI ಗೆ ದೊಡ್ಡ ಪಾತ್ರವಿದೆ” ಎಂದು ಅವರು ಸ್ಪಷ್ಟಪಡಿಸಿದರು.

    ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ ಮಾತನಾಡಿ, “ಕೊಲೆ ಆರೋಪಿಗಳು ಒಂದು ತಿಂಗಳಲ್ಲಿ ಜಾಮೀನು ಪಡೆಯಬಹುದಾದರೆ ಇಲ್ಲಿ ನ್ಯಾಯ ಎಲ್ಲಿದೆ? ಇದಕ್ಕೆ ಸರ್ಕಾರ ಉತ್ತರಿಸಬೇಕು” ಎಂದು ಪ್ರಶ್ನಿಸಿದರು.

    “SDPI ಕೇವಲ ರಾಜಕೀಯ ಪಕ್ಷವಲ್ಲ. ಬಿ.ಸಿ. ರೋಡ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ನಮ್ಮ ಬೆಂಬಲದಿಂದ ಮಾತ್ರ. ಅಬ್ದುಲ್ ರೆಹಮಾನ್‌ನ ಕೊಲೆಯು ಯೋಜಿತ ಕೊಲೆಯಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಇದಕ್ಕೆ ಯಾರು ವಿರೋಧಿಸುತ್ತಿದ್ದಾರೆ?” ಎಂದು ಆರೋಪಿಸಿದರು.

    ಅಮಾಯಕ ಬಲಿಪಶುಗಳಿಗೆ ಸಂಪೂರ್ಣವಾಗಿ ನ್ಯಾಯ ದೊರೆಯುವವರೆಗೆ ಎಸ್‌ಡಿಪಿಐ ನ್ಯಾಯಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಅವರು ದೃಢಪಡಿಸಿದರು.

    ಪ್ರತಿಭಟನೆಯಲ್ಲಿ ಮೊಹಮ್ಮದ್ ಶರೀಫ್, ಅಖ್ತರ್ ಅಲಿ, ಅಬ್ದುಲ್ ಜಲೀಲ್, ಸಿದ್ದೀಕ್, ಮೊನೀಶ್ ಅಲಿ, ಶಹೂಲ್ ಹಮೀದ್ ಸಿದ್ದೀಕ್ ಪುತ್ತೂರ್, ಜಮಾಲ್ ಜೋಕಟ್ಟೆ, ಅಖ್ತರ್ ಬೆಳ್ತಂಗಡಿ, ಅಶ್ರಫ್ ಇಬ್ರಾಹಿಂ ಅಲಾಡಿ ಥಂಗಲ್, ಹನೀಫ್ ಪುಂಜಾಲ್ಕಟ್ಟೆ, ಅಶ್ರಫ್ ತಾಲಪಾಡಿ ಸೇರಿದಂತೆ ಹಲವಾರು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

  • ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ಉಡುಪಿ, ಜುಲೈ 6, 2025: ರಾಷ್ಟ್ರೀಯ ಹೆದ್ದಾರಿ 169ಎ ಕೆಳಪರ್ಕಳ ಭಾಗದಲ್ಲಿ ರಸ್ತೆಯ ದುರಾವಸ್ಥೆಯನ್ನು ಖಂಡಿಸಿ ಪರ್ಕಳ ರಸ್ತೆ ಹೋರಾಟ ಸಮಿತಿಯ ವತಿಯಿಂದ ರವಿವಾರ ಪರ್ಕಳ ನಾರಾಯಣಗುರು ಮಂದಿರದ ತಿರುವಿನ ಬಳಿ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಪರ್ಕಳ ಪ್ರದೇಶದ ರಸ್ತೆಗಳ ಹದಗೆಟ್ಟ ಸ್ಥಿತಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತಿದ್ದಾರೆ. ಸತತ ಮಳೆಯ ಕಾರಣ ದಿನದಿಂದ ದಿನಕ್ಕೆ ರಸ್ತೆ ಪರಿಸ್ಥಿತಿ ಹದಗೆಡುತ್ತಿದ್ದು, ಸಂಚಾರಕ್ಕೆ ಬಳಸಲು ಅಸಮರ್ಥವಾಗಿದೆ. ಆದುದರಿಂದ ಕೂಡಲೇ ಅದನ್ನು ಸಂಚಾರ ಯೋಗ್ಯವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

