Tag: Scam

  • ಕಾರವಾರ: ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಆರೋಪಿ ಹರ್ದೀಪ್ ಸಿಂಗ್ ಬಂಧನ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರ್ದೀಪ್ ಸಿಂಗ್ (39) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡ ಭಾಗವಹಿಸಿತು.

    ಆರೋಪಿಗಳು ದಿನಾಂಕ 23-10-2024ರಂದು ರಾಫೇಲ್ ತಂದೆ ಮ್ಯಾಥ್ಯೂವ್ಸ್ ಫರ್ನಾಂಡಿಸ್ ಅವರ ಸಹೋದರ ವಿಲ್ಸನ್ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ, ಡಿ.ಎಚ್‌.ಎಲ್ ಕೋರಿಯರ್ ಸರ್ವಿಸ್ ಪ್ರತಿನಿಧಿಯಾಗಿ ಮಾತನಾಡಿ, ಅವರ ಹೆಸರಿನಲ್ಲಿ ಪಾರ್ಸಲ್‌ನಲ್ಲಿ ಮಾದಕ ದ್ರವ್ಯ (1.4 ಕೆ.ಜಿ), 7 ಪಾಸ್‌ಪೋರ್ಟ್‌ಗಳು, 5 ಕ್ರೆಡಿಟ್ ಕಾರ್ಡ್‌ಗಳು ಮತ್ತು 3.5 ಕೆ.ಜಿ ಬಟ್ಟೆ ಇರುವುದಾಗಿ ಹೇಳಿ ಆನ್‌ಲೈನ್ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು. ಇದೀಗ ಮುಂಬಯಿ ಪೊಲೀಸರ ಭಾಷ್ಯದಲ್ಲಿ ವಾಟ್ಸ್‌ಅಪ್ ವಿಡಿಯೋ ಕಾಲ್ ಮೂಲಕ ಭಯಭೀತರನ್ನಾಗಿ ಮಾಡಿ ₹35,80,100 ರಷ್ಟು ಹಣ ವಂಚಿಸಿದ್ದರು. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 35/2024 ದಾಖಲಾಗಿ ತನಿಖೆ ಆರಂಭವಾಗಿತ್ತು.

    ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ.ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಐ. ಅಶ್ವಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಜುಲೈ 12, 2025ರಂದು ಹರ್ದೀಪ್ ಸಿಂಗ್ ಅವನನ್ನ ಪಾಟ್ನಾ, ಬಿಹಾರದಿಂದ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ. ತನಿಖೆಯಲ್ಲಿ ಆರೋಪಿ ಮೇಲೆ ದೇಶಾದ್ಯಂತ 29 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದ್ದು, ಇದರಲ್ಲಿ ತಮಿಳುನಾಡು (₹2,02,17,100), ಆಂಧ್ರಪ್ರದೇಶ (₹2,47,15,500), ಬೆಂಗಳೂರು (₹80,00,000 ಮತ್ತು ₹74,60,047) ಸೇರಿ ಒಟ್ಟು ₹40,28,71,710 ರಷ್ಟು ಹಣ ವಂಚನೆ ಮಾಡಿರುವುದು ಗೊತ್ತಾಗಿದೆ. ಆರೋಪಿ 8 ಉಳಿತಾಯ ಖಾತೆ ಮತ್ತು 2 ಚಾಲ್ತ ಖಾತೆಗಳನ್ನು ಹೊಂದಿರುವುದೂ ತಿಳಿದುಬಂದಿದೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಸಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದ್ದಪ್ಪ ಧರೆಪ್ಪ, ಸಿಬ್ಬಂದಿ ನಾಮದೇವ ನಾಂದ್ರೆ, ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಭಾಗವಹಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

  • ಕಾಪು: ಫೇಸ್‌ಬುಕ್ ಮೂಲಕ ವಂಚನೆ – 75 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

    ಕಾಪು, 27 ಮೇ 2025: ತಾಲೂಕಿನ ಶಂಕರಪುರದ ಜೊಸ್ಸಿ ಡಿಕ್ರೂಸ್ (54) ಎಂಬವರು ಫೇಸ್‌ಬುಕ್ ಮೂಲಕ ಆಗಿರುವ ವಂಚನೆಯಿಂದ 75 ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೊಂದು ನಡೆದಿದೆ.

    ಫಿರ್ಯಾದಿದಾರರಾದ ಜೊಸ್ಸಿ ಡಿಕ್ರೂಸ್, ವಿದೇಶದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು, ಆರೋಗ್ಯದ ಕಾರಣದಿಂದ ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದರು. 2025ರ ಫೆಬ್ರವರಿಯಲ್ಲಿ ಫೇಸ್‌ಬುಕ್ ಮೂಲಕ ಅರೋಹಿ ಅಗರ್‌ವಾಲ್ ಎಂಬ ಮಹಿಳೆಯ ಪರಿಚಯವಾಗಿತ್ತು. ಆಕೆಯಿಂದ ವಾಟ್ಸಾಪ್ ಸಂಖ್ಯೆ ಪಡೆದ ಫಿರ್ಯಾದಿದಾರರು ಚಾಟ್ ಮಾಡುತ್ತಿದ್ದಾಗ, FXCM ಗೋಲ್ಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಭಾರೀ ಲಾಭಾಂಶ ದೊರೆಯುತ್ತದೆ ಎಂದು ಆಕೆ ಸಂದೇಶ ಕಳುಹಿಸಿದ್ದಳು.

    ಈ ಮಾತನ್ನು ನಂಬಿದ ಜೊಸ್ಸಿ, ತಮ್ಮ ಶಂಕರಪುರದ ಕೆನರಾ ಬ್ಯಾಂಕ್ ಖಾತೆಯಿಂದ 09/04/2025 ರಿಂದ 12/05/2025ರವರೆಗೆ ಹಂತಹಂತವಾಗಿ ಒಟ್ಟು 75,00,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರ ಹೂಡಿಕೆಯ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ನೀಡದೇ ವಂಚಿಸಿದ್ದಾರೆ.

    ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 21/2025ರಡಿ ಕಲಂ 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಬ್ರಹ್ಮಾವರ: ಸೈಬರ್ ಕಳ್ಳರಿಂದ 2.84 ಲಕ್ಷ ರೂ. ವಂಚನೆ

    ಬ್ರಹ್ಮಾವರ, ಮೇ 20, 2025: 30 ವರ್ಷದ ಪ್ರಶಾಂತ ಎಂಬವರಿಗೆ ದಿನಾಂಕ 22-11-2024ರಿಂದ 06-12-2024ರ ಮಧ್ಯೆ ಸೈಬರ್ ಅಪರಾಧಿಗಳು RPC ಎಂಬ ಟ್ರೇಡಿಂಗ್ ಲಿಂಕ್ ಮೂಲಕ WhatsApp ಗ್ರೂಪ್‌ನಲ್ಲಿ ವ್ಯವಹಾರ ಆಹ್ವಾನಿಸಿ, ಗೂಗಲ್ ಪೇ ಮೂಲಕ ಕಳುಹಿಸಿದ ಸ್ಕ್ಯಾನ್ ಕೋಡ್‌ಗಳ ಮೂಲಕ ಹಂತಹಂತವಾಗಿ ಒಟ್ಟು 2,84,600 ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2025, ಕಲಂ 66(C), 66(D) IT Act ರಂತೆ ಪ್ರಕರಣ ದಾಖಲಾಗಿದೆ.