Tag: Ship

  • ಕೇರಳದಲ್ಲಿ ಮುಳುಗಿದ ಲೈಬೀರಿಯನ್​ ಹಡಗಿನಿಂದ ತೈಲ, ರಾಸಾಯನಿಕ ಸೋರಿಕೆ: ಮೀನುಗಾರಿಕೆಗೆ ನಿರ್ಬಂಧ

    ಕೊಚ್ಚಿ (ಕೇರಳ) : 640 ಕಂಟೇನರ್​ಗಳನ್ನು ಹೊತ್ತಿದ್ದ ಲೈಬೀರಿಯನ್​ ಹಡಗು ಕೇರಳ ಸಮೀಪದಲ್ಲಿ ಮುಳುಗಡೆಯಾಗಿದೆ. ಇದು ಕರಾವಳಿ ಪರಿಸರ ವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ವಿರುದ್ಧ ಕೇರಳ ಸರ್ಕಾರ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.

    ಅಧಿಕೃತ ಮೂಲಗಳ ಪ್ರಕಾರ, ಹಡಗಿನ ಮುಳುಗುವಿಕೆ ಮತ್ತು ನಂತರದ ಪರಿಣಾಮಗಳಿಗೆ ಕಂಪನಿಯನ್ನು ಹೊಣೆಗಾರರನ್ನಾಗಿ ಮಾಡಲು ಸರ್ಕಾರ ಕಾನೂನಿನ ಕುಣಿಕೆಯನ್ನು ಹೆಣಿಯುತ್ತಿದೆ. ಕಂಟೇನರ್​​ಗಳು ಮತ್ತು ಅಪಾಯಕಾರಿ ವಸ್ತುಗಳು ಈಗಾಗಲೇ ತೀರಕ್ಕೆ ತೇಲಿ ಬರುತ್ತಿವೆ. ಇದು ಕರಾವಳಿಯ ಪರಿಸರ ವ್ಯವಸ್ಥೆ ಮತ್ತು ಜೀವಿಗಳ ಮೇಲೆ ಪರಿಣಾಮ ಬೀರುವ ಭೀತಿ ಉಂಟಾಗಿದೆ.

    ಕಂಪನಿ ಮೇಲೆ ಕೇಸ್​: ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಸಾರ್ವಜನಿಕ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಹಡಗು ಕಂಪನಿಯ ವಿರುದ್ಧ FIR ಸೇರಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಕೇಳಲಾಗಿದೆ. ಹಡಗು ಮುಳುಗಲು ಕಾರಣದ ಬಗ್ಗೆಯೂ ಸಮಗ್ರ ತನಿಖೆಗೆ ನಡೆಸಲಾವುದು ಎಂದು ಹೇಳಿದ್ದಾರೆ.

    ಕೊಚ್ಚಿಗೆ ಹೊರಟಿದ್ದ ಲೈಬೀರಿಯನ್​​ ಹಡಗು ಕೇರಳದ ಅಲಪ್ಪುಳ ಕರಾವಳಿಯಿಂದ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೀಡಾಗಿ ಮುಳುಗಿದೆ. ಇದರಲ್ಲಿ ಕ್ಯಾಲ್ಸಿಯಂ ಕಾರ್ಬೈಡ್, ಡೀಸೆಲ್, ಫರ್ನೇಸ್ ಆಯಿಲ್​ನಂತಹ ಅಪಾಯಕಾರಿ ರಾಸಾಯನಿಕ ಒಳಗೊಂಡ 640 ಕಂಟೇನರ್​​ಗಳನ್ನು ಇದ್ದವು.

    ಕೊಲ್ಲಂ, ಅಲಪ್ಪುಳ ಮತ್ತು ತಿರುವನಂತಪುರಂ ಜಿಲ್ಲೆಗಳ ತೀರಲ್ಲೆ 44 ಕಂಟೇನರ್​ಗಳು ತೇಲಿಬಂದಿವೆ. ರಾಸಾಯನಿಕ ಮತ್ತು ತೈಲ ಸೋರಿಕೆಯನ್ನು ಶುಚಿಗೊಳಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸುರಕ್ಷತಾ ಪ್ರೋಟೋಕಾಲ್​​ನಂತೆ ತರಬೇತಿ ಪಡೆದ ಸ್ವಯಂಸೇವಕರನ್ನು ಡ್ರೋನ್ ಕಣ್ಗಾವಲಿನ ಮಾರ್ಗದರ್ಶನದಲ್ಲಿ ಪ್ರತಿ 100 ಮೀಟರ್​​ಗೆ ಒಬ್ಬರನ್ನು ಕರಾವಳಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

    ಮೀನುಗಾರಿಕೆಗೆ ನಿರ್ಬಂಧ: ತೈಲ ಮತ್ತು ರಾಸಾಯನಿಕ ಸೋರಿಕೆ ಹಿನ್ನೆಲೆಯಲ್ಲಿ ಹಡಗು ಮುಳುಗಡೆಯಾದ 20 ನಾಟಿಕಲ್​ ಮೈಲು ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸದಂತೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಜೊತೆಗೆ, ತೀರದಲ್ಲಿ ಕಂಡುಬರುವ ಯಾವುದೇ ವಸ್ತುವಿನ ಬಗ್ಗೆ ಮಾಹಿತಿ ನೀಡಲು ಮೀನುಗಾರಿಕೆ ಸಮುದಾಯಕ್ಕೆ ಸೂಚಿಸಲಾಗಿದೆ.

    ಶನಿವಾರವೇ ಹಡಗು ಅಪಾಯಕ್ಕೆ ಸಿಲುಕಿದೆ. ಭಾರತದ ಐಎನ್​ಎಸ್​ ಸುಜಾತಾ ನೌಕೆಯಿಂದ ಕರಾವಳಿ ಕಾವಲು ಪಡೆಯು ರಕ್ಷಣಾ ಕಾರ್ಯಾಚರಣೆ ನಡೆಸಿತು. ನಿನ್ನೆಯ 21 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಇಂದು ಮತ್ತೆ ಮೂವರನ್ನು ಮುಳುಗಿದ ಹಡಗಿನಿಂದ ಹೊರತರಲಾಗಿದೆ. ಲೈಬೀರಿಯನ್​ ಹಡಗು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.