    ಜನಪ್ರತಿನಿಧಿಗಳು ಈ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಮೋಸ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರಸ್ತೆ ಕಾಮಗಾರಿ ವಿವಾದ ಹೈಕೋರ್ಟ್‌ನಲ್ಲಿರುವ ಸಬೂಬು ನೀಡಲಾಗುತ್ತಿದೆ. ನಮಗೆ ಸಮಸ್ಯೆ ಇರುವುದು ಹೈಕೋರ್ಟ್‌ನಲ್ಲಿರುವ ರಸ್ತೆ ಅಲ್ಲ. ಹಳೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಮಗಾರಿ ಮುಗಿಯುವವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಹಳೆ ರಸ್ತೆ ನಿರ್ವಹಣೆಯೇ ಇಲ್ಲ. ಇದರಿಂದ ಸಾರ್ವಜನಿಕರು ಅನಾನುಕೂಲವಾಗುತ್ತಿದೆ. ನಮ್ಮ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದರು.

    ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಪ್ರತಿಭಟನೆ ಯಾವುದೇ ಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧವೂ ಅಲ್ಲ. ನಮಗೆ ನ್ಯಾಯ ಬೇಕು. ಈಗ ಇರುವ ಹಳೆಯ ರಸ್ತೆಯನ್ನೇ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕು. ಇದು ಮೊದಲ ಹಂತದ ಹೋರಾಟ. ರಸ್ತೆ ದುರಸ್ತಿಯಾಗದಿದ್ದರೆ ನಾಲ್ಕು ವಾರಗಳ ಬಳಿಕ ಮತ್ತೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ, ಪ್ರಮುಖರಾದ ಜೈವಿಠಲ್, ಅನ್ಸಾರ್ ಅಹ್ಮದ್, ರಮೇಶ್ ಕಾಂಚನ್, ವೈದ್ಯೆ ಡಾ.ಸುಲತಾ ಭಂಡಾರಿ, ರೋಟರಿ ಕ್ಲಬ್‌ನ ಮಂಜುನಾಥ ಉಪಾಧ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರ್ಕಳ, ಮಂಜುನಾಥ್ ನಗರ ನಿವಾಸಿಗಳು ಉಪಸ್ಥಿತರಿದ್ದರು.

  • ಮುಸ್ಲಿಂ ವಿರೋಧಿ ಹೇಳಿಕೆ: ಕಾಂಗ್ರೆಸ್ ಶಾಸಕನ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ: ವಜಾಗೊಳಿಸಲು ಆಗ್ರಹ

    ಉಡುಪಿ, ಜೂನ್ 24, 2025: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ಬಂಡೀಸಿದ್ದೇಗೌಡನ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಖಂಡಿಸಿ ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರ್ ಕಾಂಗ್ರೆಸ್ ಸರಕಾರ ಮುಸ್ಲಿಮರ ವೋಟ್ ಪಡೆದು ನಿರಂತರವಾಗಿ ಮುಸ್ಲಿಮರ ವಿರುದ್ಧವೇ ಕೆಲಸ ಮಾಡಿದೆ. ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧವನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದ ಸಿದ್ಧರಾಮಯ್ಯ ಅಧಿಕಾರ ಹಿಡಿದು 2 ವರ್ಷವಾದರೂ ಅದರ ಬಗ್ಗೆ ಮಾತೆತ್ತುತ್ತಿಲ್ಲ. ಒಂದು ವೇಳೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸದಿದ್ದರೆ ತೀವ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.

