Tag: RSS

  • ಉಡುಪಿ: ಎಬಿವಿಪಿ 77ನೇ ಸಂಸ್ಥಾಪನಾ ದಿನಾಚರಣೆ

    ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಜುಲೈ 9ರಂದು ಎಬಿವಿಪಿಯ 77ನೇ ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಯಿತು. 

    ಬೆಳಗ್ಗೆ 9 ಗಂಟೆಗೆ ಸರಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಕಾರ್ಯಾಲಯ ಕೇಶವ ನಿಲಯದ ಮಾಧವ ಸಭಾಂಗಣದಲ್ಲಿ ಧ್ವಜಾರೋಹಣ ನಡೆಸಿ ನಂತರ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಡಾ| ಶಿವಾನಂದ ನಾಯಕ್ ಕಳೆದ ಅನೇಕ ದಶಕಗಳಿಂದ ಕಾಲೇಜಿನಲ್ಲಿರುವ ಯುವಕರಲ್ಲಿ ರಾಷ್ಟ್ರ ಪ್ರೇಮದ ಬೀಜವನ್ನು ಬಿತ್ತಿ ರಾಷ್ಟ್ರ ಪುನರ್ನಿರ್ಮಾಣದ ಸಂಕಲ್ಪದ ಕೈಂಕರ್ಯವನ್ನು ಕೈಗೊಳ್ಳುವಂತೆ ಮಾಡುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂದು ಹೇಳಿದರು.

    ನಗರ ಕಾರ್ಯದರ್ಶಿ ಮಾಣಿಕ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಬಿವಿಪಿ ತನ್ನ ಸದಸ್ಯತ್ವದ ಮೂಲಕ ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಮತ್ತು ಈ ಬಾರಿಯ ಸದಸ್ಯತ್ವ ಅಭಿಯಾನವು ಇಂದಿನಿಂದ ಪ್ರಾರಂಭವಾಗಲಿದ್ದು ಉಡುಪಿಯ ವಿದ್ಯಾರ್ಥಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿ ಈ ಹಿಂದಿನಂತೆ ಮುಂದೆ ನಡೆಯಲಿರುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ನಗರ ಉಪಾಧ್ಯಕ್ಷರಾದ ಪ್ರೊ| ಪ್ರವೀಣ್ ಆಚಾರ್ಯ ಅವರ ಉಪಸ್ಥಿತರಿದ್ದರು. ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕ ಶ್ರೇಯಸ್ ಅಂಚನ್,  ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಪ್ರಮುಖ್ ನವೀನ್, ನಗರ ಸಹ ಕಾರ್ಯದರ್ಶಿ ಶಿವನ್,  ಹಾಗೂ ಹಿರಿಯ ಕಾರ್ಯಕರ್ತರಾದ ಆಶೀಷ್ ಶೆಟ್ಟಿ ಬೋಳ ಮತ್ತು ಅಜಿತ್ ಜೋಗಿ ಮತ್ತು ಪ್ರಮುಖರಾದ ಮನೀಶ್, ಸ್ವಸ್ತಿಕ್, ಅಂಕಿತಾ, ಮನು, ಲ್ಯಾರಿ, ಕಿಶೋರ್, ಹೃಷಿತ್ ಸೇರಿದಂತೆ ಇತರೆ ಕಾರ್ಯಕರ್ತರು ಭಾಗವಹಿಸಿದ್ದರು. 

  • ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    ಲಕ್ನೋ: ಐಎಎಸ್‌ ಅಧಿಕಾರಿ (IAS Officer) ಆಗಬೇಕೆಂಬ ಕನಸು ಹೊತ್ತ 7ನೇ ತರಗತಿ ಬಾಲಕಿಯೊಬ್ಬಳು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ ವಿಷಯ ಈಗ ಉತ್ತರ ಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯವನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಪ್ರತಿ ಪಕ್ಷಗಳು ಸಿಎಂ ಯೋಗಿ ಅವರ ಮಾತಿಗೂ ಕಿಮ್ಮತ್ತಿಲ್ಲದಂತಾಯ್ತಾ ಎಂಬ ಪ್ರಶ್ನೆ ಎತ್ತಿವೆ.

    ವಿದ್ಯಾರ್ಥಿನಿಯ ಸಮಸ್ಯೆ ಏನು?

