Tag: Security

  • ಆಪರೇಷನ್‌ ಸಿಂಧೂರ್‌ – ರಾಜ್ಯದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    ಬೆಂಗಳೂರು : ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ನಾಳೆ (ಮೇ 9) ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ತಿಳಿಸಿದ್ದಾರೆ.

    ನಾಳೆ ಶುಕ್ರವಾರ ಮಸೀದಿಗಳಲ್ಲಿ ಮುಸಲ್ಮಾನರೆಲ್ಲರೂ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾರತೀಯ ಸೈನಿಕರಿಗೆ ಕೃತಜ್ಞತೆ, ಧೈರ್ಯ ಹಾಗೂ ಶಕ್ತಿ ತುಂಬಲು ಮಸೀದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಪಹಲ್ಗಾಮ್ ದಾಳಿಯ ನಂತರ ಕರ್ನಾಟಕ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ: ಪ್ರವಾಸಿ ತಾಣಗಳ ಮೇಲೆ ಪೊಲೀಸರ ತೀಕ್ಷ್ಣ ನಿಗಾ

    ಕಾರವಾರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬೆನ್ನಲ್ಲೇ ದೇಶಾದ್ಯಂತ ಕ್ಷಣಕ್ಷಣಕ್ಕೂ ಮಹತ್ವದ ಬೆಳವಣಿಗೆಗಳು ದಾಖಲಾಗುತ್ತಿವೆ. ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ತೀವ್ರ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆ, ಭಾರತೀಯ ಕೊಸ್ಟ್ ಗಾರ್ಡ್, ನೌಕಾ ನೆಲೆಯ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆಡೆ ಅರಬ್ಬೀ ಸಮುದ್ರ, ಮತ್ತೊಂದೆಡೆ ದೇಶದ ಪ್ರಮುಖ ನೌಕಾ ನೆಲೆ, ಜೊತೆಗೆ ಜಿಲ್ಲೆಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರ ಸಂಖ್ಯೆಯ ಸೂಕ್ಷ್ಮತೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

    ಮುನ್ನೆಚ್ಚರಿಕೆಯ ಕ್ರಮವಾಗಿ, ಸಮುದ್ರದಾಳಕ್ಕೆ ತೆರಳುವ ಮೀನುಗಾರಿಕೆ ಬೋಟ್‌ಗಳು ಮತ್ತು ಹಡಗುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಕರಾವಳಿ ಕಾವಲು ಪಡೆ ಮತ್ತು ಭಾರತೀಯ ಕೊಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರದಾಳಕ್ಕೆ ತೆರಳಿ, ಪ್ರತಿಯೊಂದು ಬೋಟ್‌ನ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜೊತೆಗೆ, ಜಿಲ್ಲೆಯ ಬಂದರುಗಳಿಗೆ ಆಗಮಿಸುವ ಪರ್ಷಿಯನ್ ಬೋಟ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಬಂದರುಗಳಲ್ಲಿ ಅಥವಾ ಸಮುದ್ರದಾಳದಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಬೇರೆಡೆಯಿಂದ ಬಂದ ಬೋಟ್‌ಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರರಿಗೆ ಪೊಲೀಸ್ ತಂಡ ಮನವಿ ಮಾಡಿದೆ.

    ದೇಶದ ಅತಿದೊಡ್ಡ ಕದಂಬ ನೌಕಾ ನೆಲೆ ಕಾರವಾರದ ಸಮೀಪದಲ್ಲಿದೆ. ಈ ಕಾರಣದಿಂದ ಕಾರವಾರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಆಗಮಿಸುವ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನೌಕಾ ನೆಲೆಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಯ ಸೂಚನೆಯಂತೆ, ನೌಕಾ ನೆಲೆಯ ಸಮೀಪದ ರವೀಂದ್ರನಾಥ್ ಠಾಗೋರ್ ಕಡಲತೀರದಲ್ಲಿ ಮೇ 4ರಂದು ನಡೆಯಬೇಕಿದ್ದ ಪ್ರಸಿದ್ಧ ಕರಾವಳಿ ಉತ್ಸವವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

  • ಭಾರತ – ಪಾಕ್ ಉದ್ವಿಗ್ನತೆ ನಡುವೆ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ರಕ್ಷಣಾ ಪಡೆಗಳ ಮುಖ್ಯಸ್ಥ

    ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವನ್ನು ಎದುರಿಸಲು ಸೇನೆಯು ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ವಿವರಿಸಲು ಜನರಲ್ ಸ್ಟಾಫ್ (ಸಿಡಿಎಸ್) ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಆಗಮಿಸಿದರು.

    ಏಪ್ರಿಲ್ 22 ರಂದು ನಡೆದ ಭೀಕರ ದಾಳಿಗೆ ಪ್ರತಿಕ್ರಿಯೆಯಾಗಿ ಈ ಸಭೆ ಕರೆಯಲಾಗಿತ್ತು, ಈ ದಾಳಿಯಲ್ಲಿ 26 ಜನರು, ಹೆಚ್ಚಾಗಿ ನೇಪಾಳಿ ಪ್ರಜೆಯೊಬ್ಬರು ಸೇರಿದಂತೆ ಪ್ರವಾಸಿಗರು ಕ್ರೂರವಾಗಿ ಸಾವನ್ನಪ್ಪಿದ್ದರು. ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಪ್ರವಾಸಿ ಪಟ್ಟಣ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. 2019 ರ ಪುಲ್ವಾಮಾ ದಾಳಿಯಲ್ಲಿ 40 ಕೇಂದ್ರ ಮೀಸಲು ಪೊಲೀಸ್ ಪಡೆ ಯೋಧರು ಬಲಿಯಾದ ನಂತರ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ.

    ಘಟನೆಯ ನಂತರ, ಏಪ್ರಿಲ್ 23 ರಿಂದ ಪಹಲ್ಗಾಮ್ ಭಯೋತ್ಪಾದಕ ದಾಳಿ ಸ್ಥಳದಲ್ಲಿ ಬೀಡುಬಿಟ್ಟಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡಗಳು ಸಾಕ್ಷ್ಯಗಳ ಹುಡುಕಾಟವನ್ನು ತೀವ್ರಗೊಳಿಸಿವೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಐಜಿ, ಡಿಐಜಿ ಮತ್ತು ಎಸ್ಪಿ ನೇತೃತ್ವದ ತಂಡಗಳು ಏಪ್ರಿಲ್ 22 ರ ದಾಳಿಯನ್ನು ವೀಕ್ಷಿಸಿದ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುತ್ತಿವೆ.