    ಎಸ್ ಡಿ ಪಿ ಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಂ ಆದಿ ಉಡುಪಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ ಹಾಗೂ ಮತ್ತಿತರು ಉಪಸ್ಥಿತರಿದ್ದರು.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಿಕೆ

    ಉಡುಪಿ, ಮೇ 29, 2025: ಕೇಂದ್ರ ಸರ್ಕಾರದ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮೇ 30, 2025ಕ್ಕೆ ಆಯೋಜಿಸಲಾಗಿದ್ದ “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಬೃಹತ್ ಪ್ರತಿಭಟನಾ ಸಮಾವೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇತ್ತೀಚಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಮಾಯಕನ ಕೊಲೆಯ ಹಿನ್ನೆಲೆಯಲ್ಲಿ ಉಂಟಾದ ಪ್ರತಿಕೂಲ ವಾತಾವರಣದಿಂದಾಗಿ ಈ ನಿರ್ಧಾರವನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಕೈಗೊಂಡಿದೆ.

    ಈ ಸಂದರ್ಭದಲ್ಲಿ, ಸಮಿತಿಯು ಎಲ್ಲ ಸಂಘಟನೆಗಳು, ಮಸೀದಿಗಳು, ಸಂಘ-ಸಂಸ್ಥೆಗಳು ಸಹಕರಿಸಿ ಈ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕೆಂದು ವಿನಂತಿಸಿದೆ. ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಸಮಿತಿ ತಿಳಿಸಿದೆ.

    ಈ ಹಿಂದೆ, ಮೇ 13ರಂದು ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಕಾಶ್ಮೀರದ ಪೆಹಲ್ಗಾಮಿನ ಉಗ್ರವಾದಿ ದಾಳಿಯ ನಂತರ ಭಾರತೀಯ ಸೇನೆಯ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ವರ್ಚಸ್ಸನ್ನು ಕಾಪಾಡಲು ಮುಂದೂಡಲಾಗಿತ್ತು. ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸಲು ಒತ್ತಾಯಿಸಲಾಗಿತ್ತು.

  • ಮಂಗಳೂರು: ‘ಬಜಪೆ ಚಲೋ’ ಪ್ರತಿಭಟನೆಯ ಆಯೋಜಕರು, ವಕ್ತಾರರ ವಿರುದ್ಧ ಪ್ರಕರಣ ದಾಖಲು

    ಮಂಗಳೂರು, ಮೇ 26, 2025: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ಸದಸ್ಯರು ನಡೆಸಿದ ‘ಬಜಪೆ ಚಲೋ’ ಪ್ರತಿಭಟನೆಯ ಆಯೋಜಕರು ಮತ್ತು ವಕ್ತಾರರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಬಜಪೆಯ ಶಾರದಾ ಮಂಟಪದ ಬಳಿ ನಡೆದ ಈ ಪ್ರತಿಭಟನೆಗೆ ಪೊಲೀಸರ ಅನುಮತಿ ಇರಲಿಲ್ಲ. ಸುಮಾರು 3,000 ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಬಜಪೆ ಬಸ್ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಕಾನೂನುಬಾಹಿರವಾಗಿ ಜಮಾಯಿಸಿ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ತಡೆದರು ಹಾಗೂ ರಾಜ್ಯ ಹೆದ್ದಾರಿ ಸಂಖ್ಯೆ 67 ರ ಭಾಗವನ್ನು ಆಕ್ರಮಿಸಿದರು. ಇದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು.

    ಪ್ರತಿಭಟನೆಯ ವೇಳೆ, ಒಬ್ಬ ವಕ್ತಾರರು ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಸಾಮುದಾಯಿಕ ಉದ್ವಿಗ್ನತೆಯನ್ನು ಉಂಟುಮಾಡಬಹುದಾದ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆಯ ಆಧಾರದ ಮೇಲೆ, ಬಜಪೆ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 90/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 189(2), 191(2), 285, 192, 351(2), 351(3), ಮತ್ತು 190, ಜೊತೆಗೆ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಸೆಕ್ಷನ್ 107 ಮತ್ತು 109 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನಾ ಸಮಾವೇಶ ಮೇ 30ಕ್ಕೆ!