    ಉತ್ತರ ಪ್ರದೇಶದ 7ನೇ ತರಗತಿ ವಿದ್ಯಾರ್ಥಿನಿ ಪಂಖುರಿ ತ್ರಿಪಾಠಿ ಅವರ ತಂದೆ ರಾಜೀವ್ ಕುಮಾರ್ ತ್ರಿಪಾಠಿ ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡರು. ಇದರಿಂದ ಅವರು ತಮ್ಮ ಕೆಲಸ ಕಳೆದುಕೊಳ್ಳಬೇಕಾಯ್ತು. ಇದು ಕುಟುಂಬದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿತು. ಕೊನೆಗೆ ಬಾಲಕಿಯ ಶಾಲಾ ಶುಲ್ಕ ಪಾವತಿಸುವುದಕ್ಕೂ ಹಣವಿಲ್ಲದಷ್ಟು ಸಮಸ್ಯೆ ಎದುರಾಯಿತು. ನಂತರ ಬಾಲಕಿಯ ಕುಟುಂಬಸ್ಥರು ಆರ್ಥಿಕ ಸಹಾಯಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್‌ ಅವರ ಮೊರೆ ಹೋದರು. ಆಗ ಯೋಗಿ ಮಗುವಿನ ಶಿಕ್ಷಣಕ್ಕೆ ಯಾವುದೇ ಅಡೆತಡೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿ ಕಳುಹಿಸಿದ್ದರು. ಆದ್ರೆ ಬಾಲಕಿ ಶಾಲೆಗೆ ಹೋದಾಗ ನಡೆದಿದ್ದೇ ಬೇರೆ. ಶಾಲಾ ಆಡಳಿತ ಮಂಡಳಿ ಆ ವಿದ್ಯಾರ್ಥಿನಿಯ ಶುಲ್ಕವನ್ನ ಯಾವುದೇ ಕಾರಣಕ್ಕೂ ಮನ್ನಾ ಮಾಡೋದಿಲ್ಲ ಎಂದು ನಿರಾಕರಿಸಿತು. 

    ಬಳಿಕ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ರು. ಅಲ್ಲದೇ ಮಗುವಿನ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಬಾಲಕಿ ಕುಟುಂಬ ಮುಖ್ಯಮಂತ್ರಿಗಳು ನಮಗೆ ಸಹಾಯ ಮಾಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದೆ.

    ಪ್ರತಿ ತಿಂಗಳು 1,650 ರೂ. ಶುಲ್ಕ ಪಾವತಿ

    ಬಾಲಕಿ ಪಂಖುರಿ ತ್ರಿಪಾಠಿ ಗೋರಖ್‌ಪುರದ ಪಕ್ಕಿಬಾಗ್‌ನಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಆರ್‌ಎಸ್‌ಎಸ್ ಶಿಕ್ಷಣ ವಿಭಾಗ ವಿದ್ಯಾಭಾರತಿ ಫೌಂಡೇಷನ್‌ ನಡೆಸುತ್ತಿರುವ ಈ ಶಾಲೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 1,650 ರೂ. ಶುಲ್ಕ ವಿಧಿಸುತ್ತದೆ. ಪಂಖುರಿ ಸುಮಾರು 18,000 ರೂ. ಬಾಕಿ ಪಾವತಿಸಬೇಕಾಗಿದೆ. ಆದ್ರೆ ತಂದೆ ಕೆಲಸ ಕಳೆದುಕೊಂಡು ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರಿಂದ ಸಹಾಯಕ್ಕಾಗಿ ಸಿಎಂ ಮೊರೆ ಹೋಗಿದ್ದರು.

    ನನ್ನಪ್ಪ ಅಲ್ಲೇ ಕುಸಿದುಬಿದ್ದರು; ಬಾಲಕಿ ಕಣ್ಣೀರು

    ಘಟನೆ ಕುರಿತು ಮಾತನಾಡಿದ ಬಾಲಕಿ ಪಂಖುರಿ, ನಾನು ಶುಲ್ಕ ವಿನಾಯ್ತಿ ಮಾಡುವಂತೆ ಸಹಾಯ ಕೇಳಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದೆ. ಅವರು ನನೆ ಚಾಕೊಲೇಟ್‌ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದ್ರೆ ನಾನು ನನ್ನಪ್ಪನೊಂದಿಗೆ ಶಾಲೆಗೆ ಹೋದಾಗ ಅವರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ರು. ಶುಲ್ಕ ಮನ್ನಾ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಿಮ್ಮ ತರನೇ ಉಳಿದವರು ಶುಲ್ಕ ವಿನಾಯ್ತಿ ಕೊಡಿ ಅಂದ್ರೆ ಶಾಲೆ ಹೇಗೆ ನಡೆಸೋದು, ಶಿಕ್ಷಕರಿಗೆ ಹಣ ನೀಡಬೇಕಲ್ಲವಾ? ಅಂತೆಲ್ಲ ರೇಗಿದ್ರು. ಅವರ ಮಾತುಗಳನ್ನ ಕೇಳಿ ನನ್ನಪ್ಪ ಅಲ್ಲೇ ಕುಸಿದುಬಿದ್ದರು. ಯಾರೂ ಕೂಡ ಅವರೊಟ್ಟಿಗೆ ಈ ರೀತಿ ಮಾತನಾಡಿರಲಿಲ್ಲ ಎಂದು ಬಾಲಕಿ ಕಣ್ಣೀರಿಟ್ಟಳು.