    ಉಡುಪಿ, ಮೇ 24, 2025: ಕೇಂದ್ರ ಸರ್ಕಾರದ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮೇ 13ರಂದು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಮುಂದೂಡಿತ್ತು. ಈ ಪ್ರತಿಭಟನಾ ಸಮಾವೇಶವು ಈಗ ಮೇ 30, 2025, ಶುಕ್ರವಾರ ಸಂಜೆ 4:00 ಗಂಟೆಗೆ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

    ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸಲಿದ್ದಾರೆ. ಕಾಶ್ಮೀರದ ಪೆಹಲ್ಗಾಮಿನ ಉಗ್ರವಾದಿ ದಾಳಿಯ ನಂತರ ಭಾರತೀಯ ಸೇನೆಯ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ವರ್ಚಸ್ಸನ್ನು ಕಾಪಾಡಲು ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಈಗ ಮೇ 30ರಂದು ಈ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

  • ನೀರಾವರಿ ಜಾಕ್ವೆಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 72 ಕೋಟಿ ರೂ. ಅನುದಾನದ ಗುಡೇ ದೇವಸ್ಥಾನ ಏತ ನೀರಾವರಿ ಜಾಕ್ವೆಲ್ ಕಾಮಗಾರಿ ವಿರೋಧಿಸಿ ಗುಡೇ ಮಹಾಲಿಂಗೇಶ್ವರ ಏತನೀರಾವರಿ ಸಂತ್ರಸ್ಥ ರೈತರ ಒಕ್ಕೂಟ ಹೆರಂಜಾಲು, ಹಳಗೇರಿ, ನೂಜಾಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

    ಅವೈಜ್ಞಾನಿಕವಾಗಿರುವ ಈ ಕಾಮಗಾರಿಯನ್ನು ಕೂಡಲೇ ಸ್ಥಳಾಂತರ ಮಾಡ ಬೇಕೆಂದು ಆಗ್ರಹಿಸಿ ಗ್ರಾಮಸ್ಥರು ನೀರಿನ ಕೊಡ ಹಿಡಿದುಕೊಂಡು ಬೈಂದೂರಿನ ಸೇನೇಶ್ವರ ದೇವಸ್ಥಾನದಿಂದ ಆಡಳಿತ ಸೌಧದವರೆಗಿನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೈಂದೂರು ಆಡಳಿತ ಸೌಧದ ಎದುರು ತಹಶೀಲ್ದಾರ್ ಭೀಮಸೇನ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು

  • ಬಿಡದಿಯಲ್ಲಿ ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದ ದಲಿತ ಬಾಲಕಿಗೆ ನ್ಯಾಯ ದೊರಕಲಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

    ರಾಜ್ಯ ರಾಜಧಾನಿಗೆ ತಾಗಿರುವ ಬಿಡದಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಪೋಲೀಸರ ನಿರ್ಲಕ್ಷ್ಯದ ನಡೆಯನ್ನು ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ .

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ , ಇತ್ತೀಚಿಗೆ ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಮತ್ತು ಹೆಚ್ಚಾಗಿ ಮಹಿಳೆಯರ ಮೇಲೆ ಭೀಕರವಾಗಿ ನಡೆಯುತ್ತಿರುವ ಹಿಂಸಾತ್ಮಕ ಪ್ರಕರಣಗಳನ್ನು ನೋಡುವಾಗ ಸುಸಂಸ್ಕೃತಿ, ನೈತಿಕ ಮೌಲ್ಯಗಳ ತಳಹದಿಯ ಮೇಲೆ ನೆಲೆಗೊಂಡು, ಸುಸಭ್ಯ ಸಮಾಜವಾಗಿ ಗುರಿತಿಸಲ್ಪಡುತ್ತಿದ್ದ ಕರ್ನಾಟಕದ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದು, ಒಂದು ಅನಾಗರಿಕರ ತಾಣದಂತಾಗಿದೆ ಎಂದು ಹೇಳಿದರು .

    ಜನರು ಸದಾ ಭಯ ಭೀತಿಯಲ್ಲಿ ಬದುಕುವಂತಾಗಿದೆ. ಅತ್ಯಾಚಾರ ನಡೆದರೂ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೋಲೀಸರ ನಡೆ ಪ್ರಶ್ನಿಸಿದರೆ ಪೊಲೀಸರು ಹಲ್ಲೆ ಮಾಡುತ್ತಾರೆ ಎನ್ನುವುದಾದರೆ ಈ ವ್ಯವಸ್ಥೆ ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವ ಹಾಗೆ ಭಾಸವಾಗುತ್ತಿದೆ. ಸಮಾಜದಲ್ಲಿ ನ್ಯಾಯ ,ನೀತಿ, ನೈತಿಕತೆ ಸ್ಥಾಪಿಸಲು ಪಣತೊಡಬೇಕಾದ ಆರಕ್ಷಕರು ಭಕ್ಷಕರಾಗಿ ವರ್ತಿಸುತ್ತಿದ್ದಾರೆ.

    ಅತ್ಯಂತ ದಾರುಣವಾಗಿ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಬಿಡದಿಯ ಈ 14 ವರ್ಷದ ಮೂಗ ಬಾಲಕಿಗಾಗಿ ಧ್ವನಿಯೆತ್ತಲು ಮಾಧ್ಯಮಗಳಿಗೆ ಸಮಯವೇ ಸಿಕ್ಕಿಲ್ಲ . ಟಿ.ಆರ್.ಪಿ ಗಾಗಿ ಒಂದು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ತಾಸುಗಟ್ಟಲೆ ಕುಳಿತು ಡಿಬೆಟ್ ನಡೆಸುವ ಮಾಧ್ಯಮಗಳು ಈ ಪ್ರಕರಣದ ಕುರಿತು ಚರ್ಚಿಸುವ ಗೋಜಿಗೆ ಹೋಗುವುದಿಲ್ಲ.

    ಸ್ವಘೋಷಿತ ಧರ್ಮ ರಕ್ಷಕರಿಗೆ ಬೀದಿಗಿಳಿದು ಹೋರಾಡಲು ಈ ಮುಗ್ಧ ಹೆಣ್ಣಿನ ಆರ್ತನಾದ ಕೇಳಿಸಲೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಸರ್ಕಾರವು ಅತ್ಯಂತ ಬರ್ಬರವೆನಿಸಿದ ಈ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಅಧಿಕಾರಿಗಳ ಅಧೀನತೆಯಲ್ಲಿ ಈ ಪ್ರಕರಣದ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದ ಪೋಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಿ ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಾತಾರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

  • ಉಡುಪಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೇ 13ರಂದು ಪ್ರತಿಭಟನೆ

    ಉಡುಪಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಮೇ 8ರಂದು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು “ವಾಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ಉಡುಪಿ ಜಿಲ್ಲೆ ಪ್ರಕಟಣೆಯೆಲ್ಲಿ ತಿಳಿಸಿದೆ.

    ಈ ಪ್ರತಿಭಟನೆಯು ಮಂಗಳವಾರ 13ನೇ ಮೇ ಸಂಜೆ 4:00 ಗಂಟೆಗೆ ಉಡುಪಿಯ ಮಿಷನ್ ಕಾಂಪೌಂಡ್ನಲ್ಲಿರುವ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

  • ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆ, “ವಕ್ಫ್ ಆಸ್ತಿಗೂ ಅಮಿತ್ ಷಾ ಗೂ ಮೋದಿಗೂ ಏನ್ ಸಂಬಂಧ? “

    ಶಿವಮೊಗ್ಗ (ಮೇ.4): ಕಳೆದ 10 ವರ್ಷಗಳಿಂದ ಈ ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿರಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ಶಾಹುಲ್ ಹಮೀದ್ ಮುಕ್ತಿಯಾರ್ ಆರೋಪಿಸಿದರು.