    ಅಲ್ಲದೇ ನಮಗೆ ಇನ್ನೂ ಮುಖ್ಯಮಂತ್ರಿಗಳ ಮೇಲೆ ನಂಬಿಕೆಯಿದೆ. ಅವರು ನಮಗೆ ಸಹಾಯ ಮಾಡೇ ಮಾಡುತ್ತಾರೆ, ನಾನು ಓದಿ ಐಎಎಸ್‌ ಅಧಿಕಾರಿ ಆಗೇ ಆಗುತ್ತೇನೆ ಎಂದು ಬಾಲಕಿ ಶಪಥ ಮಾಡಿದ್ದಾಳೆ.

    ಘಟನೆ ಬಳಿಕ ಶಾಲಾ ಆಡಳಿತ ಮಂಡಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಆದ್ರೆ ಈವರೆಗೆ ಶಾಲಾ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.

  • ನಾವು ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್; ಸಚಿವ ಪ್ರಿಯಾಂಕ್ ಖರ್ಗೆ

    ಬೆಂಗಳೂರು (ಜೂ.30): ನಾವು ಈ ಹಿಂದೆ ಆರ್‌ಎಸ್‌ಎಸ್ ಅನ್ನು 2 ಬಾರಿ ಬ್ಯಾನ್ ಮಾಡಿದ್ದೆವು. ಅಮೇಲೆ ನಮ್ಮ ಕೈಕಾಲು ಹಿಡಿದು ಬ್ಯಾನ್ ವಾಪಸ್ ಮಾಡಿ ಅಂತ ಬಂದಿದ್ದರು. ಆಗ ಬ್ಯಾನ್ ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್ (RSS) ಬ್ಯಾನ್ ಮಾಡುವ ತೀರ್ಮಾನ ಮಾಡುತ್ತೇವೆ ಎಂದು ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕು ಎಂದು ಆರ್‌ಎಸ್‌ಎಸ್ ಮುಖಂಡ ಹೊಸಬಾಳೆ ಅವರು ಆಗ್ರಹ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಹೊಸಬಾಳೆ ಅವರು ಯಾವ ಸ್ಕೂಲ್ ಆಫ್ ಥಾಟ್ ಇಂದ ಬರ್ತಾರೆ. ಆರ್‌ಎಸ್‌ಎಸ್ ಹಿನ್ನಲೆಯಿಂದ ಬರುತ್ತಾರೆ. ಆರ್‌ಎಸ್‌ಎಸ್‌ನಲ್ಲಿ ಜಾತ್ಯಾತೀತೆ, ಸಮಾನತೆ, ಸಮಾಜವಾದಿ ಬಗ್ಗೆ ಅಲರ್ಜಿ ಇದೆ. ಆ ಸಂಸ್ಥೆ ಹುಟ್ಟಿದಾಗಿನಿಂದ ಸಂವಿಧಾನ, ಸಮಾನತೆ, ಆರ್ಥಿಕ ಸಮಾನತೆ ಬಗ್ಗೆ ಅಲರ್ಜಿ ಇದೆ. ಈಗ ಅದನ್ನ ಪುನರ್ ಉಚ್ಚಾರ ಮಾಡ್ತಿದ್ದಾರೆ. ಆರ್‌ಎಸ್‌ಎಸ್ ಸಿದ್ದಾಂತವನ್ನ ನಾವು ಮೊದಲಿನಿಂದಲೂ ವಿರೋಧ ಮಾಡ್ತಿದ್ದೇವೆ. ಈಗಲೂ ಮಾಡ್ತೀವಿ ಎಂದರು.

    ಈ ಹಿಂದೆ ನಾವು ಎರಡು ಬಾರಿ ಆರ್‌ಎಸ್‌ಎಸ್ ಅವರನ್ನ ಬ್ಯಾನ್ ಮಾಡಿದ್ದೆವು. ಅಮೇಲೆ ಅವರು ನಮ್ಮ ಕೈಕಾಲು ಹಿಡಿದು ಬ್ಯಾನ್ ವಾಪಸ್ ಮಾಡಿ ಅಂತ ಬಂದಿದ್ದರು. ಆದರೆ, ಆಗ ನಾವು ಬ್ಯಾನ್ ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ RSS ಬ್ಯಾನ್ ಮಾಡೋ ಬಗ್ಗೆ ನೋಡೋಣ ಎಂದು ಹೇಳಿದರು. ಈ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