    ವಕ್ಫ್ ಕಾಯ್ದೆ(ತಿದ್ದುಪಡಿ) 2025 ಅನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ನಾವೆಲ್ಲಾ ಭಾರತೀಯರೇ. ಈ ಮಣ್ಣಲ್ಲೇ ಹುಟ್ಟಿದವರು. ನಮಗೂ ಈ ದೇಶದಲ್ಲಿ ಸಂವಿಧಾನದ ಪ್ರಕಾರ ಎಲ್ಲಾ ಹಕ್ಕು ಇದೆ. ವಕ್ಪ್ ಕಾಯ್ದೆ ತಿದ್ದುಪಡಿ ನಮ್ಮ ಶರಿಯತ್‌ಗೆ ವಿರುದ್ಧವಾಗಿದೆ. ವಕ್ಫ್ ಆಸ್ತಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಅದು ಭಗವಂತನಿಗೆ ಸೇರಿದ್ದು ಇದನ್ನು ಎಲ್ಲಾ ಧರ್ಮೀಯರು ಲೂಟಿ ಮಾಡಿದ್ದಾರೆ. ವಕ್ಪ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ಹಿಂದಿರುಗಿಸಲೇಬೇಕು. ಮುಸ್ಲಿಮರ ಆಸ್ತಿಗೆ ಬೇರೆ ಯಾರೂ ಕೈಹಾಕಲು ಸಾಧ್ಯವಿಲ್ಲ. ಈಗಿನ ಕಾನೂನಿನಂತೆ 20-30 ವರ್ಷಗಳ ಕಾಲ ಆತ ವಕ್ಪ್ ಆಸ್ತಿ ಬಳಸಿಕೊಂಡಿದ್ದರೆ ಅದು ಅವನಿಗೇ ನೀಡಬೇಕಾಗುತ್ತದೆ ಎಂದಿದೆ ಎಂದರು.

    ಚಿಂತಕ ಸುಧೀರ್ ಕುಮಾರ್ ಮರೊಳ್ಳಿ ಮಾತನಾಡಿ, ಪ್ರಧಾನಿ ಮೋದಿಯುವರು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ, ಕೋಮುಗಳ ನಡುವೆ ಹೊಡೆದಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜನರ ಭಾವನೆಗಳನ್ನು ನಾಶ ಮಾಡಲಾಗುತ್ತಿದೆ. ವಕ್ಫ್ ಕಾಯ್ದೆ ಜಾರಿಗೆ ತರುವ ಹಿಂದೆ ರಾಜಕೀಯ ಷಂಡ್ಯತ್ರ ಇದೆ. ಈ ವಕ್ಫ್ ಕಾಯಿದೆ ಸಂವಿಧಾನದ ವಿರೋಧಿಯಾಗಿದೆ ಎಂದರು.

    ವಕ್ಫ್ ಆಸ್ತಿ ಯಾರ ವೈಯುಕ್ತಿಕ ಆಸ್ತಿ ಅಲ್ಲ, ಅದು ಪರಮಾತ್ಮನ ಆಸ್ತಿ. ವಕ್ಫ್ ಆಸ್ತಿಗೂ ಅಮಿತ್ ಷಾ ಗೂ ಮೋದಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಅವರು, ಮತ ರಾಜಕಾರಣ ಕೈಬಿಡುವಂತೆ ಆಗ್ರಹಿಸಿದರು.

    ಭಾರತದ ಮುಸ್ಲಿಮರ ಧ್ವನಿಯಾಗಿ ವಕ್ಪ್ ತಿದ್ದುಪಡಿ ಕಾಯ್ದೆ ಇಲ್ಲ. ಇದರಿಂದ ವಕ್ಫ್ ಆಸ್ತಿಗಳ ಸ್ವಾಯತ್ತತೆ ಕಸಿದುಕೊಳ್ಳುತ್ತದೆ. ಸಂವಿಧಾನದ ಗ್ಯಾರಂಟಿಗಳನ್ನು ಉಲ್ಲಂಘಿಸುತ್ತದೆ. ಭಾರತದ ಜಾತ್ಯತೀತ ರಚನೆಗೆ ಧಕ್ಕೆ ತರುತ್ತದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದರು.
    ಕೇಂದ್ರ ಹಾಗೂ ರಾಜ್ಯ ವಕ್ಪ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ಕಡ್ಡಾಯವಾಗಿ ಸೇರಿಸುವುದು ಸಂವಿಧಾನದ ೨೬ನೇ ವಿಧಿಯ ಅನ್ವಯ ಉಲ್ಲಂಘನೆಯಾಗುತ್ತದೆ. ಇದು ಮುಸ್ಲಿಮರಿಗೆ ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಹಿಂದೂ, ಸಿಖ್ ಅಥವಾ ಇತರ ಧಾರ್ಮಿಕ ಆಸ್ತಿಗಳಿಗೆ ಇಂತರ ನಿಯಮ ಇಲ್ಲ ಎಂದರು.

    ದಾಖಲೆ ಇಲ್ಲದ ಮಸೀದಿಗಳು, ಖಬರಸ್ಥಾನಗಳು ಮತ್ತು ದರ್ಗಾಗಳಿಗೆ ಅಪಾಯವನ್ನೊಡ್ಡುತ್ತದೆ. ಸರ್ಕಾರದ ಕೈವಶವಾಗಬಹುದು ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.
    ವಕ್ಪ್ ಆಸ್ತಿಯ ಮಾಲೀಕತ್ವವನ್ನು ಜಿಲ್ಲಾಧಿಕಾರಿಗಳೇ ನಿರ್ಧರಿಸುವ ಅಧಿಕಾರ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆ ಇಲ್ಲದೇ ಸ್ವೇಚ್ಛಾಚಾರ ತೀರ್ಮಾನಕ್ಕೆ ದಾರಿ ಮಾಡುತ್ತದೆ. ಅಲ್ಲದೇ, ಇದು ವಕ್ಫ್ ಮಂಡಳಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದರು.

    ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮೊಹಮ್ಮದ್ ಇರ್ಫಾನ್ ಖಾನ್, ಏಜಾಜ್ ಪಾಶಾ, ಮುಫ್ತಿ ಸೈಯದ್ ಮುಜೀಬುಲ್ಲಾ, ಮುಫ್ತಿ ಮೊಹಮ್ಮದ್ ಶಫೀವುಲ್ಲಾ ಕಾಸ್ಮಿ, ಶೇಖ್ ಅಲಿ, ಮೌಲಾನಾ ಆಮಿದ್ ಉಮರಿ, ಮೌಲಾನಾ ಅಬ್ದುಲ್ ಜಬ್ಬಾರ್ ಸಾಧಿಕ್, ಅಫ್ತರ್ ಕೋಡಿಬೇಂದ್ರೆ, ಮೌಲಾನಾ ಜಬೀವುಲ್ಲಾ ಸಾಬ್, ಮುಫ್ತಿ ಇಫ್ತಾಬ್ ಸಾಹೇಬ್, ಜಾಮಿಲ್ ಉಮ್ರಿ ಇದ್ದರು.

    ಬೃಹತ್ ಪ್ರತಿಭಟನೆ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಜಿಲ್ಲಾ ವಕ್ಪ್(ಮುಸ್ಲಿಂ ಹಾಸ್ಟೆಲ್ )ಕಛೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರು,ಯುವಕರು, ಪುರುಷರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಕ್ಫ್ ಬಚಾನೆ ಚಲೇ ಹೈ- ಆವೋ ಹಮಾರೆ ಸಾಥ್ ಚಲೋ, ದಸ್ತೂರ್ ಬಚಾನೆ ನಿಕ್ಲೆ ಹೈ – ಆವೋ ಹಮಾರೆ ಸಾಥ್ ಚಲೋ ಘೋಷಣೆ ಕೂಗಿದರು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಪೊಲೀಸರು ಹೈಅಲರ್ಟ್: ಮುಸ್ಲಿಮರು ನಗರದಲ್ಲಿ ಭಾರೀ ಪ್ರತಿಭಟನೆಯ ಮೂಲಕ ಮೆರವಣಿಗೆ ನಡೆಸುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೇ ಪೊಲೀಸರು ಅಲರ್ಟ್ ಆಗಿದ್ದರು. ಪ್ರತಿಭಟನೆ, ಯಾವುದೇ ಕ್ಷಣದಲ್ಲಿ ಏನಾದರೂ ತಿರುವು ತೆಗೆದುಕೊಳ್ಳಬಹುದೆಂಬ ಅನುಮಾನವಿದ್ದುದರಿಂದ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ನಗರವಲ್ಲದೇ ಸುತ್ತಮುತ್ತಲ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಪ್ರತಿಭಟನೆ ನಡೆಯುವ ಮುಖ್ಯ ರಸ್ತೆಯಲ್ಲಿ ಭಾರೀ ಭದ್ರತೆ ಹಾಕಿದ್ದು, ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸ್ಥಳದಲ್ಲೇ ಇದ್ದು, ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದರು. ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.