    ಸಂವಿಧಾನದಲ್ಲಿ ಸೇರಿಸಲಾಗಿರುವ ಜಾತ್ಯಾತೀತ ಪದದಲ್ಲಿ ಏನ್ ತಪ್ಪಿದೆ.? ಸಮಾಜವಾದದಲ್ಲಿ ಏನ್ ತಪ್ಪಿದೆ? ಇವರಿಗೆ ಯಾಕೆ ಈ ಪದಗಳ ಮೇಲೆ ಅಲರ್ಜಿ. ಇವರ ಸಿದ್ದಾಂತದಲ್ಲಿ ಒಂದೇ ಧರ್ಮ ಇರಬೇಕು. ಅವರೊಬ್ಬರೇ ಇರಬೇಕು. ಆದರೆ, ನಾವು ಸಂವಿಧಾನ ಎತ್ತಿ ಹಿಡಿಯೋ ಕೆಲಸ ಮಾಡುತ್ತೇವೆ. ಅಂಬೇಡ್ಕರ್ ಏನ್ ಹೇಳಿದ್ದಾರೆ ಎನ್ನುವುದನ್ನು ಆರ್‌ಎಸ್‌ಎಸ್‌ನವರು ಓದಲಿ. ಕಾಲ ಕಾಲಕ್ಕೆ ಜನರ ಆಶಯಕ್ಕೆ ತಕ್ಕಂತೆ ಬದಲಾವಣೆ ಅವಶ್ಯಕತೆ ಅಂತ ಹೇಳಿದ್ದಾರೆ.

    ಸಂವಿಧಾನ ಲಿವಿಂಗ್ ಡಾಕ್ಯುಮೆಂಟ್ ಆಗಿದೆ. ಸಂವಿಧಾನದ ಅರಿವು ಇವರಿಗೆ ಇದೆಯಾ? ಇವರು 370 ತೆಗೆದು ಹಾಕಿದರು. ಅದು ಸಂವಿಧಾನದಲ್ಲಿ ಇತ್ತಾ ಆಗ? ಈಗ ತಿದ್ದುಪಡಿ ತಂದು ಮಾಡಿದ್ದರು. 371j ಇರಲಿಲ್ಲ. ತಿದ್ದುಪಡಿ ಮಾಡಿ ತಂದಿದ್ದೇವೆ. ಆರ್‌ಎಸ್‌ಎಸ್‌ ನವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ, ಅವರ ಸ್ವಂತ ಇತಿಹಾಸ ಸೃಷ್ಟಿ ಮಾಡೋಕೆ ಹೊರಟಿದ್ದಾರೆ. ಅದಕ್ಕೆ ವಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಏನೇನೋ ಬರೆಯುತ್ತಾರೆ. ಇವರು ಮೊದಲು ಅಂಬೇಡ್ಕರ್ ಬಗ್ಗೆ ಓದುಕೊಳ್ಳಲಿ ಎಂದರು.

    ಆರ್‌ಎಸ್‌ಎಸ್ ಸಂಘಟನೆಯವರು ಮೊದಲಿನಿಂದಲೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರೋಧಿಗಳು. ಈ ಬಗ್ಗೆ ಸದನದಲ್ಲಿ ಚರ್ಚೆಯನ್ನೂ ಮಾಡಿದ್ದರು. ಈ ಬಗ್ಗೆ ನಾನು ಬಿಜೆಪಿಯವರಿಗೆ ದಾಖಲೆಯನ್ನೂ ಕೊಟ್ಟೆ. ಆದರೆ ಅವರು ರಾಜೀನಾಮೆ ಕೊಡಲಿಲ್ಲ. ನಾಯಿತರಹ ಬೊಗಳುತ್ತಾರೆ ಅಂತ ವಿಷಯ ಡೈವರ್ಟ್ ಮಾಡುತ್ತಾರೆ. ಮೊದಲು ಇವರು ಸಂವಿಧಾನ ಓದಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

  • ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

    ಮೈಸೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಅಥವಾ ಬದ್ಧತೆಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.

    ಮೈಸೂರಿನ ಸಮೀಪ ಶ್ರೀರಂಗಪಟ್ಟಣ ತಾಲೂಕಿನ ತುಬಿನಕೆರೆ ಹೆಲಿಪ್ಯಾಡ್‌ನಲ್ಲಿ ಮೇ 2 ರಂದು ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಆರ್‌ಎಸ್‌ಎಸ್ ತನ್ನ 100 ವರ್ಷಗಳ ಇತಿಹಾಸದಲ್ಲಿ ಸಾಮಾಜಿಕ ನ್ಯಾಯವನ್ನು ಸತತವಾಗಿ ವಿರೋಧಿಸಿದೆ ಎಂದರು. “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರಂಭಿಸಿದ ಮಿಲ್ಲರ್ ಆಯೋಗದಿಂದ ಹಿಡಿದು, ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದಿದೆ,” ಎಂದು ಅವರು ಹೇಳಿದರು.

    1925 ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್ ತನ್ನ 100 ವರ್ಷಗಳ ಇತಿಹಾಸದಲ್ಲಿ ಮೀಸಲಾತಿಯನ್ನು ಎಂದಿಗೂ ಸ್ವೀಕರಿಸಿಲ್ಲ ಎಂದು ಮುಖ್ಯಮಂತ್ರಿ ಆರೋಪಿಸಿದರು.

    ಕಾಂಗ್ರೆಸ್ ನಾಯಕರ ನಿರಂತರ ಒತ್ತಡದಿಂದಾಗಿ ಬಿಜೆಪಿ ಸರ್ಕಾರ ಜಾತಿ ಗಣತಿಯನ್ನು ಘೋಷಿಸಿತು ಎಂದು ಸಿದ್ದರಾಮಯ್ಯ ಹೇಳಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ಎರಡು ವರ್ಷಗಳಿಂದ ಜಾತಿ ಸಮೀಕ್ಷೆಯನ್ನು ಬಲವಾಗಿ ಒತ್ತಾಯಿಸುತ್ತಿದ್ದಾರೆ, ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ವಿಷಯದ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.

    ಕೇಂದ್ರ ಸರ್ಕಾರವು ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ಘೋಷಿಸಿದ್ದರೂ, ಈ ಕಾರ್ಯಕ್ಕೆ ಸಮಯಮಿತಿಯನ್ನು ನಿಗದಿಪಡಿಸದಿರುವ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಜಾತಿ ಗಣತಿಯ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಹ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

    ಮೀಸಲಾತಿಯ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕಬೇಕು ಎಂದು ಮುಖ್ಯಮಂತ್ರಿ ವಾದಿಸಿದರು. ಈ ಮಿತಿಯಿಂದಾಗಿ, ಜನಸಂಖ್ಯೆಗೆ ಅನುಗುಣವಾಗಿ ಅರ್ಹ ವರ್ಗಗಳಿಗೆ ಮೀಸಲಾತಿ ಒದಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಮಾನ ಸಮಾಜವನ್ನು ನಿರ್ಮಿಸಲು, ಎಲ್ಲರನ್ನೂ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಅಗತ್ಯವಿದೆ ಎಂದರು.

    ಖಾಸಗಿ ವಲಯಕ್ಕೂ ಮೀಸಲಾತಿ ವಿಸ್ತರಣೆ

    ಸಿದ್ದರಾಮಯ್ಯ ಅವರು, ಪ್ರಧಾನಮಂತ್ರಿ ಮೋದಿಯವರಿಗೆ ಜಾತಿ ಗಣತಿಗೆ ಸಮಯಮಿತಿ ನಿಗದಿಪಡಿಸುವುದು, ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಖಾಸಗಿ ವಲಯಕ್ಕೆ ಮೀಸಲಾತಿಯನ್ನು ವಿಸ್ತರಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

    ಒಬಿಸಿ ಉಪವಿಭಾಗೀಕರಣದ ವಿಷಯವನ್ನು ಪರಿಶೀಲಿಸಿ, ಮೀಸಲಾತಿ ಪ್ರಯೋಜನಗಳ ಸಮಾನ ವಿತರಣೆಗೆ ಸಂಬಂಧಿಸಿದಂತೆ ರೋಹಿಣಿ ಆಯೋಗವು ಎರಡು ವರ್ಷಗಳ ಹಿಂದೆ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದೆ. ಈ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಅವರು ಕೇಂದ್ರಕ್ಕೆ ಒತ್ತಾಯಿಸಿದರು.

    ಮಂಗಳೂರಿನ ಕೊಲೆ ಪ್ರಕರಣದಲ್ಲಿ ಅಸ್ತವ್ಯಸ್ತತೆ

    ಮಂಗಳೂರಿನಲ್ಲಿ ಮೇ 1 ರ ರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಅವರು ಆರೋಪಿಗಳನ್ನು ತಕ್ಷಣವೇ ಪತ್ತೆಹಚ್ಚಿ, ಬಂಧಿಸಿ, ಕಾನೂನಿನಂತೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

    ಮೇ 1 ರಂದು ಪೊಲೀಸರೊಂದಿಗೆ ಮಾತನಾಡಿದ್ದೇನೆ ಮತ್ತು ಸರ್ಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅವರನ್ನು ಮಂಗಳೂರಿಗೆ ಕಳುಹಿಸಿದೆ ಎಂದು ಅವರು ತಿಳಿಸಿದರು. ಕೊಲೆಯಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ತಿಳಿದುಬಂದಿದ್ದು, ಕೊಲೆಯ ತನಿಖೆ ಪ್ರಗತಿಯಲ್ಲಿದೆ ಎಂದರು. ಯಾವುದೇ ಮಾನವ ಜೀವವು ಮೌಲ್ಯಯುತವಾಗಿದೆ ಎಂದು ಅವರು ಹೇಳಿದರು.

    ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆಯ ಸ್ಥಳಕ್ಕೆ ಬಿಜೆಪಿಯ ಭೇಟಿಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಯಾವಾಗಲೂ ಇಂತಹ ಘಟನೆಗಳನ್ನು ರಾಜಕೀಯಗೊಳಿಸಲು ಅವಕಾಶಗಳನ್ನು ಹುಡುಕುತ್ತದೆ ಎಂದು ಆರೋಪಿಸಿದರು.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಕಳವಳ

    ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಭದ್ರತಾ ವೈಫಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಗಳು ಆ ಸ್ಥಳಕ್ಕೆ ಭೇಟಿ ನೀಡದಿರುವುದೇಕೆ ಎಂದು ಪ್ರಶ್ನಿಸಿದರು. ಪಹಲ್ಗಾಮ್‌ಗೆ ಭೇಟಿ ನೀಡಿದ ಒಬ್ಬ ಪಕ್ಷದ ನಾಯಕರಿಂದ ತಿಳಿದಂತೆ, ಅಲ್ಲಿ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ಅವರು ಹೇಳಿದರು. “ಇಷ್ಟೊಂದು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬಾರದೇ?” ಎಂದು ಪ್ರಶ್ನಿಸಿದರು.

    ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ಸಿದ್ದರಾಮಯ್ಯ ಅವರೂ ಸಹ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದೇವೆ ಎಂದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕರೆ ಮಾಡಿದವರನ್ನು ಪತ್ತೆಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

  • ಆರ್‌ಎಸ್‌ಎಸ್‌ನಿಂದ ಬ್ರಹ್ಮಾವರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉದ್ಘಾಟನೆ

    ಉಡುಪಿ, ಏಪ್ರಿಲ್ 30, 2025: ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿಯ ಕೇಶವನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡಗಳು ಏಪ್ರಿಲ್ 29, 2025 ರಂದು ಉದ್ಘಾಟನೆಗೊಂಡವು. ಈ ಸಮಾರಂಭದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆಗೆ ನಿಕಟ ಸಂಬಂಧವನ್ನು ಹೊಂದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಕರ್ನಾಟಕದಲ್ಲಿರುವ ಶಿಕ್ಷಣ ಸಂಸ್ಥೆಗಳ ಒಂದು ಗುಂಪಾಗಿದ್ದು, ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾರ್ಗದರ್ಶನ ಮತ್ತು ಪ್ರೇರಣೆಯಡಿಯಲ್ಲಿ ಸ್ಥಾಪಿಸಲಾಗಿದೆ. 1965ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ದೇಶಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ಆರಂಭಿಸುವ ಮೂಲಕ, ಆರ್‌ಎಸ್‌ಎಸ್-ಪ್ರೇರಿತ ಈ ಸಂಸ್ಥೆಯು ಯುವಕರಲ್ಲಿ ಹಿಂದುತ್ವದ ತತ್ವಗಳನ್ನು ಬೆಳೆಸಲು ಉದ್ದೇಶಿಸಿರಬಹುದು ಎಂದು ಕೆಲವರು ಗಮನಿಸಿದ್ದಾರೆ. ಈ ಶಾಲೆಯ ಪಂಚಮುಖಿ ಶಿಕ್ಷಣ ಪದ್ಧತಿಯು ಶೈಕ್ಷಣಿಕ ಜ್ಞಾನದ ಜೊತೆಗೆ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಒತ್ತಿಹೇಳುತ್ತದೆ.

    ಡಾ. ಸೋಮನಾಥ್ ತಮ್ಮ ಭಾಷಣದಲ್ಲಿ ಭಾರತವು ಶಾಂತಿಯ ಸಂದೇಶದೊಂದಿಗೆ ವಿಶ್ವಗುರುವಾಗಬೇಕು ಎಂದು ಕರೆ ನೀಡಿದರು. ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದ ಮತ್ತು ವಿಜ್ಞಾನದ ಕೊಡುಗೆಗಳನ್ನು ಯುವ ಪೀಳಿಗೆಗೆ ರವಾನಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪೇಜಾವರ ಸ್ವಾಮೀಜಿ, ಸ್ಥಳೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಶಿಕ್ಷಣದ ಮಹತ್ವವನ್ನು ಒತ್ತಾಯಿಸಿದರು.

    ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಭೇಟಿಯು ಈ ಸಂಸ್ಥೆಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ. ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಸಮಿತಿ ಅಧ್ಯಕ್ಷ ಸಾಧು ಸಾಲಿಯನ್ ಮತ್ತು ಇತರರು ಉಪಸ್ಥಿತರಿದ್ದರು. ಕೆಲವರು ಈ ಶಾಲೆಯ ಸ್ಥಾಪನೆಯನ್ನು ಸಾಂಸ್ಕೃತಿಕ ಗುರುತನ್ನು ಬಲಪಡಿಸುವ ಆರ್‌ಎಸ್‌ಎಸ್‌ನ ಒಂದು ಹೆಜ್ಜೆ ಎಂದು ಪರಿಗಣಿಸಿದರೆ, ಇತರರು ಇದನ್ನು ಶಿಕ್ಷಣದ ಮೂಲಕ ಸಮಾಜ ಸೇವೆಯ ಭಾಗವೆಂದು ಗುರುತಿಸುತ್ತಾರೆ.

  • ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿ; ಬಿಜೆಪಿ-ಆರ್‌ಎಸ್‌ಎಸ್ ಬೆದರಿಕೆಗೆ ಕಾಂಗ್ರೆಸ್ ಮಣಿಯುವುದಿಲ್ಲ ಎಂದ ಸಿಎಂ

    ಬೆಳಗಾವಿ, ಏಪ್ರಿಲ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬಿಜೆಪಿ ಅಥವಾ ಆರ್‌ಎಸ್‌ಎಸ್‌ನ ಬೆದರಿಕೆ ಅಥವಾ ಒತ್ತಡಕ್ಕೆ ಕಾಂಗ್ರೆಸ್ ಪಕ್ಷವು ಎಂದಿಗೂ ಮಣಿಯುವುದಿಲ್ಲ ಎಂದು ಘೋಷಿಸಿದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ರ್ಯಾಲಿಯಲ್ಲಿ ಅವರ ಭಾಷಣಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಡ್ಡಿಪಡಿಸಿದ ಬಳಿಕ ಈ ಹೇಳಿಕೆ ನೀಡಿದರು.

    ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, “ನಾನಾಗಲಿ, ನಮ್ಮ ಪಕ್ಷದ ಕಾರ್ಯಕರ್ತರಾಗಲಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಖಾಲಿ ಬೆದರಿಕೆಗಳಿಗೆ ತಲೆಬಾಗುವುದಿಲ್ಲ. ಅವರನ್ನು ಎದುರಿಸುವ ಶಕ್ತಿ ನಮಗಿದೆ ಮತ್ತು ಭಯವಿಲ್ಲದೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.

    ಮುಖ್ಯಮಂತ್ರಿ ಅವರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು, ಅವರ ಆಡಳಿತವನ್ನು “ರಾಷ್ಟ್ರವಿರೋಧಿ” ಮತ್ತು “ಜನವಿರೋಧಿ ನೀತಿಗಳು” ಎಂದು ಆರೋಪಿಸಿದರು. ಅಡ್ಡಿಯ ಬಗ್ಗೆ ಕೋಪಗೊಂಡ ಸಿದ್ದರಾಮಯ್ಯ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವನ್ನು ಪ್ರಶ್ನಿಸಿದರು. “ಭಾರತೀಯರು ಬ್ರಿಟಿಷ್ ಔಪನಿವೇಶಿಕ ಆಡಳಿತದ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡುತ್ತಿದ್ದಾಗ ಸಂಘ ಪರಿವಾರ ಎಲ್ಲಿತ್ತು? ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೀವು ಏಕೆ ಭಾಗವಹಿಸಲಿಲ್ಲ?” ಎಂದು ಕೇಳಿದರು.

    ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಭಾರತದ ಅಭಿವೃದ್ಧಿಗೆ ಕೊಡುಗೆಯ ಕೊರತೆಯನ್ನು ಟೀಕಿಸಿದರು. “ನೀವು ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತೀರಿ, ಆದರೆ ಸ್ವಾತಂತ್ರ್ಯದ ನಂತರ 52 ವರ್ಷಗಳವರೆಗೆ ನಿಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಸಹ ಹಾರಿಸಲಿಲ್ಲ. ಸಮಾಜದಲ್ಲಿ ಒಡಕು ಮೂಡಿಸುವುದನ್ನು ಹೊರತುಪಡಿಸಿ, ಈ ದೇಶಕ್ಕೆ ನೀವು ನಿಜವಾಗಿ ಏನು ಕೊಟ್ಟಿದ್ದೀರಿ?” ಎಂದು ಸವಾಲು ಹಾಕಿದರು.

    ಈ ಅಡ್ಡಿಯು ಇಂಧನ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸಿತು. ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು, ಅವರ ಹಿಂದಿನ ಹೇಳಿಕೆಯಾದ “ಪಾಕಿಸ್ತಾನದೊಂದಿಗೆ ಯುದ್ಧ ಅಗತ್ಯವಿಲ್ಲ” ಎಂಬುದನ್ನು ಖಂಡಿಸಿದರು.

    ಒಬ್ಬ ಮಹಿಳಾ ಕಾರ್ಯಕರ್ತೆಯ ನೇತೃತ್ವದಲ್ಲಿ, ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಬಗ್ಗೆ ಸಂವೇದನಾಶೀಲರಲ್ಲ ಎಂದು ಆರೋಪಿಸಿದರು, ಈ ದಾಳಿಯಲ್ಲಿ 26 ಜನರು ಮಡಿದಿದ್ದರು, ಅದರಲ್ಲಿ ಮೂವರು ಕನ್ನಡಿಗರೂ ಸೇರಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ದೂರಕ್ಕೆ ಕರೆದೊಯ್ಯಲು ಪ್ರಯತ್ನಿಸಿದಾಗ, ಗೊಂದಲ ಉಂಟಾಯಿತು. ಕಾಂಗ್ರೆಸ್ ಕಾರ್ಯಕರ್ತರು, ಅಡ್ಡಿಯಿಂದ ಕೋಪಗೊಂಡು, ಪೊಲೀಸ್ ವಾಹನಗಳನ್ನು ತಡೆಯಲು ಪ್ರಯತ್ನಿಸಿದರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಲು ಯತ್ನಿಸಿದರು.

    ಪೊಲೀಸರ ಪ್ರಯತ್ನದ ಹೊರತಾಗಿಯೂ, ಪರಿಸ್ಥಿತಿ ಉದ್ವಿಗ್ನವಾಯಿತು, ಆಯೋಜಕರು ಮಧ್ಯಪ್ರವೇಶಿಸುವಂತೆ ಮಾಡಿತು. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷವನ್ನು ಜೈಕಾರ ಮಾಡುವ ಘೋಷಣೆಗಳನ್ನು ಕೂಗಿದರು ಮತ್ತು ಬಿಜೆಪಿಯನ್ನು ಖಂಡಿಸಿದರು. ಗೊಂದಲದ ಮಧ್ಯೆ, ಸಿದ್ದರಾಮಯ್ಯ ಅವರು ಪೊಲೀಸರು ಏಕೆ ತಕ್ಷಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಮಧ್ಯಪ್ರವೇಶಿಸಿ, ಸಿದ್ದರಾಮಯ್ಯ ಅವರ ಮೈಕ್‌ಫೋನ್ ಆಫ್ ಮಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

    ಪಹಲ್ಗಾಮ್ ದಾಳಿಯ ಬಳಿಕ ಶಾಂತಿ ಮತ್ತು ಬಲವಾದ ಭದ್ರತಾ ಕ್ರಮಗಳಿಗೆ ಕರೆ ನೀಡಿದ್ದ ಸಿದ್ದರಾಮಯ್ಯ, ಯುದ್ಧವು ಅನಿವಾರ್ಯವಾದಾಗ ಮಾತ್ರ ನಡೆಯಬೇಕು ಎಂದು ನಂತರ ಸ್ಪಷ್ಟಪಡಿಸಿದರು.

    ಇದೇ ವೇಳೆ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ ಅವರು ಸಿದ್ದರಾಮಯ್ಯ ಅವರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು, ಅವರು ಭಿನ್ನಮತಕ್ಕೆ ಸಹನೆ ತೋರದವರೆಂದು ಆರೋಪಿಸಿದರು. ಮುಖ್ಯಮಂತ್ರಿಯವರು ಒಬ್ಬ ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಶಾಸಕರ ವಿರುದ್ಧ “ಪ್ರತೀಕಾರದ ಉದ್ದೇಶದಿಂದ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ” ಎಂದು ಖಂಡಿಸಿದರು.

    ಬೆಳಗಾವಿ ಪ್ರತಿಭಟನೆಯು ಮುಖ್ಯಮಂತ್ರಿಯ “ಸಂವೇದನಾಶೀಲವಲ್ಲದ” ಹೇಳಿಕೆಗಳಿಗೆ ಸರಿಯಾದ ಪ್ರತಿಕ್ರಿಯೆಯಾಗಿದೆ ಎಂದು ಮಂಜುಳಾ ಪ್ರತಿಪಾದಿಸಿದರು.